ಶಬರಿಮಲೆ ಅಭಿವೃದ್ಧಿಗೆ ಕೇರಳದ ಬೃಹತ್​ ಯೋಜನೆ: ಟೀಕಾಕಾರರಿಗೆ ಸಿಎಂ ಪಿಣರಾಯಿ ವಿಜಯನ್ ಉತ್ತರ

ಮಧುರೈ ಹಾಗೂ ತಿರುಪತಿ ಮಾದರಿಯಲ್ಲಿಯೇ ಶಬರಿಮಲೆ ದೇವಸ್ಥಾನವನ್ನೂ ಕೂಡ 2050ರ ವೇಳೆಗೆ ವಿಶ್ವದರ್ಜೆಗೆ ಏರಿಸುತ್ತೇವೆಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

Update: 2025-09-20 11:42 GMT

ಪಿಣರಾಯಿ ವಿಜಯನ್

Click the Play button to listen to article

ಮಧುರೈ ಹಾಗೂ ತಿರುಪತಿಯ ಹಾಗೆಯೇ ಶಬರಿಮಲೆ ದೇವಸ್ಥಾನವನ್ನೂ ಕೂಡ 2050ರ ವೇಳೆಗೆ ವಿಶ್ವದರ್ಜೆಗೆ ಏರಿಸುತ್ತೇವೆಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ್ದ ಕೆಲವರು ಇದು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದರು. ಈ ಕುರಿತು ಮಾತನಾಡಿದ ಸಿಎಂ, ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಂಪಾದಲ್ಲಿ ಇಂದು ನಡೆದ ಅಯ್ಯಪ್ಪ ಸಂಘಮ್ ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳನ್ನು ತಪ್ಪಾಗಿ ನಿರೂಪಿಸಲು ಪ್ರಯತ್ನಿಸುವವರನ್ನು ಸುಪ್ರೀಂ ಕೋರ್ಟ್ ಈಗಾಗಲೇ ನಿರ್ಬಂಧಿಸಿದೆ. ನಿಜವಾದ ಭಕ್ತರು ಈ ಸಭೆಯ ಆಶಯ ಏನೆಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಸಂಕುಚಿತ ಕಾರ್ಯಸೂಚಿಗಳನ್ನು ಅನುಸರಿಸಲು ಮಾತ್ರ ಭಕ್ತಿಯ ವೇಷ ಧರಿಸುವವರು ಯೋಜನೆಯ ಹಳಿ ತಪ್ಪಿಸಲು ಯತ್ನಿಸುತ್ತಾರೆ, ಆದರೆ ಅದು ಸಾಧ್ಯವಿಲ್ಲ ಎಂದಿದ್ದಾರೆ.

ಜಾತ್ಯಾತೀತ ಆಧ್ಯಾತ್ಮಿಕತೆಗೆ ಏಕೈಕ ಸ್ಥಳ ಶಬರಿಮಲೆ

ಟೀಕೆಗಳ ಕುರಿತು ಮಾತನಾಡಿದ ಪಿಣರಾಯಿ ವಿಜಯನ್, ಶಬರಿಮಲೆ ಕೇವಲ ದೇವಾಲಯವಲ್ಲ, ಬದಲಾಗಿ ಜಾತ್ಯತೀತ ಆಧ್ಯಾತ್ಮಿಕತೆಯ ಅಪರೂಪದ ಸಂಕೇತವಾಗಿದೆ. ಇದು ಜಾತಿ, ಧರ್ಮವನ್ನು ಮೀರಿ ಸ್ವಾಗತಿಸುವ ದೇವಾಲಯವಾಗಿದೆ. ಯಾತ್ರಿಕರು ಇಸ್ಲಾಂ ಧರ್ಮವನ್ನು ಪ್ರತಿನಿಧಿಸುವ ವಾವರ್ ನಾಡದ ಮೂಲಕ ಪ್ರವೇಶಿಸುತ್ತಾರೆ. ಅಷ್ಟೇ ಅಲ್ಲ, ಬೆಟ್ಟ ಹತ್ತುವ ಮೊದಲು ಅರ್ಥುಂಕಲ್ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಗರ್ಭಗುಡಿಯಲ್ಲಿ ಪ್ರತೀ ರಾತ್ರಿ ಹಾಡಲಾಗುವ ಹರಿವರಾಸನಂ ಹಾಡು ನಾಸ್ತಿಕರಿಂದ ರಚನೆಯಾಗಿದೆ, ಇದನ್ನು ಕ್ರಿಶ್ಚಿಯನ್ನರೂ ಹಾಡುತ್ತಾರೆ. ಜಗತ್ತಿನಲ್ಲಿ ಬೇರೆಲ್ಲಿಯೂ ಇಲ್ಲದಂತಹ ಸಾಮರಸ್ಯವನ್ನು ಇಲ್ಲಿ ಕಾಣಬಹುದಾಗಿದೆ.

