ಎಸ್‌ಐಆರ್ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿಯಮ 118 ಅಡಿ ಮಂಡಿಸಿದ ಈ ನಿರ್ಣಯವು ವಿವಾದಾತ್ಮಕ NRC ಯನ್ನು ಹಿಂಬಾಗಿಲ ಮೂಲಕ ಜಾರಿಗೊಳಿಸುವ ಪ್ರಯತ್ನವಾಗಬಹುದೆಂದು ಎಚ್ಚರಿಸಿದೆ.

Update: 2025-09-29 10:44 GMT

 ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಎಲ್ಲ ರಾಜ್ಯಗಳಲ್ಲಿ ಆರಂಭಿಸಲು ಉದ್ದೇಶಿಸಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ವಿರುದ್ಧ ಕೇರಳ ವಿಧಾನಸಭೆ ಏಕಮತದ ನಿರ್ಣಯ ಅಂಗೀಕರಿಸುವ ಮೂಲಕ ಕೇಂದ್ರ ಚುನಾವಣಾ ಆಯೋಗ ಪ್ರಯತ್ನಕ್ಕೆ ಸೆಡ್ಡು ಹೊಡೆದಿದೆ. 

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿಯಮ 118 ಅಡಿ ಮಂಡಿಸಿದ ಈ ನಿರ್ಣಯವು ರಾಷ್ಟ್ರೀಯ ನಾಗರಿಕರ ನೋಂದಣಿ (NRC), ನಾಗರಿಕತ್ವ ತಿದ್ದುಪಡಿ ಕಾಯ್ದೆ(ಸಿಎಎ) ಯನ್ನು ಹಿಂಬಾಗಿಲ ಮೂಲಕ ಜಾರಿಗೊಳಿಸುವ ಪ್ರಯತ್ನವಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ವಿಧಾನಸಭೆ ಸದಸ್ಯರು ಸೂಚಿಸಿದ ಎರಡು ತಿದ್ದುಪಡಿಗಳನ್ನು ಒಳಗೊಂಡ ನಿರ್ಣಯ ಅಂಗೀಕರಿಸಲಾಗಿದೆ. 

ಬಿಹಾರದ ಉದಾಹರಣೆ ಉಲ್ಲೇಖಿಸಿದ ಸಿ.ಎಂ 

ಬಿಹಾರದಲ್ಲಿ ನಡೆದ ಎಸ್‌ಐಆರ್‌ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗಿರುವುದನ್ನು ಉಲ್ಲೇಖಿಸಿದ ಸಿಎಂ ಪಿಣರಾಯಿ ಅವರು, ಅಲ್ಲಿ ಮತದಾರರ ಪಟ್ಟಿಯಿಂದ ಅನಗತ್ಯವಾಗಿ ಹೆಸರು ಅಳಿಸಲಾಗಿದೆ. ಬಿಹಾರದಲ್ಲಿ ಅರ್ಹ ಮತದಾರರನ್ನೂ ಪಟ್ಟಿಯಿಂದ ಕೈಬಿಡುವ ರಾಜಕಾರಣ ನಡೆಯುತ್ತಿದೆ. ಈ ಎಸ್‌ಐಆರ್‌ ಅನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸಲು ಮುಂದಾಗಿರುವುದು ಸಿಎಎ, ಎನ್‌ಆರ್‌ಸಿ ಜಾರಿ ಒಂದು ಭಾಗವಾಗಿದೆ ಎಂಬ ಆತಂಕ ಹುಟ್ಟಿಸಿದೆ ಎಂದು ನಿರ್ಣಯದಲ್ಲಿ ಹೇಳಿದೆ.

ಕೇರಳದಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಂತದಲ್ಲಿಎಸ್‌ಐಆರ್‌ ಪ್ರಕ್ರಿಯೆ ಆರಂಭಿಸುವುದು ಸರಿಯಲ್ಲ, ನಿಯಮಿತ ಪ್ರಕ್ರಿಯೆಯೂ ಅಲ್ಲ ಎಂದು ವಿಧಾನಸಭೆ ಅಭಿಪ್ರಾಯಪಟ್ಟಿತು.

ಮತದಾರರ ಪಟ್ಟಿ ಮರುಪರಿಶೀಲನೆಗೆ ಸೂಕ್ತ ಸಿದ್ಧತೆ ಮತ್ತು ವ್ಯಾಪಕ ಸಮಾಲೋಚನೆ ಅಗತ್ಯ. ಅದನ್ನು ತುರ್ತುವಾಗಿ ನಡೆಸುವುದು ಜನರ ತೀರ್ಪನ್ನು ದುರ್ಬಲಗೊಳಿಸುವ ಪ್ರಯತ್ನದಂತೆ ಕಾಣಿಸುತ್ತದೆ ಎಂದು ದೂರಲಾಗಿದೆ.  

