ಭಾರತಕ್ಕೆ ಹೊಸ ಅವಕಾಶದ ಹಾದಿ ತೆರೆದರೆ ಟ್ರಂಪ್? ಎಚ್ಚರಿಕೆಯಿಂದ ಅಪ್ಪಿಕೊಳ್ಳಿ
ಅಮೆರಿಕವೇನಾದರೂ ಭಾರತದ ಕಾರ್ಯತಂತ್ರದ ಗುರಿಗಳನ್ನು ಸಾಧಿಸುವ ಸಾರ್ವಭೌಮ ಹಕ್ಕಿಗೆ ಅಡ್ಡಗಾಲು ಹಾಕದೇ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿದ್ದರೆ, ಅದು ನಿಜಕ್ಕೂ ಸ್ವಾಗತಾರ್ಹ ಹೆಜ್ಜೆ.;
ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಹೇರಿದ್ದಕ್ಕಾಗಿ ಭಾರತ ಮತ್ತು ಚೀನಾದ ಮೇಲೆ ಶೇ.100ರಷ್ಟು ಸುಂಕ ವಿಧಿಸಬೇಕು ಎಂದು ಐರೋಪ್ಯ ಒಕ್ಕೂಟಕ್ಕೆ ಹಕ್ಕೊತ್ತಾಯ ಮಾಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆ ನಡೆಸುವ ಇರಾದೆ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷರು, ತಮ್ಮದೇ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್‌ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: "ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಅಡೆತಡೆಗಳನ್ನು ನಿವಾರಿಸಲು ಮಾತುಕತೆಗಳನ್ನು ಮುಂದುವರಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಮುಂದಿನ ವಾರಗಳಲ್ಲಿ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಲು ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ. ನಮ್ಮ ಎರಡೂ ಮಹಾನ್ ದೇಶಗಳು ಯಶಸ್ವಿ ತೀರ್ಮಾನಕ್ಕೆ ಬರುವುದರಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಎಂದು ನಾನು ಭಾವಿಸುತ್ತೇನೆ!"
ಇದಕ್ಕೆ ಕೆಲ ಸಮಯದ ಬಳಿಕ ಪ್ರಧಾನ ಮಂತ್ರಿ ಮೋದಿ ಅವರು ತಮ್ಮ ಪ್ರತಿಕ್ರಿಯೆಯನ್ನು ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿ, “ಭಾರತ ಮತ್ತು ಅಮೆರಿಕ ಯಾವತ್ತೂ ಆಪ್ತ ಸ್ನೇಹಿತರು ಮತ್ತು ಸಹಜ ಪಾಲುದಾರರು. ನಮ್ಮ ನಡುವಿನ ವ್ಯಾಪಾರ ಮಾತುಕತೆಗಳು ಭಾರತ-ಅಮೆರಿಕ ಪಾಲುದಾರಿಕೆಯ ಅಪಾರ ಸಾಮರ್ಥ್ಯವನ್ನು ಅನಾವರಣಗೊಳಿಸಲು ದಾರಿ ಮಾಡಿಕೊಡುತ್ತವೆ ಎಂಬ ವಿಶ್ವಾಸ ನನಗಿದೆ. ನಮ್ಮ ತಂಡಗಳು ಈ ಚರ್ಚೆಗಳನ್ನು ಆದಷ್ಟು ಬೇಗ ಮುಕ್ತಾಯಗೊಳಿಸಲು ಕಾರ್ಯನಿರ್ವಹಿಸುತ್ತಿವೆ. ನಾನು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲೂ ಎದುರು ನೋಡುತ್ತಿದ್ದೇನೆ. ನಮ್ಮ ಎರಡೂ ದೇಶಗಳ ಜನರಿಗೆ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಭದ್ರಪಡಿಸಲು ನಾವು ಒಟ್ಟಾಗಿ ಶ್ರಮಿಸುತ್ತೇವೆ,” ಎಂದು ಹೇಳಿದರು.
