ಬೂಸಾನ್ ಒಪ್ಪಂದದ ಫಲ: ಜಾಗತಿಕ ಶಕ್ತಿ ಕಣದಲ್ಲಿ ಟ್ರಂಪ್ ಅವರನ್ನು ಮೀರಿಸಿದ ಜಿನ್‌ಪಿಂಗ್ ನಡೆ

ಶಕ್ತಿಯನ್ನು ಕೇವಲ ಜಿಡಿಪಿ ಅಥವಾ ಟನ್‌ಗಟ್ಟಳೆ ಸೋಯಾಬೀನ್ ಮೂಲಕ ಅಳೆಯಲಾಗುವುದಿಲ್ಲ, ಆದರೆ ಯಾರು ಆಟದ ನಿಯಮಗಳನ್ನು ನಿರ್ಧರಿಸುತ್ತಾರೆ ಎಂಬುದರ ಮೂಲಕ ಅಳೆಯಲಾಗುತ್ತದೆ. ಆ ನಿಟ್ಟಿನಲ್ಲಿ, ಕ್ಸಿ ಅವರ ಮಾತುಗಳು ನಿಜವಾಗಿ ತಾಕತ್ತಿನಿಂದ ಕೂಡಿದ್ದವು.

Update: 2025-11-06 03:35 GMT
ಬೂಸಾನ್ ಒಪ್ಪಂದದಲ್ಲಿರುವ ಗಹನ ಸಮಸ್ಯೆಯನ್ನು ಗಮನಿಸಬೇಕು: ಚೀನಾಕ್ಕಿರುವ ಸುಸಂಬದ್ಧ ಕಾರ್ಯತಂತ್ರವು ಅಮೆರಿಕದ ಬಳಿ ಇಲ್ಲ. ಡೊನಾಲ್ಡ್ ಟ್ರಂಪ್ ಇದನ್ನು ‘ಒಪ್ಪಂದ’ ಎಂದು ಕರೆಯುತ್ತಾರೆ. ಆದರೆ ಜಿನ್-ಪಿಂಗ್ ಇದನ್ನು ‘ಪಾಲುದಾರಿಕೆ’ ಎಂದು ಕರೆಯುತ್ತಾರೆ. ಈ ಎರಡೂ ವಿಶ್ಲೇಷಣೆಯನ್ನು ಒಂದೇ ವ್ಯಾಖ್ಯಾನವಿರುವುದಿಲ್ಲ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನೂ ಅರಿಯದವರಂತೆ ‘ದ್ವಿ-ಧ್ರುವೀಯ’ ವ್ಯಾಪಾರ ವ್ಯವಸ್ಥೆಯ ಉದಯವನ್ನು ಬಹಿರಂಗಪಡಿಸಿದ್ದಾರೆ.

“ಇದು ಎರಡು ದೈತ್ಯ, ಶಕ್ತಿಶಾಲಿ ರಾಷ್ಟ್ರಗಳಿಗೆ ಉತ್ತಮ ಸಭೆಯಾಗಿತ್ತು. ಮತ್ತು ದೊಡ್ಡ ಶಕ್ತಿಶಾಲಿ (ದೇಶದ) ಜೊತೆ ನಾವು ಹೀಗೆಯೇ ಹೊಂದಾಣಿಕೆ ಮಾಡಿಕೊಳ್ಳಬೇಕು” ಆರು ವರ್ಷಗಳ ನಂತರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ತಮ್ಮ ಸಭೆಯನ್ನು ಟ್ರಂಪ್ ವಿವರಿಸಿದ್ದು ಹೀಗೆ.

ಟ್ರಂಪ್ ತಮ್ಮದೇ ಆದ ರಾಜತಾಂತ್ರಿಕ ದಿಗ್ವಿಜಯಗಳನ್ನು ನಿರ್ಣಯಿಸುವ ಸಂದರ್ಭದಲ್ಲಿ, ಅವರ ಸ್ವ-ಮಹತ್ವದ ಭಾರಕ್ಕೆ ಅಳತೆಗೋಲನ್ನು ಮುರಿಯುವ ಪ್ರವೃತ್ತಿ ಇದೆ. ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಚೀನಾದ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸಭೆ ನಡೆಸಿದ ನಂತರ, ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಒಪ್ಪಂದವು "ಒಂದರಿಂದ ಹತ್ತರ ಪ್ರಮಾಣದಲ್ಲಿ 12ಕ್ಕೆ ಅರ್ಹವಾಗಿದೆ" ಎಂದು ಟ್ರಂಪ್ ಘೋಷಿಸಿದರು.

