ಸಿಆರ್‌ಪಿಎಫ್ ಯೋಧನ ಮೇಲೆ ಶಿವಭಕ್ತರಿಂದ ಹಲ್ಲೆ; ಮೂವರ ಬಂಧನ
ಟಿಕೆಟ್ ಪಡೆಯುವ ವಿಚಾರದಲ್ಲಿ ಇವರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಪರಿಸ್ಥಿತಿ ಕೈಮೀರಿದೆ. ಕನ್ವರಿಯಾಗಳು ಯೋಧನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.;
ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ವಿಕೋಪಕ್ಕೆ ತಿರುಗಿ, ಸಿಆರ್‌ಪಿಎಫ್ ಯೋಧರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಕನ್ವರಿಯಾಗಳನ್ನು (ಶಿವಭಕ್ತರು) ಬಂಧಿಸಲಾಗಿದೆ. ಈ ಘಟನೆಯು ಮಿರ್ಜಾಪುರ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಡೆದಿದೆ.
ಸಿಆರ್‌ಪಿಎಫ್ ಯೋಧ ಮತ್ತು ಕನ್ವರಿಯಾಗಳು, ಇಬ್ಬರೂ ಝಾರ್ಖಂಡ್‌ನ ಬೈದ್ಯನಾಥ ಧಾಮಕ್ಕೆ ತೆರಳಲು ಬ್ರಹ್ಮಪುತ್ರ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್‌ಗಾಗಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ, ಟಿಕೆಟ್ ಪಡೆಯುವ ವಿಚಾರದಲ್ಲಿ ಇವರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಪರಿಸ್ಥಿತಿ ಕೈಮೀರಿದೆ. ಕನ್ವರಿಯಾಗಳು ಯೋಧನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ತಕ್ಷಣವೇ ಸ್ಥಳದಲ್ಲಿದ್ದ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರು. ನಂತರ, ಪೊಲೀಸ್ ಠಾಣೆಯಿಂದ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿ ಯೋಧನನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು ಎಂದು ಜಿಆರ್‌ಪಿ ಇನ್‌ಸ್ಪೆಕ್ಟರ್ ರಾಘವೇಂದ್ರ ತಿಳಿಸಿದ್ದಾರೆ.
ಈ ಸಂಬಂಧ, ಜಿಆರ್‌ಪಿ ಪೊಲೀಸರು ಮೂವರು ಕನ್ವರಿಯಾಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 115(2) (ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು) ಮತ್ತು 352 (ಶಾಂತಿಭಂಗಕ್ಕೆ ಪ್ರಚೋದಿಸುವ ಉದ್ದೇಶದಿಂದ ಅವಮಾನಿಸುವುದು) ಹಾಗೂ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಮೂವರನ್ನು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಜಿಆರ್‌ಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.