ಬಿಹಾರ ವಿಧಾನಸಭೆ ಚುನಾವಣೆ: ನಾಳೆ ಮೊದಲ ಹಂತ- ರಾಜಕೀಯ ಪಕ್ಷಗಳ ಗೊಂದಲ ಅನಂತ
ಬಿಹಾರ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಮತ್ತು 47 ಲಕ್ಷದಷ್ಟು ಮತದಾರರ ಹೆಸರನ್ನು ವಿವಾದಾತ್ಮಕ ಅಳಿಸಿ ಹಾಕಿರುವುದು ಹಾಗೂ ರಾಜ್ಯದ ರಾಜಕೀಯ ಪಲ್ಲಟಗಳ ನಡುವೆ ಚುನಾವಣೆ ಫಲಿತಾಂಶವು ಅನಿಶ್ಚಿತವಾಗಿಯೇ ಉಳಿದಿದೆ.
ಬಿಹಾರದ ಚುನಾವಣಾ ರಾಜಕೀಯವು ಒಂದು ವಿಚಿತ್ರ ಜಗತ್ತಿನಂತೆ ಕಾಣುತ್ತಿದೆ. ಮೊದಲ ಸುತ್ತಿನ ಮತದಾನಕ್ಕೆ (ನವೆಂಬರ್ 6) ಇನ್ನೊಂದು ದಿನ ಬಾಕಿ ಇದ್ದು, ಅನುಭವಿ ಸ್ಥಳೀಯ ವೀಕ್ಷಕರು ಮತ್ತು ವಿಶ್ಲೇಷಕರು ಕೂಡ ಗೊಂದಲದಲ್ಲಿದ್ದಾರೆ. ಹೆಚ್ಚಿನವರು ತೀವ್ರ ಪೈಪೋಟಿಯ ಸೂಚನೆಯನ್ನೂ ನೀಡುತ್ತಿದ್ದಾರೆ.
ಬಹುಶಃ, ಅವರು 2020ರ ವಿಧಾನಸಭಾ ಚುನಾವಣೆಯ ಅಂಕಿ-ಸಂಖ್ಯೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ, ಅಲ್ಲಿ ಎರಡು ಮುಖ್ಯ ಮೈತ್ರಿಕೂಟಗಳು ತಲಾ ಸುಮಾರು ಶೇ.37ರಷ್ಟು ಮತಗಳ ಪಾಲನ್ನು ಪಡೆದಿದ್ದವು. ಈ ಸ್ಪರ್ಧೆಯು ಬಹುತೇಕ ಸಮಬಲದಲ್ಲಿತ್ತು. ಆಡಳಿತಾರೂಢ ಎನ್ಡಿಎ ರಾಜ್ಯಾದ್ಯಂತ ಇರುವ 243 ಕ್ಷೇತ್ರಗಳಲ್ಲಿ ಮಹಾಘಟಬಂಧನವನ್ನು (INDIA ಮೈತ್ರಿಕೂಟ) ಕೇವಲ 12,000 ಮತಗಳ ಸಣ್ಣ ಅಂತರದಿಂದ ಹಿಂದಿಕ್ಕಿತ್ತು. ಈ ಹಂತದಲ್ಲಿ ಎರಡೂ ಕಡೆಯ ಜಾತಿ ಲೆಕ್ಕಾಚಾರಗಳು ನಿಕಟವಾಗಿ ಹೊಂದಿಕೆಯಾಗುತ್ತಿರುವಂತೆ ಕಾಣುತ್ತಿರುವ ಕಾರಣ, ಇಂತಹ ಸಂದರ್ಭದಲ್ಲಿ ಯಾವುದೇ ಬಿರುಕುಗಳು ಹೊರಹೊಮ್ಮಿವೆಯೇ ಎಂದು ಊಹಿಸುವುದೇ ಅಪಾಯಕಾರಿ.
