ಕರ್ನಾಟಕದ ಜಾತಿ ಸಮೀಕ್ಷೆ: ಅವರ ಎದೆಯಲ್ಲೀಗ ‘ಸಣ್ಣ ಸಂಖ್ಯೆ’ ಎಂಬ ತಲ್ಲಣ

ಇತಿಹಾಸವನ್ನು ಎದುರಿಸುವುದಕ್ಕೂ ಮೊದಲು ‘ನವ ಭಾರತ’ದಲ್ಲಿ ಅವರು ತಮ್ಮ ಹಕ್ಕುಗಳು ಮತ್ತು ಪ್ರತಿಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿದ್ದರು. ಈಗ ಲಿಂಗಾಯತರನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳುವ ಸವಾಲಿನ ಸಂಗತಿ ಮತ್ತೆ ದುತ್ತೆಂದು ಮೇಲೆದ್ದಿರುವ ಕಾರಣ ವೀರಶೈವರು ಅಚ್ಚರಿಯಿಂದ ತಮ್ಮ ಕಣ್ಣುಗಳನ್ನು ತಾವೇ ಉಜ್ಜಿಕೊಳ್ಳುತ್ತಿದ್ದಾರೆ.

Update: 2025-10-05 02:30 GMT
Click the Play button to listen to article

ಕರ್ನಾಟಕದ ಸಮುದಾಯದ ನಾಯಕರು, ಮಠಾಧಿಪತಿಗಳು ಮತ್ತು ಇನ್ನೂ ಅನೇಕರ ಹೃದಯದಲ್ಲಿ ಇಂತಹುದೊಂದು ಭಯ ಆವರಿಸಿಕೊಂಡಿದೆ. ಇದಕ್ಕೆಲ್ಲ ಮುಖ್ಯ ಕಾರಣ ಸೆ.22ರಿಂದ ಆರಂಭವಾಗಿರುವ ‘ಜಾತಿ ಗಣತಿ.’ ಹೆಚ್ಚು ‘ವೈಜ್ಞಾನಿಕವಾಗಿ’ ಗಣತಿಯನ್ನು ನಡೆಸಬೇಕು ಎಂಬ ಒಕ್ಕಲಿಗ ಮತ್ತು ಲಿಂಗಾಯತ ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿದು ಶುರುವಾಗಿರುವ ಇದು ಅನಿರೀಕ್ಷಿತ ಹಾಗೂ ನಿಶ್ಚಿತವಾಗಿ ವೈಜ್ಞಾನಿಕವಲ್ಲದ ಆಂತರಿಕ ಶಕ್ತಿಗಳಿಂದ ಮುಳುಗಿಸಿಬಿಡಬಹುದು.

ನಮಗೆಲ್ಲರಿಗೂ ತಿಳಿದೇ ಇರುವಂತೆ, ಈ ಎರಡು ಪ್ರಬಲ ಶಕ್ತಿಗಳು ತಮ್ಮ ಬಲ ಶೇ.14-15 ಮತ್ತು ಶೇ.17 ಎಂದು ಭಾವಿಸಿದ್ದರೂ ಅವರ ಸಂಖ್ಯೆಗಳು ನಿಜವಾಗಿಯೂ ತಲಾ ಶೇ.11ಕ್ಕೆ ಕುಸಿದರೆ ರಾಜ್ಯದ ಮೇಲಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಆ ಮೂಲಕ ರಾಜಕೀಯ ಹಿಡಿತವನ್ನೂ ಕಳೆದುಕೊಳ್ಳುವ ಬಗ್ಗೆ ಚಿಂತಿತರಾಗಿದ್ದರು.

ಯಾವುದರ ಮೇಲೆ ನಿರಂತರವಾಗಿ ಪ್ರಾಬಲ್ಯ ಸಾಧಿಸಲು ಸಾಧ್ಯವಿದೆಯೋ ಆಗ ಮಾತ್ರ ಸಂಖ್ಯೆಗಳ ‘ವಿಜ್ಞಾನ’ವು ಅರ್ಥಪೂರ್ಣವಾಗಿರುತ್ತದೆ.

