ರೋಡ್ ಶೋ ರಾಜಕೀಯದ ಕರಾಳ ಮುಖ ಅನಾವರಣ ಮಾಡಿದ ಕರೂರ್ ಕಾಲ್ತುಳಿತ: ಕೇಳುತ್ತಿದೆಯೇ ಆರ್ತನಾದ?

ಚಿತ್ರನಟ ಕಮ್ ರಾಜಕಾರಣಿ ವಿಜಯ್ ಅವರ ಕರೂರು ಕಾರ್ಯಕ್ರಮದಿಂದ ಉಂಟಾದ ದುರಂತವು ಯೋಜನೆ ಮತ್ತು ಜನ ದಟ್ಟಣೆ ನಿಯಂತ್ರಣದಲ್ಲಿ ಆಗಿರುವ ಲೋಪಗಳನ್ನು ಕಣ್ಣಿಕಟ್ಟುವಂತೆ ಎತ್ತಿತೋರಿಸುತ್ತಿದೆ. ಇದು ರಾಜಕೀಯ ಪಕ್ಷಗಳು ಮತ್ತು ಪೊಲೀಸರಿಗೆ ಅನೇಕ ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ.

Update: 2025-10-02 01:30 GMT

ತಮಿಳುನಾಡಿನಲ್ಲಿ ಸಿನೆಮಾ ಮತ್ತು ರಾಜಕೀಯದ ನಡುವೆ ಬಿಡಿಸಲಾರದ ನಂಟಿದೆ. ಇಲ್ಲಿ ಜನ ಸಿನೆಮಾ ತಾರೆಯರನ್ನು ಆರಾಧಿಸುತ್ತಾರೆ. ಅವರ ಮೇಲೆ ಅಸಾಧ್ಯವಾದ ನಂಬಿಕೆ ಮತ್ತು ಅಭಿಮಾನವನ್ನು ತೋರುತ್ತಾರೆ. ಆದರೆ ಚೆನ್ನೈನಿಂದ 384 ಕಿ.ಮೀ. ದೂರದ ವಸ್ತ್ರೋದ್ಯಮಕ್ಕೆ ಖ್ಯಾತಿಯನ್ನು ಪಡೆದ ಕರೂರಿನಲ್ಲಿ ಸಂಭವಿಸಿದ ರೀತಿಯ ಸಾವು ಮತ್ತು ವಿದ್ವಂಸವನ್ನು ಅವರೆಂದೂ ಊಹಿಸಿರಲಿಕ್ಕಿಲ್ಲ.

ಸೆ.27ರ ಶನಿವಾರ ತಮಿಳರ ಕಣ್ಮಣಿ, ಸೂಪರ್ ಸ್ಟಾರ್ ವಿಜಯ್ ಅವರು ವಿಶೇಷವಾಗಿ ಮಾರ್ಪಡಿಸಲಾದ ಕಾರವಾನ್ ಚಾವಣಿಯ ಮೇಲೆ ನಿಂತು ಜನರನ್ನು ಉದ್ದೇಶಿಸಿ ಭಾಷಣ ಶುರುಮಾಡಿದಾಗ ತಳ್ಳಾಟ-ನೂಕಾಟ, ಕಾಲ್ತುಳಿತ ಸಂಭವಿಸಿತು. ನೋಡನೋಡುತ್ತಲೆ ನಲವತ್ತೊಂದು ಮಂದಿ ಬಲಿಯಾದರು. ಗಾಯಗೊಂಡವರ ಸಂಖ್ಯೆ ನೂರಾರು. ಅನೇಕ ಕುಟುಂಬಗಳು ತತ್ತರಿಸಿಹೋದವು.

ಡೆಡ್ಲಿ ದುರಂತ

ರಾಜ್ಯದಲ್ಲಿ ಹಿಂದೆಯೂ ಕಾಲ್ತುಳಿತದ ಘಟನೆಗಳು ನಡೆದಿವೆ. ಅವೆಲ್ಲಕ್ಕೂ ಹೋಲಿಸಿದರೆ ಇದು ಅತ್ಯಂತ ಮಾರಣಾಂತಿಕ. ಒಂದು ಸಂಭ್ರಮಾಚರಣೆ ಕ್ಷಣಾರ್ಧದಲ್ಲಿ ದುರಂತದ ಸ್ವರೂಪವನ್ನು ಪಡೆದುಕೊಂಡುಬಿಟ್ಟಿತು. ಯುವಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಜೊತೆಗೆ ಒಂದು ಪುಟ್ಟ ಮಗುವೂ ಜನರ ಆ ಮಹಾಸಾಗರದ ನಡುವೆ ಸಿಕ್ಕು ಜೀವಚ್ಛವವಾಯಿತು. ಜನರ ಮನಸ್ಸಿನಲ್ಲಿ, ಹೃದಯದಲ್ಲಿ ಈ ಘಟನೆ ದೊಡ್ಡ ಗಾಯವನ್ನೇ ಉಳಿಸಿಹೋಗಿದೆ.

