ಕ್ರಿಕೆಟ್ ಅಂಗಣದ ಆಪರೇಷನ್ ಹ್ಯಾಂಡ್-ಶೇಕ್ : ಭಾರತ-ಪಾಕಿಸ್ತಾನದಲ್ಲಿ ಇನ್ನೂ ಅಡಗಿಲ್ಲ ಕಂಪನ!
‘ಸಜ್ಜನರ ಕ್ರೀಡೆ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕ್ರಿಕೆಟ್ ಬಹುದೊಡ್ಡ ಅಗ್ನಿಪರೀಕ್ಷೆಗೆ ಗುರಿಯಾಗಿದೆ. ಒಂದು ಹಸ್ತಲಾಘವ ನಿರಾಕರಣೆಯಿಂದ ಹುಟ್ಟಿದ ಕಂಪನ ಎರಡೂ ರಾಷ್ಟ್ರಗಳನ್ನು ಇನ್ನೂ ನಿಂತಿಲ್ಲ...;
ಭಾನುವಾರ (ಸೆಪ್ಟೆಂಬರ್ 14) ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಏಷ್ಯಾ ಕಪ್ ಪಂದ್ಯವು ಈ ಎರಡು ತಂಡಗಳ ನಡುವಿನ ಇತ್ತೀಚಿನ ಅನೇಕ ಪಂದ್ಯಗಳಂತೆಯೇ ಏಕಪಕ್ಷೀಯವಾಗಿತ್ತು.
ಭಾರತವು ತನ್ನ ಕೌಶಲ್ಯ ಮತ್ತು ಪ್ರಾಬಲ್ಯದಿಂದ ಪಾಕಿಸ್ತಾನವನ್ನು ಮಕಾಡೆ ಮಲಗಿಸಿತು. ಆದರೂ, ನಿಜವಾದ ಹೆಡ್-ಲೈನ್ ಸೃಷ್ಟಿಸಿದ್ದು ಸಿಕ್ಸ್, ವಿಕೆಟ್, ಅಥವಾ ಒಟ್ಟಾರರೆ ಪತನವಲ್ಲ. ಬದಲಾಗಿ ಪಂದ್ಯದ ನಂತರ ಆವರಿಸಿದ ನೀರವ ಮೌನ. ಅಂತಿಮ ಚೆಂಡು ಎಸೆದಾಗ, ಭಾರತೀಯ ಆಟಗಾರರು ತಮ್ಮ ಎದುರಾಳಿಗಳಿಗೆ ಕೈಕುಲುಕಲು ಮುಂದಾಗಲಿಲ್ಲ. ಸಾಂಪ್ರದಾಯಿಕ ಶುಭಾಶಯಗಳು ಇರಲಿಲ್ಲ, ಬೆನ್ನು ತಟ್ಟುವುದು ಕಾಣಿಸಲಿಲ್ಲ... ಎಲ್ಲರೂ ಮೌನವಾಗಿ ಮೈದಾನದಿಂದ ಹೊರನಡೆದರು.
ಕ್ರಿಕೆಟ್ ಆಟವೆಂದರೆ ಅಲ್ಲಿ ಕ್ರೀಡಾ ಸಂಪ್ರದಾಯ ಆಳವಾಗಿ ಬೇರು ಬಿಟ್ಟಿರುತ್ತದೆ, ಅಲ್ಲಿ ಕ್ರೀಡಾ ಸ್ಪೂರ್ತಿ ಆದ್ಯಂತವಾಗಿ ಬೇರುಬಿಟ್ಟಿರುತ್ತದೆ. ಅದಕ್ಕಾಗಿಯೇ ಕ್ರಿಕೆಟ್ ಸಜ್ಜನರ ಆಟ. ಅರ್ಥಾತ್ “ಜೆಂಟಲ್ಮನ್ ಗೇಮ್.” ಆದರೆ ಮೊನ್ನೆ ಕಂಡಿದ್ದು ಅದಕ್ಕೆ ವಿರುದ್ಧವಾದ ಆಚ್ಚರಿದಾಯಕ ವಿದ್ಯಮಾನ.
