Tirupati tragedy | ತಿರುಪತಿಯಲ್ಲಿ ಕಾಲ್ತುಳಿತ ಇತಿಹಾಸದಲ್ಲೇ ಮೊದಲು; ಮೃತರಲ್ಲಿ ಕರ್ನಾಟಕದವರು ಇಲ್ಲ
Tirupati tragedy | ತಿರುಪತಿಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ವಿಶಾಖಪಟ್ಟಣಂ ನಿವಾಸಿಗಳು ಮತ್ತು ಇಬ್ಬರು ತಮಿಳುನಾಡು ಮಹಿಳೆಯರು ಸೇರಿದ್ದಾರೆ. ಇನ್ನೂ 44 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ;
ಆಧ್ಯಾತ್ಮಿಕ ನಗರ ತಿರುಪತಿಯಲ್ಲಿ ನಡೆದ ಕಾಲ್ತುಳಿತದಲ್ಲಿ (Tirupati tragedy) ಮೃತಪಟ್ಟವರಲ್ಲಿ ಕರ್ನಾಟಕದವರು ಇಲ್ಲ ಎಂಬುದಾಗಿ ಅಧಿಕೃತ ಮಾಹಿತಿ ಬಂದಿದೆ. ಆರಂಭದಲ್ಲಿ ಬಳ್ಳಾರಿಯ ಮಹಿಳೆಯೊಬ್ಬರು ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ತಮಿಳುನಾಡು ಮೂಲದವರು ಎಂದು ಹೇಳಲಾಗಿದೆ.
ತಿರುಪತಿಯ ಬೈರಾಗಿಪಟ್ಟೇಡಾದಲ್ಲಿ ವೈಕುಂಠ ದರ್ಶನದ ಟೋಕನ್ ನೀಡಲು ಸಿದ್ಧಪಡಿಸಿದ್ದ ಕೌಂಟರ್ನಲ್ಲಿ ಕಾಲ್ತುಳಿತಕ್ಕೆ ಆರು ಜನರು ಮೃತಪಟ್ಟಿದಾರೆ. ಇನ್ನೂ 44 ಜನರು ಗಾಯಗೊಂಡಿದ್ದಾರೆ ಎಂದು ಗುರುವಾರ ಮೂಲಗಳು ತಿಳಸಿವೆ. ಘಟನೆಯಿಂದ ತಿರುಪತಿ ನಗರವೇ ಬೆಚ್ಚಿಬಿದ್ದಿದೆ. ಇಂತಹ ದುರಂತ ಘಟನೆ ನಡೆದಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಮೃತಪಟ್ಟವರ ವಿವರ ಇಲ್ಲಿದೆ
1. ಲಾವಣ್ಯಸ್ವಾತಿ, ತತಿಚೆಟ್ಲಪಲೆಮ್, ವಿಶಾಖಪಟ್ಟಣಂ
2. ಶಾಂತಿ, ಕಂಚರಪಲೆಮ್, ವಿಶಾಖಪಟ್ಟಣಂ
3. ಬಾಬು ನಾಯ್ಡು ನರಸರಾವ್ಪೇಟ, ರಾಮಚಂದ್ರಪುರಂ (ವೈಜಾಗ್)
4. ರಜನಿ ಮಡ್ಡಿಲಪಲೆಮ್, ವಿಶಾಖಪಟ್ಟಣಂ
5. ನಿರ್ಮಲಾ, ಪೊಲ್ಲಾಚಿ ತಮಿಳುನಾಡಿನ
6. ಮಲ್ಲಿಕಾ, ಸೇಲಂ, ಮೆಟ್ಟೂರು, ತಮಿಳುನಾಡು
ನಿರ್ಮಲಾ ಮತ್ತು ರಜನಿ ಅವರ ಮೃತದೇಹಗಳನ್ನು ತಿರುಪತಿಯ ಎಸ್ ವಿಐಎಂಎಸ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಉಳಿದ ನಾಲ್ವರ ಶವಗಳನ್ನು ತಿರುಪತಿ ರುಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಟಿಕೆಟ್ ಗಾಗಿ ಕಾಲ್ತುಳಿತದಲ್ಲಿ ಗಾಯಗೊಂಡವರಲ್ಲಿ 31 ಮಂದಿ ರುಯಾ ಆಸ್ಪತ್ರೆಯಲ್ಲಿ ಮತ್ತು 13 ಮಂದಿ ಎಸ್ ವಿಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಸಾವು
ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಉಸಿರುಗಟ್ಟಿದ್ದೇ ಘಟನೆ ಮೂಲ ಕಾರಣ. ತಿರುಪತಿಯ ವಿಷ್ಣು ನಿವಾಸ್, ಬೈರಾಗಿಪಟ್ಟಡ ಮತ್ತು ಭೂದೇವಿ ಕಾಂಪ್ಲೆಕ್ಸ್ನಲ್ಲಿ ಬುಧವಾರ ರಾತ್ರಿ ಕಾಲ್ತುಳಿತ ಸಂಭವಿಸಿದೆ. ಬೈರಾಗಿಪಟ್ಟೇಡಾದಲ್ಲಿನಡೆದ ಘಟನೆಯಲ್ಲಿಯೇ ಹೆಚ್ಚಿನ ಜೀವ ಹಾನಿಯಾಗಿದೆ.