ರಾಜ್ಯ ಸರ್ಕಾರವು ರಕ್ಷಣಾ ಕಾರ್ಯವನ್ನು ಕ್ಷಿಪ್ರ ಗತಿಯಲ್ಲಿ ಕೈಗೊಂಡಿದೆ. ಕರೂರು ಮತ್ತು ಅದರ ಅಕ್ಕ-ಪಕ್ಕದ ಜಿಲ್ಲೆಗಳಿಂದ ಆಂಬುಲೆನ್ಸ್ ಗಳನ್ನು ತರಿಸಲಾಯಿತು. ಆಸ್ಪತ್ರೆಗಳನ್ನು ಸಜ್ಜಾಗಿ ಇರಿಸಲಾಯಿತು. ಅರೆವೈದ್ಯಕೀಯ ಮತ್ತು ತುರ್ತು ಚಿಕಿತ್ಸಕರು ತಕ್ಷಣ ದಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದ್ದಾರೆ. ಹಾಗೆ ನೋಡಿದರೆ ತಮಿಳು ನಾಡಿನಲ್ಲಿ ಉತ್ತಮ ಗುಣಮಟ್ಟದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿವೆ. ಆದರೆ ದುರದೃಷ್ಟದ ಸಂಗತಿ ಎಂದರೆ ಸಾಕಷ್ಟು ಸಂಖ್ಯೆಯ ರೋಗಿಗಳು ಆಸ್ಪತ್ರೆಗೆ ಬರುವ ಮೊದಲೇ ಸಾವನ್ನಪ್ಪಿರುವುದು.

ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೃತಪಟ್ಟವರ ಕುಟುಂಬಗಳಿಗೆ ಹತ್ತು ಲಕ್ಷ ರೂ. ಮತ್ತು ಗಾಯಗೊಂಡವರಿಗೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ನಟ-ರಾಜಕಾರಣಿ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರು ಈ ಪರಿಹಾರವನ್ನು ಎರಡು ಪಟ್ಟು ಹೆಚ್ಚಿಸಿದ್ದಾರೆ. ಅವರು ಸತ್ತವರ ಕುಟುಂಬಕ್ಕೆ 20 ಲಕ್ಷ ಮತ್ತು ಗಾಯಗೊಂಡವರಿಗೆ ಎರಡು ಲಕ್ಷ ರೂ. ಪರಿಹಾರವನ್ನು ಪ್ರಕಟಿಸಿದ್ದಾರೆ. ಸಿಎಂ ಸ್ಟಾಲಿನ್ ಘಟನೆಯ ತನಿಖೆಗೆ ಏಕಸದಸ್ಯ ನ್ಯಾಯಾಂಗ ಆಯೋಗವನ್ನು ರಚಿಸಿದ್ದಾರೆ.

ಇಷ್ಟೆಲ್ಲ ಆದ ಬಳಿಕ ನಮ್ಮ ಮನಸ್ಸಿನಲ್ಲಿ ಉದ್ಭವಿಸುವ ಪ್ರಶ್ನೆ, ಈ ದುರಂತ ಸಂಭವಿಸಲು ಕಾರಣವಾದರೂ ಏನು?

ಕಣ್ಣಿಗೆ ರಾಚುವ ದೋಷಗಳು

ಕಣ್ಣಿಗೆ ಕಾಣುವ ಕಾರಣಗಳು ಒಂದೆರಡಲ್ಲ. ಅನೇಕ ಸರಣಿ ತಪ್ಪು ಹೆಜ್ಜೆಗಳು ಈ ದುರಂತಕ್ಕೆ ಕಾರಣವಾದವು. ಇಂತಹುದೊಂದು ಮಹಾದುರಂತ ಸಂಭವಿಸುವುದಕ್ಕಾಗಿಯೇ ಈ ಎಲ್ಲ ತಪ್ಪು ಹೆಜ್ಜೆಗಳು ಕಾದು ಕುಳಿತಿದ್ದವು ಅನಿಸುತ್ತದೆ.

