ದ ಫೆಡರಲ್ ಸಮೀಕ್ಷೆ: ತೆಲಂಗಾಣವು ಕಾಂಗ್ರೆಸ್ ಗೆ ಒಲಿಯುವ ಸಾಧ್ಯತೆ
ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ ಸಿಪಿ ಹಾಗೂ ಟಿಡಿಪಿ-ಜನಸೇನೆ ನಡುವೆ ತೀವ್ರ ಹಣಾಹಣಿ;
ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ಬಿಜೆಪಿಗೆ ಮಿಶ್ರ ಫಲ ದಕ್ಕುವ ಸಾಧ್ಯತೆಗಳತ್ತ ಬೊಟ್ಟು ಮಾಡುತ್ತಿದೆ.
ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ ಸಿಪಿ ಮತ್ತು ಟಿಡಿಪಿ-ಜನಸೇನೆ ನಡುವೆ ತೀವ್ರ ಹಣಾಹಣಿ ನಡೆಯುವ ಸಾಧ್ಯತೆಯ ಬಗ್ಗೆ ಸೂಚನೆ ನೀಡುತ್ತಿದೆ.
ಒಂದೇ ಭಾಷೆ, ಇತಿಹಾಸ, ಸಂಸ್ಕೃತಿ ಹೊಂದಿರುವ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮತದಾರರು ವಿಭಿನ್ನ ಒಲವುಗಳನ್ನು ತೋರುತ್ತಿರುವುದಕ್ಕೆ ಅಲ್ಲಿನ ರಾಜಕೀಯ ಸಮೀಕರಣ ಕಾರಣವಾಗಿರುವಂತೆ ಕಾಣುತ್ತಿದೆ.
ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಕಾರಣದಿಂದ ಮತದಾರರ ಒಲವು ಕಾಂಗ್ರೆಸ್ ಪಕ್ಷದತ್ತ ಇರುವಂತೆ ತೋರುತ್ತಿದೆ.
ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ ಸಿಪಿ) ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನಸೇನಾ, ನಡುವೆ ಸಮಬಲದ ಹೋರಾಟವಿರುವುದನ್ನು ದ ಫೆಡರಲ್-ಪುತಿಯಾತಲೈಮುರೈ -ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ಸೂಚಿಸುತ್ತದೆ.
ಮುಂಬರುವ ಜೂನ್ ನಲ್ಲಿ 10 ವರ್ಷಗಳನ್ನು ಪೂರೈಸುತ್ತಿರುವ ತೆಲಂಗಾಣ ರಾಜ್ಯವು ಕಾಂಗ್ರೆಸ್ ಗೆ ಮತ ಹಾಕಲು ಸಿದ್ಧವಾಗಿರುವಂತೆ ತೋರುತ್ತಿದೆ.
ಆಂಧ್ರಪ್ರದೇಶ: ಜಗನ್ ಗೆ ಒಲಿಯಲಿದೆಯೇ?
ತೆಲಂಗಾಣ ವಿಭಜನೆಯ ಸಮಯದಲ್ಲಿ ಹೈದರಾಬಾದ್ ಅನ್ನು ಹಸ್ತಾಂತರಿಸಿದ ನಂತರ, ಆಂಧ್ರಪ್ರದೇಶವು ತನ್ನ ಅಸ್ತಿತ್ವ ಕಂಡುಕೊಳ್ಳಲು ಹೆಣಗಾಟ ನಡೆಸುತ್ತಿದೆ.
ಕಳೆದ 10 ವರ್ಷಗಳಲ್ಲಿ ಆಂಧ್ರಪ್ರದೇಶ ರಾಜಕೀಯವಾಗಿ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಈ ವರ್ಷ ಆಂಧ್ರ ಪ್ರದೇಶದ ಮತದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಯ್ಕೆ ಮಾಡುವ ಅವಕಾಶ ದಕ್ಕಿದೆ. ಈ ಬಾರಿ ವೈಎಸ್ಆರ್ ಸಿಪಿಯು ಕಾಂಗ್ರೆಸ್ ಜತೆಯಾಗಲಿ, ಬಿಜೆಪಿಯೊಂದಿಗಾಗಲಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಇನ್ನೊಂದು ಕಡೆ ವೈಎಸ್ಆರ್ ಸಿಪಿ ತನ್ನ ಸಾಂಪ್ರದಾಯಿಕ ಎದುರಾಳಿ ತೆಲುಗು ದೇಶಂ ಪಕ್ಷ ಹಾಗೂ ಜನಸೇನಾದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ.
