Team India : ಕಳಪೆ ಪ್ರದರ್ಶನದ ಬಿಸಿ; ಭಾರತ ತಂಡಕ್ಕೆ ಕಠಿಣ 10 ಮಾರ್ಗಸೂಚಿ ಪ್ರಕಟಿಸಿದ ಬಿಸಿಸಿಐ

Team India: ದೇಶೀಯ ಕ್ರಿಕೆಟ್ ಆಡಲೇಬೇಕು , ಪ್ರವಾಸದ ಸಮಯದಲ್ಲಿ ಕುಟುಂಬ ಸದಸ್ಯರು ಇರಬೇಕೇ, ಜಾಹೀರಾತು ಶೂಟಿಂಗ್‌ ನಿಷೇಧ, ಸೇರಿ 10 ಮಾರ್ಗಸೂಚಿಗಳು ಬಿಡುಗಡೆ ಮಾಡಿದೆ.;

Update: 2025-01-17 05:45 GMT
ಪ್ರಾತಿನಿಧಿಕ ಚಿತ್ರ.

ಭಾರತೀಯ ಕ್ರಿಕೆಟ್ ತಂಡದ ʼಸ್ಟಾರ್‌ ಗಿರಿʼ ಹಾಗೂ ಕಳಪೆ ಪ್ರದರ್ಶನದಿಂದ ಬೇಸತ್ತಿರುವ ಬಿಸಿಸಿಐ ಆಟಗಾರರಿಗೆ ಶಿಸ್ತಿನ ಪಠ್ಯಕ್ರಮವೊಂದನ್ನು ಬಿಡುಗಡೆ ಮಾಡಿದೆ. ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿರುವ ಹಾಗೂ ಬಾಹ್ಯ ಒತ್ತಡದ ಹಿನ್ನೆಲೆಯಲ್ಲಿ ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗಿದೆ. 10 ಅಂಶಗಳ ಹೊಸ ನೀತಿ ಜಾರಿಗೆ ತಂದಿದ್ದು ನಿಯಮಗಳನ್ನು ಅನುಕರಿಸದೆ ಇದ್ದರೆ ದಂಡದ ಶಿಕ್ಷೆಗೆ ಗುರಿಯಾಗಬೇಕು ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ. ದೇಶೀಯ ಕ್ರಿಕೆಟ್ ಆಡಲೇಬೇಕು , ಪ್ರವಾಸದ ಸಮಯದಲ್ಲಿ ಕುಟುಂಬ ಸದಸ್ಯರು ಇರಬೇಕೇ, ಜಾಹೀರಾತು ಶೂಟಿಂಗ್‌ ನಿಷೇಧ, ಸೇರಿ 10 ಮಾರ್ಗಸೂಚಿಗಳು ಬಿಡುಗಡೆ ಮಾಡಿದೆ.

1. ದೇಶೀಯ ಕ್ರಿಕೆಟ್ ಕಡ್ಡಾಯ

ಭಾರತ ಕ್ರಿಕೆಟ್ ತಂಡದ ಆಟಗಾರರು ದೇಶೀಯ ಕ್ರಿಕೆಟ್​ ಆಡುವುದು ಕಡ್ಡಾಯ. ಅಂತಾರಾಷ್ಟ್ರೀಯ ಸರಣಿಗಳು ಇಲ್ಲದ ವೇಳೆ ದೇಶೀಯ ಪಂದ್ಯಗಳಿಗೆ ಲಭ್ಯವಿರಬೇಕು ಎಂದು ಆದೇಶಿಸಿದೆ. ಫಾರ್ಮ್ ಕಳೆದುಕೊಂಡವರು ಲಯಕ್ಕೆ ಮರಳಲು, ಫಿಟ್​ನೆಸ್ ಕಾಪಾಡಿಕೊಳ್ಳಲು ಇದು ನೆರವಾಗುತ್ತದೆ. ಹಾಗಿದ್ದರೆ ಮಾತ್ರ ಕೇಂದ್ರದ ಒಪ್ಪಂದಗಳಿಗೆ ಅರ್ಹರಾಗಲಿದ್ದೀರಿ ಎಂದಿದೆ. ವಿರಾಟ್ ಕೊಹ್ಲಿ 2012ರಿಂದ ಮತ್ತು ರೋಹಿತ್​ ಶರ್ಮಾ 2015 ರಿಂದ ರಣಜಿ ಪಂದ್ಯವನ್ನಾಡಿಲ್ಲ.

