ಬಾಲಿವುಡ್‌ನ ʼಹೀ-ಮ್ಯಾನ್‌ʼ ಧರ್ಮೇಂದ್ರ ವಿಧಿವಶ

ಧರ್ಮೇಂದ್ರ ಅವರು ಸೋಮವಾರ ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ತಂದೆಯ ಸಾವಿನ ಬಗ್ಗೆ ಪುತ್ರ ಹಾಗೂ ನಟ ಸನ್ನಿ ಡಿಯೋಲ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Update: 2025-11-24 09:29 GMT
Click the Play button to listen to article

ಬಾಲಿವುಡ್‌ನ 'ಹೀ-ಮ್ಯಾನ್' ಎಂದೇ ಕರೆಯಲ್ಪಡುತ್ತಿದ್ದ ಹಿರಿಯ ನಟ ಧರ್ಮೇಂದ್ರ(89) ಅವರು ಸೋಮವಾರ (ನ.24) ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯ ಪೀಡಿತರಿಂದ ಹಲವು ದಿನಗಳ ಕಾಲ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಇತ್ತೀಚೆಗೆ ಮನೆಗೆ ಸ್ಥಳಾಂತರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ತೀವ್ರ  ಉಸಿರಾಟದ ತೊಂದರೆಯಿಂದಾಗಿ ವೆಂಟಿಲೇಟರ್‌ ಸಹ ಅಳವಡಿಸಲಾಗಿತ್ತು. ಸೋಮವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. 

ಧರ್ಮೇಂದ್ರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಬಾಲಿವುಡ್‌ ನಟ-ನಟಿಯರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಈಚೆಗೆ ಧರ್ಮೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಅವರ ನಿಧನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹ ಹರಡಿತ್ತು. ಇದರಿಂದ ತೀವ್ರ ಬೇಸರಗೊಂಡಿದ್ದ ಕುಟುಂಬ ಸದಸ್ಯರು, ಧರ್ಮೇಂದ್ರ ಅವರು ನಿಧನರಾಗಿಲ್ಲ. ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. 

ಕಳೆದೊಂದು ವಾರದಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಧರ್ಮೇಂದ್ರ ಅವರು ಸೋಮವಾರ ವಿಧಿವಶರಾಗಿದ್ದಾರೆ. ಈ ಬಗ್ಗೆ ಅವರ ಪುತ್ರ ಹಾಗೂ ನಟ ಸನ್ನಿ ಡಿಯೋಲ್‌ ಮಾಹಿತಿ ಹಂಚಿಕೊಂಡಿದ್ದಾರೆ.

"ನನ್ನ ತಂದೆಯೇ ನಮ್ಮ ಕುಟುಂಬದ ಆಧಾರಸ್ತಂಭ. ಇಂದು ನಮ್ಮನ್ನು ಅಗಲಿದ್ದಾರೆ ಎಂದು ನಟ ಸನ್ನಿ ಡಿಯೋಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಧರ್ಮೇಂದ್ರ ಅವರ ಪತ್ನಿ, ನಟಿ ಹೇಮಾ ಮಾಲಿನಿ ಕೂಡ ತಮ್ಮ ಪತಿಯ ಅಗಲಿಗೆಯನ್ನು ಖಚಿತಪಡಿಸಿದ್ದು, "ಚಿತ್ರರಂಗದ ದೊಡ್ಡ ಯುಗ ಅಂತ್ಯವಾಗಿದೆ" ಎಂದು ಹೇಳಿದ್ದಾರೆ.

ಧರ್ಮೇಂದ್ರ ಅವರು ಪತ್ನಿ ಮತ್ತು ನಟಿ ಹೇಮಾ ಮಾಲಿನಿ, ಆರು ಮಕ್ಕಳಾದ ನಟ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್, ಜೊತೆಗೆ ಅಜೀತಾ ಮತ್ತು ವಿಜೇತಾ ಅವರನ್ನು ಅಗಲಿದ್ದಾರೆ.

