Language row: ಮುಂಬೈನಲ್ಲಿ ವಾಸಿಸಲು ಮರಾಠಿ ಯಾಕೆ ಗೊತ್ತಿರಬೇಕು : ಆರ್‌ಎಸ್‌ಎಸ್ ನಾಯಕನ ವಿವಾದ

ಮಹಾರಾಷ್ಟ್ರದ ಘಾಟ್ಕೋಪರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೋಶಿ ನೀಡಿದ ಹೇಳಿಕೆ ಶಿವಸೇನೆ (ಯುಬಿಟಿ) ಕಾರ್ಯಕರ್ತರನ್ನು ಕೆರಳಿಸಿದೆ.;

Update: 2025-03-06 09:16 GMT
ಭಯ್ಯಾಜಿ ಜೋಶಿ.

ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಭಾಷಾ ಸಮರ(Language row) ತಾರಕಕ್ಕೇರಿರುವ ನಡುವೆಯೇ ಭಾಷೆಯ ವಿಚಾರದಲ್ಲಿ ಆರ್​​ಎಸ್​​ಎಸ್​ ನಾಯಕರೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಆರ್‌ಎಸ್‌ಎಸ್ ಹಿರಿಯ ಮುಖಂಡ(RSS leader) ಭಯ್ಯಾಜಿ ಜೋಶಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಮುಂಬೈನಲ್ಲಿ ವಾಸಿಸಲು ಮರಾಠಿ ತಿಳಿದಿರಲೇಬೇಕೆಂಬ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಮಹಾರಾಷ್ಟ್ರದ ಘಾಟ್ಕೋಪರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೋಶಿ ನೀಡಿದ ಹೇಳಿಕೆ ಶಿವಸೇನೆ (ಯುಬಿಟಿ) ಕಾರ್ಯಕರ್ತರನ್ನು ಕೆರಳಿಸಿದೆ.

"ಮುಂಬೈ(Mumbai) ಒಂದೇ ಭಾಷೆಯನ್ನು ಹೊಂದಿಲ್ಲ. ಮುಂಬೈನ ಪ್ರತಿಯೊಂದು ಭಾಗವು ವಿಭಿನ್ನ ಭಾಷೆಯೊಂದಿಗೆ ಸಂವಹನ ನಡೆಸುತ್ತಿದೆ. ಘಾಟ್ಕೋಪರ್ ಪ್ರದೇಶದಲ್ಲಿ ಗುಜರಾತಿ ಇದೆ. ಅಂತೆಯೇ ಬೇರೆ ಬೇರೆ ಕಡೆ ಇನ್ನೂ ಹಲವು ಭಾಷೆಗಳಿವೆ. ಹೀಗಾಗಿ ನೀವು ಮುಂಬೈ(Mumbai)ನಲ್ಲಿ ವಾಸಿಸುತ್ತಿದ್ದರೆ, ನೀವು ಮರಾಠಿ ಕಲಿಯುವ ಅಗತ್ಯವಿಲ್ಲ" ಎಂದು ಜೋಶಿ ಹೇಳಿದ್ದಾರೆ. ಜೋಶಿ ಅವರು ಈ ಭಾಷಣ ಮಾಡುವ ವೇಳೆ ಮಹಾರಾಷ್ಟ್ರ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರೂ ವೇದಿಕೆಯಲ್ಲಿದ್ದರು. ಆದರೆ ಅವರು ಅದಕ್ಕೇನೂ ಆಕ್ಷೇಪ ವ್ಯಕ್ತಪಡಿಸಲಿಲ್ಲ.