ಶಬರಿಮಲೆಯ ಸಂದೇಶವು ಜನರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ್ದಾಗಿದ್ದು, ಇದು 'ಇತರರು' ಎಂಬ ಕಲ್ಪನೆಯನ್ನೇ ಅಳಿಸಿಹಾಕುತ್ತದೆ ಎಂಬುದನ್ನು ವಿಜಯನ್ ಅವರು 'ತತ್ ತ್ವಮ್ ಅಸಿ' ಎಂಬ ಸೂತ್ರದ ಮುಖೇನ ವಿವರಿಸಿದರು. ಅವರು ಈ ಸಂಪ್ರದಾಯವನ್ನು ಶ್ರೀ ನಾರಾಯಣ ಗುರು, ಚಟ್ಟಂಪಿ ಸ್ವಾಮಿಕಲ್ ಮತ್ತು ರಮಣ ಮಹರ್ಷಿಯಂತಹ ಸುಧಾರಕರಿಗೆ ಹೋಲಿಸಿ, ದೇವಾಲಯವು ದೀರ್ಘಕಾಲದಿಂದ ಧಾರ್ಮಿಕ ಸಹಬಾಳ್ವೆಯ ಸಂಕೇತವಾಗಿದೆ ಎಂದರು.

ಮಾಧ್ಯಮದವರನ್ನೂ ತರಾಟೆಗೆ ತೆಗೆದುಕೊಂಡ ವಿಜಯನ್

ಉದ್ದೇಶಪೂರ್ವಕವಾಗಿಯೇ ಸಮಾವೇಶವನ್ನು 'ಅಲ್ಪಸಂಖ್ಯಾತರ ಸಮಾವೇಶ' ಎಂದು ಕರೆಯುತ್ತಿರುವ ಮಾಧ್ಯಮಗಳ ವಿರುದ್ಧವೂ ಸಿಎಂ ಹರಿಹಾಯ್ದರು. 2031ರವರೆಗಿನ ನಮ್ಮ ಸರ್ಕಾರದ ದೃಷ್ಟಿಕೋನ ಏನೆಂದು ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ಅಮೃತ ಮಹೋತ್ಸವ ಆಯೋಜಿಸುವ ಮುಖೇನ 33 ಇಲಾಖೆಗಳೂ ವಿವರಿಸಲಿವೆ. ಇವುಗಳಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯೂ ಒಂದಾಗಿದ್ದು, ಅದನ್ನೇ ಗುರಿಯಾಗಿಸಿಕೊಂಡು ತಪ್ಪಾಗಿ ನಿರೂಪಿಸುವುದು ಅಪ್ರಾಮಾಣಿಕತೆ ಎಂದು ಕಿಡಿಕಾರಿದರು.

