ಕ್ರೀಡಾಂಗಣದಲ್ಲಿ ರಾಜಕೀಯದ ರಾಡಿ: ಯುದ್ಧಪಟುಗಳ ಕೀರ್ತಿ ತಗ್ಗಿಸಿದ ಮೋದಿ ಟ್ವೀಟ್
ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಭಾರತ ಸಾಧಿಸಿದ ಕ್ರಿಕೆಟ್ ವಿಜಯವನ್ನು ಸೇನಾ ಕಾರ್ಯಾಚರಣೆಗೆ ಹೋಲಿಸಿ ಮಾಡಿದ ಟ್ವೀಟ್ ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಈ ರಾಷ್ಟ್ರದ ಕ್ರೀಡಾ ಮನೋಭಾವವನ್ನು ಸಂಕುಚಿತಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ತೀರಾ ವಿವಾದಾತ್ಮಕವಾದ ಪೋಸ್ಟ್ ಛಾಪಿಸಿದ್ದಾರೆ. ಅದರಲ್ಲಿ ಅವರು ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಗಳಿಸಿದ ಜಯವನ್ನು ‘ಅಪರೇಷನ್ ಸಿಂಧೂರ್’ಗೆ ಹೋಲಿಸಿದ್ದಾರೆ. ಆ ಮೂಲಕ ಅವರು ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಯುದ್ಧಭೂಮಿಯ ಪರಾಕ್ರಮ ಮತ್ತು ನಿರ್ಭೀತಿಯ ಹೋರಾಟವನ್ನು ಕ್ರಿಕೆಟಿಗರ ಆಟದ ಮೈದಾನದ ಪ್ರದರ್ಶನಕ್ಕೆ ಸಮೀಕರಿಸಿದ್ದಾರೆ. ಅವರ ಈ ಟ್ವೀಟ್ ಸಶಸ್ತ್ರ ಪಡೆಗಳ ಕೀರ್ತಿಯನ್ನು ಗಣನೀಯವಾಗಿ ಕುಗ್ಗಿಸಿದೆ. ಈ ನಿರ್ಣಾಯಕ ಪಂದ್ಯವು ಕ್ರೀಡಾಸ್ಪೂರ್ತಿಯನ್ನು ಗೌರವಿಸುವ ಬದಲು ಮತ್ತಷ್ಟು ಉದ್ವಿಗ್ನತೆಯನ್ನು ಹೆಚ್ಚಿಸುವ ಒಂದು ಸಂದೇಶವನ್ನು ರವಾನಿಸಿದೆ.
ಎರಡೂ ತಂಡಗಳ ನಡುವಿನ ಫೈನಲ್ ಪಂದ್ಯವು ಟೂರ್ನಮೆಂಟಿನ ಹಿಂದಿನ ಎರಡೂ ಪಂದ್ಯಗಳಿಗಿಂತ ಕಠಿಣವಾಗಿತ್ತು. ಹಾಗಾಗಿ ಅದು ಯಾವ ಕಡೆಗಾದರೂ ತಿರುಗಬಹುದಿತ್ತು.
ಹಾಗೆ ಪೋಸ್ಟ್ ಮಾಡುವ ಮೂಲಕ ಅಷ್ಟೇನೂ ಶ್ಲಾಘನೀಯವಲ್ಲದ ಸಂದೇಶವನ್ನು ದೇಶದ ಕ್ರೀಡಾಪಟುಗಳಿಗೆ ನೀಡಿದ್ದಾರೆ. ಇದು ದೇಶದ ಪ್ರಧಾನಿಯಿಂದ ಬರುವ ಧೋರಣೆಯಾಗಿರಲಿಲ್ಲ. ಅದರಿಂದ ಕ್ರೀಡಾ ಮೌಲ್ಯವನ್ನೂ ಕಡೆಗಣಿಸಲಾಯಿತು. ಅವರು ದೇಶವನ್ನು ಪ್ರತಿನಿಧಿಸುವ ಪ್ರತಿಯೊಬ್ಬನಿಗೂ ಅದರಲ್ಲೂ ವಿಶೇಷವಾಗಿ ಪಾಕಿಸ್ತಾನದ ಕ್ರೀಡಾಪಟುಗಳ ವಿರುದ್ಧ ಸ್ಪರ್ಧಿಸುವಾಗ ಕ್ರೀಡಾಸಭ್ಯತೆಗೆ ದೂರವಾದ ನಡವಳಿಕೆಯನ್ನೇ ಅಪ್ಪಿಕೊಳ್ಳುವಂತೆ ಪರಿಣಾಮಕಾರಿಯಾಗಿ ಪ್ರೇರಣೆ ನೀಡಿದಂತಾಗಿದೆ.