ತೆರೆಯ ಹಿಂದೆ

ಯಾಕೆಂದರೆ ಅಮೆರಿಕದ “10ಕ್ಕೆ 12ರ ಒಪ್ಪಂದ”ದ ಆಟಾಟೋಪದ ಹಿಂದೆ ಒಂದು ನಿಶ್ಯಬ್ದ ವಾಸ್ತವ ಅಡಗಿದೆ: ಕ್ಸಿ ಅವರು ತಮಗೆ ಬೇಕಾಗಿದ್ದ ಬಹುತೇಕ ಎಲ್ಲವನ್ನೂ ಪಡೆದರು, ಮತ್ತು ಅಮೆರಿಕ ಮಾತ್ರ ಕೇವಲ ಒಂದು ಅಪಾಯಕಾರಿ, ಒಂದು ವರ್ಷದ ವಿರಾಮದಲ್ಲಿ ತನ್ನನ್ನು ತಾನು ಬಂಧಿಸಿಕೊಂಡಿದೆ. ಈ ವಾಣಿಜ್ಯ ಯುದ್ಧವನ್ನು ಈಗ ಹೇಗೆ ಗೆಲ್ಲಬೇಕು ಎಂಬುದು ಅದಕ್ಕೆ ತಿಳಿದಿಲ್ಲ.

“ಇದು ಎರಡು ಬೃಹತ್, ಬಲಶಾಲಿ ದೇಶಗಳ ನಡುವಿನ ಸಭೆ” ಎಂದು ಟ್ರಂಪ್ ಪಟ್ಟು ಹಿಡಿದು ವಾದ ಮಾಡುತ್ತಾರೆ, ಗಾತ್ರವೊಂದೇ ಸಮಾನತೆಯನ್ನು ಕಲ್ಪಿಸುತ್ತದೆ ಎಂಬ ಭ್ರಮೆಗೆ ಸಿಲುಕಿದವರಂತೆ. ಆದರೆ, ಶಕ್ತಿಯನ್ನು ಕೇವಲ ಜಿಡಿಪಿ ಅಥವಾ ಟನ್‌ಗಟ್ಟಲೆ ಸೋಯಾಬೀನ್‌ಗಳಲ್ಲಿ ಅಳೆಯಲಾಗುವುದಿಲ್ಲ. ಆಟದ ನಿಯಮಗಳನ್ನು ಯಾರು ನಿರ್ಧರಿಸುತ್ತಾರೆ ಎಂಬುದರ ಮೇಲೆ ಅದನ್ನು ಅಳೆಯಲಾಗುತ್ತದೆ. ಮತ್ತು ಆ ನಿಟ್ಟಿನಲ್ಲಿ, ಕ್ಸಿ ಅವರ ಮಾತುಗಳು ನಿಜವಾಗಿ ಅಧಿಕಾರಯುತವಾಗಿದ್ದವು.

“ಚೀನಾ ಮತ್ತು ಅಮೆರಿಕ ಸಹಭಾಗಿಗಳು ಮತ್ತು ಸ್ನೇಹಿತರಾಗಿರಬೇಕು,” ಎಂದು ಕ್ಸಿ ಅವರು ತಮ್ಮ ಸಹಜ ಸಂಯಮದಿಂದ ಹೇಳಿದರು. “ಗಾಳಿ, ಅಲೆಗಳು ಮತ್ತು ಸವಾಲುಗಳನ್ನು ಎದುರಿಸುವಾಗ, ನಾವು ಸರಿಯಾದ ಮಾರ್ಗದಲ್ಲಿರಬೇಕು,” ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ಚೀನಾ-ಅಮೆರಿಕ ಸಂಬಂಧಗಳ “ದೈತ್ಯ ಹಡಗು” ಎಂಬ ಈ ಕಡಲ ರೂಪಕ ಕೇವಲ ಕಾವ್ಯಾತ್ಮಕವಾಗಿರಲಿಲ್ಲ. ಅದು ಅತ್ಯಂತ ನಿಯಂತ್ರಣದ ಹೇಳಿಕೆಯಾಗಿತ್ತು. ಕ್ಸಿ ಚುಕ್ಕಾಣಿ ಹಿಡಿದಿದ್ದರು. ಟ್ರಂಪ್, ತಮ್ಮೆಲ್ಲ ಬಿಂಕಗಳ ನಡುವೆಯೂ, ಪ್ರಯಾಣಿಕರಾಗಿ ಉಳಿದಿದ್ದರು.

ವಿವರಗಳು ಮಾತನಾಡುತ್ತವೆ

“ಕದನ ವಿರಾಮ” ಎಂದು ಕರೆಯಲ್ಪಡುವ ಈ ಒಪ್ಪಂದವು ಒಂದು ವರ್ಷದ ವ್ಯವಸ್ಥೆಯಾಗಿದೆ ಮತ್ತು ಇದನ್ನು ವಿಸ್ತರಿಸಬಹುದು ಎಂದು ಟ್ರಂಪ್ ಅವರ ತಂಡ ಹೇಳುತ್ತದೆ. ಆದರೆ ವಿವರಗಳು ಬಹಳ ಸ್ಪಷ್ಟವಾಗಿವೆ. ಅಮೆರಿಕವು ಚೀನೀ ಸರಕುಗಳ ಮೇಲಿನ ಸುಂಕಗಳನ್ನು ಶೇ.10 ಪಾಯಿಂಟ್‌ಗಳಷ್ಟು ಕಡಿತಗೊಳಿಸುತ್ತದೆ—ಶೇ.57ರಿಂದ ಸರಿಸುಮಾರು ಶೇ.47ಕ್ಕೆ ಇಳಿಕೆಯಾಗುತ್ತದೆ. ನಿರ್ದಿಷ್ಟವಾಗಿ ಟ್ರಂಪ್ ಅವರು ಬಹಳ ಸದ್ದು-ಗದ್ದಲದೊಂದಿಗೆ ವಿಧಿಸಿದ್ದ ಫೆಂಟಾನಿಲ್ ಸಂಬಂಧಿತ ಸುಂಕವನ್ನು ಕಡಿಮೆ ಮಾಡುತ್ತದೆ.

