Tirupati stampede : ತಿರುಪತಿಯಲ್ಲಿ ಕಾಲ್ತುಳಿತ ; ಘಟನೆಗೆ ಮೂಲ ಕಾರಣವೇನು? ಇಲ್ಲಿದೆ ಎಲ್ಲ ವಿವರ

Tirupati stampede : ವಿಶೇಷ ದರ್ಶನಕ್ಕಾಗಿ ಟೋಕನ್ ಪಡೆಯಲು 4,000 ಕ್ಕೂ ಹೆಚ್ಚು ಭಕ್ತರ ಗುಂಪು ಸಾಲುಗಟ್ಟಿ ನಿಂತಿದ್ದರಿಂದ ಭಾರಿ ಗೊಂದಲ ಮತ್ತು ಕೋಲಾಹಲ ಉಂಟಾಯಿತು.;

Update: 2025-01-09 06:14 GMT
ನೂಕು ನುಗ್ಗಲು ಉಂಟಾಗಿರುವ ಸಂದರ್ಭ

ವಿಶ್ವ ವಿಖ್ಯಾತ ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಬುಧವಾರ ರಾತ್ರಿ ‘ವೈಕುಂಠ ದ್ವಾರ ದರ್ಶನ’ದ ಟೋಕನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದ್ದು, ಆರು ಭಕ್ತರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಂಪಿನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ಮಹಿಳೆಯೊಬ್ಬರನ್ನುರಕ್ಷಿಸಲುಗೇಟ್‌ ತೆರೆದಿದ್ದೇ ಘಟನೆಗೆ ಕಾರಣ ಎಂದು ಮೂಲಗಳು ತಿಳಿಸಿವೆ. ನೂಕುನುಗ್ಗಲಿನಿಂದ 40 ಅಧಿಕ ಭಕ್ತರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ದರ್ಶನಕ್ಕಾಗಿ ಟೋಕನ್ ಪಡೆಯಲು 4,000ಕ್ಕೂ ಹೆಚ್ಚು ಭಕ್ತರ ಗುಂಪು ಸಾಲುಗಟ್ಟಿ ನಿಂತಿದ್ದರಿಂದ ಭಾರಿ ಗೊಂದಲ ಮತ್ತು ಕೋಲಾಹಲ ಸೃಷ್ಟಿಸಿತು. ಹೀಗಾಗಿ ಮಿತಿ ಮೀರಿದ ಜನದಟ್ಟಣೆ ಮತ್ತು ಆಡಳಿತ ಲೋಪವೇ ಕಾಲ್ತುಳಿತ ಉಂಟಾಗಲು ಮತ್ತು ಕನಿಷ್ಠ ಆರು ಜನರು ಮೃತಪಡಲು ಕಾರಣವಾಗಿದೆ ಎಂದು ಆರೋಪಿಸಲಾಗಿದೆ.

ಮಾಹಿತಿಯ ಪ್ರಕಾರ, ಬೈರಾಗಿ ಪಟ್ಟೆಡಾ ಪಾರ್ಕ್‌ನ ಟೋಕನ್ ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿದ್ದವರೇ ಬಲಿಪಶುಗಳು. ಈ ಗುಂಪಿನಲ್ಲಿ ಮಲ್ಲಿಕಾ ಎಂಬುವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಒಂದು ಗೇಟ್‌ ತೆರೆಯಲಾಗಿದೆ. ತಕ್ಷಣ ಅಲ್ಲಿದ್ದ ಜನಸಮೂಹವು ಅದರ ಲಾಭ ಪಡೆದು ಒಳ ನುಗ್ಗಲು ಪ್ರಯತ್ನಿಸಿದ್ದಾರೆ. ಇದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಸಿವೆ.