ವೀರಶೈವ-ಲಿಂಗಾಯರು ಹಿಂದುಗಳೇ?

ಆದರೆ, ಇತಿಹಾಸವನ್ನು ಎದುರಿಸುವುದಕ್ಕೂ ಮೊದಲು ‘ನವ ಭಾರತ’ದಲ್ಲಿ ಅವರು ತಮ್ಮ ಹಕ್ಕುಗಳು ಮತ್ತು ಪ್ರತಿಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿದ್ದರು. ಈಗ ಲಿಂಗಾಯತರನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳುವ ಸವಾಲಿನ ಸಂಗತಿ ಮತ್ತೆ ದುತ್ತೆಂದು ಮೇಲೆದ್ದಿರುವ ಕಾರಣ ವೀರಶೈವರು ಅಚ್ಚರಿಯಿಂದ ತಮ್ಮ ಕಣ್ಣುಗಳನ್ನು ತಾವೇ ಉಜ್ಜಿಕೊಳ್ಳುತ್ತಿದ್ದಾರೆ.

ಮೊಟ್ಟ ಮೊದಲನೆಯದಾಗಿ ವೀರಶೈವ-ಲಿಂಗಾಯತರು ನಿಜಕ್ಕೂ ಹಿಂದುಗಳೇ? ಪಂಚಾಚಾರ್ಯರ ಅನುಯಾಯಿಗಳಾದ ವೀರಶೈವರು [ರಂಭಾಪುರಿ ಮತ್ತು ಉಜ್ಜಯಿನಿ ಪೀಠಗಳು (ಎರಡೂ ಕರ್ನಾಟಕದಲ್ಲಿವೆ), ಕೇದಾರ (ಉತ್ತರಾಖಂಡ), ಶ್ರೀಶೈಲ ಪೀಠ (ಆಂಧ್ರ ಪ್ರದೇಶ), ಮತ್ತು ಕಾಶಿ ಪೀಠ (ಉತ್ತರ ಪ್ರದೇಶ)] ಹನ್ನೆರಡನೇ ಶತಮಾನದ ಬಸವಣ್ಣನವರನ್ನು ಹೊಸ ಧರ್ಮದ ಸಂಸ್ಥಾಪಕರೆಂದು ಎಂದಿಗೂ ಅಂಗೀಕರಿಸಿಲ್ಲ. ಬದಲಾಗಿ ಅವರನ್ನು ಅನೇಕ (ಶೈವರು) ಸುಧಾರಕರಲ್ಲಿ ಒಬ್ಬರು ಎಂದು ಪರಿಗಣಿಸಿದ್ದಾರೆ.

ಅವರೀಗ ತಡವಾಗಿ ‘ಏಕತೆ’ಯ ಮಂತ್ರವನ್ನು ಪಠಿಸುತ್ತಿದ್ದಾರೆ. 1904ರಷ್ಟು ಹಿಂದೆಯೇ ಸ್ಥಾಪನೆಯಾದ ಅಖಿಲ ಭಾರತೀಯ ವೀರಶೈವ ಮಹಾಸಭಾವನ್ನು 2018ರಿಂದ ಅನಧಿಕೃತವಾಗಿ ‘ವೀರಶೈವ-ಲಿಂಗಾಯತ’ ಎಂದು ಕರೆಯುವ ಮೂಲಕ ಆ ‘ಏಕತೆ’ಯ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಲಿಂಗಾಯತ ಮತ್ತು ವೀರಶೈವರ ನಡುವೆ ಬಿಟ್ಟಿರುವ ಬಿರುಕಿಗೆ ತೇಪೆಯನ್ನು ಹಚ್ಚುವ ಕ್ರಮವಾಗಿ ಬಸವ ಜಯಂತಿ ಮತ್ತು ರೇಣುಕಾಚಾರ್ಯ (ವೀರಶೈವರ ಪೂರ್ವಜರು) ಜಯಂತಿ ಎರಡನ್ನೂ ಏಕಕಾಲದಲ್ಲಿ ಆಚರಿಸುವ ಕರೆಗಳನ್ನು ಕೊಡುತ್ತಿದ್ದಾರೆ.