ಅಪಥ್ಯದ ಹೇಳಿಕೆ
ಯಾವುದೇ ಒಬ್ಬ ಕ್ರೀಡಾಪಟುವಿಗೆ ತಮ್ಮ ಪ್ರತಿಸ್ಪರ್ಧಿಗಳ ನಡುವೆ ವ್ಯತ್ಯಾಸ ಕಾಣುವಂತೆ, ನಮ್ಮ ದೇಶದ ಪಶ್ಚಿಮ ಭಾಗದಲ್ಲಿರುವ ನೆರೆಯ ರಾಷ್ಟ್ರದವರ ಜೊತೆಗೆ ಆಟವಾಡುವಾಗ ಇನ್ನೂ ತೀವ್ರತೆಯಿಂದ ಆಡುವಂತೆ ಪ್ರಚೋದಿಸುವುದು ತೀರಾ ದಡ್ಡತನದ ಸಂಕೇತ. ಅಂತಹ ಸಂದೇಶವು ಕ್ರೀಡಾ ಮೈದಾನದಲ್ಲಿರುವ ಆಟಗಾರರಿಗೂ ಯಥೋಚಿತವಾದುದಲ್ಲ. ಅಷ್ಟುಮಾತ್ರವಲ್ಲದೆ ಜಾಗತಿಕ ಗಣ್ಯಮಾನ್ಯರ ಸಾಲಿನಲ್ಲಿ ಹೆಗಲೆಣೆಯಾಗಿ ನಿಲ್ಲಬಲ್ಲ ನಾಯಕನೊಬ್ಬ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇಂತಹ ಹೇಳಿಕೆ ನೀಡುವುದು ನಿಜಕ್ಕೂ ಅಪಥ್ಯವಾದುದು.
ಯಾವುದೇ ಕ್ರೀಡೆಯನ್ನು ಯಾವುದೇ ವ್ಯಕ್ತಿಗಳು ಅಥವಾ ಟೀಮ್ ನಡುವೆ ಆಡುವಾಗ ಯಾವುದೇ ಸಂಸ್ಥೆ, ಪ್ರಾಂತ್ಯ ಅಥವಾ ರಾಷ್ಟ್ರವನ್ನು ಪ್ರತಿನಿಧಿಸುವ ಎಲ್ಲ ಆಟಗಾರರು ತಮ್ಮ ಪ್ರತಿಸ್ಪರ್ಧಿಗಳನ್ನು ಪರಸ್ಪರ ಗೌರವಿಸಬೇಕು. ಆ ವಿಚಾರದಲ್ಲಿ ಯಾವತ್ತೂ ತಮ್ಮ ಗಮನವನ್ನು ಕಳೆದುಕೊಳ್ಳಬಾರದು ಎಂದು ಹೇಳುವ ಅಗತ್ಯವೇನೂ ಇಲ್ಲ.
ಮೋದಿ ಅವರ ಸಂದೇಶವು ಮೂಲಭೂತ ತತ್ವಕ್ಕೆ ಬೆಂಬಲ ನೀಡಬೇಕಿತ್ತು. ಆದರೆ ಪ್ರತಿಯೊಬ್ಬ ಕ್ರೀಡಾಪಟುವೂ ಕೂಡ ಪಾಕಿಸ್ತಾನಿ ಪ್ರತಿಸ್ಪರ್ಧಿಗಳ ವಿರುದ್ಧ ಆಡುವಾಗ ತಮ್ಮ ದೇಶದ ಮೇಲೆ ಯುದ್ಧ ಸಾರುತ್ತಿರುವಂತೆ ಆಡಬೇಕು ಎನ್ನುವ ಸಂದೇಶವನ್ನು ಸಾರಿದಂತಿದೆ. ಯುದ್ಧಭೂಮಿಯಲ್ಲಿ ಸಶಸ್ತ್ರಪಡೆಗಳು ನಿಜವಾದ ಸೈನಿಕರಾಗಿದ್ದರೆ, ಪಾಕಿಸ್ತಾನಿ ತಂಡ ಅಥವಾ ಒಬ್ಬನೇ ವ್ಯಕ್ತಿಯ ವಿರುದ್ಧ ಆಡುವಾಗ ಕ್ರೀಡಾಪಟುಗಳು ಆಟದ ಮೈದಾನದಲ್ಲಿ ತಮ್ಮ ಪ್ರಾಕ್ಸಿಗಳೆಂದು ಪರಿಗಣಿಸಬೇಕು ಎಂಬುದು ಪ್ರಧಾನಿ ಅವರ ಎಕ್ಸ್ ಪೋಸ್ಟ್ ಇಂಗಿತವಾಗಿದೆ.