ಅಯ್ಯಪ್ಪ ಸಂಘಮ್ ನ ಮೂಲ ಕಾರ್ಯಸೂಚಿ ಪ್ರಸ್ತಾಪಿಸಿದ ವಿಜಯನ್, ಮಹತ್ವಾಕಾಂಕ್ಷೆಯ ಶಬರಿಮಲೆಯ ಮಾಸ್ಟರ್ ಪ್ಲಾನ್ ಅನ್ನು ಮಂಡಿಸಿದರು. ವರ್ಷಗಳ ಸಮಾಲೋಚನೆಗಳ ನಂತರ ಮತ್ತು ವಿದೇಶಗಳಲ್ಲಿನ ಭಕ್ತರ ನಾಡಿಮಿಡಿತವನ್ನು ಅರಿತ ಮೇಲೆ ಈ ಯೋಜನೆಯನ್ನು ರೂಪಿಸಲಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ದೃಷ್ಟಿಕೋನವನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆಯನ್ನು ಜಾರಿಗೊಳಿಸುವ ಮುಖೇನ ಪಶ್ಚಿಮ ಘಟ್ಟಗಳ ಪರಿಸರ ಸಮತೋಲನವನ್ನೂ ಕಾಯ್ದುಕೊಳ್ಳಲಿದ್ದೇವೆ ಎಂದರು.

ಶಬರಿಮಲೆ ಅಭಿವೃದ್ಧಿಯ ಮಾಸ್ಟರ್ ಪ್ಲಾನ್

ದೇವಸ್ಥಾನ, ಪಂಬಾ ಮತ್ತು ಚಾರಣ ಮಾರ್ಗಗಳಿಗಾಗಿ ಒಟ್ಟು ₹1,033 ಕೋಟಿ ವೆಚ್ಚ ಮಾಡಲಾಗುತ್ತದೆ. ದೇವಸ್ಥಾನದ ಮೊದಲ ಹಂತ(2022-27)ದ ಕಾರ್ಯಕ್ಕಾಗಿ ₹600 ಕೋಟಿ ವೆಚ್ಚ ಮಾಡಲಾಗಿದ್ದು, ಎರಡನೇ ಹಂತ(2028-33)ದಲ್ಲಿ ₹100 ಕೋಟಿ ಮತ್ತು ಮೂರನೇ ಹಂತ(2034-39)ದಲ್ಲಿ ₹77 ಕೋಟಿ ವೆಚ್ಚ ಮಾಡಲಾಗಿದೆ. ಜನಸಂದಣಿಯನ್ನು ಕಡಿಮೆ ಮಾಡಲು ಪಂಬಾವನ್ನು ಸುಗಮ ಸಂಚಾರ ವ್ಯವಸ್ಥೆ ಹೊಂದಿರುವ ಪಟ್ಟಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ₹207 ಕೋಟಿ ರೂ. ಮೀಸಲಿರಿಸಲಾಗಿದೆ. ಚಾರಣ ಮಾರ್ಗದ ಅಭಿವೃದ್ಧಿಗೆ ಸುಮಾರು ₹48 ಕೋಟಿ ಬಜೆಟ್ ನಿಗದಿಪಡಿಸಲಾಗಿದೆ.

ಈ ಯೋಜನೆಯಲ್ಲಿ ಪಂಬಾ ನದಿಗೆ ಅಡ್ಡಲಾಗಿ ಸುರಕ್ಷತಾ ಸೇತುವೆ ನಿರ್ಮಿಸುವುದು, ನೀಲಕ್ಕಲ್ ಬೇಸ್ ಕ್ಯಾಂಪ್ ಅನ್ನು ವಿಸ್ತರಿಸುವುದು, ಕುಡಿಯುವ ನೀರಿನ ಪೈಪ್‌ಲೈನ್ ಎಳೆಯುವುದು, ದೇವಸ್ಥಾನದಲ್ಲಿ ಅಗ್ನಿಶಾಮಕ ಸುರಕ್ಷತಾ ಸಾಧನಗಳನ್ನು ಅಳವಡಿಸುವುದು, ಪ್ರಸಾದ ಉತ್ಪಾದನೆ ಮತ್ತು ವಿತರಣೆಗೆ ಸುಗಮ ವ್ಯವಸ್ಥೆ ಮಾಡುವುದು ಹಾಗೂ ಸ್ಥಳೀಯ ಜಲ ಸಂಪನ್ಮೂಲಗಳ ರಕ್ಷಣಾ ಕ್ರಮಗಳೂ ಇದರಲ್ಲಿ ಸೇರಿವೆ. ಈ ಯೋಜನೆಯು ದೇವಸ್ಥಾನದ ಐತಿಹಾಸಿಕ ಪರಂಪರೆ, ಕೇರಳದ ಸಾಂಪ್ರದಾಯಿಕ ವಾಸ್ತುಶಿಲ್ಪ, ಸುರಕ್ಷತೆ ಮತ್ತು ಸೌಂದರ್ಯಕ್ಕೆ ಪೂರಕವಾಗಿರಲಿದೆ ಎಂದಿದ್ದಾರೆ.