ಮುನೀರ್ ಜೊತೆ ಕಾಫಿಗೂ ಕರೆದಾರು!
ನಮ್ಮ ಎರಡೂ ದೇಶಗಳ ಜನರ “ದುರಾದೃಷ್ಟ”ವನ್ನು ಹೊರತುಪಡಿಸಿ, ಮೋದಿ ಅವರು ನೀಡಿದ ಪ್ರತಿಕ್ರಿಯೆ ಅತಿಯಾಗಿ ಶ್ಲಾಘಿಸಿದಂತಿದೆ. ಟ್ರಂಪ್ ಅವರ ಸ್ವಭಾವ ಕೊನೆಯ ಕ್ಷಣದಲ್ಲಿಯೂ ಬದಲಾಗಿ ಬಿಡಬಹುದು ಎಂಬುದು ಸಮಸ್ಯೆಯಲ್ಲ. ಅವರು ಇತ್ತೀಚೆಗೆ ಎರಡು ಬಾರಿ ಅಮೆರಿಕದ ಸರ್ಕಾರಿ ಅತಿಥಿಯಾಗಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗೆ ಮೋದಿ ಅವರನ್ನು ಶ್ವೇತಭವನದಲ್ಲಿ ಒಂದು ಕಪ್ ಕಾಫಿಗೆ ಬರುವಂತೆ ಆಹ್ವಾನಿಸಲು ನಿರ್ಧರಿಸಿದರೂ ಅಚ್ಚರಿಯಿಲ್ಲ.
ರಿಪಬ್ಲಿಕನ್ ಸೆನೆಟರ್ಗಳು ಭಾರತಕ್ಕೆ ಹೊರಗುತ್ತಿಗೆ ನೀಡಿದ ಕೆಲಸದ ವೆಚ್ಚದ ಮೇಲೆ ಶೇಕಡಾ 25ರಷ್ಟು ತೆರಿಗೆ ವಿಧಿಸುವ ಕಾನೂನಿನ ಪ್ರಸ್ತಾಪವನ್ನು ಮುಂದಿಡುತ್ತಿದ್ದಾರೆ. H10 ವೀಸಾಗಳನ್ನು ರದ್ದುಗೊಳಿಸಬೇಕು ಎಂಬುದು MAGA (Make America Great Again) ಬೆಂಬಲಿಗರ ಬಯಕೆ. ಇದರ ಅಡಿಯಲ್ಲಿ ಅನೇಕ ಭಾರತೀಯರು ಅಮೆರಿಕದಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ. ಟ್ರಂಪ್ ಆಡಳಿತಕ್ಕೆ ಯಾವತ್ತೂ ಎರಡು ನಾಲಿಗೆ. ಆ ಎರಡು ನಾಲಿಗೆಗಳಲ್ಲಿ ಒಂದನ್ನು ಪೀಟರ್ ನವರೊ ಎಂದು ಕರೆಯಲಾಗುತ್ತದೆ.