ಕೆಲವು ಬೆಳವಣಿಗೆಗಳನ್ನು ಸಂಕೇತಗಳೆಂದು ಪರಿಗಣಿಸಬಹುದು. ಆದರೆ ಅವುಗಳನ್ನು ಎದುರಿಸಲು ಪ್ರಬಲ ಶಕ್ತಿಗಳು ಗಟ್ಟಿಯಾಗಿ ನಿಂತಿವೆ, ಮುಖ್ಯವಾಗಿ ಭಾರತದ ಚುನಾವಣಾ ಆಯೋಗವು ಈಗಾಗಲೇ 47 ಲಕ್ಷ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದೆ. ಅವರ ಪ್ರೊಫೈಲ್ನ ಆಧಾರದ ಮೇಲೆ, ಈ ವ್ಯಕ್ತಿಗಳಲ್ಲಿ ಅನೇಕರು ವಿರೋಧ ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಇತ್ತು. ಇದು ಒಂದು ರೀತಿಯಲ್ಲಿ ಬಿಹಾರದ ‘ಉಪ-ಪರ್ಯಾಯ ರಂಗ' ಆಗಿದೆ.
ಚುನಾವಣಾ ಆಯೋಗವು ಕೈಗೊಂಡ ವಿವಾದಾತ್ಮಕ ಎಸ್ಐಆರ್ ಪ್ರಕ್ರಿಯೆಯು ವ್ಯಾಪಕ ಪ್ರಮಾಣದ ಮತದಾರರ ಹೆಸರನ್ನು ಪಟ್ಟಿಯಿಂದ ಕಿತ್ತುಹಾಕಲು ಕಾರಣವಾಯಿತು.
“ನುಸುಳುಕೋರರು’ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡಂತೆ ಆಡಳಿತಾರೂಢ ಪಕ್ಷದ ನಾಯಕರು ಆಗಾಗ ಬಳಸುವ ‘ಘುಸ್-ಪೈತಿಯಾ”ಗಳನ್ನು ಮೂಲತ್ಪಾಟನೆ ಮಾಡುವುದು ಈ ಪ್ರಕ್ರಿಯೆಯ ಮೂಲ ಉದ್ದೇಶವೆಂದು ಬಿಜೆಪಿ ನಾಯಕರು ಮತ್ತೆ ಮತ್ತೆ ನಮಗೆ ನೆನಪು ಮಾಡಿಕೊಡುತ್ತಲೇ ಇದ್ದಾರೆ. ಆದರೆ ಇಂತಹ ಅತಿಕ್ರಮಣಕಾರರು ಎಷ್ಟು ಮಂದಿ ಇದ್ದಾರೆ ಅದರಲ್ಲೂ ಮುಖ್ಯವಾಗಿ ಬಾಂಗ್ಲಾದೇಶಿ ಮುಸ್ಲಿಮರು ಅಥವಾ ರೋಹಿಂಗ್ಯಾಗಳ ಸಂಖ್ಯೆ ಎಷ್ಟು ಎಂಬುದನ್ನು ಚುನಾವಣಾ ಆಯೋಗ ಇನ್ನಷ್ಟೇ ಬಹಿರಂಗಪಡಿಸಬೇಕಾಗಿದೆ. ಅಧಿಕಾರಿಗಳು ಈ ವಿಚಾರದಲ್ಲಿ ನಿರಂತರವಾಗಿ ಮೌನ ತಳೆದಿರುವುದನ್ನು ಗಮನಿಸಿದರೆ ಈ ಸಂಖ್ಯೆ ಶೂನ್ಯವಾಗಿರಬೇಕು ಅಥವಾ ನಿರ್ಲಕ್ಷಿಸುವಷ್ಟು ಕಡಿಮೆಯಿರಬೇಕು.
ಏನೇ ಆಗಲಿ, ದೇಶದ ಚುನಾವಣಾ ಆಯೋಗದ ಸ್ವಾಯತ್ತತೆಗೆ ಮೂರು ವರ್ಷಗಳ ಹಿಂದೆ ಗಂಡಾಂತರ ಉಂಟಾಯಿತು. ಸರ್ಕಾರ ಕಾನೂನಿಗೆ ತಿದ್ದುಪಡಿ ತಂದು ಮುಖ್ಯ ಚುನಾವನಾ ಆಯುಕ್ತರು ಮತ್ತು ಇತರ ಆಯುಕ್ತರ ನೇಮಕಾತಿಯನ್ನು ಮಾಡುವ ಜವಾಬ್ದಾರಿಯನ್ನು ಹೊಂದಿದ್ದ ನಿಯೋಗದಿಂದ ಭಾರತದ ಮುಖ್ಯ ನ್ಯಾಯಾಧೀಶರ ಹೆಸರನ್ನು ಕಿತ್ತು ಹಾಕಿತು. ಅವರ ಬದಲಿಗೆ ಕೇಂದ್ರದ ಸಂಪುಟ ಸಚಿವರನ್ನು ನೇಮಕಮಾಡಲಾಯಿತು. ಆ ಮೂಲಕ ಸರ್ಕಾರಕ್ಕೆ ಬಹುಮತವಿರುವ ಆಯ್ಕೆ ಪ್ರಕ್ರಿಯೆಯನ್ನು ಸೃಷ್ಟಿಸಲಾಯಿತು. ಇದೇ ಆಯೋಗವು ಈಗ ಸದ್ಯೋಭವಿಷ್ಯದಲ್ಲಿ ವಿಧಾನಸಭಾ ಚುನಾವಣೆಗಳನ್ನು ಎದುರಿಸಲಿರುವ ಹನ್ನೆರಡು ರಾಜ್ಯಗಳಲ್ಲಿ ಎಸ್.ಐ.ಆರ್. ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಿದೆ.
