ಉತ್ತರ ಪ್ರದೇಶ| ಕಾಳಿಂದಿ ಎಕ್ಸ್‌ಪ್ರೆಸ್ ಹಳಿ ತಪ್ಪಿಸಲು ವಿಫಲ ಪ್ರಯತ್ನ
ರೈಲು ನಿಲುಗಡೆಗೆ ಮುನ್ನ ಡಿಕ್ಕಿ ಹೊಡೆದ ಕಾರಣ ಸಿಲಿಂಡರ್ ದೂರಕ್ಕೆ ಎಸೆಯಲ್ಪಟ್ಟಿದೆ. ಸ್ಥಳದಿಂದ ಪೆಟ್ರೋಲ್ ಬಾಟಲಿ, ಬೆಂಕಿಕಡ್ಡಿ ವಶಪಡಿಸಿಕೊಳ್ಳಲಾಗಿದ್ದು,ಪೊಲೀಸರು ಮತ್ತು ಆರ್‌ಪಿಎಫ್ ತನಿಖೆ ಆರಂಭಿಸಿದ್ದಾರೆ.;
ಪ್ರಯಾಗರಾಜ್‌ನಿಂದ ಭಿವಾನಿ ಕಡೆಗೆ ಹೋಗುತ್ತಿದ್ದ ಕಾಳಿಂದಿ ಎಕ್ಸ್‌ಪ್ರೆಸ್, ಹಳಿಗಳ ಮೇಲೆ ಇರಿಸಿದ್ದ ಸಿಲಿಂಡರ್ ಗೆ ಡಿಕ್ಕಿ ಹೊಡೆದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.
ಉತ್ತರ ಪ್ರದೇಶದ ಕಾನ್ಪುರ ಬಳಿಯ ಶಿವರಾಜಪುರ ಪ್ರದೇಶದಲ್ಲಿ ಭಾನುವಾರ ರಾತ್ರಿ ಕಾಳಿಂದಿ ಎಕ್ಸ್‌ಪ್ರೆಸ್ ನ್ನು ಹಳಿತಪ್ಪಿಸುವ ಶಂಕಿತ ಪ್ರಯತ್ನ ನಡೆದಿದೆ. ಲೋಕೋ ಪೈಲಟ್ ತಕ್ಷಣ ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಸಿಲಿಂಡರ್ ಹಳಿಯಿಂದ ದೂರ ಎಸೆಯಲ್ಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತುರ್ತು ಬ್ರೇಕ್: ಹಳಿಗಳ ಮೇಲೆ ಎಲ್‌ಪಿಜಿ ಸಿಲಿಂಡರ್ ಬಿದ್ದಿರುವುದನ್ನು ನೋಡಿದ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಹರೀಶ್ ಚಂದ್ರ ಹೇಳಿದ್ದಾರೆ. ಭಾನುವಾರ ರಾತ್ರಿ 8.20ರ ಸುಮಾರಿಗೆ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ತನಿಖೆ ಆರಂಭಿಸಿದ್ದಾರೆ. ವಿಧಿವಿಜ್ಞಾನ ತಂಡ ಆಗಮಿಸಿದ್ದು, ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಕೂಡ ತನಿಖೆಗೆ ಸೇರಿಕೊಂಡಿದೆ ಎಂದು ಹೇಳಿದರು.
ರೈಲು ನಿಲ್ಲುವ ಮುನ್ನ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ. ಲೋಕೋ ಪೈಲಟ್ ವಿಷಯವನ್ನು ರಕ್ಷಕ ಸಿಬ್ಬಂದಿ ಮತ್ತು ಗೇಟ್‌ಮನ್‌ಗೆ ತಿಳಿಸದ್ದಾರೆ. ರೈಲು ಘಟನೆ ನಡೆದ ಸ್ಥಳದಲ್ಲಿ ಸುಮಾರು 20 ನಿಮಿಷ ಕಾಲ ನಿಂತಿತ್ತು. ತನಿಖೆಗಾಗಿ ಬಿಲ್ಹೌರ್ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಸಿಲಿಂಡರ್, ಪೆಟ್ರೋಲ್ ಬಾಟಲಿ ಮತ್ತು ಬೆಂಕಿಕಡ್ಡಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.