ಈ ಆಟದಲ್ಲಿ ಹಸ್ತಲಾಘವ ಎನ್ನುವುದು ಕೇವಲ ವಿಧಿಯಲ್ಲ, ಅದು ಗೌರವದ ಸಂಕೇತ. ಹೊರಗಿನ ಜಗಳ-ಸಗಳ, ದ್ವೇಷ-ವೈಷಮ್ಯ ಏನೇ ಇರಲಿ, ಕ್ರೀಡಾಂಗಣದ ಒಳಗಿನ ಕದನ ಯಾವತ್ತೂ ಭಿನ್ನ. ಅದು ಎಲ್ಲವನ್ನೂ ಬೇರ್ಪಡಿಸುವ ಮಾರ್ಗ. ಅವೆಲ್ಲವನ್ನೂ ನಿರಾಕರಿಸುವ ಹಾಗೆ ಒಂದು ಸಂದೇಶವನ್ನು ನೀಡಲಾಗುತ್ತದೆ.
ಭಾರತವು ಕಳುಹಿಸಲು ಬಯಸಿದ್ದು ಈ ಒಂದು ಸಂದೇಶವನ್ನೇ.
ಟ್ರೆಂಡ್ ಆದ ಹ್ಯಾಶ್-ಟ್ಯಾಗ್
ಈ ನಿರಾಕರಣೆ ಎಂದರೆ ಪ್ರತ್ಯೇಕವಾಗಿ ನೋಡುವುದು ಎಂದಲ್ಲ. ಭಾರತೀಯರ ಜೀವಗಳನ್ನು ಕಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತ ಕೈಗೊಂಡ ಆಪರೇಷನ್ ಸಿಂಧೂರ್ ನೆರಳು ಈ ಪಂದ್ಯದ ಮೇಲೆ ಗಾಢವಾಗಿ ಹರಡಿತ್ತು. ಸಾಮಾಜಿಕ ಮಾಧ್ಯಮದಲ್ಲಿ, #BoycottPakistan ಮತ್ತು #NoCricketWithTerror ನಂತಹ ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆಗಿದ್ದವು. ಭಾರತವು ಪಾಕಿಸ್ತಾನ ಜೊತೆ ಆಡಲೇಬಾರದು, ಇಂತಹ ಕ್ರಿಕೆಟ್ ಸಂಬಂಧಗಳು ಹುತಾತ್ಮರಿಗೆ ಮಾಡಿದ ಅವಮಾನ ಎಂದು ಅನೇಕರು ವಾದಿಸಿದ್ದರು. ಆದರೆ ಬಿಸಿಸಿಐ ತನ್ನ ಬದ್ಧತೆಗಳಿಗೆ ಅಂಟಿಕೊಂಡಾಗ, ರಾಷ್ಟ್ರೀಯ ಭಾವನೆಗಿಂತ ಹಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂಬ ಟೀಕೆಯೂ ಹರಿದಾಡಿತು.
ಈ ಹಿನ್ನೆಲೆಯಲ್ಲಿ ಭಾರತೀಯ ತಂಡದ ಮೌನ, ಹಸ್ತಲಾಘವವಿಲ್ಲದ, ಯಾವುದೇ ಸ್ವೀಕೃತ ಭಾವನೆ ಇಲ್ಲದ ವಾತಾವರಣ ಹೆಗಲಿಗೆ-ಹೆಗಲು ತಾಕಿಸಿದ ಸಂಘರ್ಷಕ್ಕಿಂತ ದೊಡ್ಡದಾಗಿತ್ತು. ಅದೊಂದು ಸಾಂಕೇತಿಕ ನಿಲುವು. ಅವರು ಆಡಬೇಕಾದ ಅನಿವಾರ್ಯವಿತ್ತೇ ಹೊರತು, ಸೌಜನ್ಯಗಳನ್ನು ಪ್ರದರ್ಶಿಸುವ ಕರ್ತವ್ಯ ಅವರ ಮೇಲಿರಲಿಲ್ಲ ಎಂಬುದು ಸ್ಪಷ್ಟ. ಇಂತಹ ತ್ವೇಷಮಯ ವಾತಾವರಣದಲ್ಲಿ ಹಸ್ತಲಾಘವವನ್ನು ನಿರಾಕರಿಸುವ ನಿರ್ಧಾರವು ಕೇವಲ ವೈಯಕ್ತಿಕ ಭಾವನೆಯಾಗಿರಲಿಲ್ಲ. ಬದಲಾಗಿ ರಾಷ್ಟ್ರೀಯ ಮನಸ್ಥಿತಿಯ ಪ್ರತಿಬಿಂಬವಾಗಿತ್ತು.