ಟ್ರಂಪ್ ಅವರ ವಾಣಿಜ್ಯ ಸಲಹೆಗಾರ ನವರೊ ಅವರು ಭಾರತದ ವಿರುದ್ಧ ಯಾವತ್ತೂ ರಚ್ಚೆ ಹಿಡಿದು ಜಗಳಕ್ಕೆ ಬರುತ್ತಾರೆ. ಅವರು ಉಕ್ರೇನ್ ಸಂಘರ್ಷವನ್ನು “ಮೋದಿ ಯುದ್ಧ” ಎಂದು ಕರೆಯುತ್ತಾರೆ, ಭಾರತಕ್ಕೆ ರಷ್ಯಾದ ಲಾಂಡ್ರೋಮ್ಯಾಟ್ ಎಂದು ಹಣೆಪಟ್ಟಿ ಕಟ್ಟಿದ್ದಾರೆ ಮತ್ತು ಬ್ರಾಹ್ಮಣರು ಮತ್ತು ಮಹಾರಾಜರಂತಹ ಭಾರತೀಯ ಪದಗಳನ್ನು ಕೂಡ ತಮ್ಮ ಕಟು ಟೀಕೆಗೆ ಸೇರಿಸಿಕೊಂಡಿದ್ದಾರೆ. ನವರೊ ಅವರೇನು ಕೇರಳದಲ್ಲಿ ವಾಸಿಸುತ್ತಿಲ್ಲ, ಅಲ್ಲಿ ರಾಜಕಾರಣಿಗಳು 'ಲಾಭ' ಎಂಬ ಪದವನ್ನು ನೋಡಲು, ಕೇಳಲು ಮತ್ತು ಮಾತನಾಡಲು ಇಷ್ಟಪಡುವುದಿಲ್ಲ, ಆದರೆ ನವರೊ ಅವರು ಭಾರತವು 'ಲಾಭಕ್ಕಾಗಿ' ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ.
ಇತ್ತೀಚಿನವರೆಗೆ, ರಷ್ಯಾದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವಲ್ಲಿ ಭಾರತವು ಎರಡನೇ ಸ್ಥಾನದಲ್ಲಿತ್ತು. ಈ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಐರೋಪ್ಯ ಒಕ್ಕೂಟ ಮತ್ತು ಟರ್ಕಿಯೆ ಭಾರತದ ನಂತರದ ಸ್ಥಾನಗಳಲ್ಲಿವೆ. ಆದರೆ, ಜುಲೈನಲ್ಲಿ, ಭಾರತವು ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ರಷ್ಯಾದಿಂದ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಹಿರಿಮೆ ಈಗ ಭಾರತದ್ದಾಗಿದೆ.
ಚೀನಾ ರಷ್ಯಾದಿಂದ ತೈಲ ಆಮದು ಕಡಿಮೆ ಮಾಡುತ್ತಿರುವುದು ಟ್ರಂಪ್ ಆಕ್ರೋಶಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲೇನೂ ಅಲ್ಲ. ಚೀನಾದಲ್ಲಿ ಮಾರಾಟವಾಗುವ ಅರ್ಧದಷ್ಟು ವಾಹನಗಳು ಈಗ ಎಲೆಕ್ಟ್ರಿಕ್ ವಾಹನಗಳಾಗಿವೆ, ಅವುಗಳೀಗ ಸಂಪೂರ್ಣವಾಗಿ ಬ್ಯಾಟರಿ ಚಾಲಿತವಾಗಿರಬಹುದು, ಪ್ಲಗ್-ಇನ್ ಹೈಬ್ರಿಡ್ಗಳಾಗಿರಬಹುದು ಅಥವಾ ವಿಸ್ತೃತ ಶ್ರೇಣಿಯ ಎಲೆಕ್ಟ್ರಿಕ್ ವಾಹನಗಳಾಗಿರಬಹುದು. ಜೆಟ್ ಇಂಧನವನ್ನು ಹೆಚ್ಚಾಗಿ ಬಳಸುವ ವಿಮಾನ ಪ್ರಯಾಣದ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದ್ದು, ಜನರು ಚೀನಾದ ವಿದ್ಯುತ್ ಚಾಲಿತ ಹೈ-ಸ್ಪೀಡ್ ರೈಲುಗಳಿಗೆ ಬದಲಾಗುತ್ತಿದ್ದಾರೆ ಎಂಬುದು ವಾಸ್ತವ ಸಂಗತಿ.