ಯೋಧರು ಕ್ರಿಕೆಟ್ ಪಟುಗಳಲ್ಲ
ಒಂದು ಕ್ರಿಕೆಟ್ ಪಂದ್ಯವನ್ನು ಭಾರತ ಸಶಸ್ತ್ರ ಪಡೆಗಳು ತಮ್ಮ ಪ್ರಾಣವನ್ನೇ ಒತ್ತೆಗಿಟ್ಟು ನಡೆಸಿದ ಸೇನಾ ಕಾರ್ಯಾಚರಣೆಗೆ ಸಮೀಕರಿಸಿದ್ದು ಸಶಸ್ತ್ರ ಪಡೆಗಳನ್ನೇ ಗೌಣವಾಗಿ ಮಾಡಿದಂತೆ. ಸಶಸ್ತ್ರ ಪಡೆಗಳು ಸರ್ಕಾರದ ಸೂಚನೆಗಳನ್ನು ಅನುಸರಿಸುವಲ್ಲಿ ಮತ್ತು ನಮ್ಮ ರಾಷ್ಟ್ರದ ಗೌರವ ಮತ್ತು ಘನತೆಯನ್ನು ಸಂರಕ್ಷಿಸುವಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಅಂತಹ ಪಾತ್ರಗಳನ್ನು ನಿರ್ವಹಿಸುವ ಯೋಧರಿಗೆ ಕ್ರಿಕೆಟ್ ಪಟುಗಳನ್ನು ಹೋಲಿಸುವುದು ಯಾವ ಕಾರಣಕ್ಕೂ ಸೂಕ್ತವಾದುದಲ್ಲ.
ನಮ್ಮ ಸಮಕಾಲೀನ ಕ್ರಿಕೆಟ್, ಅದರಲ್ಲೂ ವಿಶೇಷವಾಗಿ ಸೀಮಿತ ಓವರ್ ಗಳ ಸ್ವರೂಪವನ್ನು ಹೊಂದಿದ ಆಟದ ಮೂಲ ಉದ್ದೇಶವೇನಿದ್ದರೂ ಮನರಂಜನೆಯನ್ನು ನೀಡುವುದು ಮತ್ತು ಭಾಗವಹಿಸುವ ದೇಶಗಳ ಕ್ರಿಕೆಟ್ ಮಂಡಳಿಗಳು ಹಣ ಗಳಿಸಲು ಇರುವ ಅವಕಾಶಗಳಷ್ಟೇ. ಪರಿಸ್ಥಿತಿ ಹೀಗಿರುವಾಗ ಕಷ್ಟಪಟ್ಟು ಜಯ ಗಳಿಸಿದ ಕ್ರಿಕೆಟಿಗರನ್ನು ಸಶಸ್ತ್ರ ಪಡೆಗಳ ಶೌರ್ಯಕ್ಕೆ ಸಮನೆಂದು ನರೇಂದ್ರ ಮೋದಿ ಅವರು ಹೋಲಿಸಿರುವುದು ತರ್ಕಬದ್ಧವಲ್ಲ. ಮೋದಿ ಅವರ ಪ್ರಚಾರ ಯಂತ್ರವು ಮೇ ತಿಂಗಳಲ್ಲಿ ನಡೆದ ‘ನಿಜವಾದ’ ಆಪರೇಷನ್ ‘ಸಿಂಧೂರ್’ಗೆ ಹೋಲಿಕೆ ಮಾಡಲು ಇದನ್ನು ಬಳಸಿಕೊಂಡಿತ್ತು.
ಕಡೆಗಣಿಸಿದ ಕ್ರೀಡಾಸ್ಪೂರ್ತಿ
ಕೃತಕ ಬುದ್ಧಿಮತ್ತೆಯೇ ಪಾರಮ್ಯವನ್ನು ಹೊಂದಿರುವ ಈ ಯುಗದಲ್ಲಿ ಹುದುಗಿ ಹೋಗಿರುವ ಕ್ರೀಡಾಸ್ಪೂರ್ತಿಯ ಪ್ರಮುಖ ಅಂಶಗಳನ್ನು ಬಗೆದು ನೋಡುವುದು ಕಷ್ಟಸಾಧ್ಯವೇನಲ್ಲ. ಅವುಗಳೆಂದರೆ ಪ್ರಾಮಾಣಿಕ ಆಟವನ್ನು ಪ್ರದರ್ಶಿಸುವುದು, ಸಮಗ್ರತೆಯನ್ನು ಕಾಪಾಡುವುದು, ಎದುರಾಳಿಗಳು, ಅಧಿಕಾರಿಗಳು ಮತ್ತು ಸ್ವತಃ ಕ್ರೀಡೆಯ ಬಗ್ಗೆ ಗೌರವವನ್ನು ತೋರುವುದು. ಜೊತೆಗೆ ವಿಜಯವೊಂದೇ ಏಕೈಕ ಉದ್ದೇಶವಲ್ಲ ಎಂಬುದನ್ನು ನೆನಪಿಡುವುದು ಮತ್ತು ಗೆಲುವು ಹಾಗೂ ಸೋಲು ಎರಡರಲ್ಲೂ ಸಂಯಮವನ್ನು ಕಾಯ್ದುಕೊಳ್ಳುವುದು – ಇಷ್ಟು ಮಾತ್ರವಲ್ಲದೆ ಕ್ರೀಡೆಯ ಉದ್ದೇಶಗಳಲ್ಲಿ ಸಂಬಂಧಗಳನ್ನು ಬೆಳೆಸುವುದು ಕೂಡ ಒಂದಾಗಿದೆ.