ಸಭ್ಯತೆಯನ್ನು ಮೀರಿದ ಪಾಕ್ ಆಟಗಾರರ ಪೋಸ್ಟ್
ಭಾರತೀಯ ಆಟಗಾರರ ಈ ದೃಢಸಂಕಲ್ಪಕ್ಕೆ ಪಾಕಿಸ್ತಾನಿ ಆಟಗಾರರ ಕೆಲವು ನಡವಳಿಕೆಗಳು ಪ್ರಮುಖ ಕಾರಣವಾಗಿದ್ದವು. ಆಪರೇಷನ್ ಸಿಂಧೂರ್ ನಂತರದ ದಿನಗಳಲ್ಲಿ ಪಾಕಿಸ್ತಾನದ ಕ್ರಿಕೆಟಿಗರಾದ ಫಾಹೀಮ್ ಆಶ್ರಫ್ ಮತ್ತು ಅಬ್ರಾರ್ ಅಹ್ಮದ್ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಅವು ಸಹ್ಯತೆಯನ್ನು ಮೀರಿದ್ದಾಗಿದ್ದವು. ಅವುಗಳ ಹಿಂದೆ ಭಾರತವನ್ನು ಅಣಕಿಸುವ ಉದ್ದೇಶವಿದ್ದುದು ಸ್ಪಷ್ಟ ಎಂಬುದು ಎಲ್ಲರಿಗೆ ಅರಿವಾಗಿತ್ತು. ಅವರ ಪೋಸ್ಟ್ ಗಳ ಸ್ಕ್ರೀನ್-ಶಾಟ್ ಗಳು ಭಾರತದ ಅನೇಕ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದು ಯಾರೂ ಮರೆಯುವಂತಿಲ್ಲ. ಆ ಪೋಸ್ಟ್ ಗಳಲ್ಲಿದ್ದ ‘ಧ್ವನಿ’ ಸೂಕ್ಷ್ಮ ಗ್ರಹಿಕೆಯನ್ನು ಮೀರಿದ್ದಾಗಿತ್ತು ಮಾತ್ರವಲ್ಲದೆ ಭಾರತದ ಆಕ್ರೋಶವನ್ನೇ ಅಣಕಿಸಿದಂತಿತ್ತು. ಭಾರತದ ಬಹುತೇಕ ಅಭಿಮಾನಿಗಳಿಗೆ ಅವು ಅಗೌರವದ ಪುರಾವೆಗಳಾಗಿದ್ದವು. ಕ್ರೀಡಾಪಟುಗಳು ಕೂಡ ಅಬ್ಬರದ ದೇಶಭಕ್ತಿಯನ್ನು ಪ್ರದರ್ಶಿಸಬಲ್ಲರು ಎಂಬುದನ್ನು ನೆನಪಿಸಿದವು.
