ರಾಮಮಂದಿರ ನಿರ್ಮಾಣಗೊಂಡ ದಿನ ಭಾರತಕ್ಕೆ ನೈಜ ಸ್ವಾತಂತ್ರ್ಯ ದೊರಕಿತು; ಮೋಹನ್ ಭಾಗವತ್
ಆಗಸ್ಟ್ 15, 1947ರಂದು ಭಾರತದ ಸ್ವಾತಂತ್ರ್ಯದ ನಂತರ, ದೇಶದ ದೃಷ್ಟಿಕೋನ ಪ್ರತಿಬಿಂಬಿಸುವ ಸಂವಿಧಾನ ರಚಿಸಲಾಯಿತು. ಆದರೆ ಅದರಲ್ಲಿ ನೈಜ ಭಾರತದ ಸ್ಫೂರ್ತಿ ಇರಲಿಲ್ಲ ಎಂಬುದಾಗಿಯೂ ಭಾಗವತ್ ಹೇಳಿದ್ದಾರೆ.;
ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಯ ದಿನ ಭಾರತಕ್ಕೆ ನೈಜ ಸ್ವಾತಂತ್ರ್ಯ ಲಭಿಸಿದ ದಿನವಾಗಿದೆ. ನಾನಾ ದೇಶಗಳ ಶತ್ರುಗಳ ದಾಳಿಗಳಿಂದ ಮುಕ್ತಿಯನ್ನು ಘೋಷಿಸಿದ ಮಹತ್ವದ ದಿನ. ಇದನ್ನು ʼʼಪ್ರತಿಷ್ಠಾ ದ್ವಾದಶಿʼʼ ಎಂದು ಆಚರಿಸಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ಕೊಟ್ಟಿದ್ದಾರೆ.
ಆಗಸ್ಟ್ 15, 1947ರಂದು ಭಾರತದ ಸ್ವಾತಂತ್ರ್ಯದ ನಂತರ, ದೇಶದ ದೃಷ್ಟಿಕೋನ ಪ್ರತಿಬಿಂಬಿಸುವ ಸಂವಿಧಾನ ರಚಿಸಲಾಯಿತು. ಆದರೆ ಅದನ್ನು ಆ ದೃಷ್ಟಿಕೋನದ ಸ್ಫೂರ್ತಿಯಲ್ಲಿ ಜಾರಿಗೆ ತರಲಾಗಿರಲಿಲ್ಲ ಎಂದು ಭಾಗವತ್ ಸೋಮವಾರ ಹೇಳಿದರು.
ಇಂದೋರ್‌ನಲ್ಲಿ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ 'ರಾಷ್ಟ್ರೀಯ ದೇವಿ ಅಹಲ್ಯಾ ಪ್ರಶಸ್ತಿ' ಪ್ರದಾನ ಮಾಡಿದ ನಂತರ ಅವರು ಮಾತನಾಡಿದರು.
ಹಿಂದೂ ಕ್ಯಾಲೆಂಡರ್ ಪ್ರಕಾರ, ಅಯೋಧ್ಯೆಯಲ್ಲಿ ರಾಮ ದೇವಾಲಯದ ಪ್ರತಿಷ್ಠಾಪನೆ ಕಳೆದ ವರ್ಷ ʼಪುಷ್ಯʼ ತಿಂಗಳ 'ಶುಕ್ಲ ಪಕ್ಷದ' ದ್ವಾದಶಿಯಂದು ನಡೆಯಿತು. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ದಿನಾಂಕವು ಜನವರಿ 22, 2024 ಆಗಿತ್ತು. ಈ ವರ್ಷ, ಪುಷ್ಯ ಶುಕ್ಲ ಪಕ್ಷದ ದ್ವಾದಶಿ ಜನವರಿ 11 ರಂದು ಬಂದಿದೆ.
ರಾಮ ಮಂದಿರ ಅಭಿಯಾನ ಯಾರನ್ನೂ ವಿರೋಧಿಸುವ ಉದ್ದೇಶಕ್ಕೆ ಪ್ರಾರಂಭಿಸಿದ್ದಲ್ಲ ಎಂದು ಭಾಗವತ್ ಇದೇ ವೇಳೆ ಪ್ರತಿಪಾದಿಸಿದರು. ದೇಶವು ತನ್ನ ಸ್ವಂತ ಕಾಲ ಮೇಲೆ ನಿಲ್ಲಲು ಮತ್ತು ಜಗತ್ತಿಗೆ ದಾರಿ ತೋರಿಸಲು ಮತ್ತು ಭಾರತದ "ಸ್ವಯಂ" ಜಾಗೃತಗೊಳಿಸಲು ಈ ಆಂದೋಲನವನ್ನು ಪ್ರಾರಂಭಿಸಲಾಯಿತು ಎಂದು ಹೇಳಿದರು.
ರಾಮ ಮಂದಿರದ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದ ಎರಡು ದಿನದ ನಂತರ ಪ್ರತಿಷ್ಠಾ ದ್ವಾದಶಿ ಎಂದು ಆಚರಿಸಬೇಕು. ಯಾಕೆಂದರೆ ಹಲವಾರು ಶತಮಾನಗಳಿಂದ "ಪರಾಚಕ್ರ" (ಶತ್ರುಗಳ ದಾಳಿ) ದಿಂದ ಭಾರತದ ನಿಜವಾದ ಸ್ವಾತಂತ್ರ್ಯ ಪಡೆದ ದಿನ ಅದು ಎಂಬುದಾಗಿ ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು.
