ರಾಹುಲ್ ಗಾಂಧಿಗೆ ಬೆದರಿಕೆ | ಕೇರಳ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು
ರಾಹುಲ್ ಗಾಂಧಿ ಅವರು ಭಾರತದಲ್ಲಿ ನೇಪಾಳದ Gen- Z ನಂತಹ ಪ್ರತಿಭಟನೆಯ ಕನಸು ಕಂಡರೆ ಅವರ ಎದೆಗೆ ಗುಂಡು ತಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಜನರು ಬಲವಾಗಿ ವಿರೋಧಿಸಿದ್ದರಿಂದ ಭಾರತದಲ್ಲಿ ಇಂತಹ ಪ್ರತಿಭಟನೆಗಳು ಸಾಧ್ಯವಿಲ್ಲ ಎಂದು ಕೇರಳ ಬಿಜೆಪಿ ಮುಖಂಡರು ಹೇಳಿದರು.
ಟಿವಿ ಚರ್ಚೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರಾಣ ಬೆದರಿಕೆ ಹಾಕಿದ ಆರೋಪದ ಮೇಲೆ ಕೇರಳದ ಬಿಜೆಪಿ ನಾಯಕ ಪ್ರಿಂಟು ಮಹಾದೇವನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ರಾಹುಲ್ ಗಾಂಧಿ ಅವರು ಭಾರತದಲ್ಲಿ ನೇಪಾಳದ Gen- Z ನಂತಹ ಪ್ರತಿಭಟನೆಯ ಕನಸು ಕಂಡರೆ ಅವರ ಎದೆಗೆ ಗುಂಡು ತಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮಾಜಿ ನಾಯಕರಾಗಿದ್ದ ಮಹಾದೇವನ್ ಬೆದರಿಕೆ ಹೇಳಿಕೆ ವಿರುದ್ಧ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಶ್ರೀಕುಮಾರ್ ಸಿ.ಸಿ ಅವರು ನೀಡಿದ ದೂರು ಆಧರಿಸಿ ಪೆರಮಂಗಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಸರ್ಕಾರ ಬದಲಾವಣೆಗೆ ಕಾರಣವಾದ ಪ್ರತಿಭಟನೆಗಳ ಕುರಿತು ಮಲಯಾಳಂ ಟಿವಿ ಚಾನಲ್‌ನಲ್ಲಿ ನಡೆದ ಚರ್ಚೆಯಲ್ಲಿ ಈ ಹೇಳಿಕೆ ಪ್ರಿಂಟು ಮಹಾದೇವನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ನೇಪಾಳದ Gen-Z ನಂತಹ ಪ್ರತಿಭಟನೆಗಳು ಭಾರತದಲ್ಲಿ ನಡೆಯಲು ಸಾಧ್ಯವಿಲ್ಲ. ಇಲ್ಲಿನ ಜನರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೃಢವಾಗಿ ನಿಂತಿದ್ದಾರೆ. ರಾಹುಲ್ ಗಾಂಧಿಗೆ ಅಂತಹ ಬಯಕೆ ಇದ್ದರೆ, ಆ ಕ್ಷಣವೇ ಎದೆಗೆ ಗುಂಡು ಹೊಕ್ಕಲಿದೆ ಎಂದು ಹೇಳಿದ್ದರು.
ಪ್ರಿಂಟು ಮಹಾದೇವನ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 192, ಸೆಕ್ಷನ್ 353 (ಅವಮಾನಕರ ನಿಂದನೆ ಮೂಲಕ ಶಾಂತಿ ಭಂಗಕ್ಕೆ ಪ್ರಚೋದನೆ), ಹಾಗೂ ಸೆಕ್ಷನ್ 351(2) (ಅಪರಾಧದ ಬೆದರಿಕೆ) ಅಡಿ ಆರೋಪ ಹೊರಿಸಲಾಗಿದೆ.
ಕಾಂಗ್ರೆಸ್ ಎಚ್ಚರಿಕೆ
ಈ ಹೇಳಿಕೆಗೆ ಸಂಬಂಧಿಸಿದಂತೆ ಸೋಮವಾರ ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮತ್ತು ಮಹಾದೇವನ್ ವಿರುದ್ಧ ಪ್ರತಿಭಟನೆ ನಡೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳದಿದ್ದರೆ ಕೇಂದ್ರವೂ ಭಾಗೀದಾರ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಿದ್ದರು.
ಇದು ಕೇವಲ ಒಂದು ಸಣ್ಣ ನಾಯಕರ ನಿರ್ಲಕ್ಷ್ಯ ಹೇಳಿಕೆ ಅಲ್ಲ. ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ವೇಣುಗೋಪಾಲ್ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸಂಸದ ಶಫಿ ಪಾರಂಬಿಲ್ ಮತ್ತು ಹಿರಿಯ ನಾಯಕ ರಾಮೇಶ್ ಚೆನ್ನಿತಾಳ ಸೇರಿ ಹಲವರು ಈ ಹೇಳಿಕೆಯನ್ನು ಖಂಡಿಸಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಿಜೆಪಿ ನಾಯಕನ 'Gen Z' ಟೀಕೆ
ಇದಕ್ಕೂ ಮುನ್ನ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಹುಲ್ ಗಾಂಧಿ ವಿರುದ್ಧ ಟೀಕಿಸಿ, "ಭಾರತದ Gen Z ಸ್ಟಾರ್ಟ್-ಅಪ್ ಕ್ಷೇತ್ರದಲ್ಲಿದೆ. ಅವರು ಎಂಜಿನಿಯರ್‌ಗಳಾಗಿ ಸಿಲಿಕಾನ್ ವ್ಯಾಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ರಾಹುಲ್ ಗಾಂಧಿಯೊಂದಿಗೆ ಸಂಬಂಧವಿಲ್ಲ ಎಂದು ಹೇಳಿದ್ದರು.
ಇಂದಿನ ಯುವಕರಿಗೆ ವಿಶಿಷ್ಟ ಮನೋಭಾವನೆ ಇದೆ ಎಂದು ಹೇಳಿ, ನೇಪಾಳದ ಘಟನೆಗಳನ್ನು ಭಾರತದೊಂದಿಗೆ ಹೋಲಿಸುವುದು ತಪ್ಪು ಎಂದು ವಾದಿಸಿದರು.