ಹಾಗೆ ಮಾಡುವ ಮೂಲಕ ಕ್ರೀಡಾಪಟುಗಳನ್ನು ಕೇವಲ ರಾಷ್ಟ್ರದ ಮಾತ್ರವಲ್ಲ ಜನರ ರಾಯಭಾರಿಗಳು ಎಂದೂ ಪರಿಗಣಿಸಲಾಗುತ್ತಿತ್ತು. ಪಾಕಿಸ್ತಾನ ತಂಡದ ಜೊತೆ ಹಸ್ತಲಾಘವ ಮಾಡಲು ಭಾರತ ತಂಡ ನಿರಾಕರಿಸಿದ ಬಳಿಕ ಎರಡೂ ತಂಡಗಳ ನಡುವೆ ವೈಮನಸ್ಯ ಆರಂಭವಾಯಿತು. ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಇದು ಇಡೀ ತಂಡ ಸಾಮೂಹಿಕವಾಗಿ ಕೈಗೊಂಡ ನಿರ್ಧಾರ. ಯಾಕೆಂದರೆ ಕೆಲವು ಸಂಗತಿಗಳು ಕ್ರೀಡಾಸ್ಪೂರ್ತಿಗಿಂತ ಮಿಗಿಲಾದುದು ಎಂದು ಹೇಳಿದರು.
ಹಾಗೆ ಹೇಳುವ ಮೂಲಕ ಭಾರತದ ನಾಯಕ ತಂಡವು ಕ್ರೀಡಾಸ್ಪೂರ್ತಿಯನ್ನು ಉಲ್ಲಂಘಿಸಿದೆ ಎಂಬುದನ್ನು ಒಪ್ಪಿಕೊಂಡಂತಾಯಿತು. ಆ ಮಾತಿನ ಅರ್ಥವೇನೆಂದರೆ ‘ನಾವು ಬಿಸಿಸಿಐ ಮತ್ತು ಸರ್ಕಾರದೊಂದಿಗೆ ಕೈಜೋಡಿಸಿದ್ದೇವೆ’ ಎಂಬುದಾಯಿತು.
ಯಾದವ್ ಅವರಿಗೆ ಒಲಿಂಪಿಕ್ ಒಪ್ಪಂದದ ಬಗ್ಗೆ ಅರಿವಿಲ್ಲ ಎನ್ನುವುದು ಇದರಿಂದ ವೇದ್ಯವಾಯಿತು. ರಾಷ್ಟ್ರದ ಕ್ರೀಡಾ ಮಂಡಳಿಗಳನ್ನು ಸರ್ಕಾರದಿಂದ ಪ್ರತ್ಯೇಕಿಸುವುದನ್ನು ಒಲಿಂಪಿಕ್ ಒಪ್ಪಂದ ಕಡ್ಡಾಯಗೊಳಿಸುತ್ತದೆ. ಅವರು ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಮತ್ತು ಸರ್ಕಾರದ ಮಧ್ಯಪ್ರವೇಶವನ್ನು ವಿರೋಧಿಸಬೇಕಾಗುತ್ತದೆ. ಈ ಹಸ್ತಕ್ಷೇಪದಲ್ಲಿ ರಾಜಕೀಯ, ಕಾನೂನು, ಧಾರ್ಮಿಕ ಅಥವಾ ಆರ್ಥಿಕ ಒತ್ತಡ ಕೂಡ ಸೇರಿದೆ.