ಅಯೋಧ್ಯೆಯಲ್ಲಿ ನಡೆದ ಪ್ರತಿಷ್ಠಾಪನಾ ಸಮಾರಂಭದಲ್ಲಿ ದೇಶದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಭಾರತೀಯರು ಈ ಕಾರ್ಯಕ್ರಮವನ್ನು "ಶುದ್ಧ ಮನಸ್ಸಿನಿಂದ" ವೀಕ್ಷಿಸಿದ್ದಾರೆ ಎಂದು ಭಾಗವತ್ ನುಡಿದರು.
ಭಗವಾನ್ ರಾಮ, ಕೃಷ್ಣ ಮತ್ತು ಶಿವ ಪ್ರಸ್ತುತಪಡಿಸಿದ ಆದರ್ಶಗಳು ಮತ್ತು ಜೀವನ ಮೌಲ್ಯಗಳನ್ನು "ಭಾರತದ ಆತ್ಮ"ದಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು.
ಆಕ್ರಮಣಕಾರರು ದೇಶದ ದೇವಾಲಯಗಳನ್ನು ನಾಶಪಡಿಸಿದ್ದರು ಇದರಿಂದಾಗಿ ಭಾರತದ "ಆತ್ಮ" ವೂ ನಾಶವಾಗಿತ್ತು ಎಂದು ಹೇಳಿದ ಭಾಗವತ್. ಭಗವಾನ್ ರಾಮನ ಜನ್ಮಸ್ಥಳದಲ್ಲಿ ದೇವಾಲಯ ನಿರ್ಮಿಸುವುದಕ್ಕೆ ಕೆಲವು ಶಕ್ತಿಗಳು ಬಯಸದ ಕಾರಣ ಆಂದೋಲನ ದೀರ್ಘಕಾಲ ನಡೆಯಿತು ಎಂದು ಹೇಳಿದರು.
ಘರ್ ವಾಪಸಿ
'ಘರ್ ವಾಪಸಿ' (ಮತಾಂತರಗೊಂಡ ಜನರು ತಮ್ಮ ಮೂಲ ಧರ್ಮಕ್ಕೆ ಮರಳುವುದು) ವಿಷಯ ಸಂಸತ್ತಿನಲ್ಲಿ ಪ್ರಸ್ತಾಪವಾದ ಸಮಯದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗಿನ ಸಭೆಯ ಬಗ್ಗೆಯೂ ಭಾಗವತ್ ಹೇಳಿದರು.
"ಭಾರತದ ಸಂವಿಧಾನವು ವಿಶ್ವದ ಅತ್ಯಂತ ಜಾತ್ಯತೀತ ಸಂವಿಧಾನ ಮತ್ತು ಅಂತಹ ಪರಿಸ್ಥಿತಿಯಲ್ಲಿ ನಮಗೆ ಜಾತ್ಯತೀತತೆ ಕಲಿಸಲು ಜಗತ್ತಿಗೆ ಏನು ಹಕ್ಕಿದೆ ಎಂದು ಮುಖರ್ಜಿ ನನಗೆ ಹೇಳಿದ್ದರು" ಎಂದು ಭಾಗವತ್ ಹೇಳಿದರು.
5,000 ವರ್ಷಗಳ ಭಾರತೀಯ ಸಂಪ್ರದಾಯವು ನಮಗೆ ಜಾತ್ಯತೀತತೆ ಕಲಿಸಿದೆ ಎಂದು ಮುಖರ್ಜಿ ಗಮನಸೆಳೆದಿದ್ದರು ಎಂದು ಅವರು ಹೇಳಿದರು.
ಭಾಗವತ್ ಅವರ ಪ್ರಕಾರ, ಮುಖರ್ಜಿ ಅವರೊಂದಿಗಿನ ಭೇಟಿಯ ಸಮಯದಲ್ಲಿ ಮಾತನಾಡಿದ್ದ 5,000 ವರ್ಷಗಳಷ್ಟು ಹಳೆಯ ಭಾರತೀಯ ಸಂಪ್ರದಾಯವು ಭಗವಾನ್ ರಾಮ, ಕೃಷ್ಣ ಮತ್ತು ಶಿವನೊಂದಿಗೆ ಪ್ರಾರಂಭಗೊಂಡಿತ್ತು.
ಇಂದೋರ್ ಮೂಲದ ಸಾಮಾಜಿಕ ಸಂಸ್ಥೆ ಶ್ರೀ ಅಹಲ್ಯೋತ್ಸವ ಸಮಿತಿಯು ಪ್ರತಿ ವರ್ಷ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ ಪ್ರಮುಖ ವ್ಯಕ್ತಿಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತದೆ. ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಈ ಸಂಘಟನೆಯ ಅಧ್ಯಕ್ಷರಾಗಿದ್ದಾರೆ.
ನಾನಾಜಿ ದೇಶಮುಖ್, ವಿಜಯ ರಾಜೇ ಸಿಂಧಿಯಾ, ರಘುನಾಥ್ ಅನಂತ್ ಮಶೆಲ್ಕರ್ ಮತ್ತು ಸುಧಾ ಮೂರ್ತಿ ಅವರಂತಹ ಪ್ರಸಿದ್ಧ ವ್ಯಕ್ತಿಗಳಿಗೆ ರಾಷ್ಟ್ರೀಯ ದೇವಿ ಅಹಲ್ಯಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪಿಟಿಐ ಎಚ್ ಡಬ್ಲ್ಯೂಪಿ ಆಡು ಮಾಸ್ ಆರ್ ಎಸ್ ವೈ ಜಿಕೆ