ಕರೂರ್ ದುರಂತ: ನಟ ವಿಜಯ್ ರ‍್ಯಾಲಿಯ ಕಾಲ್ತುಳಿತದ ಸಂಪೂರ್ಣ ವಿವರ ಇಲ್ಲಿದೆ

ಸಂಜೆ 7.30ಕ್ಕೆ ನಟ ವಿಜಯ್ ಭಾಷಣ ಆರಂಭಿಸುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ. ಅಂದಾಜು 10,000 ಜನ ನಿರೀಕ್ಷಿಸಲಾಗಿದ್ದ ಸ್ಥಳಕ್ಕೆ 50,000ಕ್ಕೂ ಹೆಚ್ಚು ಜನರು ಆಗಮಿಸಿದ್ದರು ಎಂದು ವರದಿಗಳು ಹೇಳುತ್ತಿವೆ.

Update: 2025-09-28 06:37 GMT

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಕರಾಳ ಅಧ್ಯಾಯವನ್ನು ಸೃಷ್ಟಿಸಿರುವ ಕರೂರ್ ದುರಂತದಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನಟ-ರಾಜಕಾರಣಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ರ‍್ಯಾಲಿಯಲ್ಲಿ ನಡೆದ ಈ ಭೀಕರ ಕಾಲ್ತುಳಿತ, ಅವರ ರಾಜಕೀಯ ಪ್ರವೇಶ, ಪಕ್ಷದ ಬೆಳವಣಿಗೆ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಕರೂರ್‌ನಲ್ಲಿ ನಡೆದಿದ್ದೇನು?

ಕರೂರು-ಈರೋಡ್ ಹೆದ್ದಾರಿಯಲ್ಲಿರುವ ವೇಲುಸ್ವಾಮಿಪುರಂನಲ್ಲಿ ಶನಿವಾರ ಸಂಜೆ ಟಿವಿಕೆ ಪಕ್ಷದ ಬೃಹತ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ನಟ ವಿಜಯ್ ತಮ್ಮ ಚುರುಕು ಮತ್ತು ಹಾಸ್ಯಭರಿತ ಸಂಭಾಷಣೆಗಳಿಂದ ಕೂಡಿದ ಭಾಷಣವನ್ನು ಸಂಜೆ 7.30ಕ್ಕೆ ಆರಂಭಿಸುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ. ನಿರೀಕ್ಷೆಗಿಂತ ಹಲವು ಪಟ್ಟು ಹೆಚ್ಚು ಜನ ಸೇರಿದ್ದೇ ಅದಕ್ಕೆ ಕಾರಣ, ಅಂದಾಜು 10,000 ಜನ ನಿರೀಕ್ಷಿಸಲಾಗಿದ್ದ ಸ್ಥಳಕ್ಕೆ 50,000ಕ್ಕೂ ಹೆಚ್ಚು ಜನರು ಆಗಮಿಸಿದ್ದರು ಎಂದು ವರದಿಗಳು ಹೇಳುತ್ತಿವೆ. 

ವಿಜಯ್ ಅವರ ಜನಪ್ರಿಯತೆಯಿಂದಾಗಿ ಜನಸ್ತೋಮ ನಿಯಂತ್ರಣ ಮೀರಿತ್ತು. ಪರಿಸ್ಥಿತಿಯ ಗಂಭೀರತೆ ಅರಿತ ವಿಜಯ್, ಜನರನ್ನು ಶಾಂತವಾಗಿರುವಂತೆ ಮನವಿ ಮಾಡಿ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು. ರ‍್ಯಾಲಿ ಸ್ಥಳದ ಪ್ರವೇಶ ದ್ವಾರಗಳು ಮತ್ತು ಮೈದಾನದೊಳಗೆ ಜನರು ನುಗ್ಗಿದ್ದರಿಂದ ದಟ್ಟಣೆ ಮತ್ತು ಗೊಂದಲ ಹೆಚ್ಚಾಯಿತು. ಈ ವೇಳೆ, ಅನೇಕರು ಕೆಳಗೆ ಬಿದ್ದು, ಕಾಲ್ತುಳಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡರು. ಕೆಲವರು ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದಿದ್ದರಿಂದಲೂ ಸಾವು ಸಂಭವಿಸಿದೆ ಎಂದು ವರದಿಯಾಗಿದೆ. ಮೃತರಲ್ಲಿ 16 ಮಹಿಳೆಯರು ಮತ್ತು 8 ಮಕ್ಕಳು ಸೇರಿದ್ದಾರೆ.

ವಿಜಯ್ ಯಾರು? ಅವರ ರಾಜಕೀಯ ರ‍್ಯಾಲಿಗಳ ಉದ್ದೇಶವೇನು?