ವೃತ್ತಿಜೀವನ

ಡಿಸೆಂಬರ್ 8, 1935 ರಂದು ಪಂಜಾಬ್‌ನಲ್ಲಿ ಜನಿಸಿದ ಧರ್ಮೇಂದ್ರ ಅವರ ಪೂರ್ಣ ಹೆಸರು ಧರಂ ಸಿಂಗ್ ಡಿಯೋಲ್. ಅವರ ತಂದೆ ಶಾಲಾ ಮುಖ್ಯೋಪಾಧ್ಯಾಯರಾಗಿದ್ದರು. ತಮ್ಮ ಹಳ್ಳಿಯಿಂದ ಮೈಲಿ ದೂರದಲ್ಲಿರುವ ಧರ್ಮೇಂದ್ರ ಒಮ್ಮೆ ಸುರೈಯಾ ಅವರ ದಿಲ್ಲಗಿ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದ್ದರು. ಬಳಿಕ ಅವರಿಗೆ ನಟನೆಯ ಬಗ್ಗೆ ಒಲವು ಮೂಡಿತು. ಸಿನಿಮಾಗಳ ಮೇಲಿನ ಮೋಹದಿಂದ ಫಿಲ್ಮ್‌ಫೇರ್ ಹೊಸ ಪ್ರತಿಭಾ ಸ್ಪರ್ಧೆಯನ್ನು ಗೆದ್ದು ಮುಂಬೈಗೆ ಬಂದರು. 1960 ರಲ್ಲಿ 'ದಿಲ್ ಭಿ ತೇರಾ ಹಮ್ ಭಿ ತೇರೆ' ಚಿತ್ರದ ಮೂಲಕ ಅವರು ಚೊಚ್ಚಲ ಪ್ರವೇಶ ಮಾಡಿದರು. ಮೀನಾ ಕುಮಾರಿ ಅವರೊಂದಿಗೆ ನಟಿಸಿದ 'ಫೂಲ್ ಔರ್ ಪತ್ತರ್' ಚಿತ್ರವು ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು. ಈ ಚಿತ್ರವು ಅವರನ್ನು ರಾತ್ರೋರಾತ್ರಿ ಸ್ಟಾರ್‌ ಮಾಡಿಸಿ ಅವರಿಗೆ ಬಾಲಿವುಡ್‌ನ ಹೀ-ಮ್ಯಾನ್ ಎಂಬ ಬಿರುದನ್ನು ತಂದುಕೊಟ್ಟಿತು.

ಧರ್ಮೇಂದ್ರ ಅವರು ತಮ್ಮ ಅದ್ಭುತ ವೃತ್ತಿಜೀವನದುದ್ದಕ್ಕೂ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದರು. 'ಸತ್ಯಕಂ' ಚಿತ್ರದಲ್ಲಿ ಗಂಭೀರ ಪಾತ್ರ, 'ಅನುಪಮಾ'ದಲ್ಲಿ ಸೂಕ್ಷ್ಮ ನಟನೆ ಮತ್ತು ಹೃಷಿಕೇಶ್ ಮುಖರ್ಜಿಯವರ 'ಚುಪ್ಕೆ ಚುಪ್ಕೆ' ಚಿತ್ರದಲ್ಲಿ ತಮ್ಮ ನಿಷ್ಕಳಂಕ ಹಾಸ್ಯ ನಟನೆ ಎಲ್ಲರನ್ನು ಗಮನ ಸೆಳೆಯಿತು. 'ಮೇರಾ ಗಾಂವ್ ಮೇರಾ ದೇಶ್', 'ಜುಗ್ನು' ಮತ್ತು 'ಯಾದೋಂಕಿ ಬಾರಾತ್' ನಂತಹ ಚಿತ್ರಗಳಲ್ಲಿ ಆಕ್ಷನ್ ಹೀರೋ ಆಗಿ ಮೆರೆದರು. ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಮಾರೂಪದ ಪ್ರದರ್ಶನಗಳಲ್ಲಿ ಒಂದಾದ 'ಶೋಲೆ'ಯಲ್ಲಿನ ವಿನೋದಪ್ರಿಯ ವೀರನ ಪಾತ್ರವು ಎಂದೆಂದಿಗೂ ಅಮರ.

