Tirupati laddu row| ಕುಸಿಯದ ಬೇಡಿಕೆ- ಪ್ರತಿನಿತ್ಯ 3.50 ಲಕ್ಷ ಲಡ್ಡು ಮಾರಾಟ
ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪದಿಂದ ಭುಗಿಲೆದ್ದಿದ್ದ ರಾಜಕೀಯ ಗದ್ದಲದಿಂದ ಪ್ರಸಾದದ ಜನಪ್ರಿಯತೆ ಕುಗ್ಗಿಲ್ಲ ಮತ್ತು ಮಾರಾಟದ ಮೇಲೆ ಪರಿಣಾಮ ಬೀರಿಲ್ಲ. ದೇವಾಲಯದ ಆಡಳಿತದ ಪ್ರಕಾರ, ಪ್ರತಿದಿನ ಸರಾಸರಿ 3.50 ಲಕ್ಷ ಲಡ್ಡುಗಳು ಮಾರಾಟವಾಗುತ್ತಿವೆ.
ಭಕ್ತರು ಕಳೆದ ನಾಲ್ಕು ದಿನಗಳಲ್ಲಿ 14 ಲಕ್ಷ ತಿರುಪತಿ ಲಡ್ಡುಗಳನ್ನು ಖರೀದಿಸಿದ್ದಾರೆ; ಸೆಪ್ಟೆಂಬರ್ 19 ರಂದು 3.59 ಲಕ್ಷ , 20 ರಂದು 3.17 ಲಕ್ಷ , 21 ರಂದು 3.67 ಲಕ್ಷ ಹಾಗೂ 22 ರಂದು 3.60 ಲಕ್ಷ ಲಡ್ಡುಗಳು ಮಾರಾಟವಾಗಿವೆ.
ನಂಬಿಕೆ ಬದಲಾಗಿಲ್ಲ: ಗುಜರಾತಿನ ಆನಂದ್ ನ ಪ್ರಯೋಗಾಲಯದ ವರದಿಗಳು ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಇದೆ ಎಂದು ಹೇಳಿದ್ದರೂ, ಭಕ್ತರ ನಂಬಿಕೆ ಅಲುಗಾಡಿಲ್ಲ; ತಿರುಪತಿ ಲಡ್ಡುಗಳ ವಿವಾದವು ʻಕಳೆದುಹೋದ ವಿಷಯʼ ಎಂದು ಹೇಳುತ್ತಿದ್ದಾರೆ.
ಪ್ರತಿದಿನ ಸುಮಾರು 3 ಲಕ್ಷ ಲಡ್ಡುತಯಾರಾಗುತ್ತದೆ. ಹೆಸರು ಬೇಳೆ, ಹಸುವಿನ ತುಪ್ಪ, ಸಕ್ಕರೆ, ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಗಳಿಂದ ತಯಾರಿಸಲ್ಪಡುವ ಲಡ್ಡುಗಳಿಗೆ 15,000 ಕೆಜಿ ಹಸುವಿನ ತುಪ್ಪ ಬಳಸಲಾಗುತ್ತದೆ.
ರಾಜಕೀಯ ವಿವಾದ: ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹಿಂದಿನ ವೈ.ಎಸ್. ಜಗನ್ ಮೋಹನ್ ರೆಡ್ಡಿ ಆಳ್ವಿಕೆಯಲ್ಲಿ ತಿರುಪತಿ ಲಡ್ಡುಗಳಿಗೆ ಬಳಸುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನಂಶವಿದೆ ಎಂದು ಆರೋಪಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತು.
ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ, ನಾಯ್ಡು ಸುಳ್ಳುಬುರುಕ. ಟಿಡಿಪಿ ಧಾರ್ಮಿಕ ವಿಷಯಗಳನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.