ಕಳೆದ ವರ್ಷ ತಮ್ಮ ರಾಜಕೀಯ ಪಕ್ಷ ಟಿವಿಕೆಯನ್ನು ಸ್ಥಾಪನೆ ಮಾಡಿದ ಬಳಿಕ ವಿಜಯ್ ಅವರು ನಡೆಸುತ್ತಿರುವ ಐದನೇ ಬಹುಮುಖ್ಯ ಕಾರ್ಯಕ್ರಮ ಇದಾಗಿತ್ತು. ಮೊದಲ ಎರಡು ವಾರ್ಷಿಕ ಕಾರ್ಯಕ್ರಮಗಳಾಗಿದ್ದವು. ಅವುಗಳನ್ನು ಬೃಹತ್ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಆ ಮೂಲಕ ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸಿದ್ದರು.

ಇನ್ನೇನು ಆರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ರಾಜ್ಯದ ಎಲ್ಲ ವಲಯಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವುದು ಅವರ ಉದ್ದೇಶವಾಗಿತ್ತು. ಆ ಹಿನ್ನೆಲೆಯಲ್ಲಿಯೇ ಅವರು ಮೂರು ಸರಣಿ ರೋಡ್ ಶೋಗಳನ್ನು ಹಮ್ಮಿಕೊಂಡಿದ್ದರು.

ಹಾಗೆ ಏರ್ಪಡಿಸಿದ ಎಲ್ಲ ಐದು ಕಾರ್ಯಕ್ರಮಗಳು ಗೌಜಿ-ಗದ್ದಲದ ಗೂಡಾಗಿದ್ದವು. ನಿರೀಕ್ಷೆಗಿಂತ ಹೆಚ್ಚು ಜನ ಪ್ರವಾಹೋಪಾದಿಯಲ್ಲಿ ಹರಿದುಬಂದಿದ್ದರು. ಎಲ್ಲೆಲ್ಲೂ ನೀರು ಮತ್ತು ಆಹಾರದ ಕೊರತೆ ತಲೆದೋರಿದ್ದವು. ಸುಡುವ ಬಿಸಿಲಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಸುದೀರ್ಘ ಕಾಲ ಕಾಯಬೇಕಾಗಿ ಬಂದಿತ್ತು. ಅನೇಕ ಮಂದಿ ನಿರ್ಜಲೀಕರಣದಿಂದ ಬಳಲಿದ್ದರು. ಸೇರಿದ್ದ ಜನ ದುಂಡಾವರ್ತಿ ನಡೆಸುತ್ತಿದ್ದರು. ಕೆಲವರು ಕುಡಿದು ತೂರಾಡುತ್ತಿದ್ದರು. ಅಶಿಸ್ತಿನಿಂದ ಕೂಡಿದ ಅಭಿಮಾನಿಗಳು ಮೈದಾನದ ಮೂಲೆ ಮೂಲೆಗಳಲ್ಲಿಯೂ ಕಾಣಿಸುತ್ತಿದ್ದರು. ಕೆಲವರು ವಿದ್ಯುತ್ ಕಂಬ ಹತ್ತಿದ್ದರು, ಇನ್ನು ಕೆಲವರು ಮರ, ಟ್ರಾನ್ಸ್-ಫಾರ್ಮರ್ ಏರಿ ಕುಳಿತಿದ್ದರು. ಪೊಲೀಸರ ಕೈಮೀರಿಹೋಗಿತ್ತು. ಅವರಿಗೆ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದೇ ಕಷ್ಚದ ಕೆಲಸವಾಗಿತ್ತು.

ಜನರ ಪ್ರಾಣಕ್ಕೆ ಯಾರು ಹೊಣೆ?

ಮೊದಲ ಎರಡು ಸಭೆಗಳೇ ಎಚ್ಚರಿಕೆಯ ಗಂಟೆ ಬಾರಿಸಿದ್ದವು. ಹಾಗಾಗಿ ವಿಷಯ ಮದರಾಸ್ ಹೈಕೋರ್ಟ್ ಮೆಟ್ಟಿಲು ಏರಿತ್ತು. ಟಿವಿಕೆ ಕಾರ್ಯಕ್ರಮಗಳಲ್ಲಿ ಆಗಿರುವ ಭದ್ರತಾ ಲೋಪದ ಬಗ್ಗೆ ನ್ಯಾಯಾಧೀಶರು ತರಾಟೆಗೆ ತೆಗೆದಕೊಂಡಿದ್ದರು. ಜನ ಪ್ರಾಣ ಕಳೆದುಕೊಂಡರೆ ಯಾರು ಜವಾಬ್ದಾರಿ? ಎಂಬ ಗಂಭೀರ ಪ್ರಶ್ನೆಯನ್ನು ಅವರು ಕೇಳಿದ್ದರು.