ಈ ಮಾಸ್ಟರ್ ಪ್ಲಾನ್ ಅಡಿಯಲ್ಲಿ 2011-12ರಿಂದ 2016-17ರವರೆಗೆ ₹148.5 ಕೋಟಿ ಖರ್ಚು ಮಾಡಲಾಗಿದೆ. 2025ರಲ್ಲಿ ದೇವಸ್ಥಾನದ ಇತರೆ ಕಟ್ಟಡಗಳ ಜೀರ್ಣೋದ್ಧಾರಕ್ಕಾಗಿ ₹650 ಕೋಟಿ ಮಂಜೂರು ಮಾಡಲಾಗಿದೆ ಎಂದ ಅವರು, ತಿರುವಾಂಕೂರು ದೇವಸ್ಥಾನಕ್ಕೆ ₹145 ಕೋಟಿ, ಕೊಚ್ಚಿನ್ ಮಂಡಳಿಗೆ ₹26 ಕೋಟಿ, ಮಲಬಾರ್ ಮಂಡಳಿಗೆ ₹305 ಕೋಟಿ ಹಂಚಿಕೆ ಮಾಡಲಾಗಿದೆ. ಹೆಚ್ಚುವರಿ ಮೊತ್ತವನ್ನು ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ಕೂಡಲ್ಮಾಣಿಕ್ಯಂ ಮತ್ತು ಹಿಂದೂ ಧಾರ್ಮಿಕ ಇಲಾಖೆಗೆ ನೀಡಲಾಗಿದೆ ಎಂದರು.

ಈ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಶಬರಿಮಲೆಗೆ ಮಾತ್ರವೇ ₹84 ಕೋಟಿ ನೀಡಲಾಗಿದೆ. ಇದಲ್ಲದೆ ನೈರ್ಮಲ್ಯಕ್ಕಾಗಿ ₹22 ಕೋಟಿ ಮತ್ತು ಸಾರಿಗೆ ಸೌಲಭ್ಯಗಳಿಗಾಗಿ ₹116 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ 4 ವರ್ಷಗಳ ಜಾತ್ರೆ ನಿರ್ವಹಣೆಗಾಗಿ ₹10 ಕೋಟಿ ವ್ಯಯಿಸಲಾಗಿದೆ. ದೇವಾಲಯದ ಆದಾಯವನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತದೆ ಎಂಬುದು ಅಪಪ್ರಚಾರ. ಕಡಿಮೆ ಆದಾಯ ಹೊಂದಿರುವ ದೇವಸ್ಥಾನಗಳ ಅಭಿವೃದ್ಧಿಗೂ ನಮ್ಮ ಸರ್ಕಾರ ಬದ್ಧವಾಗಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ನಮ್ಮ ಸರ್ಕಾರ ತಿರುವಾಂಕೂರು ದೇವಸ್ಥಾನ ಮಂಡಳಿಗೆ ₹140 ಕೋಟಿ ರೂ. ನೆರವು ನೀಡಿತ್ತು ಎಂಬುದನ್ನು ಸಿಎಂ ನೆನಪಿಸಿಕೊಂಡರು.