ಗಮನಿಸಬೇಕಾದ ಸಂಗತಿ ಎಂದರೆ ಬಿಜೆಪಿ ಆಡಳಿತವಿರುವ ಅಸ್ಸಾಂನ್ನು ಈ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ.
ಆದ್ದರಿಂದ, ಬಿಹಾರದಿಂದ ಸಂಶಯಾಸ್ಪದ ವಿದೇಶಿ ಮುಸ್ಲಿಂರನ್ನು ಹುಡುಕಿ ತೆಗೆಯಲು ವಿಫಲವಾದ ನಂತರ, ಚುನಾವಣಾ ಆಯೋಗವು ಈಗ ತನ್ನ ಜಾಲವನ್ನು ತಮಿಳು ನಾಡು ಮತ್ತು ಕೇರಳದಂತಹ ದಕ್ಷಿಣದ ರಾಜ್ಯಗಳಿಗೂ ವಿಸ್ತರಿಸುತ್ತಿದೆ. ಈ ಅಸಂಬದ್ದತೆಗೆ ಮಿತಿಯಾದರೂ ಎಲ್ಲಿದೆ?
ಅಥವಾ, ಇದು ಸತ್ಯವೇ ಎಂದಾದರೆ, ದೊಡ್ಡ ಪ್ರಮಾಣದ (ಮುಸ್ಲಿಂ) ನುಸುಳುವಿಕೆಗೆ (ಇದರಲ್ಲಿ ಗೃಹ ಸಚಿವಾಲಯವು ತನ್ನ ಕರ್ತವ್ಯದಲ್ಲಿ ವಿಫಲವಾಗಿದೆ) ಪುರಾವೆಗಳನ್ನು ಹೊರಹಾಕಲು ಪ್ರಯತ್ನಿಸುವ ಬದಲಿಗೆ, ಆಡಳಿತವು ದೇಶಾದ್ಯಂತದ ರಾಜ್ಯ ಚುನಾವಣೆಗಳಲ್ಲಿ ಬಹುಸಂಖ್ಯಾತ ಧಾರ್ಮಿಕ ಸಮುದಾಯದ ಮತಗಳನ್ನು ಕ್ರೋಢೀಕರಿಸುವ ಮೂಲಕ ಕೋಮುವಾದಿ ಉದ್ವಿಗ್ನತೆಯನ್ನು ಹೆಚ್ಚಿಸಲು ಮಾತ್ರ ಪ್ರಯತ್ನಿಸುತ್ತಿದೆಯೇ? ಈ ವರ್ಷದ ಆರಂಭದಲ್ಲಿ ಪ್ರಧಾನಿಯವರ ಸ್ವಾತಂತ್ರ್ಯ ದಿನದ ಭಾಷಣದಿಂದ ಇದರ ಆರಂಭಿಕ ಸೂಚನೆ ಲಭ್ಯವಾಗಿತ್ತು. ಅಲ್ಲಿ ಅವರು ‘ಅಪಾಯಕಾರಿ ಜನಸಂಖ್ಯಾ ಪರಿಸ್ಥಿತಿ' ಎಂದು ವಿವರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಜನಸಂಖ್ಯಾ ಮಿಷನ್ ಒಂದನ್ನು ಘೋಷಿಸಿದರು.