ಏಕತೆ ಕರೆಯ ಹಿಂದೆ ಎರಡು ಉದ್ದೇಶಗಳು

ಈ ‘ಏಕತೆ’ಯ ಕರೆ ಎರಡು ಉದ್ದೇಶಗಳನ್ನು ಉದ್ದೇಶಗಳನ್ನು ಹೊಂದಿದೆ. ಮೊದಲನೆಯದಾಗಿ ಜಾಗತಿಕ ಲಿಂಗಾಯತ ಮಹಾಸಭಾದವನ್ನು ವಿರೋಧಿಸುವುದು. ಅವರು ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾದವರೊಂದಿಗೆ ಸೇರಿಕೊಂಡು, ರಾಜ್ಯದ ಜಾತಿ ಗಣತಿ ಮತ್ತು 2027ರಲ್ಲಿ ನಡೆಯಲಿರುವ ಜನಗಣತಿ ಎರಡರಲ್ಲಿಯೂ ‘ಧರ್ಮ’ ಕಾಲಂನಲ್ಲಿ ‘ಲಿಂಗಾಯತ’ ಎಂದೂ ಮತ್ತು ಜಾತಿ ಕಾಲಂನಲ್ಲಿ 97 ಉಪ-ಜಾತಿಗಳ ಹೆಸರನ್ನು ನಮೂದಿಸುವಂತೆ ತನ್ನ ಅನುಯಾಯಿಗಳಿಗೆ ಸೂಚಿಸಿದೆ.

ಅದು ಸಾವಿರಾರು ಸಂಖ್ಯೆಗಳಲ್ಲಿ ಮಾರಾಟ ಮಾಡಿರುವ ತನ್ನ ಪುಟ್ಟ ಕೈಪಿಡಿಯಲ್ಲಿ ಲಿಂಗಾಯತ ಮತ್ತು ಹಿಂದೂ/ವೈದಿಕ ನಂಬಿಕೆಗಳು ಮತ್ತು ಆಚರಣೆಗಳ ನಡುವೆ ಎಷ್ಟು ಭಿನ್ನತೆಗಳು ಢಾಳಾಗಿ ಕಾಣುತ್ತವೆ ಎಂಬುದನ್ನು ವಿವರವಾಗಿ ಪಟ್ಟಿಮಾಡಿದೆ.

ಎರಡನೆಯದಾಗಿ, ವೀರಶೈವರು ಮತ್ತು ಲಿಂಗಾಯತರು ಇಬ್ಬರೂ ಒಂದೇ, ಅಂದರೆ ಹಿಂದುಗಳು ಎಂದು ಹೇಳಿಕೊಳ್ಳುವ ಮೂಲಕ ವೀರಶೈವರು ಕೇಂದ್ರ ಓಬಿಸಿ ಪಟ್ಟಿಗೆ ಸೇರುವ ಪ್ರಕ್ರಿಯೆಯನ್ನು ಆರಂಭಿಸಬಹುದು. ಇದರಿಂದ ಪ್ರಸ್ತುತ ಅವರು ಅನುಭವಿಸುತ್ತಿರುವ ರಾಜ್ಯದ ಶೇ.5ಕ್ಕಿಂತ ಹೆಚ್ಚಿನ ಮೀಸಲಾತಿ ಪಾಲನ್ನು ಸಹಾಯಕವಾಗಲಿದೆ.

