ಪೆರಿಯಾರ್, ಕನಿಮೋಳಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಬಿಜೆಪಿ ನಾಯಕ ಎಚ್ ರಾಜಾಗೆ 6 ತಿಂಗಳು ಜೈಲು
ರಾಜಾ ಅವರ ಕಾನೂನು ತಂಡವು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಕ್ಷಣವೇ 2,000 ಮತ್ತು 3,000 ರೂ.ಗಳ ದಂಡ ಪಾವತಿಸಿತು. ಅಲ್ಲದೆ, ಮೇಲ್ಮನವಿ ಸಲ್ಲಿಸಲು ನ್ಯಾಯಾಧೀಶರಿಂದ ಅನುಮತಿ ಪಡೆದಿದೆ ಎಂದು ನ್ಯಾಯಾಲಯದ ಮೂಲಗಳು ಫೆಡರಲ್ ಗೆ ತಿಳಿಸಿವೆ.;
ಡಿಎಂಕೆ ಸಂಸದೆ ಕನಿಮೋಳಿ ವಿರುದ್ಧ ಮಾನಹಾನಿಕರ ಹೇಳಿಕೆ ಮತ್ತು ಸಮಾಜ ಸುಧಾರಕ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ಪ್ರತಿಮೆಗಳನ್ನು ನೆಲಸಮಗೊಳಿಸಬೇಕು ಎಂದು ಹೇಳಿಕ ನೀಡಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಿಜೆಪಿಯ ಹಿರಿಯ ಮುಖಂಡ ಎಚ್. ರಾಜಾ ಅವರಿಗೆ ಚೆನ್ನೈನ ವಿಶೇಷ ನ್ಯಾಯಾಲಯ ಸೋಮವಾರ (ಡಿಸೆಂಬರ್ 2) ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ರಾಜಾ ಅವರ ವಕೀಲರು ಮದ್ರಾಸ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೋರ್ಟ್ ಶಿಕ್ಷೆಗೆ 30 ದಿನಗಳ ತಡೆ ನೀಡಿತು. ರಾಜಾ ಅವರು ಕನಿಮೋಳಿ ವಿರುದ್ಧ ಹೇಳಿಕೆ ನೀಡಿದ್ದರು. ಅದೇ ರೀತಿ 2018 ರಲ್ಲಿ ಪೆರಿಯಾರ್ ಪ್ರತಿಮೆ ಒಡೆಯಬೇಕು ಎಂಬ ಅರ್ಥದಲ್ಲಿ ಮಾತನಾಡಿದ್ದರು.
ದಂಡ ಪಾವತಿ
ರಾಜಾ ಅವರ ಕಾನೂನು ತಂಡವು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಕ್ಷಣವೇ 2,000 ಮತ್ತು 3,000 ರೂ.ಗಳ ದಂಡ ಪಾವತಿಸಿತು. ಅಲ್ಲದೆ, ಮೇಲ್ಮನವಿ ಸಲ್ಲಿಸಲು ನ್ಯಾಯಾಧೀಶರಿಂದ ಅನುಮತಿ ಪಡೆದಿದೆ ಎಂದು ನ್ಯಾಯಾಲಯದ ಮೂಲಗಳು ಫೆಡರಲ್ ಗೆ ತಿಳಿಸಿವೆ.
ಮನವಿ ಪುರಸ್ಕರಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಜಯವೇಲ್ ಅವರು ಈ ಹಿಂದೆ ರಾಜಾ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದರು.
ತ್ರಿಪುರಾದಲ್ಲಿ ವ್ಲಾದಿಮಿರ್ ಲೆನಿನ್ ಪ್ರತಿಮೆಯನ್ನು ಒಡೆದು ಹಾಕಿದಂತೆ ಪೆರಿಯಾರ್ ಪ್ರತಿಮೆಯನ್ನು ನೆಲಸಮಗೊಳಿಸಲಾಗುವುದು ಎಂದು ಬಿಜೆಪಿ ನಾಯಕ 2018 ರಲ್ಲಿ ಫೇಸ್ಬುಕ್ ಪೋಸ್ಟ್ ಹಾಕಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಅನೇಕ ರಾಜಕೀಯ ಸಂಘಟನೆಗಳು ಪ್ರತಿಭಟನೆ ಮಾಡಿದ ಬಳಿಕ, ಅವರು ಪೋಸ್ಟ್ ಅನ್ನು ತಾನು ಬರೆದಿಲ್ಲ ಎಂದು ಹೇಳಿಕೊಂಡಿದ್ದರು.
