ಗೋಡ್ಸೆಯನ್ನು ಹೊಗಳಿದ್ದ ಮಹಿಳಾ ಪ್ರೊಫೆಸರ್ ಈಗ ಕಲ್ಲಿಕೋಟೆ ಎನ್ಐಟಿಯಲ್ಲಿ ಡೀನ್; ವಿವಾದ
ಶೈಜಾ ಎ ಈ ಹಿಂದೆ ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ನಾಥೂರಾಮ್ ಗೋಡ್ಸೆಯನ್ನು ಭಾರತದ ರಕ್ಷಕ ಎಂದು ಬರೆದಿದ್ದರು. ಈ ವಿಚಾರದಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು.;
ಪ್ರಾಧ್ಯಾಪಕಿ ಶೈಜಾ.
ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ''ಭಾರತದ ರಕ್ಷಕ'' ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದು ಕೇಸ್ ಹಾಕಿಸಿಕೊಂಡಿದ್ದ ಮಹಿಳಾ ಪ್ರೊಫೆಸರ್ ಇದೀಗ ಎನ್ಐಟಿ- ಕಲ್ಲಿಕೋಟೆಯ ವಿಭಾಗವೊಂದರ ಡೀನ್ ಆಗಿ ನೇಮಕಗೊಂಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಸಿಪಿಐ (ಎಂ) ಯುವ ವಿಭಾಗವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್ಐ) ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ವಿವಾದ ಉಂಟು ಮಾಡಿದ್ದ ಶೈಜಾ ಅವರನ್ನು ಮಾರ್ಚ್ 7, 2025ರಿಂದ ಅನ್ವಯವಾಗುವಂತೆ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಡೀನ್ ಆಗಿ ನೇಮಿಸಲಾಗಿದೆ. ಜನವರಿ 30, 2024ರಂದು, ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದ ನಾಥೂರಾಮ್ ಗೋಡ್ಸೆಯನ್ನು ಶೈಜಾ ಹೊಗಳಿದ್ದೇ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣ.
ವಕೀಲರ ಪೋಸ್ಟ್ಗೆ ಪ್ರತಿಕ್ರಿಯೆ
ಬಲಪಂಥೀಯ ವಕೀಲ ಕೃಷ್ಣ ರಾಜ್ ಎಂಬುವರು ಫೇಸ್ಬುಕ್ನಲ್ಲಿ ಗೋಡ್ಸೆಯ ಚಿತ್ರವನ್ನು ಪೋಸ್ಟ್ ಮಾಡಿದ್ದರು. "ಹಿಂದೂ ಮಹಾಸಭಾ ಕಾರ್ಯಕರ್ತ ನಾಥೂರಾಮ್ ಗೋಡ್ಸೆ. ಭಾರತದ ಅನೇಕ ಜನರ ಹೀರೋ ಎಂದು ಶೀರ್ಷಿಕೆ ಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಶೈಜಾ, "ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸೆ ಬಗ್ಗೆ ಹೆಮ್ಮೆ ಇದೆ" ಎಂದು ಹೇಳಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಡಿವೈಎಫ್ಐ, ಎಸ್ಎಫ್ಐ ಮತ್ತು ಯುವ ಕಾಂಗ್ರೆಸ್ನಂಥ ಸಂಘಟನೆಗಳು ಶೈಜಾ ವಿರುದ್ಧ ಕುನ್ನಮಂಗಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿವೆ.
ಬಂಧನ ಮತ್ತು ಜಾಮೀನು
ಗಲಭೆ ಉಂಟುಮಾಡುವ ಉದ್ದೇಶದಿಂದ 'ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡಿದ' ಆರೋಪದ ಮೇಲೆ ಐಪಿಸಿಯ ಸೆಕ್ಷನ್ 153 ರ ಅಡಿಯಲ್ಲಿ ಪ್ರಕರಣ ದಾಖಲಾದ ನಂತರ ಶೈಜಾ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಬಳಿಕ ಶೈಜಾ ಅವರನ್ನು ಬಂಧಿಸಲಾಗಿತ್ತು. ಫೆಬ್ರವರಿಯಲ್ಲಿ ಕುನ್ನಮಂಗಲಂ ನ್ಯಾಯಾಲಯವು ಜಾಮೀನು ನೀಡಿತ್ತು.
ಬಳಿಇ ಕೇರಳ ಮೂಲದ ಸುದ್ದಿ ಪೋರ್ಟಲ್ ''ದಿ ಫೋರ್ಥ್'' ನೀಡಿದ ಸಂದರ್ಶನದಲ್ಲಿ, ಅವರು ತಮ್ಮ ಮಾತುಗಳಿಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದರು.