ಕಟಕ್‌ನಲ್ಲಿ ಮತ್ತೆ ಹಿಂಸಾಚಾರ: 25 ಮಂದಿಗೆ ಗಾಯ, ಕರ್ಫ್ಯೂ ಜಾರಿ, ಇಂಟರ್ನೆಟ್ ಸ್ಥಗಿತ

ಭಾನುವಾರ ಸಂಜೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಬೈಕ್ ರ‍್ಯಾಲಿಯು ಹೊಸ ಹಿಂಸಾಚಾರಕ್ಕೆ ಕಾರಣವಾಯಿತು. ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಈ ರ‍್ಯಾಲಿ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Update: 2025-10-06 04:14 GMT

ಕಳೆದ ವಾರ ದುರ್ಗಾ ವಿಗ್ರಹ ವಿಸರ್ಜನೆ ಮೆರವಣಿಗೆ ವೇಳೆ ನಡೆದಿದ್ದ ಗಲಭೆಯು ಒಡಿಶಾದ ಕಟಕ್ ನಗರದಲ್ಲಿ ಭಾನುವಾರ (ಅಕ್ಟೋಬರ್ 5) ಮತ್ತೊಮ್ಮೆ ಭುಗಿಲೆದ್ದಿದ್ದು, ಹಿಂಸಾಚಾರದಲ್ಲಿ 25 ಮಂದಿ ಗಾಯಗೊಂಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಕಟಕ್‌ನ 13 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, 36 ಗಂಟೆಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಭಾನುವಾರ ರಾತ್ರಿ 10 ಗಂಟೆಯಿಂದ ನಿಷೇಧಾಜ್ಞೆ ಜಾರಿಯಾಗಿದ್ದು, ದರ್ಗಾ ಬಜಾರ್, ಮಂಗಳಾಬಾಗ್, ಪುರಿಘಾಟ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಎಸ್. ದೇವ್ ದತ್ತ ಸಿಂಗ್ ತಿಳಿಸಿದ್ದಾರೆ. ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಕಟಕ್ ಮಹಾನಗರ ಪಾಲಿಕೆ, ಕಟಕ್ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಬೈಕ್ ರ‍್ಯಾಲಿಯಿಂದ ಹೊಸ ವಿವಾದ

ಭಾನುವಾರ ಸಂಜೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಬೈಕ್ ರ‍್ಯಾಲಿಯು ಹೊಸ ಹಿಂಸಾಚಾರಕ್ಕೆ ಕಾರಣವಾಯಿತು. ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಈ ರ‍್ಯಾಲಿ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ರ್ಯಾಲಿಯಲ್ಲಿ ಭಾಗವಹಿಸಿದವರು ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶಿಸಲು ಯತ್ನಿಸಿದಾಗ, ಭದ್ರತಾ ಸಿಬ್ಬಂದಿ ತಡೆದರು. ಈ ವೇಳೆ, ಪ್ರತಿಭಟನಾಕಾರರು ಕಲ್ಲು ತೂರಾಟ ಆರಂಭಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಬಳಸಬೇಕಾಯಿತು," ಎಂದು ಕಮಿಷನರ್ ಸಿಂಗ್ ಹೇಳಿದ್ದಾರೆ. ಈ ಘಟನೆಯಲ್ಲಿ ಎಂಟು ಪೊಲೀಸ್ ಸಿಬ್ಬಂದಿ ಸೇರಿದಂತೆ 25 ಮಂದಿ ಗಾಯಗೊಂಡಿದ್ದಾರೆ.

ಮೆರವಣಿಗೆಯಲ್ಲಿ ಸಂಗೀತದ್ದೇ ಗಲಾಟೆ

ಶುಕ್ರವಾರ ತಡರಾತ್ರಿ ೧.30 ರಿಂದ 2 ಗಂಟೆಯ ಸುಮಾರಿಗೆ ದರ್ಗಾಬಜಾರ್ ಪ್ರದೇಶದ ಹಾಥಿ ಪೋಖರಿ ಬಳಿ ವಿಗ್ರಹ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದಾಗ, ಜೋರಾದ ಸಂಗೀತಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಾಗ್ವಾದವು ವಿಕೋಪಕ್ಕೆ ತಿರುಗಿ, ಗುಂಪೊಂದು ಮೆರವಣಿಗೆಯ ಮೇಲೆ ಕಲ್ಲು ಮತ್ತು ಬಾಟಲಿಗಳನ್ನು ಎಸೆದಿತ್ತು. ಈ ಘಟನೆಯಲ್ಲಿ ಕಟಕ್ ಡಿಸಿಪಿ ಖಿಲಾರಿ ರಿಷಿಕೇಶ್ ಧನ್ಯಾದಿಯೋ ಸೇರಿದಂತೆ ಹಲವರು ಗಾಯಗೊಂಡಿದ್ದರು.

ಭಾನುವಾರದ ಹಿಂಸಾಚಾರದಲ್ಲಿ, ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಲಾಗಿದ್ದು, ಗೌರಿಶಂಕರ್ ಪಾರ್ಕ್ ಪ್ರದೇಶದ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ದತ್ತಾತ್ರೇಯ ಭೌಸಾಹೇಬ್ ಶಿಂಧೆ ಹೇಳಿದ್ದಾರೆ.

ಶಾಂತಿಗೆ ಮುಖಂಡರ ಮನವಿ

ನಗರದಲ್ಲಿ 10 ತುಕಡಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿ ಭದ್ರತಾ ಪಡೆಯನ್ನು ಕೋರಲಾಗಿದೆ. ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಬಿಜು ಜನತಾ ದಳದ (ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಹಲವು ನಾಯಕರು, ಕೋಮು ಸೌಹಾರ್ದತೆ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ. "ಕಟಕ್ ಸಹೋದರತ್ವಕ್ಕೆ ಹೆಸರುವಾಸಿಯಾದ ಸಾವಿರ ವರ್ಷಗಳ ಇತಿಹಾಸವಿರುವ ನಗರ. ಕೆಲವು ಕಿಡಿಗೇಡಿಗಳಿಂದ ನಗರದ ಶಾಂತಿ ಕದಡಿದೆ," ಎಂದು ಮುಖ್ಯಮಂತ್ರಿ ಮಾಝಿ ಹೇಳಿದ್ದಾರೆ.

ಇದೇ ವೇಳೆ, ದುರ್ಗಾ ವಿಗ್ರಹ ವಿಸರ್ಜನೆ ವೇಳೆ ನಡೆದ ಗಲಭೆಯನ್ನು ವಿರೋಧಿಸಿ ವಿಎಚ್‌ಪಿ ಸೋಮವಾರ 12 ಗಂಟೆಗಳ ಕಾಲ ಕಟಕ್ ಬಂದ್‌ಗೆ ಕರೆ ನೀಡಿದೆ.

Tags:    

Similar News