ಹರಿಯಾಣದಲ್ಲಿ ಮದುವೆ ಮನೆಯಲ್ಲಿ ಮಹಿಳೆಯರ ರಕ್ಷಣೆಗೆ ನಿಂತಿದ್ದ ಬಾಡಿಬಿಲ್ಡರ್ ಹತ್ಯೆ; ಅಟ್ಟಾಡಿಸಿ ಹೊಡೆದ ಪುಂಡರು
ರೋಹ್ಟಕ್ ಜಿಲ್ಲೆಯ ಹುಮಾಯೂನ್‌ಪುರ ಗ್ರಾಮದ ನಿವಾಸಿ ರೋಹಿತ್ ಧನಕರ್ (26) ಕೊಲೆಯಾದ ದುರ್ದೈವಿ. ರೋಹಿತ್ ವೃತ್ತಿಪರ ಜಿಮ್ ಟ್ರೈನರ್ ಆಗಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿದ್ದರು.
ಮದುವೆ ಸಮಾರಂಭವೊಂದರಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ ಮತ್ತು ಅವರ ರಕ್ಷಣೆಗೆ ನಿಂತ 26 ವರ್ಷದ ವೃತ್ತಿಪರ ಬಾಡಿಬಿಲ್ಡರ್ (Bodybuilder) ಒಬ್ಬರನ್ನು ಗುಂಪೊಂದು ಅಮಾನವೀಯವಾಗಿ ಥಳಿಸಿ ಹತ್ಯೆಗೈದ ದಾರುಣ ಘಟನೆ ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ನಡೆದಿದೆ.
ರೋಹ್ಟಕ್ ಜಿಲ್ಲೆಯ ಹುಮಾಯೂನ್‌ಪುರ ಗ್ರಾಮದ ನಿವಾಸಿ ರೋಹಿತ್ ಧನಕರ್ (26) ಕೊಲೆಯಾದ ದುರ್ದೈವಿ. ರೋಹಿತ್ ವೃತ್ತಿಪರ ಜಿಮ್ ಟ್ರೈನರ್ ಆಗಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿದ್ದರು. ಶುಕ್ರವಾರ ರಾತ್ರಿ ಭಿವಾನಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ನಡೆದ ಸಣ್ಣ ಜಗಳ ವಿಕೋಪಕ್ಕೆ ಹೋಗಿ ಈ ಕೊಲೆ ನಡೆದಿದೆ.
ಸೆಲ್ಫಿ ಮತ್ತು ಅಸಭ್ಯ ವರ್ತನೆ ಗಲಾಟೆಗೆ ಕಾರಣ
ಪೊಲೀಸರ ಮಾಹಿತಿ ಪ್ರಕಾರ, ರೋಹಿತ್ ತನ್ನ ಸ್ನೇಹಿತ ಜತಿನ್ ಎಂಬುವವರ ಜೊತೆ ಮದುವೆಗೆ ಹೋಗಿದ್ದರು. ಅಲ್ಲಿ ಕೆಲ ಯುವಕರ ಗುಂಪು ಪ್ರವೇಶ ದ್ವಾರದ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಾ ದಾರಿಗೆ ಅಡ್ಡವಾಗಿ ನಿಂತಿದ್ದರು. ಆ ಸಮಯದಲ್ಲಿ ಮಹಿಳೆಯರು ಒಳಬರಲು ದಾರಿ ಮಾಡಿಕೊಡುವಂತೆ ರೋಹಿತ್ ಆ ಯುವಕರ ಬಳಿ ಕೇಳಿಕೊಂಡಿದ್ದರು. ಅಲ್ಲದೆ, ಯುವಕರು ಅಸಭ್ಯ ಭಾಷೆ ಬಳಸಿದ್ದನ್ನು ರೋಹಿತ್ ಮತ್ತು ಜತಿನ್ ಪ್ರಶ್ನಿಸಿದ್ದರು. ಇದೇ ವಿಚಾರವಾಗಿ ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.
ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿ ಹಲ್ಲೆ
ಘಟನೆ ಬಗ್ಗೆ ವಿವರಿಸಿರುವ ರೋಹಿತ್ ಸ್ನೇಹಿತ ಜತಿನ್, "ನಾವು ಮದುವೆ ಮನೆಯಲ್ಲಿ ಮಹಿಳೆಯರ ಬಗ್ಗೆ ಅವರು ಆಡುತ್ತಿದ್ದ ಅಸಭ್ಯ ಮಾತುಗಳನ್ನು ಪ್ರಶ್ನಿಸಿದೆವು. ಗಲಾಟೆ ನಂತರ ನಾವು ಕಾರಿನಲ್ಲಿ ಅಲ್ಲಿಂದ ಹೊರಟೆವು. ಆದರೆ ಆ ಗುಂಪು ನಮ್ಮನ್ನು ಹಿಂಬಾಲಿಸಿಕೊಂಡು ಬಂತು. ದಾರಿಯಲ್ಲಿ ರೈಲ್ವೆ ಕ್ರಾಸಿಂಗ್ ಗೇಟ್ ಮುಚ್ಚಿದ್ದರಿಂದ ನಮ್ಮ ಕಾರು ನಿಲ್ಲಿಸಬೇಕಾಯಿತು. ಹೊಂಚು ಹಾಕಿದ್ದ ದುಷ್ಕರ್ಮಿಗಳು, ತಮ್ಮ ವಾಹನವನ್ನು ನಮ್ಮ ಕಾರಿನ ಅಡ್ಡಲಾಗಿ ನಿಲ್ಲಿಸಿ, ರಾಡ್ ಮತ್ತು ಹಾಕಿ ಸ್ಟಿಕ್‌ಗಳಿಂದ ರೋಹಿತ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು," ಎಂದು ವಿವರಿಸಿದ್ದಾರೆ.
12ಕ್ಕೂ ಹೆಚ್ಚು ಆರೋಪಿಗಳ ಕೃತ್ಯ
ಗಂಭೀರವಾಗಿ ಗಾಯಗೊಂಡಿದ್ದ ರೋಹಿತ್ ಅವರನ್ನು ತಕ್ಷಣ ರೋಹ್ಟಕ್‌ನ ಪಿಜಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಭಿವಾನಿ ಸದರ್ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಎಫ್‌ಐಆರ್‌ನಲ್ಲಿ ನಾಲ್ವರ ಹೆಸರನ್ನು ಉಲ್ಲೇಖಿಸಲಾಗಿದೆ. ಹಲ್ಲೆಯಲ್ಲಿ 12ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು ಎನ್ನಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಮಾಜಿ ಸಿಎಂ ಪ್ರಶಸ್ತಿ ಪಡೆದಿದ್ದ ಪ್ರತಿಭಾವಂತ
ಮೃತ ರೋಹಿತ್ ಧನಕರ್ ಅವರ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ರೋಹಿತ್ ರಾಷ್ಟ್ರಮಟ್ಟದ ಬಾಡಿಬಿಲ್ಡರ್ ಆಗಿದ್ದು, 2016ರಲ್ಲಿ ಅವರ ಸಾಧನೆಗಾಗಿ ಅಂದಿನ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ ಸನ್ಮಾನವನ್ನೂ ಸ್ವೀಕರಿಸಿದ್ದರು. ತಾಯಿ ಮತ್ತು ಸಹೋದರಿಯನ್ನು ಹೊಂದಿರುವ ರೋಹಿತ್, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು ಎಂದು ಅವರ ಚಿಕ್ಕಪ್ಪ ತಿಳಿಸಿದ್ದಾರೆ.