ರಾಡಿ ಎಬ್ಬಿಸಿದ ಆಟಗಾರರು
ಹ್ಯಾಂಡ್-ಶೇಕ್ ನಿರಾಕರಣೆ ಎಂಬ ಪ್ರಹಸನದ ಬಳಿಕ ಪಾಕಿಸ್ತಾನದ ಆಟಗಾರ ಹ್ಯಾರಿಸ್ ರೌಫ್ ಅನಗತ್ಯವಾಗಿ ಮೈದಾನದಲ್ಲಿ ವಿಮಾನ ಪತನದ ಸನ್ನೆ ಮಾಡಿ ವಾತಾವರಣವನ್ನು ಇನ್ನಷ್ಟು ರಾಡಿಗೊಳಿಸಿದರು. ಆದರೆ ಅದಕ್ಕೆ ಪ್ರತಿಯಾಗಿ ಜಸ್ಪ್ರೀತ್ ಬೂಮ್ರಾ ಕೂಡ ಪ್ರತಿಸನ್ನೆ ಮಾಡಿ ಇನ್ನಷ್ಟು ಕೆಳಮಟ್ಟಕ್ಕೆ ಇಳಿಯುವ ಅವಶ್ಯಕತೆ ಇರಲಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಆಟಗಾರರು ಒಂದು ಸಂಗತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕ್ರೀಡಾಂಗಣದಲ್ಲಿ ಫಲಿತಾಂಶ ತಲೆಕೆಳಗಾಗಲು ಕೇವಲ ಒಂದೇ ಒಂದು ಸೆಕೆಂಡ್ ಸಾಕು. ಆದರೆ ಭವಿಷ್ಯದ ದಿನಗಳು ಹಾಗಿಲ್ಲ. ಮುಂದೆಂದಾದರೂ ಪಾಕಿಸ್ತಾನ ತಂಡದ ವಿರುದ್ಧ ಸೋಲುವ ಸಾಧ್ಯತೆ ಇರುವ ಭಾರತ ತಂಡದ ನಾಯಕ ಅಥವಾ ತಂಡ ಭಾರತಕ್ಕೆ ಹಿಂದಿರುಗುವಾಗ ಎದುರಾಗಬಹುದಾದ ಭವಿಷ್ಯವನ್ನು ಯೋಚಿಸಲು ನನಗೆ ಭಯವಾಗುತ್ತದೆ.
ಏಷ್ಯಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಾಕಿಸ್ತಾನ ಸರ್ಕಾರದಲ್ಲಿ ಸಚಿವರೂ ಹೌದು. ಆ ಕಾರಣಕ್ಕೆ ಅವರಿಂದ ಏಷ್ಯಾ ಕಪ್ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು ಎಂಬ ‘ಅಧಿಕೃತ’ ವಾದವನ್ನು ಭಾರತ ಕ್ರಿಕೆಟ್ ತಂಡ ಮತ್ತು ಅನೇಕ ಮಂಡಿ ಕ್ರಿಕೆಟ್ ಅಧಿಕಾರಿಗಳು, ಟೆಲಿವಿಷನ್ ವರದಿಗಾರರು, ಕಾರ್ಯಕ್ರಮಗಳನ್ನು ನಿರೂಪಿಸುವ ಬಹುತೇಕ ನಿರೂಪಕರು ಹುಯೆಲೆಬ್ಬಿಸಿದರು.
ಪಹಲ್ಗಾಂನಲ್ಲಿ ನಾಗರಿಕರ ವಿರುದ್ಧ ಪಾಕಿಸ್ತಾನ ಪರೋಕ್ಷ ದಾಳಿ ನಡೆಸಿತ್ತು ಎಂಬ ಕಾರಣಕ್ಕೆ ಭಾರತ ತಂಡದ ಆಟಗಾರರು ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಬಯಸಲಿಲ್ಲ. ಅಮಾಯಕ ಭಾರತೀಯರ ಮೇಲಿನ ಈ ಘೋರ ದಾಳಿಗೆ ‘ಬೆಂಬಲ’ ನೀಡಿದ ಮತ್ತು ‘ಅನುಮೋದಿಸಿದ’ ಸರ್ಕಾರವನ್ನು ಅವರು ಪ್ರತಿನಿಧಿಸುತ್ತಾರೆ ಎಂಬುದು ಇದಕ್ಕಿರುವ ಕಾರಣ.
ರಾಜಕೀಯ ಪಿಡುಗು
ಪಾಕಿಸ್ತಾನವು ಭಾರತದ ವಿರುದ್ಧ ಸುದೀರ್ಘ ಕಾಲದಿಂದಲೂ ಪರೋಕ್ಷ ಯುದ್ಧ ನಡೆಸುತ್ತ ಬಂದಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮುಕ್ಕು ನೀಡುತ್ತಿದೆ ಎಂಬ ಭಾರತದ ಆರೋಪ ಬೇರೆಯೇ ಸಂಗತಿ. ಆದರೆ ಎರಡೂ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳ ಅಧಿಕಾರಿಗಳು ರಾಜಕೀಯ ಹುದ್ದೆಗಳನ್ನು ಹಿಡಿದು ಕುಳಿತಿರುವುದು ಭಾರತ ಮತ್ತು ಪಾಕಿಸ್ತಾನ ಎರಡನ್ನೂ ಬಾಧಿಸುವ ಪಿಡುಗು.