ಕೋಮುವಾದಕ್ಕೆ ಸಿಕ್ಕಿಲ್ಲ ಕಿಮ್ಮತ್ತು
ಆದರೆ ಬಿಹಾರವು ಬಿಜೆಪಿಯ ಕೋಮುವಾದಿ ಪ್ರತಿಪಾದನೆಯಿಂದ ಪ್ರಭಾವಿತವಾಗಿಲ್ಲ. ಇಲ್ಲಿ ಧಾರ್ಮಿಕ ಧ್ರುವೀಕರಣದ ಕೊರತೆ ಕಂಡುಬಂದಿದೆ. ಆದರೂ ಕಠಿಣ ಜಾತಿ ಕ್ಷೇತ್ರಗಳಿಂದ ವಿಚಲನಗಳನ್ನು ಕಾಣಬಹುದು. ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ತೆಗೆದುಹಾಕಿದ್ದು ಪ್ರತಿಭಟನೆ ಮತ್ತು ಅಶಾಂತಿಯ ಆತಂಕಗಳನ್ನು ಹೆಚ್ಚಿಸಿತ್ತು, ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ, ಇಡೀ ರಾಜ್ಯವನ್ನು ಆವರಿಸಿದ 14 ದಿನಗಳ ಶಾಂತಿಯುತ 'ವೋಟ್ ಅಧಿಕಾರ್ ಯಾತ್ರೆ' ಚುನಾವಣೆಗೆ ಮುಂಚಿನ ತಯಾರಿಗಳಲ್ಲಿ ಒಂದು ಮಟ್ಟದ ಸ್ಥಿರತೆಯನ್ನು ಮೂಡಿಸಿದೆ ಎಂದರೆ ಅಚ್ಚರಿಯಿಲ್ಲ.
ಬಿಹಾರವು ಉತ್ತರ ಭಾರತದ ಏಕೈಕ ಪ್ರಮುಖ ರಾಜ್ಯವಾಗಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತದಲ್ಲಿ ಕೇಸರಿ ಪಕ್ಷದ (ಬಿಜೆಪಿ) ಸಂಘಟನಾ ಶಕ್ತಿ ಸ್ಪಷ್ಟವಾಗಿ ಬೆಳೆದಿದ್ದರೂ, ಇಲ್ಲಿಯವರೆಗೆ ಬಿಜೆಪಿ ಮುಖ್ಯಮಂತ್ರಿಯನ್ನು ಅಧಿಕಾರಕ್ಕೇರಿಸಲು ಸಾಧ್ಯವಾಗಿಲ್ಲ.
ಬಿಜೆಪಿಯ ಅಸ್ತ್ರಾಗಾರದಲ್ಲಿ, ಕೋಮುವಾದಿ ತಂತ್ರಗಳು ಮೊದಲ ಸ್ಥಾನದಲ್ಲಿವೆ. ಮತದಾರರ ಹೆಸರುಗಳನ್ನು ದೊಡ್ಡ ಪ್ರಮಾಣದಲ್ಲಿ ಅಳಿಸಿಹಾಕಿರುವುದರ ಹೊರತಾಗಿಯೂ ಕೋಮು ಉದ್ವಿಗ್ನತೆ ಹೆಚ್ಚಾಗದ ಕಾರಣ, ಚುನಾವಣಾ ಲಾಭ ಪಡೆಯಲು ಬಿಜೆಪಿ ಅನ್ಯ ಮಾರ್ಗಗಳನ್ನು ಬಳಸುವ ಅಪಾಯವಿದೆ. ಅದು ಏನಾಗಿರಬಹುದು ಎಂಬ ಪ್ರಶ್ನೆಯಂತೂ ಕಾಡುತ್ತಿದೆ.
ಮತ ಎಣಿಕೆಯ ಸಂದರ್ಭದಲ್ಲಿ ಇವಿಎಂ ತಿರುಚುವಿಕೆ ನಡೆಸಬಹುದೇ? ರಾಜಕೀಯವಾಗಿ, ಬಿಜೆಪಿ ತನ್ನದೇ ಅಭ್ಯರ್ಥಿ ಮುಖ್ಯಮಂತ್ರಿ ಯಾಗಬೇಕು ಎಂದು ಒತ್ತಾಯಿಸಬೇಕಾದರೆ, ಅದು ಸಾಕಷ್ಟು ಸ್ಥಾನಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
ನಿತೀಶ್ ಕುಮಾರ್ ಪ್ರಭಾವ
ನವೆಂಬರ್ 14 ರಂದು ಫಲಿತಾಂಶ ಪ್ರಕಟವಾದಾಗ ನಿತೀಶ್ ಕುಮಾರ್ ಪ್ರಭಾವ ಎಷ್ಟು ಎಂಬುದು ನಮಗೆ ತಿಳಿಯುತ್ತದೆ. ಆದರೆ, NDA ಮೈತ್ರಿಕೂಟವು ಚುನಾವಣೆಯಲ್ಲಿ ಗೆದ್ದರೆ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರನ್ನು ಹೆಸರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನಿರಾಕರಿಸಿರುವುದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತು ಬಿಹಾರದ ಇತ್ತೀಚಿನ ಇತಿಹಾಸವನ್ನು ಗಮನಿಸಿದರೆ, ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜಕೀಯ ಲಾಭದ ಸ್ಥಾನದಲ್ಲಿರಲು ಅಗತ್ಯ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಂತೂ ಸ್ಪಷ್ಟ.