2. ಕುಟುಂಬದೊಂದಿಗೆ ಪ್ರಯಾಣ ನಿರ್ಬಂಧ

ಇನ್ಮುಂದೆ ಆಟಗಾರರು ತಂಡದೊಂದಿಗೆ ಮತ್ತು ತಂಡದ ಬಸ್​ನೊಂದಿಗೆ ಪ್ರಯಾಣಿಸಬೇಕು. ಕುಟುಂಬ ಸದಸ್ಯರ ಜತೆ ಪ್ರತ್ಯೇಕವಾಗಿ ಪ್ರಯಾಣಿಸಲು ನಿರ್ಬಂಧಿಸಲಾಗಿದೆ. ಅನಿವಾರ್ಯವಾಗಿ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸಬೇಕು ಎಂದರೆ ಹೆಡ್​ಕೋಚ್ ಗೌತಮ್ ಗಂಭೀರ್, ಅಜಿತ್ ಅಗರ್ಕರ್​ ಪೂರ್ವ ಅನುಮೋದನೆ ಪಡೆಯಬೇಕು. ಇತ್ತೀಚಿಗೆ ಇಬ್ಬರು ದೊಡ್ಡ ಸ್ಟಾರ್​​ಗಳು, ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದೊಂದಿಗೆ ಪ್ರಯಾಣಿಸಲು ನಿರಾಕರಿಸಿದ್ದರು. ಸ್ವಂತ ವಿಮಾನದಲ್ಲಿಯೇ ಪ್ರಯಾಣಿಸಿದ್ದರು.

3. ಬ್ಯಾಗೇಜ್ ಭಾರಕ್ಕೆ ಮಿತಿ

ಆಟಗಾರರ ಬ್ಯಾಗೇಜ್ ಮಿತಿಗೂ ಕಡಿವಾಣ ಹಾಕಲಾಗಿದೆ. ಹೆಚ್ಚುವರಿ ಲಗೇಜ್ ತಂದಿದ್ದೇ ಆದರೆ, ಅದರ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ. ಸುದೀರ್ಘ ಪ್ರವಾಸಗಳಿಗೆ ಲಗೇಜ್ ತೂಕದ ಮಿತಿ 150 ಕೆಜಿಗೆ ಇರಿಸಲಾಗಿದೆ. ಆಟಗಾರರು ತಮ್ಮ ಸಂಗಾತಿಗಳು, ಮಕ್ಕಳು ಮತ್ತು ವೈಯಕ್ತಿಕ ಸಿಬ್ಬಂದಿಯ ಬ್ಯಾಗ್‌ಗಳನ್ನು ತಮ್ಮ ಖಾತೆಗೆ ಸೇರಿಸುತ್ತಿದ್ದರು.

4. ವೈಯಕ್ತಿಕ ಸಿಬ್ಬಂದಿ ಇರಬಾರದು

ವ್ಯವಸ್ಥಾಪಕರು, ಬಾಣಸಿಗರು, ಸಹಾಯಕರು ಮತ್ತು ಭದ್ರತೆ ಸೇರಿದಂತೆ ವೈಯಕ್ತಿಕ ಸಿಬ್ಬಂದಿ ಕರೆ ತರುವುದನ್ನು ನಿರ್ಬಂಧಿಸಲಾಗಿದೆ. ಬಿಸಿಸಿಐ ಸ್ಪಷ್ಟವಾಗಿ ಅನುಮೋದಿಸದ ಹೊರತು ಪ್ರವಾಸಗಳು ಅಥವಾ ಸರಣಿಗಳಲ್ಲಿ ವೈಯಕ್ತಿಕ ಸಿಬ್ಬಂದಿಯನ್ನು ಕರೆತರುವಂತಿಲ್ಲ.

5. ಲಾಜಿಸ್ಟಿಕ್ಸ್

ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಉಪಕರಣಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಕಳುಹಿಸುವುದಕ್ಕೂ ಮುನ್ನ ಟೀಮ್ ಮ್ಯಾನೇಜ್​ಮೆಂಟ್​ನೊಂದಿಗೆ ಆಟಗಾರರು ಸಮನ್ವಯ ಸಾಧಿಸಬೇಕು. . ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಉಂಟಾಗುವ ಯಾವುದೇ ಹೆಚ್ಚುವರಿ ವೆಚ್ಚ ಆಟಗಾರನ ಜವಾಬ್ದಾರಿಯಾಗಿರುತ್ತದೆ. ಆಟಗಾರರು ಎನ್‌ಸಿಎಗೆ ಪುನರ್ವಸತಿಗೆ ಆಗಮಿಸುವುದಕ್ಕೂ ಮುನ್ನ ತಮ್ಮ ಉಪಕರಣಗಳು ಅಥವಾ ಕಿಟ್‌ಗಳನ್ನು ಕಳುಹಿಸುತ್ತಿದ್ದರು.

6. ನಿಗದಿತ ಸಮಯಕ್ಕೆ ಅಭ್ಯಾಸ

ಎಲ್ಲಾ ಆಟಗಾರರು ನಿಗದಿತ ಅಭ್ಯಾಸದ ಅವಧಿಯ ಸಂಪೂರ್ಣ ಅವಧಿ ತನಕ ಇರುವಂತೆ ಕಡ್ಡಾಯಗೊಳಿಸಲಾಗಿದೆ. ತಮಗಿಷ್ಟ ಬಂದ ಅವಧಿಗೆ ನೆಟ್ ಪ್ರಾಕ್ಟೀಸ್ ತೊರೆಯುವಂತಿಲ್ಲ. ನಿಗದಿತ ಅಭ್ಯಾಸ ಅವಧಿ ಪೂರ್ಣಗೊಳಿಸಬೇಕು.