ರಷ್ಯಾ ತೈಲ ಹೆಚ್ಚಿದರೆ ಟ್ರಂಪ್-ಗೆ ಬಿಸಿ
ಭಾರತ ಈ ಗೌರವಕ್ಕೆ ಮತ್ತು ನವರೋ ಅವರ ಲೇವಡಿಗೆ ಹೆದರಬೇಕೇ? ನಿಶ್ಚಿತವಾಗಿ ಇಲ್ಲ. ಭಾರತ ರಷ್ಯಾದಿಂದ ತೈಲ ಖರೀದಿಯನ್ನು ಹೆಚ್ಚಿಸಬೇಕು. ನವರೋ ಅವರಂತಹವರು ಕೇಳಲು ನಿರಾಕರಿಸಿದರೂ, ಭಾರತ ರಷ್ಯಾದಿಂದ ತೈಲ ಖರೀದಿಸುವ ಮೂಲಕ, ಮಧ್ಯಪ್ರಾಚ್ಯದಿಂದ ತೈಲ ಖರೀದಿಸುವ ಬದಲು, ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ರಷ್ಯಾದ ತೈಲವನ್ನು ಸೇರಿಸಲು ಸಹಾಯ ಮಾಡುತ್ತದೆ ಮತ್ತು ಎಲ್ಲರಿಗೂ, ಎಲ್ಲೆಡೆ ತೈಲ ಬೆಲೆಗಳನ್ನು ಕಡಿಮೆ ಮಾಡುತ್ತದೆ ಎಂದು ಜಗತ್ತಿಗೆ ವಿವರಿಸಬೇಕು. ಭಾರತ ಮತ್ತು ಚೀನಾ ರಷ್ಯಾದ ತೈಲವನ್ನು ಖರೀದಿಸದಿದ್ದರೆ, ಮತ್ತು ರಷ್ಯಾದ ತೈಲವನ್ನು ಜಾಗತಿಕ ಬೇಡಿಕೆಯನ್ನು ಪೂರೈಸಲು ಬೇಕಾದ ಸರಬರಾಜಿನಿಂದ ಹೊರಹಾಕಿದರೆ, ಟ್ರಂಪ್ ಅವರ ಮತದಾರರಿಗೂ ಸೇರಿದಂತೆ ಉಳಿದೆಡೆ ತೈಲ ಬೆಲೆಗಳು ಗಗನಕ್ಕೇರುವುದು ನಿಶ್ಚಿತ.
ತೈಲ ಬೆಲೆಗಳನ್ನು ನಿಯಂತ್ರಣದಲ್ಲಿ ಇಡುವುದರ ಜೊತೆಗೆ, ರಷ್ಯಾದ ತೈಲವನ್ನು ಖರೀದಿ ಮಾಡುವುದರಿಂದ ಮತ್ತೊಂದು ಪ್ರಮುಖ ಉದ್ದೇಶಕ್ಕೆ ಸಹಾಯ ಮಾಡುತ್ತದೆ. ರಷ್ಯಾವನ್ನು ಪ್ರಬಲ ಜಾಗತಿಕ ಶಕ್ತಿಯಾಗಿ ಕಾಯ್ದುಕೊಳ್ಳುವುದು ಭಾರತದ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿ. ಕೇವಲ ಎರಡು ಪ್ರಬಲ ಶಕ್ತಿಗಳಾದ ಅಮೆರಿಕ ಮತ್ತು ಚೀನಾ ಇರುವ ಜಗತ್ತಿನಲ್ಲಿ ಭಾರತಕ್ಕೆ ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಚೀನಾ ಭಾರತದ ಪ್ರದೇಶವನ್ನು ತನ್ನದೆಂದು ಹೇಳಿಕೊಳ್ಳುತ್ತದೆ ಮತ್ತು ಚೀನಾವನ್ನು ದೂರವಿಡಲು ಭಾರತಕ್ಕೆ ಅಮೆರಿಕದ ಗುಪ್ತಚರ ಮಾಹಿತಿ ಮತ್ತು ಶಸ್ತ್ರಾಸ್ತ್ರಗಳು ಬೇಕಾಗುತ್ತವೆ. ಅದೇ ಸಮಯದಲ್ಲಿ, ಭಾರತವು ಅಮೆರಿಕಕ್ಕೆ ಅಧೀನವಾಗುವಷ್ಟು ಅದರ ಋಣಿಯಾಗಿರಲು ಬಯಸುವುದಿಲ್ಲ. ಬಹುಶಕ್ತಿ ಕೇಂದ್ರಗಳಿರುವ ಬಹುಧ್ರುವೀಯ ಜಗತ್ತಿನಲ್ಲಿ ಭಾರತ ಉತ್ತಮ ಸ್ಥಾನದಲ್ಲಿರುತ್ತದೆ.