ಜಾಗತಿಕ ಯಾತ್ರಾಸ್ಥಳ

ದೇವಾಲಯ ನಿರ್ವಹಣೆಯನ್ನು ಭಕ್ತರಿಗೆ ಮಾತ್ರ ಬಿಡಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಜಯನ್, ಈ ಹಿಂದಿನ ಸರ್ಕಾರಗಳು ಸಮುದಾಯ ಆಧಾರಿತವಾಗಿ ಆಡಳಿತ ನಡೆಸಿದ್ದವು. ಅದುವೇ ದೇವಸ್ಥಾನ ಮಂಡಳಿಗಳ ರಚನೆಗೆ ಎಡೆಮಾಡಿಕೊಟ್ಟಿತು. ಸರ್ಕಾರ ಮತ್ತು ಮಂಡಳಿಗಳು ನೇಪಥ್ಯಕ್ಕೆ ಸರಿದರೆ, ದೇವಾಲಯಗಳು ಮತ್ತೆ ನಿರ್ಲಕ್ಷ್ಯದ ಕಾಲಕ್ಕೆ ಮರಳಲಿವೆ. ಅದು ಟೀಕಾಕಾರರಿಗೆ ಒಪ್ಪಿಗೆಯೇ? ಎಂದು ಸಿಎಂ ಪ್ರಶ್ನಿಸಿದರು.

ಅಯ್ಯಪ್ಪ ಸಂಘಮ್ ರಾತ್ರೋರಾತ್ರಿ ಹುಟ್ಟಿದ ಯೋಜನೆಯಲ್ಲ, ಬದಲಾಗಿ ಮಲೇಷ್ಯಾ ಮತ್ತು ಸಿಂಗಾಪುರದ ಭಕ್ತರಿಂದಲೂ ಅಭಿಪ್ರಾಯ ಪಡೆದು, ಸಾಕಷ್ಟು ಸಮಾಲೋಚನೆ ನಡೆಸಿ ಜಾರಿಗೆ ತಂದ ಫಲಿತಾಂಶವಾಗಿದೆ. 2050ರ ವೇಳೆಗೆ, ಶಬರಿಮಲೆಯು ತಿರುಪತಿ ಹಾಗೂ ಮಧುರೈ ಮಾದರಿಯಲ್ಲಿಯೇ ಜಾಗತಿಕ ಯಾತ್ರಾಸ್ಥಳವಾಗಿ ನಿಲ್ಲಲೇಬೇಕಿದೆ. ಈ ಸಮಾವೇಶವು ವಿಚಾರಗಳನ್ನು ಕ್ರೋಢೀಕರಿಸಲು, ಮಾಸ್ಟರ್ ಪ್ಲಾನ್ ಅನ್ನು ಪರಿಷ್ಕರಿಸಲು ಮತ್ತು ಒಗ್ಗಟ್ಟಿನಿಂದ ಮುಂದುವರಿಯಲು ಸಹಕಾರಿಯಾಗಲೆಂದು ನಡೆಸಲಾಗುತ್ತಿದೆ. ವಿಭಜಿಸಲು ಪ್ರಯತ್ನಿಸುವವರು ಶಬರಿಮಲೆಯ ಚೈತನ್ಯಕ್ಕೇ ದ್ರೋಹ ಬಗೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಸಮಾರಂಭದಲ್ಲಿ ಮುಜರಾಯಿ ಸಚಿವ ವಿ.ಎನ್.ವಾಸವನ್ ಮಾತನಾಡಿ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸಂದೇಶಗಳನ್ನು ಓದಿದರು. ಇನ್ನು ಕಾರ್ಯಕ್ರಮದಲ್ಲಿ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಚಿವ ಪಿ.ಕೆ.ಶೇಖರ್ ಬಾಬು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪಳನಿವೇಲ್ ತ್ಯಾಗರಾಜನ್ ಕೂಡ ಉಪಸ್ಥಿತರಿದ್ದರು.

Similar News