ಇವೆಲ್ಲಕ್ಕೆ ವ್ಯತಿರಿಕ್ತವಾಗಿ ಭಾರತದ ಆಟಗಾರರು ಕೀಳುಮಟ್ಟದ ಆನ್ಲೈನ್ ನಡವಳಿಕೆಯಿಂದ ದೂರ ಉಳಿದಿದ್ದರು. ಮೀಮ್ ಅಥವಾ ಗೇಲಿ ಮಾಡುವ ಪೋಸ್ಟ್-ಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳಲಿಲ್ಲ. ಅದಕ್ಕಿಂತ ಮೈದಾನದಲ್ಲಿನ ಮೌನವೇ ಸೂಕ್ತ ಉತ್ತರವೆಂದು ಆಯ್ಕೆಮಾಡಿಕೊಂಡರು. ಹಸ್ತಲಾಘವವನ್ನು ನಿರಾಕರಿಸುವ ಮೂಲಕ ಅದಕ್ಕೊಂದು ಸಭ್ಯತೆಯ ಚೌಕಟ್ಟು ಹಾಕಿಕೊಟ್ಟರು. ಇದನ್ನೇ ವಿಶಾಲ ದೃಷ್ಟಿಕೋನದಿಂದ ಗಮನಿಸಿದಾಗ ಆಟ ಕೊನೆಗೊಂಡ ಬಳಿಕ ಮೌನವೇ ಘನತೆಯ ಸಂಕೇತ ಎಂಬುದನ್ನು ನಮ್ಮ ಆಟಗಾರರು ಜಗತ್ತಿಗೇ ತೋರಿಸಿಕೊಟ್ಟರು. ಅವರು ಅವಮಾನಗಳನ್ನು ವಿನಿಮಯ ಮಾಡಿಕೊಳ್ಳಲಿಲ್ಲ. ಬದಲಾಗಿ ಗೆದ್ದು ಸದ್ದಿಲ್ಲದೇ ಹೊರನಡೆದರು.
ಪಂದ್ಯ ಮುಗಿದ ಬಳಿಕ ನಾಯಕ ಸೂರ್ಯಕುಮಾರ್ ಅವರು ಮಾಧ್ಯಮದೊಂದಿಗೆ ಹೇಳಿದ ಮಾತುಗಳು ಸ್ಪಷ್ಟವಾಗಿದ್ದವು; “ಈ ಗೆಲವು ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಅರ್ಪಿತ. ನಾವು ಅವರೊಂದಿಗೆ ಮತ್ತು ನಮ್ಮ ಸಶಸ್ತ್ರ ಪಡೆಗಳೊಂದಿಗೆ ನಿಲ್ಲುತ್ತೇವೆ. ಈ ರಾತ್ರಿ ನಾವು ಹೇಳಬೇಕಾಗಿರುವುದು ಇಷ್ಟೇ.”
ಹುತಾತ್ಮರಿಗೆ ಗೌರವ ಸಲ್ಲಿಸುವುದು ಸೌಹಾರ್ದತೆಯ ನಡೆಗಿಂತ ಹೆಚ್ಚಿನದು ಎಂಬುದನ್ನು ಅವರು ಸ್ಪಷ್ಟವಾಗಿ ತೋರಿಸಿಕೊಟ್ಟರು. ಭಾರತವು ಗೆದ್ದು ಹೊರನಡೆದಾಗ ಮೌನವೇ ದೊಡ್ಡ ದನಿಯಾಗಿತ್ತು.