7. ಜಾಹೀರಾತು ಶೂಟಿಂಗ್ ಇಲ್ಲ

ಸರಣಿ ಅಥವಾ ಪ್ರವಾಸದ ಸಮಯದಲ್ಲಿ ಆಟಗಾರರು ವೈಯಕ್ತಿಕ ಜಾಹೀರಾತು ಶೂಟ್‌ಗಳು ಅಥವಾ ಜಾಹೀರಾತು ಅನುಮೋದನೆ ಪಡೆಯಲು ನಿರ್ಬಂಧಿಸಿದೆ.

8. ಕುಟುಂಬ ಪ್ರಯಾಣ

ಕ್ರಿಕೆಟ್ ಪ್ರವಾಸವು 45 ದಿನ ಅಥವಾ ಅದಕ್ಕಿಂತ ಜಾಸ್ತಿ ಇದ್ದರೆ, ಕುಟುಂಬ ಸದಸ್ಯರು ಕ್ರಿಕೆಟಿಗರ ಜೊತೆಗೆ ಗರಿಷ್ಠ 2 ವಾರ ಮಾತ್ರ ಇರಬಹುದು. ಒಂದು ವೇಳೆ ಪ್ರವಾಸ ಕಡಿಮೆ ದಿನಗಳದ್ದಾಗಿದ್ದರೆ ಒಂದು ವಾರ ಮಾತ್ರ ಕುಟುಂಬ ಸದಸ್ಯರಿಗೆ ಅವಕಾಶ ಇರಲಿದೆ. (ಮಕ್ಕಳು - 18 ವರ್ಷದೊಳಗಿನವರು)

9. ಬಿಸಿಸಿಐ ಚಟುವಟಿಕೆಗಳಿಗೆ ಲಭ್ಯವಿರಬೇಕು

ಬಿಸಿಸಿಐನ ಯಾವುದೇ ಅಧಿಕೃತ ಶೂಟ್, ಪ್ರಚಾರ ಚಟುವಟಿಕೆಗಳು ಮತ್ತು ಕಾರ್ಯಗಳಿಗೆ ಆಟಗಾರರು ಲಭ್ಯವಿರುವುದು ಕಡ್ಡಾಯ. ಇದೆಲ್ಲವೂ ಬಿಸಿಸಿಐ ಪಾಲುದಾರರಿಗೆ ಸಂಬಂಧಿಸಿದ ಪ್ರಚಾರವಾಗಿರುತ್ತದೆ.

10. ಸರಣಿ ಪೂರ್ಣಗೊಳಿಸಬೇಕು

ಆಟಗಾರರು ವೇಳಾಪಟ್ಟಿ ಮುಗಿಯುವವರೆಗೂ ಅಥವಾ ಸರಣಿ ಮುಗಿಯುವವರೆಗೂ ತಂಡದೊಂದಿಗೆ ಇರಬೇಕು. ಪಂದ್ಯಗಳು ನಿಗದಿ ಮಾಡಿದ್ದಕ್ಕಿಂತ ಮುಂಚಿತವಾಗಿಯೇ ಮುಕ್ತಾಯಗೊಳ್ಳುತ್ತವೆ ಎಂಬುದನ್ನು ಲೆಕ್ಕಿಸದೆ ಸರಣಿ ಅಥವಾ ಪ್ರವಾಸದ ನಿಗದಿತ ಅಂತ್ಯದ ತನಕ ತಂಡದೊಂದಿಗೆ ಇರಬೇಕು.

ನಿಯಮ ಪಾಲಿಸದಿದ್ದರೆ ದಂಡದ ಎಚ್ಚರಿಕೆ

ಎಲ್ಲಾ ಆಟಗಾರರು ಮೇಲಿನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬಿಸಿಸಿಐ ಹೇಳಿದೆ.  ವಿನಾಯಿತಿ ಪಡೆಯಲು ಆಯ್ಕೆ ಸಮಿತಿಯ ಅಧ್ಯಕ್ಷ ಮತ್ತು ಹೆಡ್​ಕೋಚ್ ಅವರಿಂದ ಅನುಪತಿ ಪಡೆಯಬೇಕು. ನಿಯಮ ಪಾಲಿಸದಿದ್ದರೆ ಐಪಿಎಲ್‌ ಸೇರಿದಂತೆ ಬಿಸಿಸಿಐ ನಡೆಸುವ ಎಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸದಂತೆ  ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.  ಆಟಗಾರರ ಒಪ್ಪಂದದ ಅಡಿಯಲ್ಲಿ ಉಳಿಸಿಕೊಳ್ಳುವವರ ಮೊತ್ತ/ಪಂದ್ಯ ಶುಲ್ಕದಿಂದ ಕಡಿತ ಮಾಡಲಾಗುತ್ತದೆ.

Tags:    

Similar News