ನಟ ವಿಜಯ್, 2024ರ ಫೆಬ್ರವರಿಯಲ್ಲಿ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ ) ಪಕ್ಷವನ್ನು ಅಧಿಕೃತವಾಗಿ ಸ್ಥಾಪಿಸಿದ್ದರು. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡಿರುವ ಅವರು, ತಮ್ಮ ಅಪಾರ ಅಭಿಮಾನಿ ಬಳಗವನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸಲು ಮುಂದಾಗಿದ್ದಾರೆ. ಅಕ್ಟೋಬರ್ 2024ರಲ್ಲಿ ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ತಮ್ಮ ಮೊದಲ ಬೃಹತ್ ಸಮ್ಮೇಳನ ನಡೆಸಿದ್ದರು. ನಂತರ ಆಗಸ್ಟ್ 2025ರಲ್ಲಿ ಮಧುರೈನಲ್ಲಿ ಮತ್ತು ಸೆಪ್ಟೆಂಬರ್ 2025ರಲ್ಲಿ ತಿರುಚ್ಚಿಯಲ್ಲಿ ಬೃಹತ್ ರ‍್ಯಾಲಿಗಳನ್ನು ನಡೆಸುವ ಮೂಲಕ ತಮ್ಮ ರಾಜಕೀಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದರು. ನಾಗಪಟ್ಟಣಂ ನಂತರ ಕರೂರ್‌ನಲ್ಲಿ ನಡೆದಿದ್ದು ಅವರ ಮೂರನೇ ಬೃಹತ್ ರ‍್ಯಾಲಿಯಾಗಿತ್ತು.

ರ‍್ಯಾಲಿಗಳಲ್ಲಿನ ಅವ್ಯವಸ್ಥೆ

ವಿಜಯ್ ಅವರ ರ‍್ಯಾಲಿಗಳು ಮಿತಿಮೀರಿ ಜನರನ್ನು ಆಕರ್ಷಿಸುತ್ತಿದ್ದರೂ, ಅವುಗಳಲ್ಲಿ ಮೂಲಸೌಕರ್ಯ ಮತ್ತು ಜನಸಂದಣಿ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿತ್ತು. ತಿರುಚ್ಚಿ ರ‍್ಯಾಲಿಯಲ್ಲೂ ಜನರು ಗಂಟೆಗಟ್ಟಲೆ ಬಿಸಿಲಿನಲ್ಲಿ, ನೀರಿನ ವ್ಯವಸ್ಥೆಯಿಲ್ಲದೆ ಕಾಯುವಂತಾಗಿತ್ತು. ಅಲ್ಲಿಯೂ ಅನೇಕರು ಮೂರ್ಛೆ ಹೋಗಿದ್ದರು.

ಹಲವು ರ‍್ಯಾಲಿಗಳಿಗೆ ವಿಜಯ್ ತಡವಾಗಿ ಆಗಮಿಸುತ್ತಿದ್ದುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಕರೂರ್ ದುರಂತಕ್ಕೂ ವಿಜಯ್ ಅವರ ವಿಳಂಬವೇ ಜನಸಂದಣಿಯ ಸ್ವರೂಪವನ್ನು ಬದಲಾಯಿಸಿತು ಎಂದು ತಮಿಳುನಾಡು ಡಿಜಿಪಿ ಹೇಳಿದ್ದಾರೆ.

ಅನೇಕ ಕಡೆಗಳಲ್ಲಿ, ಅಭಿಮಾನಿಗಳು ಬೇಲಿ, ಮರಗಳನ್ನು ಹತ್ತಿ ವಿಜಯ್ ಅವರನ್ನು ನೋಡಲು ಮುಗಿಬೀಳುತ್ತಿದ್ದರು. ಇದು ಭದ್ರತಾ ವ್ಯವಸ್ಥೆಯನ್ನು ಮೀರಿ, ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿತ್ತು.

ದುರಂತದ ನಂತರ ಏನಾಯಿತು?

"ನನ್ನ ಹೃದಯವೇ ಒಡೆದುಹೋಗಿದೆ. ಈ ನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ" ಎಂದು ವಿಜಯ್ 'ಎಕ್ಸ್​​' ನಲ್ಲಿ ಬರೆದುಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಕರೆ ಮಾಡಿ, ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಟಾಲಿನ್, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿ, ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿದ್ದಾರೆ.

ಈ ದುರಂತದ ನಂತರ ರಾಜಕೀಯ ಕೆಸರೆರಚಾಟವೂ ಆರಂಭವಾಗಿದೆ. ಜನರನ್ನು ಹೆಚ್ಚು ಸೇರಿಸುವ ಉದ್ದೇಶದಿಂದಲೇ ವಿಜಯ್ ವಿಳಂಬ ಮಾಡಿದರು ಎಂದು ಡಿಎಂಕೆ ಆರೋಪಿಸಿದೆ. ಮತ್ತೊಂದೆಡೆ, ಆಡಳಿತದ ವೈಫಲ್ಯವೇ ಕಾರಣ ಎಂದು ಬಿಜೆಪಿ ದೂರಿದೆ. ರ‍್ಯಾಲಿ ವೇಳೆ ವಿದ್ಯುತ್ ಕಡಿತಗೊಳಿಸಿದ್ದೇ ಗೊಂದಲಕ್ಕೆ ಕಾರಣವಾಯಿತು ಎಂದು ಟಿವಿಕೆ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

Tags:    

Similar News