ಖುಷಿಯ ವಿಷಯ! ವಿಶ್ವದ ಟಾಪ್ 30 'ಅತ್ಯುತ್ತಮ ನಗರ'ಗಳ ಪಟ್ಟಿಗೆ ʼನಮ್ಮʼ ಬೆಂಗಳೂರು!
ಮುಂಬೈ 40ನೇ ಸ್ಥಾನ ಪಡೆದರೆ, ದೆಹಲಿ 54 ಹಾಗೂ ಹೈದರಾಬಾದ್ 82ನೇ ಸ್ಥಾನದಲ್ಲಿದೆ. ವಿಶ್ವದ ನಂಬರ್ 1 ಸಿಟಿಗೆ ಲಂಡನ್ ಸತತ 11ನೇ ಬಾರಿಗೆ ಮೊದಲ ಸ್ಥಾನದಲ್ಲಿದೆ.
ನಮ್ಮ ಬೆಂಗಳೂರು
ರೆಸೋನೆನ್ಸ್ ಕನ್ಸಲ್ಟೆನ್ಸಿ ವಿಶ್ವದ ಬೆಸ್ಟ್ ನಗರಗಳ ಪಟ್ಟಿ ಬಿಡುಗಡೆ ಮಾಡಿದ್ದು, ʼನಮ್ಮ ಬೆಂಗಳೂರು' ವಿಶ್ವದ ಟಾಪ್ 30 ಅತ್ಯುತ್ತಮ ನಗರಗಳಲ್ಲಿ ಒಂದು ಎಂದು ಹೇಳಿದೆ. ಆ ಪಟ್ಟಿ ಸೇರಿದ ಭಾರತದ ಏಕೈಕ ನಗರವಾಗಿಯೂ ಬೆಂಗಳೂರು ಗುರುತಿಸಲ್ಪಟ್ಟಿದೆ.
ಬರೋಬ್ಬರಿ 270 ನಗರಳನ್ನು ಅಲ್ಲಿನ ಜೀವನ ಮಟ್ಟ, ಆದಾಯ, ಅವಕಾಶ, ಸಾಂಸ್ಕೃತಿಕ ಹಿರಿಮೆ, ಜೀವನ ಸೇರಿದಂತೆ ಹಲವು ಆಯಾಮ ಹಾಗೂ ಹಂತಗಳಲ್ಲಿ ಮೌಲ್ಯಮಾಪನ ಮಾಡಿ ಈ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ `ನಮ್ಮ ಬೆಂಗಳೂರು' ವಿಶ್ವದ ಟಾಪ್ 30 ಅತ್ಯುತ್ತಮ ನಗರಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟಿದೆ. 29ನೇ ಸ್ಥಾನವನ್ನು ಪಡೆದ ಭಾರತದ ಏಕೈಕ ನಗರ ಎಂಬ ಖ್ಯಾತಿಯನ್ನು ಪಡೆದಿದೆ.
ಬೆಂಗಳೂರು ಕೇವಲ ಐಟಿ ಅಥವಾ ಟ್ರಾಫಿಕ್ ಇರುವ ನಗರವಲ್ಲ. ಇದು ಭಾವನೆಗಳ ಮಿಶ್ರಣ. ಬನ್ನೇರುಘಟ್ಟದ ವನ್ಯಜೀವಿಗಳ ಮೌನ ಆಹ್ಲಾದ ಮತ್ತು ವಂಡರ್-ಲಾದ ರೋಮಾಂಚಕ ಥ್ರಿಲ್‌ಗಳ ಸಂಯೋಜನೆಯಿಂದಾಗಿ, ನಮ್ಮ ಬೆಂಗಳೂರು 'ಕುಟುಂಬ ಸ್ನೇಹಿ ಆಕರ್ಷಣೆಗಳಲ್ಲಿ' ಜಾಗತಿಕವಾಗಿ ಮೊದಲ ಸ್ಥಾನ ಪಡೆದಿದೆ.
ಇನ್ನು ಆಹಾರದ ವಿಷಯಕ್ಕೆ ಬಂದರೆ, ಬೆಂಗಳೂರಿನ ಊಟದ ಸಂಸ್ಕೃತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಕರಾವಳಿಯ ಸೀಫುಡ್‌ನಿಂದ ಹಿಡಿದು ಇಂದಿರಾನಗರದ ಪ್ರಾಯೋಗಿಕ ಮೆನುಗಳವರೆಗೆ ನಮ್ಮ ನಗರದ ಆಹಾರ ವೈವಿಧ್ಯತೆಗೆ 'ರೆಸ್ಟೋರೆಂಟ್'ಗಳಲ್ಲಿ ಜಾಗತಿಕ #3 ಶ್ರೇಯಾಂಕ ಲಭಿಸಿದೆ.
