Tirupati laddu row | ವೈಎಸ್‌ಆರ್‌ಸಿಪಿ ಕಾರ್ಯಕರ್ತರಿಂದ ಪ್ರಾಯಶ್ಚಿತ್ತ ಆಚರಣೆ
ಅಮರಾವತಿ: ತಿರುಪತಿ ಲಡ್ಡುಗಳ ಪಾವಿತ್ರ್ಯವನ್ನು ಪ್ರಶ್ನಿಸಿದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪಾಪಕ್ಕೆ ಪ್ರಾಯಶ್ಚಿತ್ತ ವೆಂದು ಆಂಧ್ರಪ್ರದೇಶದಾದ್ಯಂತ ವೈಎಸ್‌ಆರ್‌ಸಿಪಿ ನಾಯಕರು ಮತ್ತು ಕಾರ್ಯಕರ್ತರು ಶನಿವಾರ ಕ್ಷಮೆ ಆಚರಣೆ ನಡೆಸಿದರು.
ವೈಎಸ್‌ಆರ್‌ಸಿಪಿ ಸರ್ಕಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನೂ ಬಿಡಲಿಲ್ಲ. ಲಡ್ಡು ತಯಾರಿಸಲು ಕಳಪೆ ಪದಾರ್ಥ ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ನಾಯ್ಡು ಆರೋಪಿಸಿದ ಬಳಿಕ ಭಾರೀ ವಿವಾದ ಸೃಷ್ಟಿಯಾಗಿತ್ತು.
ಪ್ರತಿಕ್ರಿಯಿಸಿದ್ದ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು, ನಾಯ್ಡು ಲಡ್ಡುಗಳ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಎನ್‌ಡಿಎ ಆಡಳಿತದ ವೇಳೆ ತುಪ್ಪದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ಹೇಳಿದ್ದರು. ಪಕ್ಷದ ಕಾರ್ಯಕರ್ತರು ನಾಯ್ಡು ಅವರ 'ಪಾಪ'ಕ್ಕೆ ಪ್ರಾಯಶ್ಚಿತ್ತ ಆಚರಣೆ ಕೈಗೊಳ್ಳಬೇಕೆಂದು ಕರೆ ನೀಡಿದ್ದರು.
ತಿರುಪತಿಯ ತಾತಯ್ಯ ಗುಂಟದಲ್ಲಿರುವ ಗಂಗಮ್ಮ ದೇವಸ್ಥಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ವೈಎಸ್‌ಆರ್‌ಸಿಪಿ ಹಿರಿಯ ಮುಖಂಡ ಹಾಗೂ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದ ಮಾಜಿ ಅಧ್ಯಕ್ಷ ಬಿ ಕರುಣಾಕರ್ ರೆಡ್ಡಿ ಹಾಗೂ ಮಾಜಿ ನೀರಾವರಿ ಸಚಿವ ಅಂಬಟಿ ರಾಂಬಾಬು ಅವರು ಗುಂಟೂರಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಸ್ಥಳೀಯ ಸುದ್ದಿ ವಾಹಿನಿ ಬಳಿ ಮಾತನಾಡಿದ ವೈಎಸ್‌ಆರ್‌ಸಿಪಿ ನಾಯಕಿ ಎಂ. ಶರ್ಮಿಳಾ ರೆಡ್ಡಿ, ʻನಾಯ್ಡು ದೇವರನ್ನೂ ರಾಜಕೀಯಕ್ಕೆ ಎಳೆತಂದು ದೊಡ್ಡ ಗಲಾಟೆ ಸೃಷ್ಟಿಸಿದ್ದಾರೆ. ತುಪ್ಪದ ಟ್ಯಾಂಕರ್‌ಗಳು ಬಂದಿದ್ದಾಗ, ಯಾರು ಮುಖ್ಯಮಂತ್ರಿ ಆಗಿದ್ದರು?ʼ ಎಂದು ಪ್ರಶ್ನಿಸಿದರು.
ಏಲೂರು ಜಿಲ್ಲೆಯಲ್ಲಿಯೂ ವಿಶೇಷ ಪೂಜೆಗಳು ನಡೆದವು.