ತಿರುಪತಿಯಲ್ಲಿ ಮಾಂಸ ಸೇವನೆ: ಇಬ್ಬರು ಹೊರಗುತ್ತಿಗೆ ನೌಕರರ ವಜಾ, ಪ್ರಕರಣ ದಾಖಲು

ತಿರುಮಲ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಟಿಟಿಡಿ ಆಡಳಿತ ಮಂಡಳಿಯು ಹಿಂದೂ ಧರ್ಮವನ್ನು ಅನುಸರಿಸುವವರನ್ನು ಮಾತ್ರ ನೇಮಕ ಮಾಡಿಕೊಳ್ಳುತ್ತದೆ.

Update: 2025-11-10 06:40 GMT

ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯ

Click the Play button to listen to article

ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪಾವಿತ್ರ್ಯತೆಗೆ ಧಕ್ಕೆ ತಂದ ಆರೋಪದ ಮೇಲೆ ಇಬ್ಬರು ಹೊರಗುತ್ತಿಗೆ ನೌಕರರನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ವಜಾಗೊಳಿಸಿದೆ. ದೇಗುಲದ ಪ್ರವೇಶ ದ್ವಾರವಾದ ಅಲಿಪಿರಿ ಸಮೀಪ ಮಾಂಸ ಸೇವನೆ ಮಾಡಿದ ಆರೋಪದ ಮೇಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಹೊರಗುತ್ತಿಗೆ ನೌಕರರಾದ ರಾಮಸ್ವಾಮಿ ಮತ್ತು ಸರಸಮ್ಮ ವಜಾಗೊಂಡವರು. ಇವರಿಬ್ಬರು ಅಲಿಪಿರಿ ಬಳಿ ಮಾಂಸಹಾರ ಸೇವಿಸುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಟಿಟಿಡಿ ವಿಚಕ್ಷಣಾ ದಳ ತನಿಖೆ ನಡೆಸಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಬ್ಬರನ್ನೂ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಟಿಟಿಡಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಟಿಟಿಡಿ ನಿಯಮಗಳ ಪ್ರಕಾರ, ತಿರುಮಲ ಕ್ಷೇತ್ರ ಮತ್ತು ಅದಕ್ಕೆ ಸಂಬಂಧಿಸಿದ ಪವಿತ್ರ ಸ್ಥಳಗಳಲ್ಲಿ ಮಾಂಸ ಮತ್ತು ಮದ್ಯ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ನೌಕರರ ವಿರುದ್ಧ ಆಂಧ್ರಪ್ರದೇಶ ದಾನ ಮತ್ತು ದತ್ತಿ ಕಾಯ್ದೆಯ ಸೆಕ್ಷನ್ 114ರ ಅಡಿಯಲ್ಲಿ ತಿರುಮಲದ ಎರಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.

ತಿರುಮಲ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಟಿಟಿಡಿ ಆಡಳಿತ ಮಂಡಳಿಯು ಹಿಂದೂ ಧರ್ಮವನ್ನು ಅನುಸರಿಸುವವರನ್ನು ಮಾತ್ರ ನೇಮಕ ಮಾಡಿಕೊಳ್ಳುತ್ತದೆ. ಈ ಹಿಂದೆಯೂ ಹಿಂದೂಯೇತರ ಧರ್ಮಗಳನ್ನು ಆಚರಿಸುತ್ತಿದ್ದ ಆರೋಪದ ಮೇಲೆ ಹಲವು ಖಾಯಂ ನೌಕರರನ್ನು ಬೇರೆ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆ ಮಾಡುವುದು ಅಥವಾ ವಜಾಗೊಳಿಸುವಂತಹ ಕಠಿಣ ಕ್ರಮಗಳನ್ನು ಕೈಗೊಂಡ ಉದಾಹರಣೆಗಳಿವೆ. ಕ್ಷೇತ್ರದ ನಿಯಮಗಳನ್ನು ಉಲ್ಲಂಘಿಸುವ ಯಾರೇ ಆದರೂ, ಅವರು ಖಾಯಂ ಅಥವಾ ಗುತ್ತಿಗೆ ನೌಕರರಾಗಿದ್ದರೂ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ಎಚ್ಚರಿಸಿದ್ದಾರೆ.

Tags:    

Similar News