ಆಡಳಿತವು ಡಿಎಂಕೆ ಕಾರ್ಯಕ್ರಮಗಳಿಗೆ ಕೊಟ್ಟಷ್ಟು ಭದ್ರತೆಯನ್ನು ನಮ್ಮ ಕಾರ್ಯಕ್ರಮಗಳಿಗೆ ಕೊಡುತ್ತಿಲ್ಲ ಎಂದು ಟಿವಿಕೆ ಅಧಿಕಾರಿಗಳು ದೂರಿದ್ದರು. ಆದರೆ ನಟ ವಿಜಯ್ ಅಭಿಮಾನಿಗಳು ತೋರುತ್ತಿರುವ ಪುಂಡಾಟಗಳಿಂದಾಗಿ ಪರಿಸ್ಥಿತಿಯನ್ನು ನಿಯಂತ್ರಿಸುವುದು ಆಡಳಿತಕ್ಕೆ ಕಷ್ಟವಾಗುತ್ತಿದೆ ಎಂಬ ದೂರು ಅಧಿಕಾರಿಗಳದ್ದಾಗಿತ್ತು.

ಎರಡೂ ಕಡೆಯವರು ಮಂಡಿಸಿದ ವಾದಗಳಲ್ಲಿ ಹುರುಳಿತ್ತಾದರೂ ನ್ಯಾಯಾಧೀಶರು ಮಾಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಕ್ರಮಗಳನ್ನು ಕೈಗೊಂಡಿದ್ದೇ ಹೌದಾದರೆ ಕರೂರು ದುರಂತವನ್ನು ನಿಶ್ಚಿತವಾಗಿ ತಪ್ಪಿಸಬಹುದಾಗಿತ್ತು. ಎರಡೂ ಕಡೆಯವರು ಕೋರ್ಟ್ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಗೊಡವೆಗೇ ಹೋಗಲಿಲ್ಲ. ಅವರು ಅಂಟಿಕೊಂಡಿದ್ದು ಸಂಕುಚಿತ ಸ್ವಭಾವಕ್ಕೆ, ಅವರಿಗೆ ಬೇಕಾಗಿದ್ದು ರಾಜಕೀಯ ಜಿದ್ದಾಜಿದ್ದಿ ಮಾತ್ರ-ಒಬ್ಬರಿಗೆ ಅಧಿಕಾರಕ್ಕೆ ಅಂಟಿಕೊಳ್ಳುವ ಹುಕಿಯಾದರೆ ಇನ್ನೊಬ್ಬರಿಗೆ ಅಧಿಕಾರಕ್ಕೇರುವ ಹಪಾಹಪಿ. ಮರೆತಿದ್ದು ತಾವು ಸೇವೆ ಸಲ್ಲಿಸಬೇಕಾಗಿರುವ ಜನರ ಭರವಸೆಗಳನ್ನು ಈಡೇರಿಸುವ ಜವಾಬ್ದಾರಿಯನ್ನು.

ಕಾಲ್ತುಳಿತಕ್ಕೆ ಕಾರಣವಾದ ಏಳು ಅಂಶಗಳು

ಕರೂರು ದುರಂತಕ್ಕೆ ಕನಿಷ್ಠ ಏಳು ಬೆಳವಣಿಗೆಗಳು ಕಾರಣ. ಇದರಿಂದ ಉದ್ಭವಿಸಿದ ಪ್ರಶ್ನೆಗಳಿಗೆ ರಾಜ್ಯದ ಆಡಳಿತ ಮತ್ತು ವಿಜಯ್ ಅವರ ಟಿವಿಕೆ ಕಡ್ಡಾಯವಾಗಿ ಉತ್ತರ ನೀಡಲೇಬೆಕಾಗಿದೆ:

ಪ್ರಶ್ನೆ-1: ಸೆ.27ರ ಶನಿವಾರ ಮೊದಲ ಮೆರವಣಿಗೆ ಆರಂಭವಾಗಬೇಕಿದ್ದು ಕರೂರಿನಿಂದ 39 ಕಿ.ಮೀ. ದೂರದಲ್ಲಿರುವ ನಮಕ್ಕಲ್ ಎಂಬಲ್ಲಿ. ಅದು ಆಯೋಜಿತವಾಗಿದ್ದು ಬೆಳಿಗ್ಗೆ 8.45ಕ್ಕೆ. ಅದಕ್ಕಾಗಿ ಜನ ಸೇರಲು ಶುರುವಾಗಿದ್ದು ಬೆಳಗಿನ ಜಾವ ಮೂರು ಗಂಟೆಗೆ. ಆದರೆ ಕಾರ್ಯಕ್ರಮಕ್ಕೆ ಬರಲು ವಿಜಯ್ ಚೆನ್ನೈನಲ್ಲಿ ವಿಶೇಷ ವಿಮಾನವನ್ನು ಏರಿದ್ದು ಬೆಳಿಗ್ಗೆ ಒಂಭತ್ತಕ್ಕೆ. ಅಲ್ಲಿಂದ ಅವರು ಬಂದಿದ್ದು ತಿರಚ್ಚಿಗೆ. ನಮಕ್ಕಲ್ ತಲುಪಲು ಅವರು ರಸ್ತೆ ಮಾರ್ಗದ ಮೂಲಕ ಕಬಳಿಸಿದ ಅವಧಿ ಒಂದೂವರೆ ಗಂಟೆ. ಅದರ ಫಲವಾಗಿ ಮೊದಲ ಸಭೆ ನಡೆದಿದ್ದೇ ಮಧ್ಯಾಹ್ನ 2.30ಕ್ಕೆ. ಈ ವಿಳಂಬಕ್ಕೆ ಕಾರಣವೇನು?

ಪ್ರಶ್ನೆ-2: ವಿಜಯ್ ಅವರು ಮಧ್ಯಾಹ್ಯ 12 ಗಂಟೆಗೆ ಕರೂರ್ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಬೇಕಾಗಿತ್ತು. ಅದು ಆರಂಭವಾಗಿದ್ದೇ ಸಂಜೆ 7.30ಕ್ಕೆ. ಅವರು ನಗರದ ಹೊರವಲಯ ತಲುಪಿದಾಗ ಸಂಜೆ ಏಳು ಗಂಟೆ ಕಳೆದುಹೋಗಿತ್ತು. 40 ಅಡಿ ಅಗಲದ ಅತ್ಯಂತ ಇಕ್ಕಟ್ಟಾದ ರಸ್ತೆಯಲ್ಲಿ ವಿಜಯ್ ಅವರ ಕಾರವಾನ್ ವಾಹನವನ್ನು ಪೊಲೀಸರು ಅತ್ಯಂತ ಕಷ್ಟಪಟ್ಟು ಕರೆತಂದರು. ಈಗ ದುರಂತ ಸಂಭವಿಸಿದ ವೇಲುಸ್ವಾಮಿಪುರಂ ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಯಾವಾಗ ಕಾರವಾನ್ ವಾಹನ ಪ್ರವೇಶ ಪಡೆಯಿತೋ ಹೆದ್ದಾರಿಕಡೆಯಿಂದ ಇನ್ನಷ್ಟು ಜನ ನುಗ್ಗಿಬಂದರು. ಜೊತೆಗೆ ಹತ್ತಿರದ ಫ್ಯಾಕ್ಟರಿಗಳಿಂದಲೂ ಕಾರ್ಮಿಕರ ದಂಡು ಸೇರಿಕೊಂಡರು. ಪರಿಸ್ಥಿತಿ ಹೀಗಿರುವಾಗ ಆಡಳಿತವಾಗಲಿ ವಿಜಯ್ ಅವರಾಗಲಿ ಸಭೆಯನ್ನು ಯಾಕೆ ರದ್ದುಪಡಿಸಲಿಲ್ಲ?