ಇದಕ್ಕೆ ಪ್ರತಿಯಾಗಿ ಟ್ರಂಪ್ ಅವರ ರಾಜಕೀಯ ನೆಲೆಗೆ ಸಾಥ್ ನೀಡುವ ಕ್ರಮವಾಗಿ ಚೀನಾ ಅಮೆರಿಕದ ಸೋಯಾಬೀನ್ ಅನ್ನು ಹೆಚ್ಚು ಹೆಚ್ಚು ಖರೀದಿಸಲು ಒಪ್ಪಿಕೊಳ್ಳುತ್ತದೆ. ಇದು ಸಂಕಷ್ಟದಲ್ಲಿರುವ ಅಮೆರಿಕದ ಮಧ್ಯಪ್ರಾಚ್ಯ ಭಾಗದ ರೈತರಿಗೆ ಸಹಾಯ ಮಾಡುವ ಇರಾದೆಯಾಗಿದೆ. ಈ ರೈತರು ಟ್ರಂಪ್ ಅವರ ಹಿಂದಿನ ‘ವಾಣಿಜ್ಯ ಕದನ’ದಿಂದ ಸಾಕಷ್ಟು ಬೆಲೆತೆತ್ತಿದ್ದರು.

ಟ್ರಂಪ್ ಅವರು ತಮ್ಮ ಎಂದಿನ ಆಟಾಟೋಪದ ಶೈಲಿಯಲ್ಲಿ “ಹೊರೆಗೆ ಹೋಗಿ, ಇನ್ನೂ ಹೆಚ್ಚು ಹೆಚ್ಚು ಭೂಮಿಯನ್ನೂ ಟ್ರಾಕ್ಟರ್ ಗಳನ್ನೂ ಖರೀದಿಸಿ” ಎಂದು ರೈತರಿಗೆ ಕರೆ ನೀಡುತ್ತಿದ್ದಾರೆ.

ಇದೇ ಮಧ್ಯೆ, ಬೀಜಿಂಗ್ಗೆ ಸ್ಪಷ್ಟ ಲಾಭಗಳು ದೊರೆತವು. ಅಮೆರಿಕವು ಸುಧಾರಿತ ಸೆಮಿಕಂಡಕ್ಟರ್ಗಳಿಗೆ ಚೀನಾದ ಪ್ರವೇಶದ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಲಿದೆ, ಜೊತೆಗೆ ಅಮೆರಿಕದ 5 ಟ್ರಿಲಿಯನ್ ಡಾಲರ್ ಮೌಲ್ಯದ ಚಿಪ್ ಹೊಂದಿರುವ ಎನ್ವಿಡಿಯಾ ಎಂಬ ದೈತ್ಯ ಕಂಪನಿಗೆ ಕೆಲವು ಸುಧಾರಿತ ಚಿಪ್ಗಳನ್ನು ಚೀನಾಕ್ಕೆ ಮಾರಾಟ ಮಾಡುವುದನ್ನು ಪುನರಾರಂಭಿಸಲು ಅನುಮತಿ ನೀಡಲಿದೆ. ಟ್ರಂಪ್ ಅವರು ಈ ಪ್ರಸ್ತಾಪವನ್ನು “ಎನ್ವಿಡಿಯಾಕ್ಕೆ ಬಿಟ್ಟಿದ್ದು” ಎಂದು ಹೇಳಿ, ನಿಯಂತ್ರಕನ ಬದಲು ತಾನು "ರೆಫರಿ" ಸ್ಥಾನದಲ್ಲಿದ್ದೇನೆ ಎನ್ನುವಂತೆ ಬಿಂಬಿಸಿದರು. ಅಮೆರಿಕದ ಅಧ್ಯಕ್ಷರು ಸಾರ್ವಜನಿಕವಾಗಿ ಜವಾಬ್ದಾರಿಯನ್ನು ನಿರಾಕರಿಸುತ್ತಿರುವುದು ಅವರ ರಾಜತಾಂತ್ರಿಕ ಜಾಣ್ಮೆ.