ಎರಡೂ ಕಡೆಯವರ ಹೋರಾಟದ ಕರೆಗಳು ಬಣ್ಣಲೇಪಿತವಾಗಿದ್ದವು. ಇತಿಹಾಸ, ಧಾರ್ಮಿಕ ಆಚರಣೆಗಳು, ಮಹಾಕಾವ್ಯದ ಪಾತ್ರಗಳು ಮತ್ತು ಎಲ್ಲದರ ಜೊತೆಗೆ ರಾಜಕೀಯ ಹತಾಶ ಲೆಕ್ಕಾಚಾರಗಳನ್ನು ಹೆಣೆದುಕೊಂಡಿದ್ದವು.

ವೀರಶೈವರು ಬಸವಣ್ಣನನ್ನು ಕ್ರಾಂತಿಕಾರಿ ನಾಯಕ ಎಂದು ಒಪ್ಪಿಕೊಳ್ಳುವರೇ ಮತ್ತು ಬಸವತತ್ವವನ್ನು ಅನುಸರಿಸುವರೇ? ಇಲ್ಲ ಎನ್ನುತ್ತಾರೆ ‘ಲಿಂಗಾಯತ ಪ್ರತ್ಯೇಕ ಧರ್ಮ’ ಚಳವಳಿಯ ಪ್ರಮುಖ ನೇತಾರ ಹಾಗೂ ಮಾಜಿ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್. ತಮ್ಮ ವಿದ್ವತ್ಪೂರ್ಣ ಸಂಶೋಧನೆಗಾಗಿ ಹತ್ಯೆಗೆ ಒಳಗಾದ ಎಂ.ಎಂ.ಕಲ್ಬುರ್ಗಿ ಅವರು ಪ್ರತ್ಯೇಕ ಧರ್ಮ ವಾದದ ಕಟ್ಟಾ ಬೆಂಬಲಿಗರಾಗಿದ್ದರು.

‘ಹಿಂದೂಕರಣ’ಕ್ಕೆ ವಿರೋಧ

ಲಿಂಗಾಯತರಲ್ಲಿ ಹೆಚ್ಚುತ್ತಿರುವ ‘ಹಿಂದೂಕರಣ’ಕ್ಕೆ ಬಸವತತ್ವಗಳ ಮೂಲಭೂತ ಆಶಯಗಳನ್ನು ರಕ್ಷಿಸುವ ಪ್ರಮುಖ ಹಾಗೂ ಪ್ರಭಾವಶಾಲಿಗಳಲ್ಲಿ ಒಬ್ಬರಾದ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಬಸವಣ್ಣನ ತತ್ವಗಳಿಗೆ ಏನೇನು ವಿರುದ್ಧವಾಗಿದೆಯೋ ಅವನ್ನೆಲ್ಲವನ್ನೂ ಲಿಂಗಾಯತರು ಮಾಡುತ್ತಿದ್ದಾರೆ; ಅದ್ದೂರಿಯಾಗಿ ಗಣೇಶನನ್ನು ಪೂಜಿಸುತ್ತಿದ್ದಾರೆ, ತಮ್ಮ ಮನೆಗಳಲ್ಲಿ ಹೋಮ-ಹವನಗಳನ್ನು ಉನ್ಮತ್ತರಾಗಿ ಆಚರಿಸುತ್ತಿದ್ದಾರೆ ಮತ್ತು ದೇವಸ್ಥಾನಗಳಲ್ಲಿ ಉತ್ಕಟವಾಗಿ ಪೂಜೆಗಳಲ್ಲಿ ತೊಡಗಿಕೊಂಡಿದ್ದಾರೆ. ಇವೆಲ್ಲವೂ ಬಸವತತ್ವಗಳಿಗೆ ವಿರುದ್ಧವಾದುದು ಎಂದು ಸ್ವಾಮೀಜಿಗಳು ಪ್ರತಿಪಾದಿಸಿದ್ದಾರೆ.

