ಹೊಸ ಕ್ರಿಮಿನಲ್ ಕಾನೂನು: ಸಮಸ್ಯೆ, ಸವಾಲು

ಇದೇ ಜುಲೈ ೧ (July 1 ) ರಿಂದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಹೆಸರಿನ ಮೂರು ಪ್ರಮುಖ ಕ್ರಿಮಿನಲ್ ಕಾನೂನುಗಳು ದೇಶದಲ್ಲಿ ಜಾರಿಗೆ ಬಂದಿವೆ. ಈ ಹೊಸ ಕಾನೂನುಗಳ ಜಾರಿಯ ತೊಡಕುಗಳ ಕುರಿತು ನಿವೃತ್ತಿ ಡಿಜಿಪಿ ಡಾ ಡಿವಿ ಗುರುಪ್ರಸಾದ್‌ ಅವರು ಬರೆದಿದ್ದಾರೆ. ʼದ ಫೆಡರಲ್‌ ಕರ್ನಾಟಕʼಕ್ಕೆ ಅವರು ಇನ್ನು ಮುಂದೆ ಆಗಾಗ ಬರೆಯಲಿದ್ದಾರೆ.

Update: 2024-07-06 02:00 GMT

ಇದೇ ಜುಲೈ ೧ (July 1 )  ರಿಂದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಹೆಸರಿನ ಮೂರು ಪ್ರಮುಖ ಕ್ರಿಮಿನಲ್ ಕಾನೂನುಗಳು ದೇಶದಲ್ಲಿ ಜಾರಿಗೆ ಬಂದಿವೆ. ಇವುಗಳು ಅನುಕ್ರಮವಾಗಿ ಭಾರತೀಯ ದಂಡ ಸಂಹಿತೆ (ಐ.ಪಿ.ಸಿ), ದಂಡ ಪ್ರಕ್ರಿಯಾ ಸಂಹಿತೆ (ಕ್ರಿಮಿನಲ್ ಪ್ರೊಸೀಜರ್ ಕೋಡ್) ಮತ್ತು ಭಾರತ ಸಾಕ್ಷ್ಯ ಅಧಿನಿಯಮ (ಇಂಡಿಯನ್ ಎವಿಡೆನ್ಸ್ ಆಕ್ಟ್) ಇವುಗಳನ್ನು ಬದಲಾಯಿಸಿವೆ.

ಹೊಸ ಕಾನೂನುಗಳು ಈಗಾಗಲೇ ದೇಶದಲ್ಲಿ ಜಾರಿಗೆ ಬಂದಿದ್ದರೂ ೨೦೨೪ರ ಜೂನ್ ೩೦(June 30, 2024) ರವರೆಗೆ ದಾಖಲಾಗಿದ್ದ ಎಲ್ಲ ಪ್ರಕರಣಗಳ ತನಿಖೆ ಮತ್ತು ವಿಚಾರಣೆಗಳು ಹಳೆಯ ಕಾನೂನುಗಳ ಅನ್ವಯವೇ ಸಾಗುತ್ತವೆ. ಹೀಗಾಗಿ ಎಲ್ಲ ಹಳೆಯ ಪ್ರಕರಣಗಳೂ ಮುಕ್ತಾಯಗೊಳ್ಳುವವರೆಗೆ ಹಳೆಯ ಮತ್ತು ಹೊಸ ಕಾನೂನುಗಳೆರಡೂ ಚಾಲ್ತಿಯಲ್ಲಿರುತ್ತವೆ. ಇದೇ ಕಾರಣದಿಂದಲೇ ಕ್ರಿಮಿನಲ್ ಕಾನೂನುಗಳ ನಿರ್ವಹಣೆಯಲ್ಲಿ ಹಲವಾರು ತೊಂದರೆಗಳು ಉದ್ಭವಿಸುತ್ತವೆ. ಉದಾಹರಣೆಗೆ ೩೦.೬.೨೦೨೪(30.6.2024) ರ ಸಂಜೆ ದಾಖಲಾಗಿರುವ ರಾತ್ರಿ ಮನೆಗೆ ನುಗ್ಗಿ ಕಳ್ಳತನವಾದ ಪ್ರಕರಣವು ಹಳೆಯ ದಂಡ ಪ್ರಕ್ರಿಯಾ ಸಂಹಿತೆಯನ್ವಯ ತನಿಖೆಗೊಂಡು ನ್ಯಾಯಾಲಯದ ವಿಚಾರಣೆಗೆ ಬರುತ್ತದೆ. ೧.೭.೨೪ (1.7.24) ರಂದು ದಾಖಲಾದ ಅದೇ ಮಾದರಿಯ ಪ್ರಕರಣವು ಹೊಸ ಕಾನೂನಿನ್ವಯ ತನಿಖೆ ಮಾಡಲ್ಪಡುತ್ತದೆ. ಹೀಗಾಗಿ ಸ್ವಲ್ಪ ಗೊಂದಲವು ಮೂಡುತ್ತದೆ.

