ಬಟ್ಟೆ ಬಿಚ್ಚಿಸಿ ವಿದ್ಯಾರ್ಥಿನಿಯರ ಋತುಸ್ರಾವ ಪರೀಕ್ಷೆ: ಪ್ರಾಂಶುಪಾಲ, ಸಿಬ್ಬಂದಿ ಸೆರೆ
ವಿಷಯ ತಿಳಿದ ವಿದ್ಯಾರ್ಥಿನಿಯರ ಪೋಷಕರು ಕೆರಳಿದ್ದು, ಬುಧವಾರ (ಜುಲೈ 9, 2025) ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಘಟನೆಗೆ ಕಾರಣರಾದ ಶಾಲಾ ಆಡಳಿತ ಮತ್ತು ಶಿಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.;
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರ್ ಪ್ರದೇಶದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಬಟ್ಟೆ ಬಿಚ್ಚಿಸಿ ವಿದ್ಯಾರ್ಥಿನಿಯರನ್ನು ಋತುಸ್ರಾವ (periods) ಪರೀಕ್ಷೆಗೆ ಒಳಪಡಿಸಿದ ಅಮಾನವೀಯ ಘಟನೆ ನಡೆದಿದೆ. ಈ ಸಂಬಂಧ ಶಾಲೆಯ ಪ್ರಾಂಶುಪಾಲರು ಮತ್ತು ಮಹಿಳಾ ಸಿಬ್ಬಂದಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮಂಗಳವಾರ (ಜುಲೈ 8ರಂದು) ಈ ಘಟನೆ ನಡೆದಿದ್ದು, ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಪತ್ತೆಯಾದ ನಂತರ ಅಮಾನವೀಯ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದ ಹಿನ್ನೆಲೆಯಲ್ಲಿ, ಶಾಲಾ ಆಡಳಿತ ಮಂಡಳಿ ಅನುಚಿತವಾಗಿ ವಿದ್ಯಾರ್ಥಿನಿಯರನ್ನು ಪರೀಕ್ಷೆಗೆ ಒಳಪಡಿಸಿದೆ. ಈ ವಿಷಯ ತಿಳಿದ ವಿದ್ಯಾರ್ಥಿನಿಯರ ಪೋಷಕರು ಕೆರಳಿದ್ದು, ಬುಧವಾರ (ಜುಲೈ 9, 2025) ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಘಟನೆಗೆ ಕಾರಣರಾದ ಶಾಲಾ ಆಡಳಿತ ಮತ್ತು ಶಿಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಪೋಷಕರ ಒತ್ತಡ ಮತ್ತು ಪ್ರತಿಭಟನೆಯ ನಂತರ, ಬುಧವಾರ ರಾತ್ರಿ ಪೊಲೀಸರು ಶಾಲೆಯ ಪ್ರಾಂಶುಪಾಲರನ್ನು ಹಾಗೂ ಋತುಸ್ರಾವ ಪರೀಕ್ಷೆ ನಡೆಸಿದ ಆರೋಪದಡಿ ಒಬ್ಬ ಮಹಿಳಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಈ ಮಹಿಳಾ ಸಿಬ್ಬಂದಿ ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಖಾಸಗಿ ಅಂಗಗಳನ್ನು ಪರಿಶೀಲಿಸಿದ್ದಾರೆ ಎಂದು ಶಹಾಪುರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿಯೊಬ್ಬಳ ಪೋಷಕರು ಸಲ್ಲಿಸಿದ ದೂರಿನ ಪ್ರಕಾರ, 5 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರನ್ನು ಶಾಲೆಯ ಸಭಾಂಗಣಕ್ಕೆ ಕರೆಸಲಾಗಿತ್ತು. ನಂತರ ಶೌಚಾಲಯ ಮತ್ತು ನೆಲದ ಮೇಲಿನ ರಕ್ತದ ಕಲೆಗಳ ಫೋಟೋಗಳನ್ನು ಪ್ರೊಜೆಕ್ಟರ್ ಮೂಲಕ ತೋರಿಸಲಾಗಿದೆ. ವಿದ್ಯಾರ್ಥಿನಿಯರಲ್ಲಿ ಯಾರಾದರೂ ಮುಟ್ಟಾಗಿದ್ದಾರೆಯೇ ಎಂದು ಪ್ರಶ್ನಿಸಲಾಗಿತ್ತು. ಅವರನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಋತುಸ್ರಾವದಲ್ಲಿದ್ದವರು ಮಾಹಿತಿ ನೀಡುವಂತೆ ಹೇಳಲಾಗಿದೆ. ಬಳಿಕ ಒಬ್ಬೊಬ್ಬರಾಗಿ ಶೌಚಾಲಯಕ್ಕೆ ಕರೆದೊಯ್ದು ಮಹಿಳಾ ಸಿಬ್ಬಂದಿಯೊಬ್ಬರು ಅವರ ಖಾಸಗಿ ಭಾಗಗಳನ್ನು ಪರಿಶೀಲಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಥಾಣೆ ಗ್ರಾಮೀಣ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಹುಲ್ ಝಾಲ್ಟೆ ಅವರು ಬುಧವಾರ ಮಾತನಾಡಿ, "ಪೋಷಕರ ಕೋಪದಿಂದಾಗಿ ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇದೀಗ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.