ಸಮಸ್ಯೆ ಏನೆಂದರೆ, ನಿತೀಶ್ ಅವರ ಸಾಂಪ್ರದಾಯಿಕ ಬೆಂಬಲಿತ ಸಮುದಾಯಗಳಲ್ಲಿ ಅನೇಕರು, ಉದಾಹರಣೆಗೆ ಅತ್ಯಂತ ಹಿಂದುಳಿದ ಜಾತಿಗಳು. ಇದು ಒಟ್ಟು ಮತದಾರರಲ್ಲಿ ಸುಮಾರು ಶೇ 36 ರಷ್ಟಿರುವ ದೊಡ್ಡ ಸಂಖ್ಯೆಯ ಸಣ್ಣ ಜಾತಿಗಳ ಸಮೂಹವಾಗಿದೆ. ತಮ್ಮ ನೆಚ್ಚಿನ ನಾಯಕನನ್ನು ಮುಖ್ಯಮಂತ್ರಿ ಹುದ್ದೆಯಿಂದ ಹೊರಗಿಡಲು ಬಿಜೆಪಿ ಯೋಜಿಸುತ್ತಿದೆ ಎಂದು ನಂಬಿದ್ದಾರೆ. ಹೀಗಾಗಿ, ಅವರು ಈಗಾಗಲೇ NDA ಮೈತ್ರಿಕೂಟದಿಂದ ದೂರ ಉಳಿಯುವ ನಿರ್ಧಾರ ತಳೆದಿದ್ದಾರೆ ಎಂದು ಹೇಳಲಾಗಿದೆ
ಒಂದು ವೇಳೆ ಇಂತಹ ಗ್ರಹಿಕೆ (ನಿತೀಶ್ ಕುಮಾರ್ ಅವರನ್ನು ಕೈಬಿಡುವ ಯೋಜನೆ) ದೃಢವಾದರೆ, ಬಿಹಾರದ ಚುನಾವಣೆ ಪ್ರಕ್ರಿಯೆಯ ಉದ್ದಕ್ಕೂ ಚುನಾವಣಾ ಆಯೋಗದ ಅನುಮಾನಾಸ್ಪದ ಪಕ್ಷಪಾತದ ನಿಲುವಿನ ಹೊರತಾಗಿಯೂ, ಅದರ ಅಲೆಯ ಪರಿಣಾಮಗಳು ಮತದಾನದ ಸ್ವರೂಪಕ್ಕೆ ಬೇರೆಯದೇ ಆದ ಆಯಾಮವನ್ನು ನೀಡಿದರೆ ಅಚ್ಚರಿಯಿಲ್ಲ.
ಮೂರನೇ ಆಟಗಾರ
ನಿತೀಶ್ ಕುಮಾರ್ ಅಧಿಕಾರದಲ್ಲಿರುವ ಕಳೆದ ಎರಡು ದಶಕಗಳಿಂದ, ಬಿಹಾರವು ಮುಖ್ಯಮಂತ್ರಿ ನಿತೀಶ್ ಕುಮಾರ್ (ಬಿಜೆಪಿಯೊಂದಿಗೆ) ಮತ್ತು ಲಾಲು ಪ್ರಸಾದ್ ಯಾದವ್ ಅವರ RJD (ಈಗ ಅವರ ಪುತ್ರ ತೇಜಸ್ವಿ) ಕಾಂಗ್ರೆಸ್ ಮತ್ತು ಎಡಪಂಥೀಯ ಮಿತ್ರಪಕ್ಷಗಳೊಂದಿಗೆ ಮುನ್ನಡೆಸುತ್ತಿರುವ ಎರಡು ಪ್ರತಿಸ್ಪರ್ಧಿ ಬಣಗಳನ್ನು ಕಂಡಿದೆ. ಆದರೆ, ಈ ಚುನಾವಣೆಯಲ್ಲಿ, ಮಾಜಿ ಚುನಾವಣಾ ಸಲಹೆಗಾರ ಪ್ರಶಾಂತ್ ಕಿಶೋರ್ ಅವರ 'ಜನ್ ಸೂರಾಜ್ ಪಕ್ಷ' (JSP) ರೂಪದಲ್ಲಿ ಒಬ್ಬ ಪ್ರಮುಖ ಮೂರನೇ ಆಟಗಾರರೂ ಇದ್ದಾರೆ ಎಂಬುದು ಗಮನಾರ್ಹ ಸಂಗತಿ.