ಹಾಗಂತ ಅವರು ಪ್ರವಾಹದ ವಿರುದ್ಧ ಈಜಲು ಯಾವತ್ತೂ ಹಿಂಜರಿದವರಲ್ಲ. ಉದಾಹರಣೆಗೆ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ಪರಿಚಯಿಸಿದಾಗ ಮಠಾಧಿಪತಿಗಳು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅದು ಲಿಂಗಾಯತರ ಶಾಖಾಹಾರಿ ಸಿದ್ಧಾಂತವನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದ್ದರು. ಆದರೆ, ಸಮಕಾಲೀನ ಜಗತ್ತನ್ನು ಅಪ್ಪಿಕೊಳ್ಳುವುದು ಮತ್ತು ಪೌಷ್ಟಿಕಾಂಶದ ಅಸಮಾನತೆಯನ್ನು ಪರಿಹರಿಸುವುದು ಸನಾತನಿ ಹಾದಿಯನ್ನು ತುಳಿಯುವುದಕ್ಕಿಂತ ಬಹಳ ಭಿನ್ನವಾಗಿದೆ.

ಇನ್ನೊಂದು ಕಡೆ ಅಖಿಲ ಭಾರತೀಯ ವೀರಶೈವ ಮಹಾಸಭಾದ ದೀರ್ಘಕಾಲೀನ (ಮತ್ತು ತೊಂಭತ್ತರ ಹರಯದ) ಅಧ್ಯಕ್ಷ ದಿಂಗಾಲೇಶ್ವರ ಸ್ವಾಮೀಜಿಯವರ ಪ್ರಬಲ ವಿರೋಧವಿದೆ. ಬಿಜೆಪಿಯ ಲಿಂಗಾಯತ ಸದಸ್ಯರೊಂದಿಗೆ ಸೇರಿರುವ ಅವರು ವೀರಶೈವ /ಲಿಂಗಾಯತ ಧರ್ಮವನ್ನು ಒಡೆಯುವ ಷಡ್ಯಂತ್ರವಿದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೆ.19ರಂದು ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಇವರೆಲ್ಲರೂ ಸರ್ಕಾರದ ವಿರುದ್ಧ ಗಟ್ಟಿಯಾಗಿ ದನಿ ಏರಿಸಿದರು. ಆ ಮೆಗಾ ಸಮಾವೇಶದಲ್ಲಿ ಏಕರೂಪದ ಧ್ವನಿಯೇನೂ ಹೊರಹೊಮ್ಮಲಿಲ್ಲ.

ಆದರೆ ಬಾಗಲಕೋಟೆ ಮಠದ ಮುಖ್ಯಸ್ಥರಾದ ಪಂಚಮಸಾಲಿ ಲಿಂಗಾಯತರ ಶ್ರೀ ಬಸವ ಜಯಮೃತ್ಯಂಜಯ ಸ್ವಾಮೀಜಿ ಅವರು ವಿಷಯವನ್ನು ಇನ್ನಷ್ಟು ಗೊಂದಲಮಯವಾಗಿಸಿದ್ದಾರೆ. ಅವರು ಕಳೆದ ಹಲವಾರು ವರುಷಗಳಿಂದ ಲಿಂಗಾಯತರನ್ನು ರಾಜ್ಯ ಮೀಸಲಾತಿಯ 3B (ಶೇ.5) ವರ್ಗದಿಂದ 2A(ಶೇ.15) ವರ್ಗಕ್ಕೆ ವರ್ಗಾಯಿಸುವಂತೆ ಆಗ್ರಹಿಸಿ ಅಭಿಯಾನ ನಡೆಸುತ್ತಿದ್ದಾರೆ.