ರಷ್ಯಾ ತೈಲ ಖರೀದಿಯನ್ನು ಭಾರತ ಬಿಡದು
ಉತ್ತಮ ಗುಣಮಟ್ಟದ ಪರಮಾಣು ಶಸ್ತ್ರಾಸ್ತ್ರಗಳಿರುವ ರಷ್ಯಾ ಈಗಾಗಲೇ ಒಂದು ಪ್ರಬಲ ಶಕ್ತಿ ಎನ್ನುವುದು ನಿರ್ವಿವಾದ. ಆದರೆ ಅದರ ಅರ್ಥ ವ್ಯವಸ್ಥೆ ಎರಡನೇ ದರ್ಜೆಯದ್ದು. ರಷ್ಯಾ ಭಾರತಕ್ಕೆ ಸುಧಾರಿತ ಶಸ್ತ್ರಾಸ್ತ್ರಗಳನ್ನು, ಉದಾಹರಣೆಗೆ $400 ಮಿಸೈಲ್ ಡಿಫೆನ್ಸ್ ಸಿಸ್ಟಂ ಅನ್ನು ಮಾರಲು ಮತ್ತು ಬ್ರಹ್ಮೋಸ್ ಕ್ಷಿಪಣಿಗಳಂತಹ ತಂತ್ರಜ್ಞಾನವನ್ನು ವರ್ಗಾಯಿಸಲು ಸಿದ್ಧವಿದೆ. ರಷ್ಯಾದ ವಿರುದ್ಧ ದ್ವೇಷ ಸಾಧಿಸಲೆಂದೇ ಹುಟ್ಟಿಕೊಂಡ ನ್ಯಾಟೋ (NATO) ಒಕ್ಕೂಟಕ್ಕೆ ಉಕ್ರೇನ್ ಸೇರುವುದರಿಂದ, ಕ್ರಿಮಿಯಾ ಎಂಬಲ್ಲಿನ ಸೆವಾಸ್ತೋಪೋಲ್ನಲ್ಲಿರುವ ರಷ್ಯಾದ ಏಕೈಕ ಬೆಚ್ಚನೆಯ ನೀರಿನ ನೌಕಾನೆಲೆ ಮೇಲೆ ಪರಿಣಾಮ ಬೀರಿದರೆ, ರಷ್ಯಾದ ಜಾಗತಿಕ ಶಕ್ತಿ ಕುಂದುತ್ತದೆ. ಇದರ ಬಗ್ಗೆ ಭಾರತ ತಲೆಕೆಡಿಕೊಳ್ಳಬೇಕಾಗಿಲ್ಲ. ಅದು ಅದರ ಹಿತಾಸಕ್ತಿಯೂ ಅಲ್ಲ. ಆದ್ದರಿಂದ, ಜಾಗತಿಕ ಇಂಧನ ಭದ್ರತೆ ಮತ್ತು ಭಾರತದ ಸ್ವಂತ ಕಾರ್ಯತಂತ್ರದ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ಬಿಡಲಾರದು.