ಜಯ್ ಶಾ ಅವರ ಪ್ರಕರಣವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅವರೇನೂ ಸ್ವತಃ ರಾಜಕೀಯ ನಾಯಕರಲ್ಲ ಅಥವಾ ರಾಜಕೀಯ ಹುದ್ದೆಯನ್ನು ಹೊಂದಿಲ್ಲ. ಅವರ ತಂದೆ ಅಮಿತ್ ಶಾ ಜೂನ್ 2019ರಿಂದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅಮಿತ್ ಶಾ ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಜೂನಿಯರ್ ಶಾ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಮಾಡಲಾಗಿತ್ತು. ಆ ನಂತರದ ದಿನಗಳಲ್ಲಿ ಜೂನಿಯರ್ ಶಾ ಏಷ್ಯನ್ ಕ್ರಿಕೆಟ್ ಮಂಡಳಿ ಅಧ್ಯಕ್ಷರೂ ಆಗಿದ್ದರು.
ಬಿಸಿಸಿಐ ಕೂಡ ಅನೇಕ ರಾಜಕೀಯ ನಾಯಕರು ಪ್ರಮುಖ ಹುದ್ದೆಗಳನ್ನು ಆಕ್ರಮಿಸಿ ಕುಳಿತಿದ್ದನ್ನು ನೋಡಿದೆ. ಅದು ಎಲ್ಲ ರಾಜಕೀಯ ಪಕ್ಷಗಳಿಗೂ ಅನ್ವಯವಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ.
ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧಗಳ ಇತಿಹಾಸದಲ್ಲಿಯೂ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯಸ್ಥರು ರಾಜಕೀಯ ನೇಮಕಾತಿಯ ಮೂಲಕ ಬಂದವರಾಗಿದ್ದಾಗಲೂ ಅಥವಾ ಅಧಿಕಾರವನ್ನು ಅವರೇ ಹೊಂದಿದ್ದಾಗಲೂ ಭಾರತೀಯ ತಂಡ ಅನೇಕ ಬಾರಿ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ಹಾಗಾಗಿ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದೇ ಇರುವ ಭಾರತದ ಸಮರ್ಥನೆಗೆ ಹೆಚ್ಚಿನ ಬಲವಿಲ್ಲ.
ಆದ್ದರಿಂದ ಪಂದ್ಯ ಮುಗಿದ ಕೆಲವೇ ಹೊತ್ತಿನಲ್ಲಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಆ ಸಂದೇಶವನ್ನು ಯಾಕೆ ಪೋಸ್ಟ್ ಮಾಡಿದರು ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆ.
ರಾಜಕೀಯ ಅಸ್ತ್ರದ ಬಳಕೆ
ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ತೋರಿಸಿದಂತೆ ಭಾರತದ ಅನೇಕ ಭಾಗಗಳಲ್ಲಿ ಮತದಾರರು ಮೋದಿ ಅವರ ಭರವಸೆಗಳು ಮತ್ತು ಹೇಳಿಕೆಗಳ ಹಿಂದಿನ ಮರ್ಮವನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬಹುಪಾಲು ಜನರ ವೈಯಕ್ತಿಕ ಆದಾಯ ಕುಸಿತಕ್ಕೆ ಬಿಜೆಪಿ ಬಳಿ ಯಾವುದೇ ಉತ್ತರವಿಲ್ಲ. ಚುನಾವಣಾ ಅಧಿಪತ್ಯವನ್ನು ಉಳಿಸಿಕೊಳ್ಳಲು ಅದರ ಬಳಿ ಯಾವ ವಿಷಯವೂ ಇಲ್ಲ. ಅದರ ಬಳಿ ಈಗ ಉಳಿದಿರುವ ಅಸ್ತ್ರಗಳೆಂದರೆ ಸಾಮಾಜಿಕ ಧ್ರುವೀಕರಣ ಮತ್ತು ಉಳಿದವರನ್ನು ಹೊರಗಿಡುವ ರಾಜಕೀಯಕ್ಕೆ ಮರುಚಾಲನೆ ನೀಡುವುದು.