ಲಿಂಗಾಯತ ಜನಸಂಖ್ಯೆಯಲ್ಲಿಯೇ ಶೇ.80ರಷ್ಟಿರುವ ಪಂಚಮಸಾಲಿ ಲಿಂಗಾಯತರು (ಬಹುತೇಕ ಕೃಷಿಕರು ಮತ್ತು ಕಾರ್ಮಿಕರು) ಮೀಸಲಾತಿಯಿಂದ (ಅಥವಾ ತಮ್ಮ ರಾಜಕೀಯ ಮಾನ್ಯತೆಯಿಂದ) ತಮ್ಮ ಸರಿಯಾದ ಪಾಲನ್ನು ಪಡೆಯುತ್ತಿಲ್ಲ ಎಂಬುದು ಅವರ ವಾದವಾಗಿದೆ. ಅದಕ್ಕಾಗಿ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕಡೆಯವರ ಜೊತೆ ಸಮಾಲೋಚನೆ ನಡೆಸುತ್ತ ಬಂದವರು. ಆದರೆ ಅವರು ಯಶಸ್ವಿಯಾಗಿಲ್ಲ ಎಂಬುದು ಬೇರೆಯೇ ಮಾತು.

ಈಗ ಅವರು ಹುಬ್ಬಳ್ಳಿಯ ಏಕತೆಯ ಪ್ರದರ್ಶನಕ್ಕೆ ಹಾಜಾರಾಗದಿರಿ ಎಂದು ತಮ್ಮ ಅನುಯಾಯಿಗಳಿಗೆ ಕರೆ ನೀಡುವ ಮೂಲಕ ಒಡಕಿನ ದನಿ ಎತ್ತಿದ್ದಾರೆ. ಅದಕ್ಕೆ ಬದಲಾಗಿ, ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಗುರುತಿಸುವವರೆಗೂ ಧರ್ಮದ ಕಾಲಂನಲ್ಲಿ ‘ಲಿಂಗಾಯತ ಹಿಂದು’ ಪದವನ್ನು ಮಾತ್ರ ಬಳಸಬೇಕು ಎಂದು ತಾಕೀತು ಮಾಡಿದ್ದಾರೆ. ಪ್ರತ್ಯೇಕ ಧರ್ಮದ ಸ್ಥಾನಮಾನದಿಂದ ದೂರ ಸರಿದ ಕಾರಣದಿಂದ ಅವರನ್ನು ಪಂಚಮಸಾಲಿ ಮಹಾಸಭಾದಿಂದ ಹೊರಕ್ಕಿಡಲಾಗಿದೆ.

ಸಮೀಕ್ಷೆಯ ಮೇಲೆ ಎಲ್ಲರ ಕಣ್ಣು

ಹೀಗೆ ವೀರಶೈವ-ಲಿಂಗಾಯತ ವಿರೋಧದ ಹಾದಿಯು ತನ್ನ ಮತಧರ್ಮಶಾಸ್ತ್ರದ ಬಾಂದಳವನ್ನು ತೊರೆದು ಬಹಳ ಕಾಲವೇ ಆಯಿತು. ಅದರ ಹೋರಾಟವೀಗ ಕೇವಲ ಧರ್ಮ ಭಿನ್ನತೆಗಳನ್ನು ದಾಟಿ ಬಂದಿದೆ. ಅದೀಗ ತೀರಾ ವಾಸ್ತವದ ನೆಲೆಯಲ್ಲಿ ಮೀಸಲಾತಿಯನ್ನು ರಕ್ಷಣಾತ್ಮಕವಾಗಿ ದಕ್ಕಿಸಿಕೊಳ್ಳಬೇಕಾಗಿದೆ. ಅದರ ಆತಂಕಕಾರಿ ಪಲ್ಲಟವು ಇತರ ಜಾತಿಗಳನ್ನು ಕೂಡ ಬಾಧಿಸಿದೆ. ಕುರುಬರು, ಈಡಿಗರು, ಭೋವಿಗಳು, ವಾಲ್ಮೀಕಿಗಳು, ಒಕ್ಕಲಿಗರು (ಪೂರ್ಣ ಪುಟದ ಜಾಹೀರಾತುಗಳಲ್ಲಿ), ಬ್ರಾಹ್ಮಣರು- ಹೀಗೆ ಪ್ರತಿಯೊಂದು ಜಾತಿ ಗುಂಪುಗಳು ಕೂಡ ಸಮೀಕ್ಷೆಯಲ್ಲಿ ಹೇಗೆ ತಮ್ಮನ್ನು ವರದಿ ಮಾಡಿಕೊಳ್ಳಬೇಕು ಮತ್ತು ತಮ್ಮ ಸಂಖ್ಯಾಬಲವನ್ನು ಹೇಗೆ ಒಟ್ಟುಗೂಡಿಸಬೇಕು ಎಂಬ ಬಗ್ಗೆ ತಮ್ಮ ಅನುಯಾಯಿಗಳಿಗೆ ಸೂಚನೆಗಳನ್ನು ನೀಡುತ್ತಿವೆ.