ಇದು ಶಸ್ತ್ರಗಳಿಲ್ಲದ ಯುದ್ಧ
ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವೇಷವು ಕ್ರೀಡೆಯನ್ನೂ ಮೀರಿದ್ದು. ‘ಇದು ಶಸ್ತ್ರಾಸ್ತ್ರಗಳೇ ಇಲ್ಲದ ಯುದ್ಧ’ ಎಂದು ಕ್ರಿಕೆಟ್ ಅಭಿಮಾನಿಗಳು ಮತ್ತು ಬರಹಗಾರರು ಬಹಳಷ್ಟು ಹಿಂದೆಯೇ ಹೇಳಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ರಾಜಕೀಯ ಒಳಸುಳಿಗಳು ಅಡಕವಾಗಿರುತ್ತವೆ. ಪ್ರತಿಯೊಂದು ಸೋಲು ಅಥವಾ ಗೆಲವು ಬೌಂಡರಿ ಗೆರೆಗಳಾಚೆಗೂ ಚಾಚಿಕೊಂಡಿರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಈ ಜಿದ್ದಾಜಿದ್ದಿಯು ತನ್ನ ತೀಕ್ಷ್ಣತೆಯನ್ನು ತಕ್ಕಮಟ್ಟಿಗೆ ಕಳೆದುಕೊಂಡಿತ್ತು. ಭಾರತವು ಬಹುತೇಕ ಎಲ್ಲ ಐಸಿಸಿ ಮತ್ತು ಏಷ್ಯಾ ಕಪ್ ಮುಖಮುಖಿಗಳಲ್ಲಿ ಪಾರಮ್ಯ ಮೆರೆದಿದೆ. ಈ ಸ್ಪರ್ಧೆಗಳು ಹಿಂದೆ ಇದ್ದಷ್ಟು ನಡುಕವನ್ನು ಈಗ ಹುಟ್ಟಿಸುತ್ತಿಲ್ಲ. ಆದರೆ ಯಾವತ್ತು ಪಹಲ್ಗಾಮ್ ದಾಳಿ ಮತ್ತು ಸಿಂಧೂರ್ ಆಪರೇಷನ್ ನಡೆಯಿತೋ ಅಂದಿನಿಂದ ಕ್ರಿಕೆಟ್ಟಿಗೆ ತೀವ್ರತೆ ತುಂಬಿದಂತಾಗಿದೆ. ಅದಕ್ಕೆ ರಾಜಕೀಯ ಮತ್ತು ಸಾಮಾಜಿಕ ಆಯಾಮ ನೀಡಿದೆ.
ಕ್ರಿಕೆಟ್ಟು ಕದನಶೀಲ ದೇಶಪ್ರೇಮದ ತೆಕ್ಕೆಗೆ ಸಿಕ್ಕಿರುವುದು ಇದೇ ಮೊದಲಲ್ಲ. ಪಾಕಿಸ್ತಾನದ ಮಾಜಿ ನಾಯಕ ಶಾಹೀದಿ ಆಫ್ರೀದಿ ಭಾರತವನ್ನು ಕೀಳಾಗಿ ಕಂಡು ಉಗ್ರವಾದವನ್ನು ಶ್ಲಾಘಿಸುವ ಮಾತುಗಳನ್ನು ಪದೇ ಪದೇ ಆಡುತ್ತ ವಿವಾದ ಸೃಷ್ಟಿಸುತ್ತ ಬಂದವರು. ಇಂತಹ ಪ್ರತಿಯೊಂದು ಹೇಳಿಕೆಗಳು ಕೂಡ ಅಪನಂಬಿಕೆಯ ಗಾಯವನ್ನು ಇನ್ನಷ್ಟು ಆಳವಾಗಿ ಮಾಡಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಈಗಿನ ಆಟಗಾರರು ಸಭ್ಯತೆಯನ್ನು ಮೀರಿದ ಸಾಮಾಜಿಕ ನಡವಳಿಕೆಯನ್ನು ತೋರಿದಾಗ ಹಸ್ತಲಾಘವವನ್ನು ನಿರಾಕರಿಸುವ ಭಾರತ ತಂಡದ ಕ್ರಮವು ಸಮರ್ಥನೀಯ ಮಾತ್ರವಲ್ಲ ಅನಿವಾರ್ಯವೂ ಕೂಡ.