ಹಿಂದಿನ ಮೂರು ಕಾನೂನುಗಳಲ್ಲಿದ್ದ ಒಟ್ಟಾರೆ ಸೆಕ್ಷನ್ಗಳ ಸಂಖ್ಯೆ ೧೧೬೨ (1162). ಹೊಸ ಕಾನೂನುಗಳಲ್ಲಿರುವ ಒಟ್ಟಾರೆ ಸೆಕ್ಷನ್ಗಳ ಸಂಖ್ಯೆ ೧೦೫೯ (1059). ಮುಂದಿನ ಸುಮಾರು ಐದಾರು ವರ್ಷಗಳವರೆವಿಗೂ ಪೊಲೀಸರಿಂದ ಹಿಡಿದು, ನ್ಯಾಯವಾದಿಗಳು ಮತ್ತು ನ್ಯಾಯಾಲಯಗಳು ಒಟ್ಟು ೨೦೨೧ (2021) ಸೆಕ್ಷನ್ಗಳ ಪ್ರಯೋಗವನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಈ ಕಾರಣದಿಂದ ಸಮಸ್ಯೆಗಳು ಉಂಟಾಗಿ ನ್ಯಾಯದಾನ ಪ್ರಕ್ರಿಯೆ, ಅದರಲ್ಲಿಯೂ ಹಿಂದಿನ ಕಾನೂನುಗಳ ಅನ್ವಯ ದಾಖಲಾಗಿರುವ ಪ್ರಕರಣಗಳಲ್ಲಿ ವಿಳಂಬವಾಗುತ್ತದೆ.

ಕೆಲವು ಹೊಸ ಕಾನೂನುಗಳು ಮತ್ತು ಹಳೆಯ ಕಾನೂನುಗಳು ಕೇವಲ ಸೆಕ್ಷನ್ ಸಂಖ್ಯೆಯ ಹೊರತಾಗಿ ಒಂದೇ ವ್ಯಾಖ್ಯಾನವನ್ನು ಹೊಂದಿರುವುದರಿಂದ ಗೊಂದಲವು ಹೆಚ್ಚಾಗುತ್ತದೆ. ಉದಾಹರಣೆಗೆ ಕೊಲೆಗೆ ಶಿಕ್ಷೆಯಾಗುವ ಬಿ.ಎನ್.ಎಸ್ ನ ಸೆಕ್ಷನ್ ೧೦೧ (101). ಐ.ಪಿ.ಸಿ ಯ ಸೆ.೩೦೨ ( 302) ಗೂ ನಂಬರ್ ಹೊರತಾಗಿ ಬೇರೆ ವ್ಯತ್ಯಾಸವಿಲ್ಲ.

ಭಾರತೀಯ ನ್ಯಾಯ ಸಂಹಿತೆ (ಬಿ.ಎನ್.ಎಸ್) ನಲ್ಲಿ ರಾಷ್ಟಧ್ವಜ, ರಾಷ್ಟ ಗೀತೆ ಮತ್ತು ರಾಷ್ಟಪಿತನಿಗೆ ಅವಮಾನ ಮಾಡುವಂತಹ ಕೃತ್ಯಗಳ ಬಗ್ಗೆ ಉಲ್ಲೇಖವಿಲ್ಲದಿರುವುದು ಸರಿಯಲ್ಲವೆಂದು ಕೆಲವು ರಾಜ್ಯಗಳು ಟೀಕಿಸಿವೆ.