ಕ್ರೀಡಾಪಟುಗಳು ರಾಜಕೀಯ ನಾಯಕರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ ಕಾಲದಿಂದಲೂ ಗಮನಿಸುತ್ತಿದ್ದೇವೆ. ಈಗ ನಮ್ಮ ಮುಂದೆ ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರಿದ್ದಾರೆ. ದೇಶ ಮತ್ತು ಸರ್ಕಾರ ಎರಡೂ ಒಂದೇ ಎಂದು ಪರಿಗಣಿಸಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ.
ಕ್ರೀಡೆಯಲ್ಲಿ ಯಾವುದೇ ನೇಮಕಾತಿ ಅಥವಾ ಆಯ್ಕೆಯು ಕೇವಲ ಸಾಮರ್ಥ್ಯ ಅಥವಾ ಕಾರ್ಯಕ್ಷಮತೆಯ ಆಧಾರದ ಮೇಲೆ ನಡೆಯುವುದಿಲ್ಲ ಎಂಬ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸರಣಿಯಲ್ಲಿ ಕಡಿಮೆ ಸ್ಕೋರ್ ಗಳನ್ನು ಮಾಡಿರುವ ಕಾರಣದಿಂದ ತಮ್ಮ ವೃತ್ತಿ ಜೀವನದ ಕಠಿಣ ಹಂತದಲ್ಲಿರುವ ಯಾದವ್ ಸರ್ಕಾರಿ ಧೋರಣೆಯನ್ನು ಅನುಸರಿಸಿದರೆ ಸದ್ಯಕ್ಕೆ ಪಾರಾಗಿಬಿಡಬಹುದು ಎಂದು ಭಾವಿಸಿರಬಹುದು. ಆ ತಂತ್ರದ ಮೂಲಕವಾದರೂ ಅವರು ಮರಳಿ ಫಾರ್ಮ್-ಗೆ ಬರುವ ಭರವಸೆಯಲ್ಲಿದ್ದರು.
ದುರಾದೃಷ್ಟದ ಸಂಗತಿ ಎಂದರೆ, ಕ್ರೀಡಾಪಟುಗಳು ಪಾಕಿಸ್ತಾನದ ಎದುರಾಳಿಗಳ ಮೇಲೆ ವಿಶೇಷವಾಗಿ ಗಮನಹರಿಸಬೇಕು ಎಂಬ ಮೋದಿ ಅವರ ಎಕ್ಸ್ ಪೋಸ್ಟ್ ನೀಡಿದ ಸಂದೇಶವು ಭಾರತೀಯ ಕ್ರೀಡಾಪಟುಗಳು, ಅವರ ತರಬೇತುದಾರರು ಹಾಗೂ ಕ್ರೀಡಾ ಅಧಿಕಾರಿಗಳ ನಡುವೆ ಪ್ರತಿಧ್ವನಿಸಲು ಪ್ರಾರಂಭಿಸಿದೆ.
ಕೆಲ ದಿನಗಳ ಹಿಂದೆ ಜಾವೆಲಿನ್ ಆಟಗಾರ ಸಚಿನ್ ಯಾದವ್ ಅವರು ಟೊಕಿಯೋದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಪಂದ್ಯದಲ್ಲಿ ಅಚ್ಚರಿಯ ಪ್ರಭಾವ ಬೀರಿದ್ದರು. ಒಲಿಂಪಿಯನ್ ಚಾಂಪಿಯನ್ ನೀರಜ್ ಛೋಪ್ರಾ ಅವರು ಎಂಟನೇ ಸ್ಥಾನಕ್ಕೆ ಕುಸಿದ ಈ ಪಂದ್ಯದಲ್ಲಿ 86.27 ಮೀಟರ್ ದೂರ ಎಸೆತದ ಮೂಲಕ ಅತ್ಯುತ್ತಮ ವ್ಯಯಕ್ತಿಕ ಸಾಧನೆಯ ಮೂಲಕ ಯಾದವ್ ನಾಲ್ಕನೇ ಸ್ಥಾನ ಗಳಿಸಿದ್ದರು.
ಅದಾದ ಬಳಿಕ ಕ್ರೀಡಾ ಪತ್ರಕರ್ತರ ಜೊತೆ ಮಾತನಾಡಿದ ಅವರ ಕೋಚ್, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ನವಲ್ ಸಿಂಗ್ ಅವರು, ಸಚಿನ್ ಯಾದವ್ ಗೆ ಪ್ರೇರಣೆ ನೀಡಲು ನಾನು ಭಾರತ ಮತ್ತು ಪಾಕಿಸ್ತಾನ ನಡುವಿನ ಪೈಪೋಟಿಯನ್ನು ಬಳಸಿಕೊಂಡಿದ್ದೆ ಎಂದಿದ್ದರು.