ಸಾಮಾಜಿಕ ಮಾಧ್ಯಮದ ಅಪಸವ್ಯಗಳು
ಈ ಎಲ್ಲ ಘಟನೆಯು ನಮ್ಮ ಮುಂದೆ ಗಹನವಾದ ಪ್ರಶ್ನೆಯನ್ನು ನಮ್ಮ ಮುಂದೆ ಇರಿಸುತ್ತದೆ; ಇದು ಕೊನೆಗೊಳ್ಳುವುದಾದರೂ ಯಾವಾಗ? ಈ ಇಡೀ ಪ್ರಕರಣದಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ. ಭಾರತ-ಪಾಕಿಸ್ತಾನದ ಪಂದ್ಯಕ್ಕೂ ಮೊದಲು ಭಾರತ ಟ್ವೀಟರ್ (ಈಗ ಎಕ್ಸ್)ನಲ್ಲಿ ಮ್ಯಾಚ್ ನಿಷೇಧಿಸಿ ಎಂಬ ಕೂಗುಗಳಿಂದಲೇ ತುಂಬಿಹೋಗಿತ್ತು. ತಂಡವನ್ನು ಪಾಕಿಸ್ತಾನವನ್ನು ಎದುರು ನಿಲ್ಲಿಸಿ ‘ಹುತಾತ್ಮರಿಗೆ ದ್ರೋಹ’ ಎಸಗಿದೆ ಎಂದು ಬಿಸಿಸಿಐ ವಿರುದ್ಧ ರಾಜಕಾರಣಿಗಳು ಮತ್ತು ಬೆಂಬಲಿಗರು ಆರೋಪಿಸಿದ್ದರು. ವಾತಾವರಣ ಅಷ್ಟೊಂದು ಸೂಕ್ಷ್ಮವಾಗಿದ್ದ ಸಂದರ್ಭದಲ್ಲಿ ಹಸ್ತಲಾಘವ ಕೂಡ ದೌರ್ಬಲ್ಯವಾಗಿ ಪರಿಗಣಿಸುವ ಸಾಧ್ಯತೆಗಳಿದ್ದವು.
ಇಂದು ಆಟಗಾರರು ಕೂಡ ಇದಕ್ಕೆ ಹೊರತಾಗಿಲ್ಲ. ಅವರ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಒಬ್ಬ ಪಾಕಿಸ್ತಾನಿ ಆಟಗಾರನ ಜೊತೆ ನಕ್ಕರೂ ಟ್ರೋಲಿಂಗ್ಗೆ ಒಳಗಾಗುತ್ತಾರೆ, 'ರಾಷ್ಟ್ರ-ವಿರೋಧಿ' ಎಂಬ ಹಣೆಪಟ್ಟಿಗೆ ಒಳಗಾಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸೌಹಾರ್ದ ನಡೆಗಳಿಗಿಂತ ಮೌನ ಮತ್ತು ಹಿಂದೆ ಸರಿದು ನಿಲ್ಲುವುದು ಆಟಗಾರರಿಗೆ ಸುರಕ್ಷಿತವೆನಿಸುತ್ತದೆ.
ಇದೇ ನಡೆಗೆ ಬಿಸಿಸಿಐ ಕೂಡ ಪರೋಕ್ಷ ಬೆಂಬಲ ನೀಡಿದೆ ಎಂದು ನಂಬಲು ಕಾರಣವಿದೆ. ಸರ್ಕಾರ ಒತ್ತಡದಲ್ಲಿದ್ದಾಗ ಮತ್ತು ಬಿಸಿಸಿಐಯೂ ಸೈನಿಕರ ತ್ಯಾಗಗಳಿಗಿಂತ ಪ್ರಾಯೋಜಕತ್ವದ ಹಣಕ್ಕೆ ಹೆಚ್ಚು ಮೌಲ್ಯ ನೀಡುತ್ತಿದೆ ಎಂದು ಆರೋಪ ಎದುರಿಸುತ್ತಿದ್ದಾಗ, ಹಸ್ತಲಾಘವ ಮಾಡದಿರುವ ನಿಲುವು ಮತ್ತು ಸೂರ್ಯಕುಮಾರ್ ಯಾದವ್ ಅವರ ಪಂದ್ಯದ ನಂತರದ ಹೇಳಿಕೆಗಳು ಪೂರ್ವಯೋಜಿತ ಎನಿಸುತ್ತವೆ. ಪಂದ್ಯಾವಳಿಯನ್ನು ತಪ್ಪಿಸದೆ, ಬಹಿಷ್ಕಾರಕ್ಕೆ ಕರೆ ನೀಡಿದವರನ್ನು ಸಮಾಧಾನಪಡಿಸುವ ಮಾರ್ಗ ಕೂಡ ಇದಾಗಿತ್ತು.