ಚೀನಾವು ತನ್ನ ಹಡಗು ಕಂಪನಿಗಳಿಗೆ ಬಂದರು ಸೇವಾ ಶುಲ್ಕವನ್ನು ರದ್ದುಗೊಳಿಸುವುದನ್ನು ಸಹ ಖಚಿತಪಡಿಸಿಕೊಂಡಿದೆ, ಇದಕ್ಕೆ ಪ್ರತಿಯಾಗಿ ಅಮೆರಿಕಕ್ಕೆ ಪರಸ್ಪರ ಸೌಹಾರ್ದಯುತ ಪ್ರತಿಕ್ರಿಯೆ ಲಭ್ಯವಾಯಿತು. ಟ್ರಂಪ್, ಅತಿ ಸಣ್ಣ ವಿಜಯವನ್ನೂ ಸಹ ದೊಡ್ಡ ಲಾಭವೆಂದು ಬಿಂಬಿಸುವ ಪ್ರಯತ್ನದಲ್ಲಿ, ಈಗ “ನೂರಾರು ಶತಕೋಟಿ ಡಾಲರ್ಗಳು ನಮ್ಮ ದೇಶಕ್ಕೆ ಹರಿದು ಬರಲಿವೆ" ಎಂದು ಘೋಷಿಸಿದರು.

ಅಸಲಿಗೆ ಆ ಹೇಳಿಕೆಯನ್ನು ಬೆಂಬಲಿಸಲು ನಿಜಕ್ಕೂ ಯಾವುದೇ ಸಾಕ್ಷ್ಯಾಧಾರಗಳಿಲ್ಲ.

ದ್ವಿ-ಧ್ರುವೀಯ (Bipolar) ವ್ಯವಸ್ಥೆಯ ಉದಯವೇ?

ಟ್ರಂಪ್ ಈ ಸಭೆಯನ್ನು ಒಂದು ಹೊಸ “ದ್ವಿ-ಧ್ರುವೀಯ ವ್ಯವಸ್ಥೆ”ಯ ಪುರಾವೆ ಎನ್ನುವಂತೆ ರೂಪಿಸಿದರು. ಅಂದರೆ, ಎರಡು ಮಹಾಶಕ್ತಿಗಳು ಅಂತಿಮವಾಗಿ ಒಟ್ಟಾಗಿ ಸಾಗಲು ಕಲಿಯುತ್ತಿವೆ ಎಂಬುದನ್ನು ತಿಳಿಸುವುದು ಅವರ ಇರಾದೆಯಾಗಿತ್ತು.

ಜಿನ್‌ಪಿಂಗ್ ಅವರ ನಿಲುವು ಸಂಯಮದಿಂದ ಕೂಡಿದರೂ, ನಿಸ್ಸಂದೇಹವಾಗಿ ಕಾರ್ಯತಂತ್ರದಿಂದ ಕೂಡಿತ್ತು. “ಚೀನಾಕ್ಕೆ ಯಾರನ್ನೂ ಪ್ರಶ್ನಿಸುವ ಅಥವಾ ಬದಲಿಸುವ ಉದ್ದೇಶವಿಲ್ಲ” ಎಂಬ ಅವರ ಹೇಳಿಕೆಯು ಸೌಹಾರ್ದಯುತವಾಗಿ ಕೇಳಿಸಬಹುದು, ಆದರೆ ಇದು ಸಮಯದ ವಿಷಯದಲ್ಲಿ ಕಾಯುವ ಆತ್ಮವಿಶ್ವಾಸ ಹೊಂದಿರುವ ಶಕ್ತಿಯ ಶಾಸ್ತ್ರೀಯ ಭಾಷೆ ಎಂಬುದರಲ್ಲಿ ಅನುಮಾನವಿಲ್ಲ.

ಟ್ರಂಪ್ ಗೆಲುವನ್ನು ಸೋಯಾಬೀನ್ ಸಾಗಣೆ ಮತ್ತು ಪತ್ರಿಕಾ ವರದಿಗಳಲ್ಲಿ ಅಳೆಯುತ್ತಿದ್ದರೆ, ಜಿನ್ಪಿಂಗ್ ಅದನ್ನು ದಶಕಗಳ ಲೆಕ್ಕದಲ್ಲಿ ಅಳೆಯುತ್ತಾರೆ. ಆದರೆ, ನಗು ಮತ್ತು ಹಸ್ತಲಾಘವದ ಅಡಿಯಲ್ಲಿ, ಬೀಜಿಂಗ್ ಮೂರು ವಿಜಯಗಳನ್ನು ತನ್ನದಾಗಿಸಿಕೊಂಡಿರುವುದು ಗಮನಾರ್ಹ.

• ಆರ್ಥಿಕ ಸ್ಥಿರತೆ: ಚೀನಾದ ಆರ್ಥಿಕತೆಯು ದೇಶೀಯ ಬಳಕೆ ಮತ್ತು ಕ್ಲೀನ್-ಟೆಕ್ ರಫ್ತುಗಳ ಸುತ್ತ ಮರು ಹೊಂದಾಣಿಕೆ ನಡೆಸುತ್ತಿರುವಾಗ, ಜಿನ್‌ಪಿಂಗ್ ವ್ಯಾಪಾರದಲ್ಲಿ ಉಸಿರಾಡಲು ಅವಕಾಶವನ್ನು ಭದ್ರಪಡಿಸಿಕೊಂಡರು.