 

200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಧರ್ಮೇಂದ್ರ ಅವರು ಪ್ರಣಯ, ಡ್ರಾಮಾ, ಹಾಸ್ಯ ಮತ್ತು ಆಕ್ಷನ್ ಪ್ರಕಾರದ ಯಶಸ್ವಿ ಹಿಟ್‌ಗಳನ್ನು ನೀಡಿದ್ದಾರೆ. ಹೃಷಿಕೇಶ್ ಮುಖರ್ಜಿ ಮತ್ತು ರಮೇಶ್ ಸಿಪ್ಪಿ ಅವರಂತಹ ನಿರ್ದೇಶಕರೊಂದಿಗಿನ ಅವರ ಪಾಲುದಾರಿಕೆಯು ಹಿಂದಿ ಚಿತ್ರರಂಗಕ್ಕೆ ಕೆಲವು ಸ್ಮರಣೀಯ ಕ್ಷಣಗಳನ್ನು ನೀಡಿದೆ. ಅವರು ತಮ್ಮ ಕೊನೆಯ ವರ್ಷಗಳಲ್ಲಿಯೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 2007 ರಲ್ಲಿ ತಮ್ಮ ಪುತ್ರರಾದ ಸನ್ನಿ ಮತ್ತು ಬಾಬಿ ಡಿಯೋಲ್ ಅವರೊಂದಿಗೆ 'ಅಪ್ನೆ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಡಿಸೆಂಬರ್ 25 ರಂದು ಬಿಡುಗಡೆಯಾಗಲಿರುವ 'ಇಕ್ಕಿಸ್' ಚಿತ್ರದಲ್ಲಿ ಕೊನೆಯ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಶ್ರೀರಾಮ್ ರಾಘವನ್ ನಿರ್ದೇಶನದ 'ಇಕ್ಕೀಸ್' ಧರ್ಮೇಂದ್ರ ಅಭಿನಯದ ಕೊನೆಯ ಚಿತ್ರವಾಗಲಿದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಈ ಚಿತ್ರವು 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಲ್ಲಿ ಅವರು ಅಗಸ್ತ್ಯ ನಂದಾ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

 

2012 ರಲ್ಲಿ, ಸಿನಿಮಾಗೆ ನೀಡಿದ ಕೊಡುಗೆಗಾಗಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಸಿನಿಮಾದ ಹೊರಗೂ ನಟ ಧರ್ಮೇಂದ್ರ ಅವರು ಸರಳತೆಯನ್ನು ಮೈಗೂಡಿಸಿಕೊಂಡ ವ್ಯಕ್ತಿಯಾಗಿದ್ದರು. 89 ನೇ ವಯಸ್ಸಿನಲ್ಲೂ, ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದು, ತಮ್ಮ ಜಮೀನಿನಲ್ಲಿ ತಮ್ಮ ಜೀವನದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರು.

ಕಿರುತೆರೆ ಮತ್ತು ಕುಟುಂಬ

ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ಧರ್ಮೇಂದ್ರ ಸಕ್ರಿಯರಾಗಿದ್ದರು. 'ಇಂಡಿಯಾಸ್ ಗಾಟ್ ಟ್ಯಾಲೆಂಟ್' ನಂತಹ ಜನಪ್ರಿಯ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಅವರು ಕಾಣಿಸಿಕೊಂಡಿದ್ದರು. ಧರ್ಮೇಂದ್ರ ಅವರು ಪ್ರಕಾಶ್ ಕೌರ್ ಮತ್ತು ಹೇಮಾ ಮಾಲಿನಿ ಇಬ್ಬರನ್ನು ವಿವಾಹವಾಗಿದ್ದು, ಅವರಿಗೆ ಸನ್ನಿ ಡಿಯೋಲ್, ಬಾಬ್ಬಿ ಡಿಯೋಲ್ ಮತ್ತು ಇಶಾ ಡಿಯೋಲ್ ಸೇರಿದಂತೆ ಆರು ಮಕ್ಕಳಿದ್ದಾರೆ. 1970ರಲ್ಲಿ 'ತುಮ್ ಹಸೀನ್ ಮೈ ಜವಾನ್' ಚಿತ್ರದ ಸೆಟ್‌ನಲ್ಲಿ ಹೇಮಾ ಮಾಲಿನಿ ಅವರನ್ನು ಭೇಟಿಯಾಗಿ, 1980ರಲ್ಲಿ ವಿವಾಹವಾದರು. ಅವರ ನಿಧನಕ್ಕೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಸೇರಿದಂತೆ ದೇಶಾದ್ಯಂತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Tags:    

Similar News