ಚುನಾವಣೆ 2024: ಕಾಂಗ್ರೆಸ್ಸಿನಿಂದ 14 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Update: 2024-03-28 07:45 GMT

ಮಾ.27- ಕಾಂಗ್ರೆಸ್ ಲೋಕಸಭೆ ಚುನಾವಣೆಗೆ 14 ಅಭ್ಯರ್ಥಿಗಳ ಎಂಟನೇ ಪಟ್ಟಿಯನ್ನುಬಿಡುಗಡೆ ಮಾಡಿದೆ. ಮಧ್ಯಪ್ರದೇಶದ ಗುಣಾದಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ರಾವ್ ಯಾದವೇಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಿದೆ. 

ಉತ್ತರ ಪ್ರದೇಶ, ತೆಲಂಗಾಣ, ಗೋವಾ ಮತ್ತು ಜಾರ್ಖಂಡ್‌ನಲ್ಲಿ ಪಕ್ಷದ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಉನ್ನತ ನಾಯಕರು ಸಭೆ ನಡೆಸಿದ ಕೆಲವು ಗಂಟೆಗಳ ನಂತರ 14 ಅಭ್ಯರ್ಥಿಗಳ ಘೋಷಣೆ ಹೊರಬಿದ್ದಿದೆ. ವಿದಿಶಾದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಪ್ರತಾಪ್ ಭಾನು ಶರ್ಮಾ ಹಾಗೂ ತರ್ವರ್ ಸಿಂಗ್ ಲೋಧಿ ಅವರನ್ನು ದಾಮೋಹ್‌ನಿಂದ ನಾಮನಿರ್ದೇಶನ ಮಾಡಲಾಗಿದೆ. 

ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲಿ ತಲಾ ನಾಲ್ಕು ಹಾಗೂ ಮಧ್ಯಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ತಲಾ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರೊಂದಿಗೆ ಪಕ್ಷ ಇಲ್ಲಿಯವರೆಗೆ ಘೋಷಿಸಿದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 208 ಕ್ಕೆ ತಲುಪಿದೆ. ಉತ್ತರ ಪ್ರದೇಶ: ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಮೈತ್ರಿ ಪಾಲುದಾರನಾಗಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಗಾಜಿಯಾಬಾದ್‌ನಿಂದ ಡಾಲಿ ಶರ್ಮಾ, ಸೀತಾಪುರದಿಂದ ನಕುಲ್ ದುಬೆ, ಬುಲಂದ್‌ಶಹರ್ (ಎಸ್‌ಸಿ) ಕ್ಷೇತ್ರದಿಂದ ಶಿವರಾಮ್ ವಾಲ್ಮೀಕಿ ಮತ್ತು ಮಹಾರಾಜ್‌ಗಂಜ್‌ನಿಂದ ವೀರೇಂದ್ರ ಚೌಧರಿ ಅವರನ್ನು ನಾಮನಿರ್ದೇಶನ ಮಾಡಿದೆ. 

ಬಿಜೆಪಿಯ ಮಂಡಿ ಅಭ್ಯರ್ಥಿ ಕಂಗನಾ ರಣಾವತ್ ಕುರಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದ ವಿವಾದದ ಕೇಂದ್ರಬಿಂದುವಾಗಿರುವ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರಿನಾಟೆ ಅವರಿಗೆ ಟಿಕೆಟ್‌ ನೀಡಿಲ್ಲ.ಕಳೆದ ಬಾರಿ ಮಹಾರಾಜ್‌ಗಂಜ್ ಕ್ಷೇತ್ರದಿಂದ ಸ್ಪರ್ಧಿಸಿ ವಿಫಲರಾಗಿದ್ದರು. ಆದರೆ, ಮಹಾರಾಜಗಂಜ್‌ನಿಂದ ವೀರೇಂದ್ರ ಚೌಧರಿ ಅವರಿಗೆ ಟಿಕೆಟ್‌ ಒಲಿದಿದೆ. ಹಿರಿಯ ಎಸ್‌ಪಿ ನಾಯಕಿ ಮತ್ತು ಅಲಹಾಬಾದ್‌ನ ಮಾಜಿ ಸಂಸದೆ ರೇವತಿ ರಮಣ್ ಸಿಂಗ್ ಅವರ ಪುತ್ರ ಉಜ್ವಲ್ ರಮಣ್ ಸಿಂಗ್ ಅವರನ್ನು ಅಲಹಾಬಾದ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವೊಲಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಉಜ್ವಲ್ ಪ್ರಸ್ತುತ ಎಸ್‌ಪಿ ಸದಸ್ಯ.1984 ರಲ್ಲಿ ಅಲಹಾಬಾದ್ ಕ್ಷೇತ್ರದಿಂದ ಗೆದ್ದ ಕೊನೆಯ ಕಾಂಗ್ರೆಸ್ ಅಭ್ಯರ್ಥಿ ನಟ ಅಮಿತಾಭ್‌ ಬಚ್ಚನ್. 