ಮೇ 10, 11 ಮತ್ತು 12 ರ ಮೂರು ದಿನಗಳ ಕಾಲ ತಿರುಮಲದಲ್ಲಿ ವೈಕುಂಠ ದರ್ಶನದ ಮೂರು ದಿನಗಳ ಸರ್ವದರ್ಶನಂ ಟೋಕನ್ಗಳನ್ನು ನೀಡಲು ಟಿಟಿಡಿ ತಿರುಪತಿಯ ಎಂಟು ಸ್ಥಳಗಳಲ್ಲಿ 90 ಕೌಂಟರ್ಗಳನ್ನು ಸ್ಥಾಪಿಸಲಾಗಿದೆ. .
ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಟೋಕನ್ ವಿತರಣೆಗೆ ಸಮಯ ನಿಗದಿಯಾಗಿತ್ತು. ಹೀಗಾಗಿ ಬುಧವಾರ ಮಧ್ಯಾಹ್ನದಿಂದ ಹೆಚ್ಚಿನ ಸಂಖ್ಯೆಯ ಜನರು ಕೌಂಟರ್ಗಳಿಗೆ ಬಂದಿದ್ದರು. ಪೊಲೀಸರು ಅವರನ್ನು ಹೊರಗೆ ರಸ್ತೆಯಲ್ಲಿ ಸರತಿ ಸಾಲಿನಲ್ಲಿ ಪ್ರವೇಶಿಸದಂತೆ ತಡೆದರು ಮತ್ತು ನಂತರ ರಾತ್ರಿ 9 ಗಂಟೆ ಸುಮಾರಿಗೆ ಕಾಲ್ತುಳಿತ ಉಂಟಾಯಿತು.
ಇನ್ನೇನು ಆಯಿತು?
1. ತಿರುಪತಿ ರೈಲ್ವೆ ನಿಲ್ದಾಣದ ಮುಂಭಾಗದ ವಿಷ್ಣು ನಿವಾಸದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕೆಲವರು ಗಾಯಗೊಂಡಿದ್ದಾರೆ.
2. ಬೈರಾಗಿಪಟ್ಟೇಡ ಪ್ರದೇಶದ ರಾಮಾನಾಯ್ಡು ಶಾಲೆಯಲ್ಲಿ ಸ್ಥಾಪಿಸಲಾದ ಕೌಂಟರ್ಗಳಲ್ಲಿ ಗೇಟ್ ತೆರೆಯುವಾಗ ಉಂಟಾದ ಗಲಾಟೆಯಲ್ಲಿ ಸುಮಾರು ಒಂಬತ್ತು ಭಕ್ತರು ಉಸಿರುಗಟ್ಟಿ ತೀವ್ರವಾಗಿ ಅಸ್ವಸ್ಥರಾದರು.
3. ಅಲಿಪಿರಿಯ ಭೂದೇವಿ ಕಾಂಪ್ಲೆಕ್ಸ್ನಲ್ಲಿ ಕೆಲವು ಭಕ್ತರು ಜಗಳವಾಡಿಕೊಂಡಿದ್ದಾರೆ ಮತ್ತು ಗಂಭೀರ ಗಾಯಗೊಂಡರು.
ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವವರ ವಿವರಗಳನ್ನು ಆಸ್ಪತ್ರೆಯ ಮೂಲಗಳು ಇನ್ನೂ ಬಹಿರಂಗಪಡಿಸಿಲ್ಲ.
ಅಧಿಕಾರಿಗಳ ಭೇಟಿ
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು, ಇಒ ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಇಒ ಸಿ.ಎಚ್. ವೆಂಕಯ್ಯ ಚೌಧರಿ ತಿರುಪತಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸಂತ್ರಸ್ತರನ್ನು ಭೇಟಿ ಮಾಡಿ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅವರು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಿರುಪತಿ ಎಸ್ ವಿಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿದರು. ತಿರುಪತಿ ಶಾಸಕ ಆರಣಿ ಶ್ರೀನಿವಾಸುಲು ಅವರು ಸಂತ್ರಸ್ತರಿಗೆ ಒದಗಿಸಲಾಗುತ್ತಿರುವ ವೈದ್ಯಕೀಯ ಸೇವೆಗಳ ಮೇಲ್ವಿಚಾರಣೆ ನಡೆಸಿದರು.