• ತಂತ್ರಜ್ಞಾನ ಪ್ರವೇಶ: ಅಮೆರಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳಿಗೆ ಸೀಮಿತ ಮರು-ಪ್ರವೇಶವೂ ಕೂಡ, ಚೀನಾಕ್ಕೆ ಅದರ ಕೃತಕ ಬುದ್ಧಿಮತ್ತೆ ಮತ್ತು ರಕ್ಷಣಾ ಮಹತ್ವಾಕಾಂಕ್ಷೆಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

• ಜಾಗತಿಕ ನೋಟ: ನಿರೂಪಣಾ ನಿಯಂತ್ರಣದ ಯುದ್ಧದಲ್ಲಿ, ಚೀನಾವು ಸಂಯಮ, ಜವಾಬ್ದಾರಿ ಮತ್ತು ದೂರದೃಷ್ಟಿಯಿಂದ ಗಮನ ಸೆಳೆಯಿತು. ಆದರೆ ಟ್ರಂಪ್ ಹಾಗಾಲ್ಲ, ಅಲ್ಪಾವಧಿಯ ಒಪ್ಪಂದಗಳನ್ನು ಬೊಬ್ಬೆ ಹಾಕಿ ಮಾರಾಟ ಮಾಡುವ ವ್ಯಾಪಾರಿ ಪಾತ್ರವನ್ನು ವಹಿಸಿದರು.

ಈ ಎಲ್ಲ ಹಿನ್ನೆಲೆಯಲ್ಲಿ ಜಗತ್ತು ಕಂಡದ್ದು “ವ್ಯಾಪಾರ ಕದನ ವಿರಾಮ”ವನ್ನಲ್ಲ, ಬದಲಾಗಿ ನಿಯಂತ್ರಣದ ಸ್ಪಷ್ಟ ವರ್ಗಾವಣೆಯನ್ನು.

ಜಿನ್‌ಪಿಂಗ್ ಸಿದ್ಧಾಂತ

ಜಿನ್‌ಪಿಂಗ್ ಅವರ ದೇಶೀಯ ಸಂದೇಶವು ಆತ್ಮವಿಶ್ವಾಸದಿಂದ ಕೂಡಿತ್ತು: ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಈ ವರ್ಷ ಚೀನಾದ ಆರ್ಥಿಕತೆಯು ಶೇ. 5.2 ರಷ್ಟು ಬೆಳವಣಿಗೆ ಕಂಡಿದೆ ಎಂದು ಅವರು ಜಗತ್ತಿಗೆ ನೆನಪಿಸಿ ಕೊಡುವ ಪ್ರಯತ್ನ ಮಾಡಿದರು - ಇದು ಗಮನಾರ್ಹ ಸಾಧನೆ.

“ನಮ್ಮ ಅರ್ಥ ವ್ಯವಸ್ಥೆಯು ವಿಶಾಲ ಸಾಗರದಂತಿದೆ – ಬೃಹತ್ ಗಾತ್ರದ್ದು, ಚೇತರಿಸಿಕೊಳ್ಳುವ ತಾಕತ್ತು ಉಳ್ಳದ್ದು ಮತ್ತು ಭರವಸೆ ನೀಡುವಂತಿದೆ" ಎಂದು ಅವರು ಹೇಳಿದರು. ಅವರ ಮಾತು ಕೇವಲ ರೂಪಕವಾಗಿರಲಿಲ್ಲ, ಧ್ಯೇಯವಾಕ್ಯವಾಗಿತ್ತು. ಚೀನಾದ ಈ "ಸಾಗರ" ಈಗ ದಕ್ಷಿಣ ಚೀನಾ ಸಮುದ್ರದಿಂದ ಹಿಡಿದು ಅಮೆರಿಕದ ಪ್ರಭಾವ ಕುಗ್ಗಿರುವ ಯುರೇಷಿಯಾದ ಬೆಲ್ಟ್ ಅಂಡ್ ರೋಡ್ ಕಾರಿಡಾರ್ಗಳವರೆಗೆ ವ್ಯಾಪಿಸಿದೆ.

ಭಾರತಕ್ಕೆ ಪಾಠವಾದ ಬೂಸಾನ್

ಅಮೆರಿಕದೊಂದಿಗೆ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧವಾಗಿರುವಂತೆ ಕಾಣುವ ಮೋದಿ ಸರ್ಕಾರಕ್ಕೆ, ಬೂಸಾನ್ ಒಂದು ಪಾಠವಾಗಿದೆ: ಕೇವಲ ವಿಶ್ವಗುರು ಸ್ಥಾನಮಾನದ ಬಡಾಯಿ ಮಾತುಗಳು ಮತ್ತು ಟ್ರಂಪ್ನೊಂದಿಗಿನ ಸ್ನೇಹವು ಭಾರತವನ್ನು ಮತ್ತೊಮ್ಮೆ ಗುಲಾಮಗಿರಿಯ ಸ್ಥಾನಕ್ಕೆ ಇಳಿಸಬಹುದು.