“ಏನೇ ಆಗಲಿ, ನೀನು ನಿಶ್ಚಿತವಾಗಿ (ಅರ್ಷದ್) ನದೀಂಗಿಂತ ಮುಂದಿರಬೇಕು ಎಂದು ನಾನು ಆತನಿಗೆ ಹೇಳಿದೆ. ಆತ ಹಾಗೇ ಮಾಡುತ್ತೇನೆ ಎಂದು ಮಾತುಕೊಟ್ಟ. ಇದು ಅವರಿಗೆ ಹೆಚ್ಚುವರಿ ಪ್ರೇರಣೆ ನೀಡಿದೆ ಎಂದು ಭಾವಿಸುತ್ತೇನೆ,” ಎಂದು ಕೋಚ್ ಪತ್ರಕರ್ತರ ಬಳಿ ಹೇಳಿದ್ದರು.
ತಮ್ಮ ಕೋಚ್ ನೀಡಿದ ಗುರಿಯನ್ನು ಯಾದವ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಯಾಕೆಂದರೆ ಪಂದ್ಯದಲ್ಲಿ ಎಂಟನೇ ಸ್ಥಾನಕ್ಕಿಂತ ಹೊರಗೆ ನದೀಮ್ ಆಘಾತಕಾರಿ ರೀತಿಯಲ್ಲಿ ಹೊರಗೆ ದಬ್ಬಲ್ಪಟ್ಟಿದ್ದರು.
ಸೇನಾ ದಿಗ್ವಿಜಯವಲ್ಲ
ಭಾರತ-ಪಾಕಿಸ್ತಾನ ನಡುವಿನ ಪೈಪೋಟಿ ಕ್ರೀಡಾಪಟುಗಳಿಗೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಆದರೆ ಮೋದಿ ಅವರಂತಹ ನಾಯಕರಿಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅನುಕೂಲವಾಗುತ್ತದೆ. ಅವರು ವಿಷಯವನ್ನು ಆ ರೀತಿಯಲ್ಲಿಯೇ ಕೆದಕುತ್ತಾರೆ. ಹೌದು, ಕಠಿಣ ಹೋರಾಟದಿಂದ ಗೆದ್ದು ಟ್ರೋಫಿ ಪಡೆದ ಭಾರತ ಕ್ರಿಕೆಟ್ ತಂಡವನ್ನು ಪ್ರಧಾನಿ ಅಭಿನಂದಿಸಬೇಕಿತ್ತು. ಹಾಗಂತ ಅದನ್ನು ಯುದ್ಧಭೂಮಿಯಲ್ಲಿನ ರಾಷ್ಟ್ರದ ಸೇವೆಯ ಜೊತೆ ಸಮೀಕರಿಸಬಾರದು. ಯಾಕೆಂದರೆ ಅದು ರಾಜಕೀಯ ವಿಜಯವಲ್ಲ ಅಥವಾ ಸೇನಾ ದಿಗ್ವಿಜಯವೂ ಅಲ್ಲ.
ಕ್ರೀಡಾಪಟುಗಳು ಯಾವತ್ತೂ ತಮ್ಮ ಕ್ರೀಡಾ ಮೋಹಕ್ಕೆ ಅಂಟಿಕೊಂಡಿರಬೇಕು. ಅವರು ಕ್ರೀಡಾ ಸಿದ್ಧಾಂತ ಮತ್ತು ಕ್ರೀಡಾ ಮನೋಭಾವದ ಆಧಾರದ ಮೇಲೆ ಆಡಬೇಕು. ಕ್ರೀಡಾಸ್ಪೂರ್ತಿಗೆ ತಕ್ಕಂತೆ ಆಡುವುದಕ್ಕಿಂತ ಮಿಗಿಲಾದ ದೇಶಭಕ್ಕಿ ಇನ್ನೊಂದಿಲ್ಲ.
ಕ್ಯಾಪ್: ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ‘ಎಕ್ಸ್’ ಪೋಸ್ಟ್ ದೇಶದ ಎಲ್ಲಾ ಕ್ರೀಡಾಪಟುಗಳಿಗೆ ಉತ್ತಮ ಸಂದೇಶವನ್ನು ನೀಡಲಿಲ್ಲ. ಕ್ರೀಡಾಸ್ಪೂರ್ತಿಗೆ ವಿರುದ್ಧವಾದ ಅವರ ಪೋಸ್ಟ್ ರಾಷ್ಟ್ರದ ಪ್ರಧಾನಿ ಅವರ ಸ್ಥಾನಕ್ಕೆ ತಕ್ಕುನಾಗಿರಲಿಲ್ಲ.