ಬಿ.ಎನ್.ಎಸ್‌ನಲ್ಲಿ ಮೊಟ್ಟಮೊದಲ ಬಾರಿಗೆ ಸಮುದಾಯ ಸೇವೆ ಎನ್ನುವ ಶಿಕ್ಷೆಯನ್ನು ನಮೂದಿಸಲಾಗಿದೆ. ಇದನ್ನು ಸಮಾಜದ ಒಳಿತಿಗಾಗಿ ನಿಃಶುಲ್ಕವಾಗಿ ಮಾಡುವ ಸೇವೆ ಎಂದು ನಮೂದಿಸಿದ್ದು ಯಾವ ರೀತಿಯ ಸೇವೆ, ಎಷ್ಟು ಅವಧಿಗೆ ಅದನ್ನು ಮಾಡಬೇಕು ಮುಂತಾದವನ್ನು ನ್ಯಾಯಾಲಯವೇ ನಿರ್ಧರಿಸಬೇಕೆಂದು ಸೂಚಿಸಲಾಗಿದೆ. ಈ ಶಿಕ್ಷೆಯನ್ನು ೫೦೦೦ರೂ (Rs 5000) ಗಿಂತ ಕಡಿಮೆ ಮೌಲ್ಯದ ಕಳ್ಳತನ, ಆತ್ಮಹತ್ಯೆಗೆ ಪ್ರಯತ್ನವೂ ಸೇರಿದಂತೆ ಕೇವಲ ಆರು ಸಣ್ಣ ಅಪರಾಧಗಳಿಗೆ ಮಾತ್ರ ನೀಡಲಾಗುತ್ತದೆ. ಈ ಶಿಕ್ಷೆಯು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಹೊಸತಾದರೂ ಹಲವಾರು ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಆದರೆ ಸಮುದಾಯ ಸೇವೆ ಎಂದರೇನು? ಹಾಗೆಂದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ನೆರವಾಗಬೇಕೇ? ಬಡ ವಿದ್ಯಾರ್ಥಿಗಳಿಗೆ ಶುಲ್ಕರಹಿತವಾಗಿ ಟ್ಯೂಷನ್ ಹೇಳಿಕೊಡಬೇಕೇ? ಸ್ವಚ್ಛತಾ ಕಾರ್ಯಗಳಲ್ಲಿ ನೆರವಾಗಬೇಕೇ? ಇಂತಹ ಸೇವೆಗಳನ್ನು ಮಾಡುವಾಗ ಮೇಲ್ವಿಚಾರಣೆಯನ್ನು ಯಾರು ಮಾಡಬೇಕು? ಮುಂತಾದವುಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ನ್ಯಾಯಾಧೀಶರಲ್ಲಿ ಗೊಂದಲ ಮೂಡುತ್ತದೆ.

ಬಿ.ಎನ್.ಎಸ್‌ನ ಕಲಂ ೬೯ (69)ರನ್ವಯ ಒಬ್ಬ ವ್ಯಕ್ತಿಯು ಮದುವೆ ಮಾಡಿಕೊಳ್ಳುವೆನೆಂದು ಖೊಟ್ಟಿ ಆಶ್ವಾಸನೆಯನ್ನು ಕೊಟ್ಟು ಒಬ್ಬ ಸ್ತ್ರೀಯ ಜತೆಗೆ ಲೈಂಗಿಕ ಸಂಭೋಗವನ್ನು ಮಾಡಿದರೆ ಅದು ರೇಪ್ ಅಪರಾಧವಾಗುತ್ತದೆ. ಈ ಕಲಂನ ಅಂಶಗಳು ತೀವ್ರ ರೀತಿಯಲ್ಲಿ ದುರುಪಯೋಗಗೊಳ್ಳುವ ಸಾಧ್ಯತೆಗಳಿವೆ. ಇಬ್ಬರ ನಡುವೆ ಒಪ್ಪಂದದ ಮೇರೆಗೆ ಲೈಂಗಿಕ ಸಂಬಂಧವು ಉಂಟಾಗಿರುವಾಗ ಅವರಿಬ್ಬರ ಮಧ್ಯೆ ಮನಸ್ತಾಪ ಬಂದಾಗ ಈ ಕಲಂ ಅನ್ನು ಉಪಯೋಗಿಸಿ ಸುಳ್ಳು ದೂರನ್ನು ನೀಡಿ ಒಬ್ಬ ವ್ಯಕ್ತಿಯನ್ನು ತೊಂದರೆಗೆ ಸಿಕ್ಕಿಹಾಕಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಐ.ಪಿ.ಸಿಯಲ್ಲಿದ್ದ  ದೇಶದ್ರೋಹದ ಕಲಂ ಹಿಂಪಡೆಯಲಾಗಿದ್ದರೂ ಅದರ ಬದಲಾಗಿ ಬಂದಿರುವ ಕಲಂ ೧೫೨ (152 )ರ ಅನ್ವಯ ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ಮಾಡುವ ಯಾವುದೇ ಟೀಕೆಯನ್ನೂ ಪೊಲೀಸರು ದೇಶವಿರೋಧಿಯೆಂದು ಪರಿಗಣಿಸಿ ಸಾರ್ವಜನಿಕರಿಗೆ ತೊಂದರೆಕೊಡಬಹುದು ಎಂದು ಹಲವು ಕಾನೂನು ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ಕಲಂನ ವಿವರಣೆಯಲ್ಲಿ ಇನ್ನಷ್ಟು ಸ್ಪಷ್ಟತೆಯಿರಬೇಕು ಎಂದಿದ್ದಾರೆ.