ಜಾರ್ಖಂಡ್:  ಖುಂಟಿ (ಎಸ್‌ಟಿ) ಕ್ಷೇತ್ರದಿಂದ ಕಾಳಿಚರಣ್ ಮುಂಡಾ, ಲೋಹರ್ದಗಾ (ಎಸ್‌ಟಿ) ದಿಂದ ಸುಖದೇವ್ ಭಗತ್ ಮತ್ತು ಹಜಾರಿಬಾಗ್ ಕ್ಷೇತ್ರದಿಂದ ಜೈ ಪ್ರಕಾಶ್ ಭಾಯ್ ಪಟೇಲ್ ಅವರನ್ನು ಹೆಸರಿಸಿದೆ. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಪಟೇಲ್, ಮನೀಶ್ ಜೈಸ್ವಾಲ್ ವಿರುದ್ಧ ಕಣಕ್ಕಿಳಿದಿದ್ದಾರೆ. ಬಿಜೆಪಿ ಸಚಿವ ಯಶವಂತ್ ಸಿನ್ಹಾ ಅವರನ್ನು ಈ ಸ್ಥಾನದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು. ಆದರೆ, ಅನಾರೋಗ್ಯದ ಕಾರಣದಿಂದ ಪ್ರಸ್ತಾಪವನ್ನು ತಿರಸ್ಕರಿಸಿದರು.

ತೆಲಂಗಾಣ: ಅದಿಲಾಬಾದ್‌ನಿಂದ ಅತ್ರಂ ಸುಗುಣ, ನಿಜಾಮಾಬಾದ್‌ನಿಂದ ತತಿಪರ್ತಿ ಜೀವನ್ ರೆಡ್ಡಿ, ಮೇಡಕ್‌ನಿಂದ ನೀಲಂ ಮಧು ಮತ್ತು ಭೋಂಗಿರ್‌ನಿಂದ ಚಮಲಾ ಕಿರಣ್ ಕುಮಾರ್ ರೆಡ್ಡಿ ಅವರನ್ನು ಪಕ್ಷ ಕಣಕ್ಕಿಳಿಸಿದೆ.

ಅಮೇಠಿ, ರಾಯ್ ಬರೇಲಿಯಿಂದ ಯಾರು?: ಅಮೇಥಿ ಮತ್ತು ರಾಯ್ ಬರೇಲಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ, ಈ ಕ್ಷೇತ್ರಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದರು. ಕಳೆದ ವಾರ ನಡೆದ ಸಿಇಸಿ ಸಭೆಯ ಬಳಿಕ ಮಾತನಾಡಿದ ರೈ, ‘ಗಾಂಧಿ ಕುಟುಂಬದ ಸದಸ್ಯರು ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ಸ್ಪರ್ಧಿಸಬೇಕು ಎಂಬುದು ಅಲ್ಲಿನ ಜನರ ಬೇಡಿಕೆ. ನಾವು ನಮ್ಮ ಪ್ರಸ್ತಾವನೆಯನ್ನು ನೀಡಿದ್ದೇವೆ, ಉಳಿದಿದ್ದು ಪಕ್ಷದ ನಾಯಕತ್ವಕ್ಕೆ ಬಿಟ್ಟದ್ದುʼ ಎಂದು ಹೇಳಿದ್ದರು.

ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿತ್ತು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕರಾದ ಅಂಬಿಕಾ ಸೋನಿ, ಮಧುಸೂದನ್ ಮಿಸ್ತ್ರಿ, ಉತ್ತಮ್ ಕುಮಾರ್ ರೆಡ್ಡಿ ಮತ್ತು ಸಲ್ಮಾನ್ ಖುರ್ಷಿದ್ ಸೇರಿದಂತೆ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Tags:    

Similar News