ಇದಕ್ಕೆ ವ್ಯತಿರಿಕ್ತವಾಗಿ, ಟ್ರಂಪ್ ತಮ್ಮ ರಾಜತಾಂತ್ರಿಕತೆಯನ್ನು ಪರಿವರ್ತನೆಯ ದೃಷ್ಟಿಕೋನದಿಂದಲ್ಲ, ಬದಲಿಗೆ ವ್ಯವಹಾರದ ದೃಷ್ಟಿಕೋನದಿಂದ ನೋಡುತ್ತಾರೆ. ಅವರು ಮಾತನಾಡುವುದು ರಿಯಲ್ ಎಸ್ಟೇಟ್ನ ಭಾಷೆಯಲ್ಲಿ - ಒಪ್ಪಂದ, ಗೆಲುವು, ನಷ್ಟ ಮತ್ತು ತಾತ್ಕಾಲಿಕ ಕದನ ವಿರಾಮಗಳು. ಆದರೆ ಕ್ಸಿ ಜಿನ್‌ಪಿಂಗ್ ಅವರು ನಾಗರಿಕ ಭಾಷೆಯಲ್ಲಿ ಮಾತನಾಡುತ್ತಾರೆ - ನಿರಂತರತೆ, ಸಮತೋಲನ ಮತ್ತು ಅದೃಷ್ಟ ಅವರ ಸೂತ್ರಗಳಾಗಿವೆ.

ಹೀಗಾಗಿ ಬೂಸಾನ್ನಲ್ಲಿ, ಆ ಎರಡು ಶಬ್ದಕೋಶಗಳು ಪರಸ್ಪರ ಡಿಚ್ಚಿ ಹೊಡೆದವು. ಅದರ ಪರಿಣಾಮವು ತಕ್ಷಣದ ಸಂತೃಪ್ತಿಗಾಗಿ ಟ್ರಂಪ್ನ ಅಗತ್ಯವನ್ನು ಮತ್ತು ದೀರ್ಘಾವಧಿಯ ಶಕ್ತಿ ಸಂಚಯಕ್ಕಾಗಿ ಕ್ಸಿ ಜಿನ್‌ಪಿಂಗ್ ಅವರ ತಾಳ್ಮೆಯನ್ನು ಪ್ರತಿಬಿಂಬಿಸುವ ಒಪ್ಪಂದವೆಂದು ವಿಶ್ಲೇಷಿಸುವುದು ಸೂಕ್ತವಾಗಿದೆ.

ಸೆಮಿಕಂಡಕ್ಟರ್‌ಗೆ ಸೋಯಾಬೀನ್

ಈ ಒಪ್ಪಂದದ ಹೃದಯ ಭಾಗದಲ್ಲಿರುವುದು ಪರಸ್ಪರ ವಿನಿಮಯ- ಅಮೆರಿಕದ ಸೋಯಾಬೀನ್ಗಾಗಿ ಚೀನಾಕ್ಕೆ ಸೆಮಿಕಂಡಕ್ಟರ್ಗಳು ಅಮೆರಿಕವನ್ನು ಪ್ರವೇಶಿಸುವ ಅವಕಾಶ ಪಡೆಯುತ್ತವೆ. ಇದನ್ನು ಬಹುತೇಕ ದುರಂತವೂ ಹಾಸ್ಯಮಯವೂ ಆಗಿದೆ. ಯಾಕೆಂದರೆ ಒಂದು ಕಾಲದಲ್ಲಿ ಜಾಗತಿಕ ತಯಾರಿಕಾ ಕ್ಷೇತ್ರದ ನಾಯಕನಾಗಿದ್ದ ಅಮೆರಿಕವು, ಈಗ ಡಿಜಿಟಲ್ ಭವಿಷ್ಯದ ಉದ್ದೇಶದಿಂದ ಕೃಷಿ ಉತ್ಪನ್ನಗಳನ್ನು ವಿನಿಮಯ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.

ಟ್ರಂಪ್ ಅವರು ಕೃಷಿ ವಲಯಕ್ಕೆ ಸಿಕ್ಕ ಪರಿಹಾರವನ್ನು ಯಶಸ್ಸಿನ ಪುರಾವೆ ಎಂದು ಬಡಾಯಿ ಕೊಚ್ಚಿಕೊಳ್ಳಬಹುದು, ಆದರೆ ಈ ಮಾತುಕತೆಯ ನಿಜವಾದ ಬಹುಮಾನ ದಕ್ಕಿದ್ದು ಸೋಯಾಬೀನ್-ಗೆ ಅಲ್ಲ- ಅದು ಸಿಲಿಕಾನ್-ಗೆ. ಸುಧಾರಿತ ಚಿಪ್ಗಳಲ್ಲಿ ನೆಲೆ ಕಂಡುಕೊಳ್ಳಲು ಚೀನಾ ಶತಾಯಗತಾಯ ಪ್ರಯತ್ನ ಮಾಡುತ್ತಿದೆ, ಅಮೆರಿಕದಿಂದ ಯಾವುದೇ ಸಡಿಲಿಕೆ ದೊರೆತರೂ ಕೂಡ, ಅದು ಎಷ್ಟೇ ಚಿಕ್ಕದಾಗಿದ್ದರೂ, ಕಾರ್ಯತಂತ್ರದ ವಿಜಯವೆಂದೇ ವಿಶ್ಲೇಷಿಸಬೇಕಾಗಿದೆ.