ಬಿ.ಎನ್.ಎಸ್ ಸೆಕ್ಷನ್ ೧೧೩ (113)ರಲ್ಲಿ ಆತಂಕವಾದಿ ಕೃತ್ಯಗಳು ಮತ್ತು ಅವುಗಳ ಶಿಕ್ಷೆಗಳ ಬಗ್ಗೆ ಉಲ್ಲೇಖವಿದೆ. ಆದರೆ ಇದೇ ಕೃತ್ಯಗಳನ್ನು ಆತಂಕವಾದಿ ಚಟುವಟಿಕೆಗಳ (ತಡೆ) ಕಾನೂನು ೧೯೬೭ (1967)ರಲ್ಲಿ ಶಿಕ್ಷಾರ್ಹವನ್ನಾಗಿ ಮಾಡಲಾಗಿದ್ದು ಎರಡು ಕಾನೂನುಗಳಲ್ಲಿ ಯಾವುದನ್ನು ಬಳಸಬೇಕೆಂಬ ಜಿಜ್ಞಾಸೆಯು ಪೊಲೀಸರಲ್ಲಿ ಮೂಡುತ್ತದೆ.

ದಂಡ ಪ್ರಕ್ರಿಯಾ ಸಂಹಿತೆ (ಕ್ರಿಮಿನಲ್ ಪ್ರೊಸೀಜರ್ ಕೋಡ್)ಗೆ ನಾಗರಿಕ ಸುರಕ್ಷಾ ಸಂಹಿತೆ ಎಂದು ಹೆಸರಿಟ್ಟಿರುವುದು ಸೂಕ್ತವಾಗಿಲ್ಲ ಎನ್ನುವ ಟೀಕೆ ಬಂದಿದೆ.

ಮೂರೂ ಕಾನೂನುಗಳಿಗೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ರಾಜ್ಯಗಳು ತಿದ್ದುಪಡಿಗಳನ್ನು ತಂದಿದ್ದವು. ಅವುಗಳು ಹೊಸ ಕಾನೂನುಗಳಲ್ಲಿ ಬಿಂಬಿತವಾಗಿಲ್ಲ. ಉದಾಹರಣೆಗೆ ಸಿ.ಆರ್.ಪಿ.ಸಿ ಕಲಂ ೩೫೭ (357) ರಲ್ಲಿ ಸಂತ್ರಸ್ತರಿಗೆ ನಷ್ಟ ಪರಿಹಾರ ನೀಡುವ ಆದೇಶದ ಉಲ್ಲೇಖವಿದೆ. ಈ ಕಲಂಗೆ ವಿವಿಧ ರಾಜ್ಯಗಳು ತಿದ್ದುಪಡಿಗಳನ್ನು ತಂದಿದ್ದವು. ಅವುಗಳು ಹೊಸ ಕಾನೂನಿನಲ್ಲಿ ನಮೂದಿತವಾಗದೇ ಹೋದ್ದರಿಂದ ಎಲ್ಲ ರಾಜ್ಯಗಳೂ ಮತ್ತೊಮ್ಮೆ ಅವುಗಳ ತಿದ್ದುಪಡಿಯನ್ನು ಮಾಡಬೇಕಾಗುತ್ತದೆ.