ಮಿತಿ ಮೀರಿದ ಜನಸಂದಣಿ
ಅಧಿಕಾರಿಗಳು ಬರುವ ಹೊತ್ತಿಗೆ ಜನಸಂದಣಿ ಹೆಚ್ಚಾಯಿತು. ಹೀಗಾಗಿ ಅವರು ನಿಯಂತ್ರಿಸಲು ವಿಫಲರಾದರು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ವೈದ್ಯಕೀಯ ಚಿಕಿತ್ಸೆ ನೀಡಲು ತಕ್ಷಣಕ್ಕೆ ಆಂಬ್ಯುಲೆನ್ಸ್ ಕೂಡ ಸಿಗಲಿಲ್ಲ. ಅದೇ ಸಮಯದಲ್ಲಿ, ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದ ಡಿಎಸ್ಪಿ ಮಟ್ಟದ ಅಧಿಕಾರಿಯ ವಿರುದ್ಧ ಭಕ್ತರು ಕಿಡಿಕಾರಿದರು . ಭಕ್ತರ ದಟ್ಟಣೆ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಬೇಕಾದ ಭದ್ರತಾ ಪರಿಸ್ಥಿತಿಗಳು ಮತ್ತು ಸೌಲಭ್ಯಗಳನ್ನು ಒದಗಿಸುವಲ್ಲಿ ಟಿಟಿಡಿ ಅಧಿಕಾರಿಗಳು ವಿಫಲರಾಗಿರುವುದು ಕಂಡು ಬಂತು .
ವೈದ್ಯಕೀಯ ಸೇವೆ ವಿಳಂಬ
ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಸಿಪಿಆರ್ ನಡೆಸಿದ ಟಿಟಿಡಿ ಭದ್ರತಾ ಸಿಬ್ಬಂದಿ ರಾತ್ರಿ 9.30 ರ ಸುಮಾರಿಗೆ ರುಯಾ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ವೈದ್ಯರುಗಳು ಕರ್ತವ್ಯ ಬದಲಾಯಿಸುವ ಸಮಯವಾಗಿತ್ತು. ವೈದ್ಯರು ಕರ್ತವ್ಯಕ್ಕೆ ಹಾಜರಾಗಲು ವಿಳಂಬವಾಗಿದ್ದರಿಂದ ಹೆಚ್ಚಿನ ಅನಾಹುತ ನಡೆದಿದೆ.
ಇಂದು ತಿರುಪತಿಗೆ ಸಿಎಂ ಭೇಟಿ
ಘಟನೆ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನಾವು ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಘಟನೆಯ ವ್ಯವಸ್ಥೆಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಿಏಂ ತಕ್ಷಣ ಅಧಿಕಾರಿಗಳೊಂದಿಗೆ ಟೆಲಿಕಾನ್ಫರೆನ್ಸ್ ನಡೆಸಿದ್ದಾರೆ. ಸಾಕಷ್ಟು ವ್ಯವಸ್ಥೆ ಮಾಡಲು ಟಿಟಿಡಿ ಅಧಿಕಾರಿಗಳು ವಿಫಲರಾಗಿದ್ದಕ್ಕೆ ಕೋಪ ವ್ಯಕ್ತಪಡಿಸಿದರು. ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರೊಂದಿಗೆ, ರಾಜ್ಯ ಡಿಜಿಪಿ ಮತ್ತು ಗೃಹ ಸಚಿವ ವಂಗಲಪುಡಿ ಅನಿತಾ ಅವರು ತಕ್ಷಣ ಟೆಲಿಕಾನ್ಸ್ ಮೂಲಕ ಮಾತನಾಡಿದರು.
ಗುಪ್ತಚರ ವೈಫಲ್ಯ: ಟಿಟಿಡಿ ಅಧ್ಯಕ್ಷ
ಈ ಘಟನೆ ನಡೆದಿರುವುದು ತುಂಬಾ ದುಃಖಕರ. ಟಿಟಿಡಿ ಅಧ್ಯಕ್ಷ ಬಿ. ಆರ್ ನಾಯ್ಡು ಬುಧವಾರ ರಾತ್ರಿ ತಿರುಪತಿ ಆಸ್ಪತ್ರೆಗೆ ತೆರಳಿ ಸಂತ್ರಸ್ತರನ್ನು ಭೇಟಿಯಾದರು. ಅಲ್ಲಿ ಅವರು ಗುಪ್ತಚರ ವಿಭಾಗದ ವೈಫಲ್ಯ ಕಂಡು ಬಂದಿದೆ ಎಂದು ಆರೋಪಿಸಿದರು.
ಪೊಲೀಸರಿಂದ ಮಾಹಿತಿ
ಭಕ್ತರ ನಡುವಿನ ಘರ್ಷಣೆ ಬಗ್ಗೆ ರಾಜ್ಯ ಗೃಹ ಸಚಿವ ವಂಗಲಪುಡಿ ಅನಿತಾ ಅವರು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇಂತಹ ಘಟನೆ ತುಂಬಾ ಆಘಾತಕಾರಿ. ವ್ಯವಸ್ಥೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ವಿಫಲವಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.