ಪ್ರಶ್ನೆ-3; ಟಿವಿಕೆ ಪ್ರಕಾರ ಸೇರಿದ ಜನ ಹತ್ತು ಸಾವಿರ. ಆದರೆ ಪೊಲೀಸರು ಹೇಳುವುದು 27000. ವಿಜಯ್ ಭಾಷಣ ಶುರುಹಚ್ಚಿಕೊಂಡಾಗ ಅಭಿಮಾನಿಗಳು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಏರಿ ಕುಳಿತರು. ಅಲ್ಲಿದ್ದ ಮರದ ಕೊಂಬೆಯೊಂದು ತುಂಡಾಗಿ ಬಿತ್ತು. ಅದೇ ಹೊತ್ತಿಗೆ ವಿದ್ಯುತ್ ಕೈಕೊಟ್ಟಿತು. ದ್ವನಿವರ್ಧಕ ಕೆಲಸಮಾಡಲಿಲ್ಲ. ಹೇಗಾದರೂ ಮಾಡಿ ಚಿತ್ರತಾರೆಯ ಮಾತು ಆಲಿಸಬೇಕೆಂದು ಜನ ಮುಂದಕ್ಕೆ ನುಗ್ಗಿದರು. ಸಾವಿರ ಸಾವಿರ ಸಂಖ್ಯೆಯ ಅಭಿಮಾನಿಗಳು ತಮ್ಮ ಮೊಬೈಲ್ ಫೋನ್ ಮೂಲಕ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವ ಕ್ರೇಝ್-ಗೆ ಬಿದ್ದರು. ವೈಫೈ ನೆಟ್ವರ್ಕ್ ಕೆಲಸಮಾಡಲಿಲ್ಲ. ಅಲ್ಲಿ ಜಮಾಯಿಸಿದ್ದ ಜನರ ಸಂಖ್ಯೆ ಎಷ್ಟು ಎಂಬುದನ್ನು ವಿಜಯ್ ಅಥವಾ ಪೊಲೀಸ್ ಗುಪ್ತಚರರಾಗಲಿ ಯಾಕೆ ಅಳೆಯಲು ಸಾಧ್ಯವಾಗಲಿಲ್ಲ? ಅಲ್ಲಿದ್ದ ಬಹುತೇಕ ಎಲ್ಲರ ಬಳಿಯೂ ಮೊಬೈಲ್ ಇತ್ತು. ಆದರೂ ಆ ಕಾಲಕ್ಕೆ ಎಷ್ಟು ದಟ್ಟಣೆ ಇತ್ತು, ಜನರ ವರ್ತನೆ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಯಾಕೆ ಸಾಧ್ಯವಾಗಲಿಲ್ಲ?

ಪ್ರಶ್ನೆ-4: ಜನರು ಭಯಭೀತರಾಗಿ ಅತ್ತಿಂದಿತ್ತ ಓಡಾಡುತ್ತಿದ್ದರಿಂದ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿ ಮಹಿಳೆಯರು, ಮಕ್ಕಳು ಮತ್ತು ಕೆಲವು ಪುರುಷರು ಕೂಡ ಪ್ರಜ್ಞೆ ತಪ್ಪಿದರು. ಸರಿಸುಮಾರು ಅದೇ ಹೊತ್ತಿಗೆ ಒಂಭತ್ತು ವರ್ಷದ ಹುಡುಗಿ ಕಾಣೆಯಾಗಿದ್ದಾಳೆ ಎಂಬ ಪ್ರಕಟಣೆಯನ್ನು ಸ್ವತಃ ವಿಜಯ್ ಅವರೇ ನೀಡಿದರು. ಅದಾದ ಬಳಿಕ ತಮ್ಮ ಭಾಷಣವನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದ ಅವರು ವ್ಯಾನ್ ಒಳಕ್ಕೆ ಇಳಿದರು. ಆ ಸಂದರ್ಭದಲ್ಲಿಯೇ ಎಲ್ಲರಿಗೂ ತಿಳಿದದ್ದು ಏನೋ ಹೆಚ್ಚು-ಕಡಿಮೆ ಆಗಿದೆ ಎಂದು. ಇಂತಹ ಪರಿಸ್ಥಿತಿಯಲ್ಲಿ ಟಿವಿಕೆ ಪದಾದಿಕಾರಿಗಳು ಎಲ್ಲರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಯಾಕೆ ನಿಯಂತ್ರಿಸಲಿಲ್ಲ?

ಪ್ರಶ್ನೆ-5: ಜನದಟ್ಟಣೆಯಲ್ಲಿ ಕಾಲಿಡಲೂ ಜಾಗ ಸಿಗದೇ ಹೋದಾಗ ಅಭಿಮಾನಿಗಳು ಸಹಾಯಕ್ಕಾಗಿ ಮೊರೆಯಿಟ್ಟರು. ವಿಜಯ್ ಇನ್ನೂ ಮಾತನಾಡುತ್ತಿದ್ದಾಗಲೇ ಆ್ಯಂಬುಲೆನ್ಸ್ ಗಳು ಒಳಗೆ ದಾರಿಮಾಡಿಕೊಂಡು ಬರಲು ಶುರುಮಾಡಿದವು. ಆಗ ಪೊಲೀಸರು ವಾಹನಗಳಿಗೆ ದಾರಿಮಾಡಿಕೊಡಲು ಲಘು ಲಾಠಿ ಪ್ರಹಾರ ನಡೆಸಿದರು. ಬಹುಷಃ ಇದರಿಂದಾಗಿಯೇ ಜನರಲ್ಲಿ ಗಲಿಬಿಲಿ ಉಂಟಾಯಿತು. ಒಬ್ಬರನ್ನೊಬ್ಬರು ತುಳಿಯಲು ಶುರುವಾಯಿತು. ಅನೇಕ ಮಂದಿ ಪ್ರಜ್ಞೆ ತಪ್ಪಿ ಬಿದ್ದರು. ವಿಜಯ್ ಅವರು ಏರಿದ್ದ ಕಾರವಾನ್ ನಿಂತ ಕಾರಣಕ್ಕೆ ರಸ್ತೆಯ ಒಂದು ಭಾಗ ಬಂದ್ ಆಗಿತ್ತು. ಆ್ಯಂಬುಲೆನ್ಸ್ ಇನ್ನೊಂದು ಕಡೆಯಿಂದ ಬರಲು ಆರಂಭಿಸಿದ್ದರಿಂದ ಜನ ಆ ದಟ್ಟಣೆಯ ನಡುವೆ ಸಿಕ್ಕಿ ಹಿಂಡಿಹಿಪ್ಪೆಯಾದರು. ಆ್ಯಂಬುಲೆನ್ಸ್ ಬೇಕು ಎಂದು ಹೇಳಿದವರಾದರು ಯಾರು?