ವಿವಾದಾತ್ಮಕ ನಿಯಮ

2002ರಲ್ಲಿ ಕೇರಳದಲ್ಲಿ ಕೊನೆಯ ಬಾರಿಗೆ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ನಡೆದಿತ್ತು. ಅದೇ ಮಾದರಿಯನ್ನು ಈಗಲೂ ಬಳಸುವುದು ಅವೈಜ್ಞಾನಿಕ ಮತ್ತು ಅನ್ಯಾಯ ಎಂದು ವಿಧಾನಸಭೆ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. 1987ರ ನಂತರ ಜನಿಸಿದವರು ಮತದಾರರಾಗಿ ನೋಂದಾಯಿಸಿಕೊಳ್ಳಲು, ತಾಯಿ ಅಥವಾ ತಂದೆಯ ಪೌರತ್ವದ ದಾಖಲೆ ಸಲ್ಲಿಸಬೇಕೆಂಬ ಷರತ್ತು ವಿಧಿಸಲಾಗಿದೆ. 2003ರ ನಂತರ ಜನಿಸಿದವರು ಇಬ್ಬರೂ ಪೋಷಕರ ಪೌರತ್ವದ ದಾಖಲೆ ಸಲ್ಲಿಸಬೇಕಾಗಿದೆ. ಈ ನಿಯಮಗಳು ಸಂವಿಧಾನದ 326ನೇ ವಿಧಿಯಡಿ ನೀಡಿರುವವಿ ವಯಸ್ಕರ ಮತದಾನದ ಹಕ್ಕಿಗೆ ಧಕ್ಕೆ ತರುವಂತಿವೆ ಎಂದು ಎಚ್ಚರಿಸಲಾಗಿದೆ.

ದಾಖಲೆಗಳಿಲ್ಲದ ಕಾರಣಕ್ಕೆ ಮತದಾರರ ನೋಂದಣಿ ನಿರಾಕರಿಸುವುದು, ಪ್ರಜೆಗಳ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕನ್ನು ಕಸಿದುಕೊಳ್ಳುವಂತಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.   

ನಾಗರಿಕತ್ವ ತಿದ್ದುಪಡಿ ಕಾಯ್ದೆ

ದಾಖಲೆ ಆಧಾರಿತ ನಿಯಮಗಳಿಂದ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡದವರು, ಮಹಿಳೆಯರು, ಆರ್ಥಿಕವಾಗಿ ಹಿಂದುಳಿದವರು ಗಂಭೀರವಾಗಿ ಬಾಧಿತರಾಗಲಿದ್ದಾರೆ ಎಂದು ಅಧ್ಯಯನಗಳು ಹೇಳುತ್ತವೆ. ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರು ಹೊಂದಿರುವ ಅನಿವಾಸಿ ಭಾರತೀಯರ ಹಕ್ಕುಗಳಿಗೂ ಅಪಾಯವಿದೆ.

ಎಸ್‌ಐಆರ್‌ ಪ್ರಕ್ರಿಯೆಯು ನಾಗರಿಕತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೆ ಪೂರಕವಾಗಬಹುದು ಎಂಬ ಆತಂಕವಿದೆ. ನಾಗರಿಕತ್ವವನ್ನು ಧಾರ್ಮಿಕವಾಗಿ ವಿಭಜಿಸುವ ಪ್ರಯತ್ನ ನಡೆಸುತ್ತಿರುವ ಕೇಂದ್ರ ಸರ್ಕಾರವು ಎಸ್‌ಐಆರ್‌ ಪ್ರಕ್ರಿಯೆಯ ಗುರಿ ಸಾಧನೆಗೆ ಮುಂದಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ನೇರ ಸವಾಲು ಮಾಡುವಂತಾಗಿದೆ  ಎಂದು ನಿರ್ಣಯ ಎಚ್ಚರಿಸಿದೆ.

ಚುನಾವಣಾ ಆಯೋಗಕ್ಕೆ ಮನವಿ

ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವ ಕ್ರಮಗಳನ್ನು ಕೈಬಿಟ್ಟು, ನ್ಯಾಯಸಮ್ಮತ ಹಾಗೂ ಸಮಾನತೆ ಆಧಾರಿತ ನಿಯಮಿತ ಮರುಪರಿಶೀಲನೆ ಮಾತ್ರ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಕೇರಳ ವಿಧಾನಸಭೆ ಮನವಿ ಮಾಡಿದೆ. ಈ ನಿರ್ಣಯಕ್ಕೆ ಆಡಳಿತಾರೂಢ ಎಲ್‌ಡಿಎಫ್ ಮತ್ತು ವಿರೋಧ ಪಕ್ಷ ಯುಡಿಎಫ್ ಎರಡೂ ಬೆಂಬಲ ನೀಡಿದ್ದು, ಸದನದಲ್ಲಿ ಏಕಮತವನ್ನು ತೋರಿಸಿವೆ.

ಸಾರ್ವತ್ರಿಕ ಮತದಾನದ ಹಕ್ಕನ್ನು ದುರ್ಬಲಗೊಳಿಸುವ ಕ್ರಮಗಳಿಂದ ಚುನಾವಣಾ ಆಯೋಗ ಕೂಡಲೇ ಹಿಂದೆ ಸರಿಯಬೇಕು. ಬದಲಾಗಿ ಮತದಾರರ ಪಟ್ಟಿಗಳ ಪಾರದರ್ಶಕ, ನಿಷ್ಪಕ್ಷಪಾತ ಪರಿಷ್ಕರಣೆ ಖಾತ್ರಿಪಡಿಸಬೇಕು ಎಂದು ಸದನವು ಸರ್ವಾನುಮತದಿಂದ ಒತ್ತಾಯಿಸಿದೆ. 

Tags:    

Similar News