ಒಂದು ಪೋಸ್ಟ್, ಕ್ಷಮೆಯಾಚನೆ
ಘಟನೆ ಬಗ್ಗೆ ಅವರು ಕ್ಷಮೆಯಾಚಿಸಿದ್ದರು. ತಮ್ಮ ಪುಟದ ಅಡ್ಮಿಮ್ ಅನುಮತಿಯಿಲ್ಲದೆ ಪೋಸ್ಟ್ ಮಾಡಿದ್ದಾರೆ ಎಂದು ಹೇಳಿದ್ದರು. "ನನ್ನ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ನನ್ನ ಸೋಶಿಯಲ್ ಮೀಡಿಯಾ ಅಡ್ಮಿನ್ ನನ್ನ ಅನುಮತಿಯಿಲ್ಲದೆ ಈ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ನನಗೆ ತಿಳಿದ ಕೂಡಲೇ ನಾನು ಪೋಸ್ಟ್ ಅನ್ನು ಅಳಿಸಿದ್ದೇನೆ" ಎಂದು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.
"ನಾವು ಹೇಳಿಕೆಗಳು ಮತ್ತು ಅಭಿಪ್ರಾಯಗಳನ್ನು ಮಾತ್ರ ವ್ಯಕ್ತಪಡಿಸಬೇಕು. ಹಿಂಸಾಚಾರದ ಮೂಲಕ ಅಲ್ಲ. ಯಾರನ್ನೂ ನೋಯಿಸುವ ಉದ್ದೇಶ ನನಗಿಲ್ಲ. ಪೆರಿಯಾರ್ ಪ್ರತಿಮೆಯನ್ನು ವಿರೂಪಗೊಳಿಸುವುದು ಸರಿಯಲ್ಲ" ಎಂದು ಅವರು ಹೇಳಿದ್ದರು.
ಶಾಂತಿ ಕಾಪಾಡುವಂತೆ ಮತ್ತು ಹಿಂದೂ ಧರ್ಮದ ಬಗ್ಗೆ ರಚನಾತ್ಮಕ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತೆ ಅವರು ಜನರನ್ನು ವಿನಂತಿಸಿದ್ದರು .
ಕನಿಮೋಳಿ ಬಗ್ಗೆ ಕಾಮೆಂಟ್
ರಾಜಾ ವಿರುದ್ಧದ ಎರಡನೇ ಪ್ರಕರಣವು ಕನಿಮೋಳಿ ಬಗ್ಗೆ ಅವರ ಹೇಳಿಕೆಗೆ ಸಂಬಂಧಿಸಿದ್ದಾಗೊದೆ . ಕನಿಮೋಳಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ 'ಅಕ್ರಮ ಮಗು' ಎಂದು ಅವರು ಹೇಳಿದ್ದರು.
ಈ ಎರಡೂ ಪ್ರಕರಣಗಳಲ್ಲಿ, ಈ ಹೇಳಿಕೆಗಳಿಗಾಗಿ ತನ್ನ ವಿರುದ್ಧ ದಾಖಲಾದ ಎಫ್ಐಆರ್ಗಳನ್ನು ರದ್ದು ಮಾಡುವಂತೆ ರಾಜಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಅವರ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಆನಂದ್ ವೆಂಕಟೇಶ್, ರಾಜಾ ಅವರ ಹೇಳಿಕೆಗಳು ದ್ವೇಷ ಭಾಷಣ ಎಂದು ಅಭಿಪ್ರಾಯಪಟ್ಟಿದ್ದರು. ಪೆರಿಯಾರ್ ಅವರ ದೃಷ್ಟಿಕೋನಗಳು, ಆಲೋಚನೆಗಳು ಮತ್ತು ಸಿದ್ಧಾಂತಗಳಿಂದ ಭಿನ್ನವಾಗಿರಲು ಎಲ್ಲರೂ ಅರ್ಹರು. ಪೆರಿಯಾರ್ ಧರ್ಮವನ್ನು ಅನುಸರಿಸುವ ತಮಿಳುನಾಡಿನ ಜನರ ಭಾವನೆಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಹೇಳಿಕೆಗಳನ್ನು ಅವರು ನೀಡಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದರು. ಕನಿಮೋಳಿ ಅವರ ಕುರಿತ ರಾಜಾ ಅವರ ಹೇಳಿಕೆಯು ನಕಾರಾತ್ಮಕ ಅರ್ಥ ಕೊಡುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಬಳಿಕ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಏಪ್ರಿಲ್ 2024ರಲ್ಲಿ ಅವರ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ, ರಾಜಕಾರಣಿಗಳು ತಮ್ಮ ಸಾರ್ವಜನಿಕ ಟೀಕೆಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿತ್ತು.