91 ಕೌಂಟರ್‌ಗಳು ಓಪನ್‌

ಘಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯ ಸದಸ್ಯ ಭಾನು ಪ್ರಕಾಶ್ ರೆಡ್ಡಿ, ಗುರುವಾರ ಬೆಳಿಗ್ಗೆ ಪ್ರಾರಂಭವಾಗಬೇಕಿದ್ದಟೋಕನ್‌ಗಳ ವಿತರಣೆಗೆ 91 ಕೌಂಟರ್‌ಗಳನ್ನು ತೆರೆಯಲಾಗಿತ್ತು ಎಂದು ಹೇಳಿದ್ದಾರೆ.

"ಕಾಲ್ತುಳಿತದಲ್ಲಿ ಆರು ಭಕ್ತರು ಮೃತಪಟ್ಟಿದ್ದಾರೆ. 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ನಾವು ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಟಿಟಿಡಿಯ ಇತಿಹಾಸದಲ್ಲಿ ಇಂಥ ದುರ್ಘಟನೆ ಮೊದಲ ಬಾರಿ ಸಂಭವಿಸಿದೆ. ನಾನು ತಿರುಪತಿಯ ಭಕ್ತರಲ್ಲಿ ಈ ಕುರಿತು ಕ್ಷಮೆ ಕೋರುವೆ. ನಾವು ತನಿಖೆ ನಡೆಸಿ ಗಂಭೀರ ಕ್ರಮ ಕೈಗೊಳ್ಳುತ್ತೇವೆ" ಎಂದು ಅವರು ಹೇಳಿದ್ದಾರೆ.,

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ರಾಜ್ಯ ಆರೋಗ್ಯ ಸಚಿವರು ಇಂದು ತಿರುಪತಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಗಲಾಟೆಯ ಸಮಯದಲ್ಲಿ ಜನರು ಪರಸ್ಪರ ತಳ್ಳುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಜನಸಮೂಹ ನಿಯಂತ್ರಣ ಮಾಡಲು ಯತ್ನಿಸಿದರು. ಆದಾಗ್ಯೂ ಜನರ ಸಂಖ್ಯೆ ಹಚ್ಚಿದ್ದ ಕಾರಣ ನಿಭಾಯಿಸಲು ಕಷ್ಟವಾಯಿತು. ಕಾಲ್ತುಳಿತ ಸಂಭವಿಸಿದ ನಂತರ ಗಾಯಗೊಂಡ ಭಕ್ತರಿಗೆ ಪೊಲೀಸರು ತುರ್ತು ಚಿಕಿತ್ಸೆ ನೀಡುತ್ತಿರುವ ವೀಡಿಯೊಗಳು ವೈರಲ್‌ ಆಗಿವೆ.

ದುರಾಡಳಿತಕ್ಕೆ ಬೇಸರ

"ಆಡಳಿತ ಲೋಪದಿಂದಾಗಿ ಘಟನೆ ಸಂಭವಿಸಿದೆ ಎಂದು ನಾವು ಅಂದುಕೊಂಡಿದ್ದೇವೆ. ಡಿಎಸ್ಪಿ ಒಂದು ಪ್ರದೇಶದಲ್ಲಿ ಗೇಟ್ ತೆರೆದ ತಕ್ಷಣ ಉಳಿದವರು ಅಲ್ಲಿಗೆ ಓಡಿಹೋದರು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇಂದು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ ಎಂದು ಟಿಟಿಡಿ ಅಧ್ಯಕ್ಷ ಬಿ. ಆರ್‌ ನಾಯ್ಡು ಹೇಳಿದ್ದಾರೆ.

ಸಿಎಂ ಚಂದ್ರಬಾಬು ನಾಯ್ಡು ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಟೋಕನ್‌ಗಳಿಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಕಾರಣ ಘಟನೆ ಸಂಭವಿಸಿರುವುದು ಬೇಸರದ ವಿಷಯ,ʼʼ ಎಂದು ಹೇಳಿದ್ದಾರೆ.,

"ಸ್ಥಳಕ್ಕೆ ಹೋಗಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಿಸಲಾಗಿದೆ. ನಾನು ಕಾಲಕಾಲಕ್ಕೆ ಜಿಲ್ಲಾ ಮತ್ತು ಟಿಟಿಡಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ ಮತ್ತು ನಾನು ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ" ಎಂದು ಸಿಎಂ ಟ್ವೀಟ್‌ ಮೂಲಕ ಹೇಳಿದ್ದಾರೆ.