ವಿಧಾನಸೌಧ ಮತ್ತು ಸುಂದರ ʼಬೆಂಗಳೂರು ಅರಮನೆಯು ದೃಶ್ಯʼ ಮತ್ತು ಹೆಗ್ಗುರುತುಗಳ ವಿಭಾಗದಲ್ಲಿ ಜಾಗತಿಕ #1 ಸ್ಥಾನವನ್ನು ಪಡೆಯಲು ನೆರವಾಗಿವೆ. ಶಾಪಿಂಗ್ ಮತ್ತು ಯುಬಿ ಸಿಟಿಯ ಐಷಾರಾಮಿ ಅಂಗಡಿಗಳಿಂದ ಏಷ್ಯಾದ ಬೃಹತ್ ಫೀನಿಕ್ಸ್ ಮಾಲ್‌ವರೆಗೆ ಎಲ್ಲವನ್ನೂ ನೀಡುವ ಬೆಂಗಳೂರು 'ಶಾಪಿಂಗ್'ನಲ್ಲಿ #6 ಶ್ರೇಯಾಂಕ ಗಳಿಸಿದೆ.
ದೇಶದ ಸಿಲಿಕಾನ್ ಸಿಟಿ ಬೆಂಗಳೂರು, ತನ್ನ ಅತಿದೊಡ್ಡ ಮೂಲಸೌಕರ್ಯ ನವೀಕರಣಗಳಲ್ಲಿ ಒಂದಾದ, ಹೊಸದಾಗಿ ಕಾರ್ಯಾರಂಭ ಮಾಡಿರುವ ನಮ್ಮ ಮೆಟ್ರೋದ "ಹಳದಿ ಮಾರ್ಗ"ದ ಮೂಲಕ ಗಣನೀಯ ಪ್ರಗತಿಯನ್ನು ಸಾಧಿಸಿದೆ. ಈ ಮಾರ್ಗವು ನಗರದ ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದು, ಚಲನಶೀಲತೆಯನ್ನು ಉನ್ನತೀಕರಿಸಿದೆ. ಈ ಮಹತ್ವದ ಮೂಲಸೌಕರ್ಯ ಯೋಜನೆಯು ಬೆಂಗಳೂರಿನ ಒಟ್ಟಾರೆ 'ಪ್ರೀತಿಪಾತ್ರ ಸೂಚ್ಯಂಕ' ಶ್ರೇಯಾಂಕವನ್ನು ಬಲಪಡಿಸಿದೆ. ಮೆಟ್ರೋ ಹಳದಿ ಮಾರ್ಗದ ಕಾರ್ಯಾರಂಭದ ನಂತರ ನಗರವು ಈ ಸೂಚ್ಯಂಕದಲ್ಲಿ #19 ನೇ ಶ್ರೇಯಾಂಕವನ್ನು ಗಿಟ್ಟಿಸಿಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಟಾಪ್ 30ರಲ್ಲಿ (29ನೇ ಸ್ಥಾನ) ಸ್ಥಾನ ಪಡೆದಿರುವ ನಮ್ಮ ಬೆಂಗಳೂರು, ಕೇವಲ ಸಿಲಿಕಾನ್ ಸಿಟಿಯಾಗಿ ಮಾತ್ರವಲ್ಲ, ಅದರ ಶ್ವಾಸತಾಣ, ಸುಲಭ ಜೀವನಶೈಲಿ ಮತ್ತು ಅಪೂರ್ವ ಅನುಭವಗಳಿಗಾಗಿ ಜಾಗತಿಕವಾಗಿ ಮನ್ನಣೆ ಗಳಿಸಿದೆ.
ಭಾರತದ ಇತರ ಪ್ರಮುಖ ನಗರಗಳು
ಟಾಪ್ 100ರಲ್ಲಿ ಭಾರತದ ಉಪಸ್ಥಿತಿಯು ಬೆಂಗಳೂರಿನೊಂದಿಗೆ ಮಾತ್ರವಲ್ಲದೆ ಇನ್ನೂ ಮೂರು ಪ್ರಮುಖ ಮಹಾನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 100ರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಇತರ ಮೂರು ನಗರಗಳೆಂದರೆ ಮುಂಬೈ, ದೆಹಲಿ ಹಾಗೂ ಹೈದರಾಬಾದ್. ಭಾರತದ ಒಟ್ಟು ನಾಲ್ಕು ನಗರ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮುಂಬೈ 40ನೇ ಸ್ಥಾನ ಪಡೆದರೆ, ದೆಹಲಿ 54 ಹಾಗೂ ಹೈದರಾಬಾದ್ 82ನೇ ಸ್ಥಾನದಲ್ಲಿದೆ. ವಿಶ್ವದ ನಂಬರ್ 1 ಸಿಟಿಗೆ ಲಂಡನ್ ಸತತ 11ನೇ ಬಾರಿಗೆ ಮೊದಲ ಸ್ಥಾನದಲ್ಲಿದೆ. ಜೀವನ ಮಟ್ಟ, ಶುಚಿತ್ವ, ಶಾಪಿಂಗ್ ಸೇರಿದಂತೆ ಹಲವು ಕಾರಣಗಳಿಂದ ಲಂಡನ್ ಮೊದಲ ಸ್ಥಾನ ಪಡದುಕೊಂಡಿದೆ.