ನಾಗರಿಕ ಸುರಕ್ಷಾ ಸಂಹಿತೆಯಲ್ಲಿ ಪೊಲೀಸ್ ಠಾಣೆಗೆ ಖುದ್ದಾಗಿ ಹೋಗದೆಯೇ ದೂರನ್ನು ಎಲೆಕ್ಟ್ರಾನಿಕ್ ಸಂವಹನದ ಮೂಲಕ ಕಳುಹಿಸಬಹುದು ಎಂಬ ಹೊಸ ಅವಕಾಶವಿದೆ. ಆದರೆ ಇಂತಹ ದೂರುದಾರ ತಾನು ದೂರು ನೀಡಿದ ಮೂರು ದಿನಗಳೊಳಗೆ ಠಾಣೆಗೆ ಹಾಜರಾಗಿ ತನ್ನ ದೂರಿಗೆ ಸಹಿಯನ್ನು ಮಾಡತಕ್ಕದ್ದು ಎಂದಿದೆ. ಇದರಲ್ಲಿ ಹಲವಾರು ಗೊಂದಲಗಳೇಳುತ್ತದೆ. ದೂರುದಾರ ಠಾಣೆಗೆ ಬರುವವರೆಗೆ ಪೊಲೀಸರು ಕಾಯಬೇಕೇ? ಒಂದು ವೇಳೆ ಕಾದರೆ ಆ ವಿಳಂಬದ ಕಾರಣ ಆರೋಪಿಗೆ ಲಾಭವುಂಟಾಗುತ್ತದೆಯೇ? ಒಂದು ವೇಳೆ ಕೂಡಲೇ ಅಪರಾಧ ನಡೆದ ಸ್ಥಳಕ್ಕೆ ಧಾವಿಸಿದರೆ ಸುಳ್ಳು ದೂರಾಗಿದ್ದರೆ ಪೊಲೀಸರ ಸಮಯ ವ್ಯರ್ಥವಾಗುವುದಿಲ್ಲವೇ? ಎನ್ನುವ ಪ್ರಶ್ನೆಗಳಿಗೆ ಉತ್ತರವಿಲ್ಲ.

ನಾಗರಿಕ ಸುರಕ್ಷಾ ಸಂಹಿತೆಯ ಅನ್ವಯ ಮೂರು ವರ್ಷಕ್ಕಿಂತ ಹೆಚ್ಚಾಗಿ ಏಳು ವರ್ಷಕ್ಕಿಂತ ಕಡಿಮೆ ಅವಧಿಗೆ ಶಿಕ್ಷಾರ್ಹವಾದ ಯಾವುದೇ ಸಂಜ್ಞೇಯ ಅಪರಾಧದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ಬಂದಾಗ ಠಾಣಾಧಿಕಾರಿಯು ಪೊಲೀಸ್ ಉಪಅಧೀಕ್ಷಕರ ದರ್ಜೆಗಿಂತ ಕಡಿಮೆಯಿರದ ಅಧಿಕಾರಿಯ ಪೂರ್ವಾನುಮತಿಯ ಮೇರೆಗೆ ವರದಿಯಾದ ಅಪರಾಧದ ಸ್ವರೂಪ ಹಾಗೂ ತೀವ್ರತೆಯನ್ನು ಪರಿಗಣಿಸಿ ಆ ಅಪರಾಧವನ್ನು ಕೂಡಲೇ ದಾಖಲಿಸಲು ಹೋಗದೇ ಅಪರಾಧ ನಡೆದ ಸ್ಥಳ ಮತ್ತು ಆ ವಿಷಯದ ಬಗ್ಗೆ ೧೪ (14) ದಿನಗಳೊಳಗೆ ಆರಂಭಿಕ ವಿಚಾರಣೆಯನ್ನು ನಡೆಸಿ ಆನಂತರವೇ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿ ತನಿಖೆಯನ್ನು ಆರಂಭಿಸಬಹುದು. ಈ ಸೆಕ್ಷನ್‌ನಿಂದ ತೊಂದರೆಗಳಾಗುವುದೇ ಹೆಚ್ಚು ಎನ್ನುವುದು ಕೆಲವರ ಅಭಿಪ್ರಾಯ. ಠಾಣೆಗೆ ದೂರೊಂದು ಬಂದಾಗ ಪೊಲೀಸರು ಈ ಕಾನೂನನ್ನು ಬಳಸಿಕೊಂಡು ಬೇಕೆಂತಲೇ ದೂರು ದಾಖಲಿಸದೇ ಇರಬಹುದು ಎನ್ನುವ ಭಯವಿದೆ. ಇದರಿಂದ ಲಂಚಗುಳಿತನ ಹೆಚ್ಚಾಗುತ್ತದೆ ಎನ್ನುವ ಆತಂಕವೂ ಇದೆ.