ಅಮೆರಿಕವೇನಾದರೂ ಭಾರತದ ಕಾರ್ಯತಂತ್ರದ ಗುರಿಗಳನ್ನು ಸಾಧಿಸುವ ಸಾರ್ವಭೌಮ ಹಕ್ಕಿಗೆ ಅಡ್ಡಗಾಲು ಹಾಕದೇ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿದ್ದರೆ, ಅದು ನಿಜಕ್ಕೂ ಸ್ವಾಗತಾರ್ಹ ಹೆಜ್ಜೆ. ಒಂದು ವೇಳೆ ಭಾರತವು ತನ್ನ ಕಾರ್ಯತಂತ್ರದ ಗುರಿಗಳನ್ನು ತ್ಯಜಿಸಬೇಕು ಮತ್ತು ಕೆಲವೇ ಕೆಲವು ಡಾಲರ್ಗಳಿಗಾಗಿ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಬೇಕೆಂದು ಅಮೆರಿಕ ಬಯಸಿದರೆ, ಭಾರತವು ತನ್ನ ನಿಲುವಿಗೆ ಬದ್ಧವಾಗಿರಬೇಕು ಮತ್ತು ಟ್ರಂಪ್ ಆಡಳಿತವು ತನ್ನ ಸ್ವಂತ ಹಿತಾಸಕ್ತಿ ಎಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ವರೆಗೂ ಕಾಯಬೇಕು.
ನವರೋ ಮತ್ತು ಅವರಂತಹ ಇತರರು ಒಂದು ಸಂಗತಿಯನ್ನು ಅರಿತುಕೊಳ್ಳಬೇಕು: ಭಾರತವು ತನ್ನ ಸಂರಕ್ಷಣಾ ನೀತಿಯ ಹೊರತಾಗಿಯೂ, ಅನೇಕ ವರ್ಷಗಳಿಂದ ಹೆಚ್ಚುವರಿ ವ್ಯಾಪಾರವನ್ನು ಹೊಂದಿಲ್ಲ, ಬದಲಿಗೆ ಚಾಲ್ತಿ ಖಾತೆ ಕೊರತೆಯನ್ನು ಎದುರಿಸುತ್ತಿದೆ. ಇದರರ್ಥ, ಭಾರತವು ಇತರ ದೇಶಗಳಿಗೆ ರಫ್ತು ಮಾಡುವುದಕ್ಕಿಂತ ಹೆಚ್ಚು ಸರಕು ಮತ್ತು ಸೇವೆಗಳನ್ನು ಆಮದು ಮಾಡಿಕೊಳ್ಳುತ್ತದೆ. ಒಂದು ವೇಳೆ ಅಮೆರಿಕವು ಭಾರತದ ಆಮದುಗಳಲ್ಲಿ ತಾನು ಬಯಸಿದಷ್ಟು ದೊಡ್ಡ ಪಾಲನ್ನು ಪಡೆಯಲು ಸಾಧ್ಯವಾಗದಿದ್ದರೆ, ಅದಕ್ಕಾಗಿ ಭಾರತವನ್ನು ದೂಷಿಸಬೇಡಿ. ಇದು ವ್ಯಾಪಾರದಲ್ಲಿ ಸಹಜ ಪ್ರಕ್ರಿಯೆ.
ಕ್ಯಾಪ್: ಚೀನಾವನ್ನು ದೂರವಿಡಲು ಭಾರತಕ್ಕೆ ಅಮೆರಿಕದ ಗುಪ್ತಚರ ಮಾಹಿತಿ ಮತ್ತು ಶಸ್ತ್ರಾಸ್ತ್ರಗಳು ಬೇಕಾಗುತ್ತವೆ. ಭಾರತವು ಅಮೆರಿಕಕ್ಕೆ ಅಧೀನವಾಗುವಷ್ಟು ಅದರ ಋಣಿಯಾಗಿರಲು ಬಯಸುವುದಿಲ್ಲ. ಬಹುಶಕ್ತಿ ಕೇಂದ್ರಗಳಿರುವ ಬಹುಧ್ರುವೀಯ ಜಗತ್ತಿನಲ್ಲಿ ಭಾರತ ಸ್ಥಾನ ಭದ್ರವಾಗಿದೆ.