
ತಿರುಮಲ ಪಟ್ಟಣ ಆಧುನಿಕ ಸ್ಪರ್ಷ ಪಡೆಯಲು ಸಜ್ಜು
ತಿರುಮಲ ಪಟ್ಟಣವನ್ನು ಅಭಿವೃದ್ಧಿ ಮಾಡಲು ಟಿಟಿಡಿ ಮುಂದಾಗಿದೆ. ತಂತ್ರಜ್ಞಾನಗಳ ನೆರವು ಮೂಲಸೌಕರ್ಯ ಹೆಚ್ಚಳದೊಂದಿಗೆ ಈ ಪ್ರಗತಿ ಸಾಧಿಸಲಾಗುತ್ತದೆ. ಪಾದಚಾರಿ ಸ್ನೇಹಿ ಫುಟ್‌ಪಾತ್‌ಗಳು ರಚನೆಯಾಗಲಿವೆ.
ಬೆಟ್ಟದಲ್ಲಿ ನೆಲೆಸಿರುವ ತಿಮ್ಮಪ್ಪನ ದೇವಾಲಕ್ಕೆ ಭೇಟಿ ನೀಡುವ ಕೋಟ್ಯಂತರ ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತಿರುಮಲ ಪಟ್ಟಣಕ್ಕೆ ಆಧುನಿಕ ಸ್ಪರ್ಶ ನೀಡಲು ಮುಂದಾಗಿದೆ. ಆ ಪ್ರದೇಶದ ಆಧ್ಯಾತ್ಮಿಕ ಕುರುಹುಗಳು ಹಾಗೂ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಪಟ್ಟಣವನ್ನು ಅಭಿವೃದ್ಧಿ ಮಾಡಲು ಮುಂದಾಗಿದೆ.
ಸುಸ್ಥಿರ ಅಭಿವೃದ್ಧಿ, ಸಂಚಾರ ವ್ಯವಸ್ಥೆ ಮತ್ತು ಭಕ್ತರಿಗೆ ಸುಧಾರಿತ ಸೌಲಭ್ಯಗಳನ್ನು ನೀಡುವ ದೂರದೃಷ್ಟಿಯೊಂದಿಗೆ ಈ ಯೋಜನೆ ಮಾಡಲಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ ಶ್ಯಾಮಲಾ ರಾವ್ ಹೇಳಿದ್ದಾರೆ.
"ತಾಂತ್ರಿಕವಾಗಿ ಹೆಚ್ಚು ಅನುಕೂಲಕರವಾಗಿರುವ ಯೋಜನೆ ಕಾರ್ಯಗತಗೊಳಿಸಲು ನಾವು ಪರಿಣಿತ ನಗರ ಯೋಜಕರನ್ನು ಸಲಹೆಗಾರರಾಗಿ ನೇಮಿಸಿದ್ದೇವೆ" ಎಂದು ಟಿಟಿಡಿ ಅಧಿಕಾರಿಯ ಹೇಳಿಕೆಗಳನ್ನು ಉಲ್ಲೇಖಿಸಿ ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ. ಆಧುನೀಕರಣ ಯೋಜನೆಯ ಪ್ರಮುಖ ಅಂಶವೆಂದರೆ ಸಂಚಾರ ದಟ್ಟಣೆ ಮಾಡುವುದು ಎಂದು ವರದಿಯಲ್ಲಿ ಹೇಳಲಾಗಿದೆ. .
