ಶಬರಿಮಲೆ ಚಿನ್ನ ಕಳವು ಪ್ರಕರಣ; ದೇವಾಲಯದ ನಿವೃತ್ತ ಇಒ ಬಂಧನ

2019 ರಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸುಧೀಶ್ ಕುಮಾರ್ ಅವರನ್ನು ತಿರುವನಂತಪುರಂ ಅಪರಾಧ ವಿಭಾಗದ ಕಚೇರಿಯಲ್ಲಿ ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Update: 2025-11-01 07:28 GMT

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ನೋಟ.

ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳುವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ, ದೇವಾಲಯದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಕುಮಾರ್ ಅವರನ್ನು ಬಂಧಿಸಿದೆ.

2019 ರಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸುಧೀಶ್ ಕುಮಾರ್ ಅವರನ್ನು ತಿರುವನಂತಪುರಂ ಅಪರಾಧ ವಿಭಾಗದ ಕಚೇರಿಯಲ್ಲಿ ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೇವಸ್ಥಾನದ ಗರ್ಭಗುಡಿಯ ದ್ವಾರಪಾಲಕರ ವಿಗ್ರಹಗಳು ಮತ್ತು ಬಾಗಿಲಿನ ಚೌಕಟ್ಟುಗಳಿಗೆ ಅಳವಡಿಸಲಾಗಿದ್ದ ಚಿನ್ನದ ಲೇಪಿತ ಫಲಕಗಳನ್ನು ತಾಮ್ರದ ಹಾಳೆಗಳೆಂದು ದಾಖಲೆಗಳಲ್ಲಿ ಬರೆದಿದ್ದ ಆರೋಪವಿದೆ. 1990 ರ ದಶಕದಿಂದಲೂ ಶಬರಿಮಲೆಯೊಂದಿಗೆ ಸಂಬಂಧ ಹೊಂದಿರುವ ಸುಧೀಶ್ ಕುಮಾರ್ ಅವರು ದ್ವಾರಪಾಲಕರ ವಿಗ್ರಹಗಳು ಸೇರಿದಂತೆ ಗರ್ಭಗುಡಿಯನ್ನು 1998-99ರ ಅವಧಿಯಲ್ಲಿ ಚಿನ್ನದ ಹೊದಿಕೆಯಿಂದ ಮುಚ್ಚಲಾಗಿದೆ ಎಂದು ತಿಳಿಸಿದ್ದರು. ಆದರೆ, ದಾಖಲೆಗಳಲ್ಲಿ ತಾಮ್ರದ ಫಲಕ ಎಂದು ಹೇಳಿದ್ದರು.

2019 ರಲ್ಲಿ ಚಿನ್ನದ ಲೇಪಿತ ದ್ವಾರಪಾಲಕರ ಚೌಕಟ್ಟು ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಗೆ ಹಸ್ತಾಂತರಿಸಿದಾಗ, ಸುಧೀಶ್ ಕುಮಾರ್ ಅವುಗಳನ್ನು ತಾಮ್ರದ ಫಲಕಗಳೆಂದು ದಾಖಲಿಸಿದ್ದರು ಎಂದು ಹೇಳಲಾಗಿದೆ. ಇದರಿಂದಾಗಿ ಆರೋಪಿಗಳು ಚಿನ್ನದ ಲೇಪನದ ಚೌಕಟ್ಟು ಕಳವು ಮಾಡಲು ಕಾರಣವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಟ್ಟಿ ಮತ್ತು ಮಾಜಿ ಆಡಳಿತ ಅಧಿಕಾರಿ ಬಿ.ಮುರಾರಿ ಬಾಬು ನಂತರ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೂರನೇ ವ್ಯಕ್ತಿ ಸುಧೀಶ್ ಕುಮಾರ್. ಆರೋಪಿಯನ್ನು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ಪೊಟ್ಟಿ ಅವರ ಆಪ್ತ ಸಹಾಯಕ ವಾಸುದೇವನ್ ಅವರನ್ನೂ ಎಸ್ಐಟಿ ವಿಚಾರಣೆ ನಡೆಸಿದೆ.

ಪ್ರಕರಣದ ಹಿನ್ನೆಲೆಯೇನು?

ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ದ್ವಾರಪಾಲಕರ ವಿಗ್ರಹಗಳು ಮತ್ತು ಬಾಗಿಲಿನ ಚೌಕಟ್ಟುಗಳಿಗೆ ಅಳವಡಿಸಲಾಗಿದ್ದ ಚಿನ್ನದ ಲೇಪಿತ ಫಲಕಗಳು ಕಣ್ಮರೆಯಾದ ಎರಡು ಪ್ರಕರಣಗಳಲ್ಲಿ ಮುರಾರಿ ಬಾಬು ಆರೋಪಿಯಾಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, 2019ರಲ್ಲಿ ದ್ವಾರಪಾಲಕರ ವಿಗ್ರಹಗಳಿಗೆ ಎಲೆಕ್ಟ್ರೋಪ್ಲೇಟಿಂಗ್ ಮಾಡುವ ಪ್ರಸ್ತಾಪವನ್ನು ತಿರುವಾಂಕೂರು ದೇವಸ್ವಂ ಮಂಡಳಿಗೆ (TDB) ಸಲ್ಲಿಸಿದ್ದ. ಆ ಸಮಯದಲ್ಲಿ, ಶಬರಿಮಲೆ ಆಡಳಿತಾಧಿಕಾರಿಯಾಗಿದ್ದ ಮುರಾರಿ ಬಾಬು, ಚಿನ್ನದ ಲೇಪಿತ ಫಲಕಗಳನ್ನು 'ತಾಮ್ರದ ಫಲಕಗಳು' ಎಂದು ತಪ್ಪಾಗಿ ಉಲ್ಲೇಖಿಸಿ, ಪೊಟ್ಟಿಯ ಪ್ರಸ್ತಾಪವನ್ನು ಮಂಡಳಿಗೆ ರವಾನಿಸಿದ್ದರು. ಇದೇ ರೀತಿಯ ಪ್ರಸ್ತಾಪವನ್ನು 2025ರಲ್ಲೂ ಅವರು ಮತ್ತೊಮ್ಮೆ ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ.

ಬಾಬು ಅವರ ಈ ಕ್ರಮವು ವಂಚನೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಮಾಡಲ್ಪಟ್ಟಿದೆ ಎಂದು ತನಿಖಾ ತಂಡವು ಅಭಿಪ್ರಾಯಪಟ್ಟಿದೆ. ಚಿನ್ನದ ಲೇಪಿತ ಫಲಕಗಳನ್ನು ತಾಮ್ರ ಎಂದು ಉದ್ದೇಶಪೂರ್ವಕವಾಗಿ ದಾಖಲಿಸಿ, ವಂಚನೆಗೆ ದಾರಿ ಮಾಡಿಕೊಟ್ಟಿದ್ದಾರೆ ಎಂಬುದು ಎಸ್ಐಟಿ ಯ ಪ್ರಮುಖ ಆರೋಪವಾಗಿದೆ.

Tags:    

Similar News