ಪ್ರಶ್ನೆ-6: ಇದಕ್ಕೂ ಮೊದಲು ಜನರ ನಡುವಿನಿಂದ ಯಾರೋ ಒಬ್ಬರು ವಿಜಯ್ ಕಡೆಗೆ ಚಪ್ಪಲಿ ಎಸೆದರು. ಅದು ನಟನಿಗೆ ಬಂದು ಬಡಿಯದಂತೆ ಅಂಗರಕ್ಷಕರು ತಡೆದರು. ನಟನಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂಬುದು ಟಿವಿಕೆ ಮೂಲಗಳ ಆರೋಪ. ಆ ದುಷ್ಕರ್ಮಿಗಳು ಯಾರು? ಸ್ಥಳೀಯ ಆಡಳಿತ ಮತ್ತು ಪೊಲೀಸರು ಅವರನ್ನು ಗುರುತಿಸಿರಬಹುದು. ಇಂತಹ ಘಟನೆಯನ್ನು ತಪ್ಪಿಸಲು ಯಾಕೆ ಮುಂಜಾಗ್ರತಾ ಕ್ರಮವಾಗಿ ಯಾರನ್ನೂ ಬಂಧಿಸಲಿಲ್ಲ?

ಪ್ರಶ್ನೆ-7: ನಾವು ಪೊಲೀಸರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದೆವು ಎಂದು ಟಿವಿಕೆ ಹೇಳುತ್ತದೆ. ಹೊಸದಾಗಿ ರಚಿಸಲಾಗಿರುವ ಪಕ್ಷದ ಕಾರ್ಯಕರ್ತರಿಗೆ ಶಿಸ್ತೇ ಇಲ್ಲ ಎಂದು ಆಡಳಿತ ಬೊಟ್ಟುಮಾಡುತ್ತದೆ. ಕೇವಲ ಒಂದು ವಾರದ ಹಿಂದಷ್ಟೇ ಅದೇ ಜಾಗದಲ್ಲಿ ಅಣ್ಣಾಡಿಎಂಕೆಯ ಅಧ್ಯಕ್ಷ ಎಡಪ್ಪಾಡಿ ಕೆ ಪಳನಿಸ್ವಾಮಿ ಜನರನ್ನು ಉದ್ದೇಶಿಸಿ ಮಾತನಾಡಿದಾಗ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ ಎಂದು ಡಿಎಂಕೆ ಮೂಲಗಳು ಹೇಳುತ್ತವೆ. ವಿಜಯ್ ಅಭಿಮಾನಿಗಳ ಅತಿಯಾದ ಉತ್ಸಾಹವೇ ಇದಕ್ಕೆಲ್ಲ ಕಾರಣವೆಂದು ಎಂದು ಆರೋಪಿಸಲಾಗುತ್ತಿದೆ. ಎರಡೂ ಕಡೆಯ ಜನರು ಭಿನ್ನವಾಗಿ ವರ್ತಿಸಿದ್ದಾರೆ. ಇದನ್ನು ಯಾರೂ ನಿರೀಕ್ಷಿಸಲಿಲ್ಲವೇ?