ಮಹಾರಾಷ್ಟ್ರದಲ್ಲಿ ಮರಾಠಿ ಕಡ್ಡಾಯ

ಸ್ಥಳೀಯ ಭಾಷೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಮರಾಠಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವ ಬೆನ್ನಲ್ಲೇ ಹಿರಿಯ ಆರ್‌ಎಸ್‌ಎಸ್ ನಾಯಕನಿಂದ ಈ ಹೇಳಿಕೆ ಹೊರಬಿದ್ದಿದೆ. ಶಿವಸೇನೆ ಮತ್ತು ರಾಜ್ ಠಾಕ್ರೆ ಅವರ ಎಂಎನ್ಎಸ್‌ನಂತಹ ರಾಜಕೀಯ ಪಕ್ಷಗಳು ಮರಾಠಿಯನ್ನೇ ಬಳಸಲು ಆಗ್ರಹಿಸುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಅಲ್ಲದೇ, ಮಹಾರಾಷ್ಟ್ರದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಮರಾಠಿ ಮಾತನಾಡಲು ನಿರಾಕರಿಸಿದ ವ್ಯಕ್ತಿಗಳ ಮೇಲೂ ದಾಳಿಗಳು ನಡೆದಂಥ ಘಟನೆಗಳೂ ವರದಿಯಾಗಿವೆ.

ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಜೋಶಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾತನಾಡುವ ಹಕ್ಕು ಕೊಟ್ಟವರು ಯಾರು?

ಥಾಣೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಜಯ್ ರಾವತ್, "ಬಿಜೆಪಿಯ ನೀತಿ ನಿರೂಪಕ ಮತ್ತು ಆರ್‌ಎಸ್ಎಸ್ ನಾಯಕ ಭಯ್ಯಾಜಿ ಜೋಶಿ ಅವರು ನಿನ್ನೆ ಮುಂಬೈಗೆ ಬಂದು ಮರಾಠಿ ರಾಜಧಾನಿಯ (ಮುಂಬೈ) ಭಾಷೆ ಅಲ್ಲ ಎಂದು ಹೇಳಿದ್ದಾರೆ. ಅವರಿಗೆ ಈ ರೀತಿ ಮಾತನಾಡುವ ಹಕ್ಕನ್ನು ಕೊಟ್ಟವರು ಯಾರು? ನೀವು ಕೋಲ್ಕತ್ತಾಗೆ ಹೋಗಿ ಬಂಗಾಳಿ ಅವರ ಭಾಷೆ ಅಲ್ಲ ಎಂದು ಹೇಳುತ್ತೀರಾ? ನೀವು ಲಕ್ನೋಗೆ ಹೋಗಿ ಯೋಗಿ ಆದಿತ್ಯನಾಥ್ ಅವರ ಮುಂದೆ ಹಿಂದಿ ಅವರ ಭಾಷೆ ಅಲ್ಲ ಎಂದು ಹೇಳುತ್ತೀರಾ? ನೀವು ಚೆನ್ನೈಗೆ ಹೋಗಿ ಅವರ ಭಾಷೆ ತಮಿಳು ಅಲ್ಲ ಎಂದು ಹೇಳುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ (ಎನ್ಇಪಿ) 'ತ್ರಿಭಾಷಾ ಸೂತ್ರ' ಕುರಿತು ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಕೇಂದ್ರ ಸರ್ಕಾರದ ನಡುವೆ ವಿವಾದ ಭುಗಿಲೆದ್ದಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ.

ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಈ ಕ್ರಮವನ್ನು ದಕ್ಷಿಣದ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನವೆಂದು ದೀರ್ಘಕಾಲದಿಂದ ಆರೋಪಿಸುತ್ತಾ ಬಂದಿದ್ದರೆ, ಕೇಂದ್ರ ಸರ್ಕಾರವು ಎಲ್ಲ ಪ್ರದೇಶಗಳಲ್ಲೂ ಯುವಕರಿಗೆ ಉದ್ಯೋಗ ಸಿಗಲಿ ಎಂಬ ನಿಟ್ಟಿನಲ್ಲಿ ತ್ರಿಭಾಷಾ ಸೂತ್ರ ಜಾರಿ ಮಾಡಿರುವುದಾಗಿ ವಾದಿಸುತ್ತಿದೆ.

Tags:    

Similar News