ಈ ಮಧ್ಯೆ, ಈ ಎಲ್ಲ ಜಿದ್ದಾಜಿದ್ದಿ ಹೋರಾಟಗಳಲ್ಲಿ ಸಾಂಕೇತಿಕವಾಗಿ, ಭೌತಿಕವಾಗಿ ಮತ್ತು ರಾಜಕೀಯವಾಗಿ ಬಾಧೆಗೆ ಒಳಗಾಗಿರುವ ಆ ಅಪಾರ ಜನಸಂಖ್ಯೆಯ ಬಹುಪಾಲು ಮಹಿಳೆಯರು ದೇವಾಲಯಗಳಲ್ಲಿ ಆರಾಧನೆಯಲ್ಲಿ, ಪೂಜೆ-ಪುನಸ್ಕಾರಗಳಲ್ಲಿ, ಹತ್ತು ಹಲವು ಹಿಂದು-ವೈದಿಕ ಆಚರಣೆಗಳಲ್ಲಿ ತಲ್ಲೀನರಾಗುವುದನ್ನು ಮುಂದುವರಿಸಿದ್ದಾರೆ.

ಬಹುಷಃ ಇದ್ಯಾವುದರ ಪರಿವೇ ಇಲ್ಲದೆ ಅವರೂ ಕೂಡ ಯಾವುದೇ ಏಕತೆ ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದಾರೆ ಅನಿಸುತ್ತದೆ. ಅದು ವೀರಶೈವ ಲಿಂಗಾಯತರಾಗಲಿ ಅಥವಾ ಹಿಂದುಗಳಾಗಿರಬಹುದು. ಇದು ಇಂದಿನ ಕರ್ನಾಟಕ.

ಕ್ಯಾಪ್: ಕುರುಬರು, ಈಡಿಗರು, ಭೋವಿಗಳು, ವಾಲ್ಮೀಕಿಗಳು, ಒಕ್ಕಲಿಗರು, ಬ್ರಾಹ್ಮಣರು- ಹೀಗೆ ಪ್ರತಿಯೊಂದು ಜಾತಿ ಗುಂಪುಗಳು ಕೂಡ ಸಮೀಕ್ಷೆಯಲ್ಲಿ ಹೇಗೆ ತಮ್ಮನ್ನು ವರದಿ ಮಾಡಿಕೊಳ್ಳಬೇಕು ಮತ್ತು ತಮ್ಮ ಸಂಖ್ಯಾಬಲವನ್ನು ಹೇಗೆ ಒಟ್ಟುಗೂಡಿಸಬೇಕು ಎಂಬ ಬಗ್ಗೆ ತಮ್ಮ ಅನುಯಾಯಿಗಳಿಗೆ ಸೂಚನೆಗಳನ್ನು ನೀಡುತ್ತಿವೆ.

Tags:    

Similar News