ರಾಜಕೀಯದ ಕೆಸರೆರಚಾಟ

ತಾನು ಪಿತೂರಿಯ ಬಲಿಪಶು ಎಂದು ಆರೋಪಿಸಿರುವ ಟಿವಿಕೆ ಕೋರ್ಟ್ ಮೊರೆ ಹೋಗಿದೆ. ಡಿಎಂಕೆ ಸರ್ಕಾರ ಸಾಕಷ್ಟು ಭದ್ರತೆಯನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಮತ್ತು ಎಡಿಎಂಕೆ ಟೀಕಿಸಿದೆ. ಕಾರ್ಯಕ್ರಮದ ಸ್ಥಳದಲ್ಲಿ ಅಗತ್ಯಕ್ಕಿಂತ ಹೆಚ್ಚೇ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು ಎಂದು ಹೇಳಿರುವ ಸರ್ಕಾರವು, ವಿದ್ಯುತ್ ಕಡಿತಮಾಡುವಂತೆ ಯಾವ ಆದೇಶವನ್ನು ನೀಡಲಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಟಿವಿಕೆ ಸಮ್ಮತಿಯೊಂದಿಗೇ ಆ ಜಾಗವನ್ನು ಆಯ್ಕೆಮಾಡಿಕೊಳ್ಳಲಾಗಿತ್ತು. ನಾಯಕ ನಟ ಸ್ಥಳಕ್ಕೆ ವಿಳಂಬವಾಗಿ ಬಂದಿದ್ದೇ ಜನಸಂದಣಿ ಹೆಚ್ಚಾಗಲು ಕಾರಣವೆಂದು ಸರ್ಕಾರದ ಮೂಲ ತಿಳಿಸಿದೆ.

ರಾಜಕೀಯ ಪಕ್ಷಗಳ ಈ ಕೆಸರೆರಚಾಟ ಒತ್ತಟ್ಟಿಗಿರಲಿ. ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಈ ರೋಡ್ ಶೋಗಳಿಗೆ ನಿಷೇಧಿಸುವ ಬಗ್ಗೆ ರಾಜಕೀಯ ವರ್ಗ ಗಂಭೀರವಾಗಿ ಪರಿಗಣಿಸಬೇಕು. ರಾಜಕೀಯ ಮೆರವಣಿಗೆಗಳಿಗೆಂದೇ ನಿರ್ದಿಷ್ಟ ಸ್ಥಳವನ್ನು ನಿಗದಿಮಾಡಬೇಕು. ಅದು ಖಂಡಿತವಾಗಿ ನಗರದಿಂದ ಹೊರಗಿರಬೇಕು.

ರಾಜ್ಯದಲ್ಲಿ ಚುನಾವಣಾ ದಿನಾಂಕಗಳು ಪ್ರಕಟವಾಗುತ್ತಿದ್ದಂತೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯ ಬಗ್ಗೆ ಮರುಚಿಂತನೆ ನಡೆಸಬೇಕು. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಜನಸಾಮಾನ್ಯರನ್ನು ಹೊರಗಿಡುವ ರೀತಿಯಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸಬೇಕು. ಹೆದ್ದಾರಿಗಳಲ್ಲಿ ಮತ್ತು ಒಳರಸ್ತೆಗಳಲ್ಲಿ ಮೆರವಣಿಗೆಗಳು ನಡೆದು ರೋಡ್ ಬ್ಲಾಕ್ ಉಂಟಾದಾಗ ತುರ್ತು ಸೇವೆಗಳಿಗೆ ತೊಂದರೆ ಉಂಟಾಗುತ್ತದೆ. ಜನ ಬಸ್ಸು, ವಿಮಾನ, ರೈಲುಗಳನ್ನು ತಪ್ಪಿಸಿಕೊಳ್ಳುತ್ತಾರೆ. ಯಾವ ಸೇವೆಗಳೂ ನಿಯಂತ್ರಣಕ್ಕೆ ಸಿಗದ ಪರಿಸ್ಥಿತಿ ಉಂಟಾಗುತ್ತದೆ.

ಪ್ರಜಾಪ್ರಭುತ್ವ ಗೌಜಿ-ಗದ್ದಲ-ಅರಾಜಕತೆಯಿಂದ ಕೂಡಿರಬಹುದು, ಆದರೆ ಯಾವ ಬೆಲೆ ತೆತ್ತು?

ಕ್ಯಾಪ್: ಚಿತ್ರನಟ ಹಾಗೂ ಟಿವಿಕೆ ನಾಯಕ ವಿಜಯ್ ಅವರು ನಡೆಸಿದ ಎಲ್ಲ ಐದು ರಾಜಕೀಯ ಕಾರ್ಯಕ್ರಮಗಳು ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದವು. ಇದಕ್ಕೆ ಬೊಟ್ಟು ತೋರಿಸುವುದಾದರೂ ಯಾರ ಕಡೆಗೆ?

Tags:    

Similar News