ಮೇಕ್ ಓವರ್
ಉದ್ದೇಶಿತ ವಾಹನ ನಿರ್ವಹಣೆ ಭಾಗವಾಗಿ, ಮಲ್ಟಿ-ಲೆವೆಲ್ ಸ್ಮಾರ್ಟ್ ಪಾರ್ಕಿಂಗ್ ಸೌಲಭ್ಯ, ರಿಯಲ್ ಟೈಮ್ ಮೇಲ್ವಿಚಾರಣಾ ತಂತ್ರಜ್ಞಾನಗಳೊಂದಿಗೆ ಸಂಯೋಜನೆ ಮಾಡುವ ಗುರಿಯನ್ನು ಹೊಂದಿದೆ. ಇದು ಪಾರ್ಕಿಂಗ್ ಪ್ರದೇಶವನ್ನು ಉನ್ನತೀಕರಿಸುವುದು ಹಾಗೂ ವಾಹನ ಸಂಚಾರ ಸುಗಮಗೊಳಿಸಲಿದೆ.
ಭಕ್ತರಿಗೆ ಓಡಾಡಲು ಅನುಕೂಲವಾಗುವಂತೆ ಪಾದಚಾರಿ ಸ್ನೇಹಿ ಫುಟ್‌ಪಾತ್ ಕೂಡ ನಿರ್ಮಿಸಲಾಗುತ್ತದೆ. ಮುಖ್ಯ ಬಸ್ ನಿಲ್ದಾಣ ಮತ್ತು ಕಾಟೇಟ್‌ಗಳಂಥ ಹಳೆಯ ರಚನೆಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
"ವಾಹನಗಳ ಓಡಾಟ ಸೇರಿದಂತೆ ಹೆಚ್ಚುತ್ತಿರುವ ವಾಯು ಮಾಲಿನ್ಯ ತಡೆಗಟ್ಟುವ ಗುರಿಯೂ ಇದೆ. ತಿರುಮಲವನ್ನು ಸ್ವಚ್ಛ ಮತ್ತು ಹಸಿರು ಮಾಡುವ ಗುರಿಯೊಂದಿಗೆ ತ್ಯಾಜ್ಯ ವಿಲೇವಾರಿ ಮಾಡಲಾಗುತತ್ತದೆ. ಮೂರು ತಿಂಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶ್ಯಾಮಲಾ ರಾವ್ ಹೇಳಿದ್ದಾರೆ.
ಆಧ್ಯಾತ್ಮಿಕ ಭಾವನೆ
ಬದಲಾವಣೆಗೆ ಆಧ್ಯಾತ್ಮಿಕ ಆಯಾಮವನ್ನು ಒದಗಿಸಲು, ಟಿಟಿಡಿ ಅಸ್ತಿತ್ವದಲ್ಲಿರುವ ವಿಶ್ರಾಂತಿ ಗೃಹಗಳನ್ನು ಧಾರ್ಮಿಕ ಹೆಸರುಗಳೊಂದಿಗೆ ಮರುನಾಮಕರಣ ಮಾಡಲಿದೆ. ಸುಮಾರು 150 ಪವಿತ್ರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ತಿರುಮಲವನ್ನು ಯಾತ್ರಾ ಕೇಂದ್ರಗಳಲ್ಲಿ ಜಾಗತಿಕ ಮಾನದಂಡವನ್ನಾಗಿ ಮಾಡುವುದು ನಮ್ಮ ದೃಷ್ಟಿಕೋನ ಎಂದು ರಾವ್ ಹೇಳಿದರು. ತಿರುಮಲದ ಆಧ್ಯಾತ್ಮಿಕ ರಚನೆಗಳನ್ನು ಪ್ರತಿಬಿಂಬಿಸುವ ಬುದ್ಧಿವಂತ ನಗರ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು ಟಿಟಿಡಿ ಭೌಗೋಳಿಕ ಮಾಹಿತಿ ವ್ಯವಸ್ಥೆಗಳು (ಜಿಐಎಸ್) ಮತ್ತು ಕಟ್ಟಡ ಮಾಹಿತಿ ಮಾಡೆಲಿಂಗ್ನಂತಹ ಅತ್ಯಾಧುನಿಕ ಡಿಜಿಟಲ್ ಸಾಧನಗಳನ್ನು ಬಳಸಿಕೊಳ್ಳಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.