ಇಂದೋರ್‌ನಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ
ಕೆಲ ಕಾಲ ಅವರನ್ನು ಹಿಂಬಾಲಿಸಿದ ಆರೋಪಿ, ನಂತರ ಆಟಗಾರ್ತಿಯೊಬ್ಬರನ್ನು ಅನುಚಿತವಾಗಿ ಸ್ಪರ್ಶಿಸಿ, ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಉಪನಿರೀಕ್ಷಕಿ ನಿಧಿ ರಘುವಂಶಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಅಕಿಲ್ ಖಾನ್
ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದ ಆಸ್ಟ್ರೇಲಿಯಾ ತಂಡದ ಇಬ್ಬರು ಆಟಗಾರ್ತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ತಮ್ಮ ಸಹ ಆಟಗಾರ್ತಿಯೊಂದಿಗೆ ಹೋಟೆಲ್‌ನಿಂದ ಕೆಫೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಶುಕ್ರವಾರ ಆರೋಪಿಯನ್ನು ಬಂಧಿಸಲಾಗಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದ ಮರುದಿನ, ಇಬ್ಬರು ಆಟಗಾರ್ತಿಯರು ತಮ್ಮ 'ರ್ಯಾಡಿಸನ್ ಬ್ಲೂ' ಹೋಟೆಲ್‌ನಿಂದ ಸಮೀಪದ ಕೆಫೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಬೈಕ್‌ನಲ್ಲಿ ಬಂದ ಅಕಿಲ್ ಖಾನ್ (28) ಎಂಬಾತ, ಅವರನ್ನು ಹಿಂಬಾಲಿಸಿದ್ದಾನೆ.
ಕೆಲ ಕಾಲ ಅವರನ್ನು ಹಿಂಬಾಲಿಸಿದ ಆರೋಪಿ, ನಂತರ ಆಟಗಾರ್ತಿಯೊಬ್ಬರನ್ನು ಅನುಚಿತವಾಗಿ ಸ್ಪರ್ಶಿಸಿ, ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಉಪನಿರೀಕ್ಷಕಿ ನಿಧಿ ರಘುವಂಶಿ ತಿಳಿಸಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಆಟಗಾರ್ತಿಯರು, ತಕ್ಷಣವೇ ತಂಡದ ಭದ್ರತಾ ಅಧಿಕಾರಿ ಡ್ಯಾನಿ ಸಿಮನ್ಸ್ ಅವರಿಗೆ ಮಾಹಿತಿ ನೀಡಿದ್ದಾರೆ. ಸಿಮನ್ಸ್ ಅವರು ಸ್ಥಳೀಯ ಭದ್ರತಾ ಸಂಪರ್ಕ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಆಟಗಾರ್ತಿಯರಿಗೆ ಸಹಾಯಕ್ಕಾಗಿ ವಾಹನವನ್ನು ಕಳುಹಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಸಹಾಯಕ ಪೊಲೀಸ್ ಆಯುಕ್ತೆ ಹಿಮಾನಿ ಮಿಶ್ರಾ ಅವರು ಆಟಗಾರ್ತಿಯರನ್ನು ಭೇಟಿಯಾಗಿ, ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಎಂಐಜಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 74 (ಮಹಿಳೆಯ ಮಾನಭಂಗ ಮಾಡುವ ಉದ್ದೇಶದಿಂದ ಹಲ್ಲೆ) ಮತ್ತು 78 (ಹಿಂಬಾಲಿಸುವಿಕೆ) ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಿಸಲಾಗಿದೆ.
ಸಾರ್ವಜನಿಕರಿಂದ ದೂರು
ರಸ್ತೆಯಲ್ಲಿದ್ದ ವ್ಯಕ್ತಿಯೊಬ್ಬರು ಆರೋಪಿಯ ಬೈಕ್‌ನ ನೋಂದಣಿ ಸಂಖ್ಯೆಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದು ಆರೋಪಿಯನ್ನು ಪತ್ತೆಹಚ್ಚಲು ಸಹಕಾರಿಯಾಯಿತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಆರೋಪಿ ಅಕಿಲ್ ಖಾನ್‌ನನ್ನು ಬಂಧಿಸಿದ್ದಾರೆ. ಈತ ಹಳೆಯ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ದೇಶದ ವರ್ಚಸ್ಸಿಗೆ ಕಳಂಕ ತಂದಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಧ್ಯಪ್ರದೇಶ ಸರ್ಕಾರ ತಿಳಿಸಿದೆ.