ಗದ್ದಲದಲ್ಲಿ ಕಳೆದುಹೋದ ಕ್ರೀಡಾಸ್ಫೂರ್ತಿ
ಆದರೂ, ಕ್ರಿಕೆಟ್ನ ಸಂಪ್ರದಾಯಗಳಿಗೆ ಪೆಟ್ಟು ಬಿದ್ದಿದ್ದು ಮಾತ್ರ ನಿಜ. ನಿಜವಾದ ಅಪಾಯ ಮುಂದಿದೆ. ಭಾರತ ತನ್ನ ರಾಷ್ಟ್ರೀಯ ಹೆಮ್ಮೆಯನ್ನು ಮೌನವಾಗಿ ಹಸ್ತಲಾಘವ ನಿರಾಕರಿಸುವ ಮೂಲಕ ಪ್ರದರ್ಶಿಸಿದರೆ, ಪಾಕಿಸ್ತಾನವೂ ಅದೇ ರೀತಿ ಪ್ರತೀಕಾರ ತೀರಿಸಿಕೊಂಡರೆ ಏನಾಗಬಹುದು? ನಾಳೆ ಪಾಕಿಸ್ತಾನದ ನಾಯಕ ಹಸ್ತಲಾಘವ ನಿರಾಕರಿಸಿ, ತಮ್ಮ ಸೇನೆಯ "ಶೌರ್ಯ"ವನ್ನು ಸಾಮಾಜಿಕ ಮಾಧ್ಯಮದಲ್ಲಿ ಶ್ಲಾಘಿಸಲು ಮುಂದಾದರೆ ಏನಾಗಬಹುದು? ಪರಿಸ್ಥಿತಿ ಹೇಗೆ ಹದಗೆಡಬಹುದು ಎಂದು ಊಹಿಸುವುದು ಸುಲಭ. ಆಗ ಕ್ರಿಕೆಟ್ ರಾಜಕೀಯ ಪ್ರದರ್ಶನಕ್ಕೆ ವೇದಿಕೆಯಾಗಿ, ಈ ಗದ್ದಲದಲ್ಲಿ ಕ್ರೀಡಾಸ್ಫೂರ್ತಿ ಕಳೆದುಹೋಗುತ್ತದೆ.
ಯುದ್ಧವಿಲ್ಲದೆ, ಬಾಂಬ್ಗಳ ಗದ್ದಲವಿಲ್ಲದೆ ಭಾರತ ಮತ್ತು ಪಾಕಿಸ್ತಾನ ಭೇಟಿಯಾಗುವ ಏಕೈಕ ಸ್ಥಳವೆಂದರೆ ಅದು ಕ್ರಿಕೆಟ್ ಅಂಗಣ. ಆದರೆ ಈ ಸ್ಥಳವೂ ರಾಜಕೀಯದ ಜಂಬ ಮತ್ತು ಸಾಮಾಜಿಕ ಮಾಧ್ಯಮದ ಒತ್ತಡಗಳಿಂದ ಆವರಿಸಲ್ಪಟ್ಟರೆ, ಆಗ ಎರಡೂ ದೇಶಗಳು ಮತ್ತು ಆಟವು ಕೂಡ ಮತ್ತಷ್ಟು ಕಳಪೆಯಾಗಬಹುದು.