ದರ್ಶನ ಟಿಕೆಟ್‌ ಇದ್ದವರಿಗೆ ಮಾತ್ರ ಟೋಕನ್‌

ಕಾಲ್ತುಳಿತಕ್ಕೆ ಒಂದು ದಿನ ಮೊದಲು, ದರ್ಶನ ಟೋಕನ್ ಅಥವಾ ಟಿಕೆಟ್ ಹೊಂದಿರುವ ಭಕ್ತರಿಗೆ ಮಾತ್ರ ನಿಗದಿತ ಸಮಯದಲ್ಲಿ ಸರತಿ ಸಾಲಿನಲ್ಲಿ ನಿಲ್ಲಲು ಅವಕಾಶ ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ. ತಿರುಮಲದಲ್ಲಿ ಸೀಮಿತ ವಸತಿ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಾಹಕ ಅಧಿಕಾರಿ (ಇಒ) ಜೆ ಶ್ಯಾಮಲಾ ರಾವ್ ಈ ಘೋಷಣೆ ಮಾಡಿದ್ದರು.

ತಿರುಪತಿಯಲ್ಲಿ 1,200 ಮತ್ತು ತಿರುಮಲದಲ್ಲಿ 1,800 ಸೇರಿದಂತೆ ತಿರುಪತಿ ಮತ್ತು ತಿರುಮಲದಾದ್ಯಂತ ಸುಮಾರು 3,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಅಷ್ಟೊಂದು ಭಕ್ತರು ಏಕಾಏಕಿ ಬಂದಿದ್ದು ಯಾಕೆ?

ಜನವರಿ 10ರಿಂದ 19ರವರೆಗೆ ತಿರುಮಲ ಶ್ರೀವಾರಿ ಆಲಯಂನಲ್ಲಿ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಟಿಟಿಡಿ ಘೋಷಿಸಿದ ಕಾರ್ಯಕ್ರಮದ ಪ್ರಕಾರ, ಜನವರಿ 10 ರಿಂದ 19 ರವರೆಗೆ 10 ದಿನಗಳ ಕಾಲ ವೈಕುಂಠ ದ್ವಾರಗಳನ್ನು ತೆರೆದಿಡಲಾಗುತ್ತದೆ. ಬೆಳಗ್ಗೆ 8 ಗಂಟೆಗೆ ಸರ್ವದರ್ಶನ ಆರಂಭವಾಗಲಿದೆ. ಜನವರಿ 10ರಂದು ವೈಕುಂಠ ಏಕಾದಶಿಯಂದು ಬೆಳಿಗ್ಗೆ 9 ರಿಂದ 11 ರವರೆಗೆ ದೇವಾಲಯದ ನಾಲ್ಕು ಬೀದಿಗಳಲ್ಲಿ ಚಿನ್ನದ ರಥೋತ್ಸವ ನಡೆಯಲಿದೆ. ಜನವರಿ 11 ರಂದು ವೈಕುಂಠ ದ್ವಾದಶಿಯಂದು ಬೆಳಿಗ್ಗೆ 5.30 ರಿಂದ 6.30 ರವರೆಗೆ ಚಕ್ರಸ್ನಾನ ನಡೆಯಲಿದೆ. ಉತ್ಸವ ವೀಕ್ಷಿಸಲು ಭಕ್ತರು ಟೋಕನ್ ಗಳಿಗಾಗಿ ತಿರುಪತಿಗೆ ಬಂದಿದ್ದರು.

Tags:    

Similar News