ಪೊಲೀಸರು ಬಂಧಿಸಿದ ವ್ಯಕ್ತಿಯ ಹಾಜರಾತಿಯು ತನಿಖೆಗೆ ಬೇಕಾಗಿದ್ದಲ್ಲಿ ಅಂತಹವನನ್ನು ಪೊಲೀಸ್ ವಶಕ್ಕೆ ಬೇರೆ ಬೇರೆ ಹಂತಗಳಲ್ಲಿ ಮ್ಯಾಜಿಸ್ಟ್ರೇಟರು ಕೊಡಬಹುದೆಂಬ ಹೊಸ ನಿಯಮವನ್ನು ಮಾಡಲಾಗಿದೆ. ಈ ಅವಕಾಶದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಆತಂಕವು ವ್ಯಕ್ತವಾಗಿದ್ದು ಒಬ್ಬ ಆರೋಪಿಯನ್ನು ೬೦ (60) ದಿನಗಳ ವರೆಗೂ ಪೊಲೀಸ್ ಬಂಧನದಲ್ಲಿಡಬಹುದೆಂಬ ಶಂಕೆ ಮೂಡಿದೆ. ಆದರೆ ಈ ಬಗ್ಗೆ ಸರ್ಕಾರವು ಸ್ಪಷ್ಟನೆಯನ್ನು ನೀಡಿ ತನಿಖೆಯ ಹಂತದಲ್ಲಿ ಒಬ್ಬ ಆರೋಪಿಯನ್ನು ಬೇರೆ ಬೇರೆ ಅವಧಿಗಳಲ್ಲಿ ಪೊಲೀಸ್ ವಶಕ್ಕೆ ಕೊಡಬಹುದಾಗಿದ್ದು ಪೊಲೀಸ್ ವಶದ ಒಟ್ಟಾರೆ ಅವಧಿಯು ೧೫(15) ದಿನಗಳಿಗೆ ಮೀರತಕ್ಕದ್ದಲ್ಲ ಎಂದು ತಿಳಿಸಿದೆ. ಆದರೆ ಈ ನಿಯಮದಿಂದ ಒಬ್ಬ ಆರೋಪಿಗೆ ಜಾಮೀನು ಸಿಗುವುದು ಕಠಿಣವಾಗಬಹುದಾಗಿದೆ.

ಕ್ರಿಮಿನಲ್ ಪ್ರಕರಣಗಳ ಆರಂಭದ ಹಂತದಿಂದ ಅಂತಿಮ ಹಂತದವರೆವಿಗೂ ತಂತ್ರಜ್ಞಾನವನ್ನು ಆಳವಡಿಸಿಕೊಳ್ಳಲು ತಿಳಿಸಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆ. ತನಿಖೆಯ ಎಲ್ಲ ಹಂತಗಳಲ್ಲಿಯೂ ವೀಡಿಯೋಗ್ರಫಿ ಮಾಡಬೇಕೆಂದು ಸೂಚಿಸಲಾಗಿದೆ. ಪೊಲೀಸ್ ಠಾಣೆಗಳಲ್ಲಿ ವೀಡಿಯೋ ಕ್ಯಾಮರಾಗಳು ಇರದಿದ್ದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಮಾಡಬೇಕು ಎಂದು ತಿಳಿಸಲಾಗಿದೆ. ಪ್ರತಿಯೊಂದು ಪ್ರಕರಣದಲ್ಲಿಯೂ ಸಂಗ್ರಹಿಸಿದ ಎಲೆಕ್ಟ್ರಾನಿಕ್‌ ಡೇಟಾ (ಮಾಹಿತಿ) ಯನ್ನು ಬೇರೆಯಾಗಿಯೇ ಸಂಗ್ರಹಿಸಬೇಕಾಗುತ್ತದೆ. ಮುಂದೆ ಇದರ ಸುರಕ್ಷತೆಯ ಬಗ್ಗೆ ತೊದರೆಗಳು ಉದ್ಭವಿಸುತ್ತವೆ. ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಹಲವಾರು ಪ್ರಕರಣಗಳ ಎಲೆಕ್ಟ್ರಾನಿಕ್ ಡೇಟಾ ಸಂಗ್ರಹಣೆಗೆ ಹೆಚ್ಚು ಹೆಚ್ಚು ಹಾರ್ಡ್ ಡಿಸ್ಕ್‌ಗಳ ಬಳಕೆ ಅನಿವಾರ್ಯವಾಗುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆ ಮುಗಿಯುವವರೆಗೆ ಈ ಡೇಟಾದ ರಕ್ಷಣೆಯನ್ನು ಸರಿಯಾಗಿ ಮಾಡದಿದ್ದಲ್ಲಿ ಪ್ರಕರಣವು ಬಿದ್ದುಹೋಗುವ ಸಂಭವವಿರುತ್ತದೆ.