ಆಂಧ್ರ ಪ್ರದೇಶದ ಒಟ್ಟು 25 ಲೋಕಸಭಾ ಸ್ಥಾನಗಳಲ್ಲಿ ವೈಎಸ್ಆರ್ ಸಿಪಿ ಸುಮಾರು 13 ಸ್ಥಾನಗಳನ್ನು ಗಳಿಸಿಕೊಂಡರೆ ಟಿಡಿಪಿ-ಜನಸೇನೆ ಮೈತ್ರಿ ಒಕ್ಕೂಟ 11 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೂ, 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಮತದಾರರ ಒಲವನ್ನು ಮತಗಳಿಕೆಯ ಮೂಲಕ ಹೆಚ್ಚಿಸಿಕೊಳ್ಳಬಹುದೆಂದು ದ ಫೆಡರಲ್--ಪುತಿಯಾತಲೈಮುರೈ -ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ಸೂಚಿಸುತ್ತದೆ.
ತೆಲಂಗಾಣ: ವಿಧಾನಸಭೆಯ ಹಾದಿಯಲ್ಲಿ ಲೋಕಸಭೆ?
ದೇಶದ ಅತ್ಯಂತ ಕಿರಿಯ ರಾಜ್ಯವೆನ್ನಿಸಿಕೊಂಡಿರುವ ತೆಲಂಗಾಣ ಕಳೆದ ಡಿಸೆಂಬರ್ ತಿಂಗಳಲ್ಲಿ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಲಿದಿತ್ತು. ಎರಡು ತಿಂಗಳ ರೇವಂತ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಇನ್ನೂ ಮತದಾರರ ಪ್ರೀತಿಗಳಿಸಿರುವಂತೆ ತೋರುತ್ತಿದೆ. ಹಾಗಾಗಿ ತೆಲಂಗಾಣದ ಮತದಾರ ಕಾಂಗ್ರೆಸ್ ನತ್ತ ಹೆಚ್ಚು ವಾಲಿರುವಂತೆ ಕಂಡು ಬರುತ್ತಿದೆ.
ತೆಲಂಗಾಣದ 17 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 13 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ದ ಫೆಡರಲ್-ಪುತಿಯಾತಲೈಮುರೈ -ಆಪ್ಟ್ 2024 ರ ಚುನಾವಣಾ ಪೂರ್ವ ಸಮೀಕ್ಷೆಯು ಸೂಚಿಸುತ್ತದೆ.
ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್) ಉಳಿದ ನಾಲ್ಕು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಿದೆ.
2019ರಲ್ಲಿ, ತೆಲಂಗಾಣ ರಾಷ್ಟ್ರ ಸಮಿತಿ ಎಂದು ಗುರುತಿಸಿಕೊಂಡಿದ್ದ ಬಿಆರ್ ಎಸ್ ಪಕ್ಷ ಒಂಬತ್ತು ಸ್ಥಾನಗಳನ್ನು ಗೆದ್ದು ಬೀಗಿತ್ತು. ಬಿಜೆಪಿ ಶೂನ್ಯ ಸಂಪಾದನೆಗೆ ತೃಪ್ತಿ ಪಟ್ಟುಕೊಂಡಿತ್ತು. ಬಿಜೆಪಿಗೆ ಮತ್ತೆ ಇತಿಹಾಸ ಪುನರಾವರ್ತನೆಯಾಗುವಂತೆ ಕಾಣುತ್ತಿದೆ. ಮತ್ತೆ ಶೂನ್ಯ ಸಂಪಾದನೆ ಹಾದಿಯಲ್ಲಿರುವುದಾಗಿ ಸಮೀಕ್ಷೆ ಸೂಚಿಸುತ್ತಿದೆ. ಅಷ್ಟೇ ಅಲ್ಲ ನೆರೆಯ ಆಂಧ್ರಪ್ರದೇಶಕ್ಕೆ ಹೋಲಿಸಿದರೆ, ಶೇಕಡಾವಾರು ಮತಗಳಿಕೆಯಲ್ಲಿಯೂ ಕುಸಿತ ಕಾಣುವ ಸಾಧ್ಯತೆ ದಟ್ಟವಾಗಿದೆ. ಕಳೆದ 2019 ರಲ್ಲಿ ಶೇ. 42 ರಷ್ಟು ಮತಗಳಿಸಿದ್ದ ಬಿ ಆರ್ ಎಸ್, ಈ ಬಾರಿ ಶೇ. 32 ಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ ಎಂದು ಸಮೀಕ್ಷೆ ಹೇಳಿದೆ. ಶೇಕಡಾ 42.5 ರಷ್ಟು ಮತಗಳಿಕೆಯ ಮೂಲಕ ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲಿ ತೃಪ್ತಿಯ ನಗೆ ಬೀರಲಿದೆ ಎಂದು ಸಮೀಕ್ಷೆ ಖಚಿತಪಡಿಸಿದೆ.