ಮೌನವಾಗಿ ನಿರ್ಗಮಿಸುವ ಮೂಲಕ, ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಇದು ಹುತಾತ್ಮರ ಜೊತೆಗಿರುವ ತಮ್ಮ ಒಗ್ಗಟ್ಟನ್ನು ಸಾರಿ ಹೇಳಿದೆ. ದೇಶೀಯ ಆಕ್ರೋಶಕ್ಕೆ ಸಾಂತ್ವನ ಹೇಳಿದೆ. ಸೌಹಾರ್ದತೆಯ ನಡೆಗಳು ಯಾವತ್ತೂ ಮುಖ್ಯ ಎಂದು ಪಾಕಿಸ್ತಾನಕ್ಕೆ ನೆನಪಿಸಿದೆ. ಆದರೆ ಇದು ಕ್ರಿಕೆಟ್ನ ಅತ್ಯಂತ ಪವಿತ್ರ ಸಂಪ್ರದಾಯಕ್ಕೂ ಧಕ್ಕೆ ತಂದಿದೆ ಎಂಬುದು ಮಾತ್ರ ನಿಜ.
ರಾಜಕೀಯಕ್ಕಾಗಿ ಕ್ರೀಡಾ ಮೌಲ್ಯಕ್ಕೆ ತಿಲಾಂಜಲಿ?
ಸದ್ಯಕ್ಕೆ, ಅನೇಕ ಅಭಿಮಾನಿಗಳು ಇದನ್ನು ಪ್ರೋತ್ಸಾಹಿಸುತ್ತಾರೆ. ಭಾರತ ತನ್ನ ದಿಟ್ಟತನವನ್ನು ಪ್ರದರ್ಶಿಸಿದೆ, ತಕ್ಕ ಉತ್ತರ ಕೊಟ್ಟಿದೆ ಎಂದು ಅವರು ಹೇಳುತ್ತಾರೆ. ಆದರೆ ಒಂದು ಪ್ರಶ್ನೆ ಮಾತ್ರ ದೀರ್ಘ ಕಾಲ ಉಳಿದುಕೊಳ್ಳುತ್ತದೆ: ರಾಜಕೀಯದಲ್ಲಿ ಅಂಕ ಗಳಿಸಲು ನಾವು ಕ್ರೀಡೆಯ ಮೌಲ್ಯಗಳನ್ನು ತ್ಯಾಗ ಮಾಡಲು ಸಿದ್ಧರಿದ್ದೇವೆಯೇ? ವಿವೇಕ ಮೇಲುಗೈ ಸಾಧಿಸುತ್ತದೆಯೇ, ಅಥವಾ ಹಸ್ತಲಾಘವ ನಿರಾಕರಣೆ ಕ್ರಿಕೆಟ್ನ ಅತ್ಯಂತ ಆಕರ್ಷಕ ಪೈಪೋಟಿಯಲ್ಲಿ ಹೊಸ ಸಾಮಾನ್ಯ ಸಂಗತಿಯಾಗಿ ಹೊರಹೊಮ್ಮುತ್ತಿದೆಯೇ?
ಸದ್ಯಕ್ಕೆ, ಭಾರತದ ನಿಲುವು ದೇಶದೊಳಗೆ ಜನಮನ್ನಣೆ ಗಳಿಸಿದೆ. ಅದು ಅಸಭ್ಯತೆಯ ಮಟ್ಟಕ್ಕಿಳಿಯದೆ ರಾಷ್ಟ್ರೀಯ ಹೆಮ್ಮೆಗೆ ತೃಪ್ತಿಯ ಕವಚ ತೊಡಿಸಿದೆ. ಆದರೆ ಈ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾದಾಗ, ಜಗತ್ತು ಕೇವಲ ರನ್ ಮತ್ತು ವಿಕೆಟ್ಗಳನ್ನು ಮಾತ್ರವಲ್ಲದೆ, ಪಂದ್ಯದ ನಂತರದ ವರ್ತನೆಗಳನ್ನೂ ಗಮನಿಸುತ್ತದೆ ಎಂಬುದು ಹಕೀಕತ್ತು.
ಸ್ಕೋರ್ ಬೋರ್ಡ್ ಮುಖ್ಯವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈಗ ಅದರಾಚೆಗಿನ ಹಸ್ತಲಾಘವ ಅಥವಾ ಅದರ ನಿರಾಕರಣೆಯೂ ಕೂಡ.