JSP ಒಂದು ಮೈತ್ರಿಕೂಟವಲ್ಲ, ಅದು ಏಕಾಂಗಿ ಪಕ್ಷ. ಅದರ ಸಾಮರ್ಥ್ಯ ಏನು ಎಂಬುದು ಸಂಪೂರ್ಣವಾಗಿ ತಿಳಿದಿಲ್ಲ, ಆದರೆ ಅದರ ನಾಯಕ ದೊಡ್ಡ ಜನಸಮೂಹವನ್ನು ಆಕರ್ಷಿಸುತ್ತಿರುವುದು ಗಮನಕ್ಕೆ ಬರುತ್ತಿದೆ. ಅದರ ಮಿತಿಯೆಂದರೆ, ಇದನ್ನು ಪ್ರಧಾನವಾಗಿ ಬಿಹಾರದ ಮೇಲ್ಜಾತಿಗಳ ಪಕ್ಷ ಎಂದು ನೋಡಲಾಗುತ್ತದೆ.
ಒಂದು ವೇಳೆ JSP ಎರಡು-ಅಂಕಿಗಳಷ್ಟು ಸ್ಥಾನಗಳನ್ನು ಗೆದ್ದರೆ, ತ್ರಿಶಂಕು ವಿಧಾನಸಭೆಯನ್ನು ಊಹಿಸಬಹುದೇ? ಇದು ಸಂಪೂರ್ಣವಾಗಿ ಹೊಸ ರೀತಿಯ ಪರಿಗಣನೆಯಾಗಿದೆ. ಹಾಗಾದರೆ, ಪ್ರಮುಖ ಆಟಗಾರರೆಲ್ಲರೂ ಚುನಾವಣೆಯ ನಂತರದ ತಮ್ಮ ತಂತ್ರಗಳನ್ನು ಮರು-ಚಿಂತನೆ ಮಾಡಲು ಅನಿವಾರ್ಯವಾಗಬಹುದು.
ಬಿಜೆಪಿಗೆ ಸಂಬಂಧಿಸಿದಂತೆ, ಶಾಸಕರನ್ನು ಖರೀದಿಸಲು ಪ್ರಯತ್ನಿಸುವುದು ಅದರ ಸುಲಭವಾಗಿ ಪ್ರದರ್ಶಿಸಲ್ಪಡುವ ಡೀಫಾಲ್ಟ್ ಆಯ್ಕೆಯಾಗಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ದೇಶದ ಎರಡು ಶ್ರೀಮಂತ ಕಂಪನಿಗಳ ಮತ್ತು ಎಲೆಕ್ಟೋರಲ್ ಬಾಂಡ್ಸ್ (Electoral Bonds) ಯೋಜನೆಯ ಮೂಲಕ ಮೋದಿ ಪಕ್ಷಕ್ಕೆ ಹಣ ಸುರಿದಿರುವ ಇತರ ಹಲವು ಕಂಪನಿಗಳ ಫಲಾನುಭವಿಯಾಗಿರುವುದರಿಂದ, ಈ ಪಕ್ಷವು ಸಂಪನ್ಮೂಲಗಳಿಂದ ತುಂಬಿದೆ.
ವಿದೇಶಿ ವೀಕ್ಷಕರು ಯಾವುದೇ ನಿರ್ದಿಷ್ಟ ಊಹೆಯನ್ನು ನೀಡಲು ಹಿಂದೇಟು ಹಾಕಲು ಇದು ಭಾಗಶಃ ಕಾರಣವಾಗಿದೆ.