Tirupati laddus row| ನ್ಯಾಯಾಲಯದ ನಿಗಾದಲ್ಲಿ ತನಿಖೆ: ಶುಕ್ರವಾರ ವಿಚಾರಣೆ

Update: 2024-10-03 11:22 GMT

ನವದೆಹಲಿ: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ಶುಕ್ರವಾರ ನಡೆಯಲಿದೆ. 

ವಿಚಾರಣೆ ಗುರುವಾರ ಮಧ್ಯಾಹ್ನ 3.30ಕ್ಕೆ ನಡೆಯಬೇಕಿತ್ತು. ಶುಕ್ರವಾರ ಬೆಳಗ್ಗೆ 10.30ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದರು.

ʻನೀವು ಅನುಮತಿ ನೀಡಿದರೆ, ನಾನು ನಾಳೆ ಬೆಳಗ್ಗೆ 10.30 ಕ್ಕೆ ಪ್ರತಿಕ್ರಿಯಿಸಬಹುದೇ?ʼ ಎಂದು ಮೆಹ್ತಾ ಅವರು ನ್ಯಾ.ಬಿ.ಆರ್. ಗವಾಯಿ ನೇತೃತ್ವದ ಪೀಠವನ್ನು ಕೇಳಿದರು. ಮನವಿಗೆ ಸಮ್ಮತಿಸಿದ ಪೀಠ, ಶುಕ್ರವಾರ ವಿಚಾರಣೆ ನಡೆಸುವುದಾಗಿ ಹೇಳಿದೆ.

ಸೆಪ್ಟೆಂಬರ್ 30 ರಂದು ವಿಷಯವನ್ನು ಆಲಿಸಿದ್ದ ಸುಪ್ರೀಂ ಕೋರ್ಟ್, ರಾಜ್ಯ ನೇಮಿಸಿದ ಎಸ್‌ಐಟಿ ತನಿಖೆಯನ್ನು ಮುಂದುವರಿಸಬೇಕೇ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುವಂತೆ ಮೆಹ್ತಾ ಅವರನ್ನು ಕೇಳಿತ್ತು.

ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕ ಹೇಳಿಕೆಯನ್ನು ನ್ಯಾಯಾಲಯ ಪ್ರಶ್ನಿಸಿತ್ತು. ಪ್ರಯೋಗಾಲಯದ ವರದಿ ʻಸ್ಪಷ್ಟವಾಗಿಲ್ಲʼ ಮತ್ತು 'ತಿರಸ್ಕರಿಸಿದ ತುಪ್ಪ'ವನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸೂಚಿಸಿದೆ ಎಂದು ಸುಪ್ರೀಂ ಹೇಳಿತ್ತು. 

Tags:    

Similar News