ಇದೇ ವೇಳೆ, ಮಾರಣಾಂತಿಕ ಒಪಿಯಾಯ್ಡ್ ಔಷಧಿಯ ರಫ್ತನ್ನು ನಿಲ್ಲಿಸಲು ಬೀಜಿಂಗ್ "ಶ್ರಮಿಸುತ್ತದೆ" ಎಂಬ ಭರವಸೆಯ ಮೇಲೆ ಫೆಂಟಾನಿಲ್ ಸುಂಕವನ್ನು ಅರ್ಧದಷ್ಟು ಕಡಿಮೆ ಮಾಡಲು ಟ್ರಂಪ್ ಹೊರಟಿದ್ದಾರೆ. ಈ ನಿರ್ಧಾರವು ರಾಜತಾಂತ್ರಿಕ ನಂಬಿಕೆಯ ಜಿಗಿತ - ಚೀನಾದ ಸಹಕಾರವು ಕೇವಲ ಸಾಂಕೇತಿಕವೆಂದು ಸಾಬೀತಾದರೆ, ದೇಶೀಯವಾಗಿ ಮಾರಕ ಪರಿಣಾಮಗಳನ್ನು ಬೀರಬಹುದು.

ಅಮೆರಿಕದ ಕಾರ್ಯತಂತ್ರದ ಪಲ್ಲಟ

ಬೂಸಾನ್ ಕದನ ವಿರಾಮವು ಒಂದು ಗಹನ ಸಮಸ್ಯೆಯನ್ನು ಬಹಿರಂಗಪಡಿಸುತ್ತದೆ: ಅಮೆರಿಕಕ್ಕೆ ಸುಸಂಬದ್ಧವಾದ ಚೀನಾ ಕಾರ್ಯತಂತ್ರದ ಕೊರತೆ. ಟ್ರಂಪ್ ಅದನ್ನು “ಒಪ್ಪಂದ” ಎಂದು ಕರೆದರೆ; ಜಿನ್‌ಪಿಂಗ್ ಅದನ್ನು “ಪಾಲುದಾರಿಕೆ” ಎಂದು ಕರೆಯುತ್ತಾರೆ. ಈ ಎರಡು ಪದಗಳು ಒಂದೇ ಅರ್ಥವನ್ನು ನೀಡುವುದಿಲ್ಲ ಎಂಬುದು ಸ್ಪಷ್ಟ.

ಕೃತಕ ಬುದ್ಧಿಮತ್ತೆ, ಹಣ ವರ್ಗಾವಣೆಗೆ ನಿಯಂತ್ರಣ ಮತ್ತು ಸಾಂಕ್ರಾಮಿಕ ರೋಗ ಪ್ರತಿಕ್ರಿಯೆಯಂತಹ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಜಿನ್‌ಪಿಂಗ್ ಅವರ ಅಂತಿಮ ಮಾತುಗಳು ಸದ್ಭಾವನೆಯ ಸಂಕೇತಗಳಾಗಿರಲಿಲ್ಲ. ಅವು ಒಂದು ಪರೋಕ್ಷ ಆಹ್ವಾನವಾಗಿದ್ದವು: ಜಾಗತಿಕ ಆಡಳಿತದ ಮುಂದಿನ ಹಂತಕ್ಕೆ ಚೀನಾವು ಕಾರ್ಯಸೂಚಿಯನ್ನು ಹೊಂದಿಸಲಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಟ್ರಂಪ್ ಅವರ ಟ್ರೂತ್-ಸೋಶಿಯಲ್ನಲ್ಲಿನ ಸ್ವಯಂ-ಅಭಿನಂದನೆಯ ಪೋಸ್ಟ್ಗಳು ಹೀಗಿವೆ: “ರೈತರು ಅಪಾರ ಸಂತೋಷಪಡುತ್ತಾರೆ,” "ಎರಡೂ ದೇಶಗಳಿಗೆ ಇದೊಂದು ಮಹಾ ದಿನ."

ಟ್ರಂಪ್ ಅಧಿಕಾರದ ಚಿತ್ರಣವನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದು ಗಮನಾರ್ಹ. ಆದರೆ, ಅವರು ದೃಶ್ಯ ವೈಭವ ಮತ್ತು ನೀತಿಯ ನಡುವಿನ ವ್ಯತ್ಯಾಸವನ್ನು ಗ್ರಹಿಸುವುದಿಲ್ಲ. ಅತಿಶಯೋಕ್ತಿಯ ವಿಶೇಷಣಗಳು ಮತ್ತು ಅಸ್ಪಷ್ಟ ಭರವಸೆಗಳಿಂದ ಕೂಡಿದ ಅವರ ಬೂಸಾನ್ ನಾಟಕವು, ವಿಜಯದ ಪ್ರದರ್ಶನವನ್ನು ಬಿಂಬಿಸುವ ಗೀಳು ಹಿಡಿದಿರುವ ನಾಯಕನನ್ನು ಬಯಲು ಮಾಡುತ್ತದೆ, ಅದರ ಸಾರಾಂಶದ ಬಗ್ಗೆ ಅಲ್ಲ.