ತನಿಖೆಯ ಹಂತದಲ್ಲಿ ವಿಧಿವಿಜ್ಞಾನದ ಬಳಕೆಗೆ ಹೊಸ ಕಾನೂನುಗಳಲ್ಲಿ ಒತ್ತನ್ನು ನೀಡಲಾಗಿದೆ. ಪ್ರತಿಯೊಂದು ಗುರುತರ ಪ್ರಕರಣದಲ್ಲಿಯೂ ಅಪರಾಧ ನಡೆದ ಸ್ಥಳಕ್ಕೆ ವಿಧಿ ವಿಜ್ಞಾನಿಗಳು ಹೋಗಬೇಕಾದ್ದು ಅನಿವಾರ್ಯವಾಗಿದೆ. ಆದರೆ ಸದ್ಯಕ್ಕೆ ದೇಶದಲ್ಲಿ ವಿಧಿ ವಿಜ್ಞಾನಿಗಳ ಕೊರತೆಯಿರುವುದರಿಂದ ಸಮಸ್ಯೆಗಳು ಉದ್ಭವವಾಗುತ್ತವೆ.

ಹೊಸ ಕಾನೂನುಗಳ ಬಗ್ಗೆ ವಿವಿಧ ಹಂತಗಳ ಪೊಲೀಸ್ ಅಧಿಕಾರಿಗಳಿಗೆ ತರಬೇತಿಯನ್ನು ಕೊಡಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಅಧಿಕಾರಿಗಳು ಈ ತರಬೇತಿಯು ಸಾಲದು ಎನ್ನುವ ಅಭಿಪ್ರಾಯವನ್ನು ವೈಯುಕ್ತಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ. ಈ ಕಾರಣದಿಂದ ಎಫ್.ಐ.ಆರ್ ದಾಖಲಾತಿಯ ಹಂತದಿಂದ ನ್ಯಾಯದಾನ ಪ್ರಕ್ರಿಯೆಯಲ್ಲಿ ವಿಳಂಬವಾಗಲಿದೆ, ಇಲ್ಲವೇ ಸೂಕ್ತ ರೀತಿಯಲ್ಲಿ ಎಫ್.ಐ.ಆರ್ ಗಳು ದಾಖಲಾಗದಿರುವ ಭಯವಿದೆ.

ಅಪರಾಧಗಳ ಮೂಲಕ ಒಬ್ಬ ವ್ಯಕ್ತಿಯು ಗಳಿಸಿಕೊಂಡಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು, ಇಲ್ಲವೇ ಜಪ್ತಿ ಮಾಡಲು ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ ೧೦೭ (107) ರಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಈ ಅಧಿಕಾರವು ದುರುಪಯೋಗವಾಗುವ ಸಾಧ್ಯತೆಗಳಿವೆ.

ಮೇಲೆ ತಿಳಿಸಿರುವ ಗೊಂದಲಗಳನ್ನು ಶೀಘ್ರದಲ್ಲಿ ನಿವಾರಿಸದೇ ಹೋದಲ್ಲಿ ದೇಶದ ಕ್ರಿಮಿನಲ್ ನ್ಯಾಯ ವಿತರಣೆಯ ವ್ಯವಸ್ಥೆಯಲ್ಲಿ ನೂರಾರು ತೊಂದರೆಗಳು ಉಂಟಾಗಿ ತ್ವರಿತ ನ್ಯಾಯವು ಸಿಗುವುದು ಕಷ್ಟವಾಗುತ್ತದೆ.

Tags:    

Similar News