ತಿರುಪತಿ ಲಡ್ಡು ವಿವಾದ| ಕಲಬೆರಕೆ ಆರೋಪದ ತನಿಖೆಗೆ ಎಸ್‌ಐಟಿ ನೇಮಿಸಿದ ಆಂಧ್ರ ಸರ್ಕಾರ
ಗುಂಟೂರು ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಸರ್ವಶ್ರೇಷ್ಠ ತ್ರಿಪಾಠಿ ಮತ್ತು ಇತರ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ 9 ಸದಸ್ಯರ ಎಸ್‌ಐಟಿ ರಚನೆ ಮಾಡಲಾಗಿದೆ.;
ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಗುರುವಾರ (ಸೆಪ್ಟೆಂಬರ್ 26) ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ನೇಮಿಸಿದೆ.
ಹಿಂದಿನ ಜಗನ್‌ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಶ್ರೀ ವೆಂಕಟೇಶ್ವರ ದೇವಸ್ಥಾನವನ್ನು ಬಿಡಲಿಲ್ಲ. ತಿರುಪತಿ ಪ್ರಸಾದದ ಲಡ್ಡುಗಳನ್ನು ತಯಾರಿಸಲು ಕಳಪೆ ಪದಾರ್ಥ ಹಾಗೂ ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಇತ್ತೀಚಿನ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರೋಪಿಸಿದರು. ಈ ಆರೋಪಗಳು ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ.
ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಪಾವಿತ್ರ್ಯತೆಯನ್ನು ಕಾಪಾಡುವ ತನ್ನ ಬದ್ಧತೆಗೆ ಅನುಗುಣವಾಗಿ ಆಂಧ್ರಪ್ರದೇಶ ಸರ್ಕಾರವು (ಟಿಟಿಡಿ) ಇಡೀ ಸಮಸ್ಯೆಯ ವಿವರವಾದ ಮತ್ತು ಸಮಗ್ರ ತನಿಖೆಗಾಗಿ ಎಸ್ಐಟಿಯನ್ನು ರಚಿಸುವುದು ಅಗತ್ಯವೆಂದು ಪರಿಗಣಿಸಿದೆ ಎಂದು ಮುಖ್ಯ ಕಾರ್ಯದರ್ಶಿ ನೀರಭ್ ಕುಮಾರ್ ಪ್ರಸಾದ್ ತಿಳಿಸಿದ್ದು, ಈ ಬಗ್ಗೆ ಗುರುವಾರ ತಡರಾತ್ರಿ ಆದೇಶ ಹೊರಡಿಸಿದ್ದಾರೆ.
ಲಡ್ಡು ಕಲಬೆರಕೆ ಆರೋಪದ ಬಗ್ಗೆ ಎಸ್ಐಟಿ ತನಿಖೆ ನಡೆಸಲಿದೆ ಎಂದು ಸೆಪ್ಟೆಂಬರ್ 22 ರಂದು ಉಂಡವಳ್ಳಿ ನಿವಾಸದಲ್ಲಿ ಸಿಎಂ ಘೋಷಿಸಿದ್ದರು. ಗುಂಟೂರು ವ್ಯಾಪ್ತಿಯ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಸರ್ವಶ್ರೇಷ್ಠ ತ್ರಿಪಾಠಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಎಸ್ಐಟಿಯ ನೇತೃತ್ವ ವಹಿಸಿದ್ದಾರೆ.
ಸಂಪೂರ್ಣ ನಿಷೇಧಕ್ಕೆ ಒತ್ತಾಯ
ತಿರುಪತಿ ದೇವಸ್ಥಾನದ ಲಡ್ಡುಗಳ ಕಲಬೆರಕೆ ವಿವಾದ ಬೆನ್ನಲ್ಲೇ ಉತ್ತರ ಪ್ರದೇಶದ ಅಯೋಧ್ಯೆ, ಪ್ರಯಾಗ್‌ರಾಜ್ ಮತ್ತು ಮಥುರಾದಲ್ಲೂ 'ಪ್ರಸಾದ' ತಯಾರಿಕೆ ಮತ್ತು ವಿತರಣೆಯಲ್ಲಿ ಸುಧಾರಣೆಗೆ ಕ್ರಮ ಕೈಗೊಳ್ಳವಂತೆ ಒತ್ತಾಯಿಸಲಾಗಿದೆ. ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ದೇವಾಲಯದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಅವರು ಬಾಹ್ಯ ಸಂಸ್ಥೆಗಳು ಸಿದ್ಧಪಡಿಸಿದ ಪ್ರಸಾದವನ್ನು "ಸಂಪೂರ್ಣ ನಿಷೇಧ" ಕ್ಕೆ ಒತ್ತಾಯಿಸಿದರು. ದೇವಾಲಯದ ನೈವೇದ್ಯದಲ್ಲಿ ಬಳಸುವ ತುಪ್ಪದ ಶುದ್ಧತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, "ಎಲ್ಲಾ ಪ್ರಸಾದವನ್ನು ದೇವಾಲಯದ ಅರ್ಚಕರ ಮೇಲ್ವಿಚಾರಣೆಯಲ್ಲಿ ತಯಾರಿಸಬೇಕು" ಎಂದು ಒತ್ತಾಯಿಸಿದರು. ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ವಿವಾದವು ದೇಶಾದಾದ್ಯಂತ ಸಂಚಲನ ಮೂಡಿಸುತ್ತಿದ್ದು, ದೇಶಾದ್ಯಂತ ಮಾರಾಟವಾಗುವ ತೈಲ ಮತ್ತು ತುಪ್ಪದ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಸೂಚನೆ ನೀಡಿದ್ದಾರೆ.