ಮತ್ತೊಂದೆಡೆ, ಚೀನಾ ಅಧ್ಯಕ್ಷರು ದೀರ್ಘಾವಧಿಯ ಆಟವನ್ನು ಆಡುತ್ತಾರೆ. ಅವರ ಸಂದೇಶವು ಟ್ರಂಪ್ಗಾಗಿ ಅಲ್ಲ, ಬದಲಿಗೆ ಜಗತ್ತಿಗಾಗಿ. ಅದು ಎಚ್ಚರಿಕೆಯಿಂದ ಕೂಡಿತ್ತು: ಅವ್ಯವಸ್ಥೆಯ ಈ ಯುಗದಲ್ಲಿ ಚೀನಾವು ಶಾಂತ ಮತ್ತು ಸ್ಥಾಯಿ ಭಾವವನ್ನು ಹೊಂದಿದೆ., ಅದು ಮುಖಾಮುಖಿಗಿಂತ ಸಂವಾದಕ್ಕೆ ಆದ್ಯತೆ ನೀಡುತ್ತದೆ, ಮತ್ತು ಒಮ್ಮೆ ಜಾಗತಿಕ ವ್ಯವಸ್ಥೆಯ ವಾಸ್ತುಶಿಲ್ಪಿಯಾಗಿದ್ದ ಅಮೆರಿಕ ಈಗ ಕ್ಷಣಿಕ ಬಯಕೆಯ ಮೇಲೆ ನಿಂತು ಮಾತುಕತೆ ನಡೆಸುತ್ತದೆ.

ಬೂಸಾನ್ ಕದನ ವಿರಾಮವನ್ನು ಯಾರು ಗೆದ್ದರು ಎಂಬುದು ಪ್ರಶ್ನೆಯಲ್ಲ. ಈ “ಒಂದು ವರ್ಷದ ಒಪ್ಪಂದ”ವು ಮೌನವಾಗಿ ಅವಧಿ ಮುಗಿದಾಗಲೂ ವ್ಯಾಪಾರ, ತಂತ್ರಜ್ಞಾನ ಮತ್ತು ಅಧಿಕಾರದ ನಿಯಮಗಳನ್ನು ಯಾರು ರೂಪಿಸುತ್ತಿರುತ್ತಾರೆ ಎಂಬ ಪ್ರಶ್ನೆ ಹಾಗೇ ಉಳಿದುಬಿಡುತ್ತದೆ.

ಸಬಲರು-ದುರ್ಬಲರ ನಡುವೆ

ಪ್ರಾಚೀನ ಗ್ರೀಕ್ ಇತಿಹಾಸಕಾರ ಥುಸಿಡೈಡಿಸ್ ಪೆಲೊಪೊನ್ನೇಶಿಯನ್ ಯುದ್ಧದ ಕುರಿತು ತಮ್ಮ ಮಹಾಕೃತಿಯಲ್ಲಿ ಬರೆದದ್ದನ್ನು ಬೂಸಾನ್ನ ಹಿನ್ನೆಲೆಯಲ್ಲಿ ನೋಡಬೇಕು: "ಹಕ್ಕುಗಳು" ಕೇವಲ “ಅಧಿಕಾರದಲ್ಲಿ ಸಮಾನರ ನಡುವೆ" ಮಾತ್ರ ಪ್ರಸ್ತುತವಾಗುತ್ತವೆ, ಈ ಕಾರಣಕ್ಕಾಗಿ, "ಬಲಶಾಲಿಗಳು ತಮಗೆ ಸಾಧ್ಯವಾದುದನ್ನು ಮಾಡುತ್ತಾರೆ ಮತ್ತು ದುರ್ಬಲರು ತಮಗೆ ಆಗಬೇಕಾದುದನ್ನು ಸಹಿಸಿಕೊಳ್ಳುತ್ತಾರೆ.”

ಜನಪ್ರಿಯ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಮೆರಿಕದ ಜೊತೆ ಅಂತಿಮಗೊಳಿಸಲು ಸಿದ್ಧವಾಗಿರುವಂತೆ ಕಾಣುವ ನರೇಂದ್ರ ಮೋದಿ ಸರ್ಕಾರಕ್ಕೆ, ಇದೊಂದು ಪಾಠವಾಗಿದೆ: ಕೇವಲ ವಿಶ್ವಗುರು ಸ್ಥಾನಮಾನದ ಬಡಾಯಿ ಮಾತುಗಳು ಮತ್ತು ಟ್ರಂಪ್ನೊಂದಿಗಿನ ಸ್ನೇಹವು ಭಾರತವನ್ನು ಮತ್ತೊಮ್ಮೆ ಗುಲಾಮಗಿರಿಯ ಸ್ಥಾನಕ್ಕೆ ಇಳಿಸಬಹುದು.

ದುಃಖದ ಸಂಗತಿ ಎಂದರೆ ಬ್ರಿಟಿಷ್ ರಾಜ್ ಮಾಡಿದ್ದು ಇದನ್ನೇ ಮತ್ತು ದುರದೃಷ್ಟವಶಾತ್, ಅದು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದೆ.

(Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ ದ ಫೆಡರಲ್‌ ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.)

Tags:    

Similar News