ತೆರಿಗೆಗೆ ಕೇಂದ್ರ ಸರ್ಕಾರ ಮಾಲೀಕನಲ್ಲ: ಡೇಟಾ ಸೆಂಟರ್ ಉದ್ಯಮಕ್ಕೆ ಯಾಕೆ ಬೇಕು ತೆರಿಗೆ ವಿನಾಯಿತಿ?
ಆದಾಯ ತೆರಿಗೆ ಎನ್ನುವುದು ರಾಜ್ಯಗಳಿಗೂ ಸೇರಿದೆ. ಕೇಂದ್ರವು ಯಾವ ಉದ್ಯಮಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂಬುದರ ಬಗ್ಗೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಬಾರದು
ಕೇಂದ್ರ ಸರ್ಕಾರದ ಕರಡು ದತ್ತಾಂಶ ಕೇಂದ್ರ ನೀತಿಯು, ದತ್ತಾಂಶ ಕೇಂದ್ರ ಕಂಪನಿಗಳಿಗೆ 20 ವರ್ಷಗಳಷ್ಟು ತೆರಿಗೆ ರಜೆ ಹಾಗೂ ಜಿಎಸ್ಟಿ ಮೇಲೆ ಇನ್ಪುಟ್ ಟ್ಯಾಕ್ಸ್ (ಖರೀದಿ ತೆರಿಗೆ) ಕ್ರೆಡಿಟ್ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದಕ್ಕೆ ವಿದ್ಯುತ್ ಬಳಕೆ ದಕ್ಷತೆ, ಸಾಮರ್ಥ್ಯ ವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಷರತ್ತುಗಳನ್ನು ವಿಧಿಸಲಾಗಿದೆ. ಇದು ಕೇಂದ್ರವು ರಾಜ್ಯಗಳ ಹಕ್ಕುಗಳನ್ನು ಉಲ್ಲಂಘಿಸಿರುವುದರಿಂದ, ಅನೇಕ ಹಂತಗಳಲ್ಲಿ ಲೋಪಗಳಾಗಿರುವುದು ಕಂಡುಬಂದಿದೆ.
ಆದಾಯ ತೆರಿಗೆಗೆ ಪ್ರೋತ್ಸಾಹ ನೀಡುವುದನ್ನು ಸಾಮಾನ್ಯವಾಗಿ ಕೇಂದ್ರ ಸರ್ಕಾರದ ವಿಶೇಷ ಹಕ್ಕು ಎಂದು ಪರಿಗಣಿಸಲಾಗುತ್ತದೆ. ಜೊತೆಗೆ ವೈಯಕ್ತಿಕ ಮತ್ತು ಕಾರ್ಪೊರೇಟ್ ಆದಾಯ ತೆರಿಗೆಯಿಂದ ವಿನಾಯಿತಿ ನೀಡುವ ಕೇಂದ್ರದ ಅಭ್ಯಾಸಕ್ಕೆ ದೀರ್ಘ ಇತಿಹಾಸವಿದೆ. ಆದರೆ, ನಿಷ್ಕಳಂಕ ಮತ್ತು ದಕ್ಷತೆಗೆ ವಂಶಾವಳಿಯು ಖಾತರಿಯಾಗುವುದಾದರೆ ನಾವು ರಾಜವಂಶದ ಆಡಳಿತಕ್ಕೆ ಹಿಂತಿರುಗಬೇಕು, ಅಲ್ಲವೇ?
ಭಾರತದ ಸಂವಿಧಾನವು ಕಂಪನಿಗಳು ಮತ್ತು ವ್ಯಕ್ತಿಗಳಿಂದ ಆದಾಯ ತೆರಿಗೆ ಸಂಗ್ರಹಿಸುವ ಅಧಿಕಾರ ಮತ್ತು ಜವಾಬ್ದಾರಿಯನ್ನು ಕೇಂದ್ರಕ್ಕೆ ವಹಿಸಿದೆ ಎಂಬುದೇನೋ ನಿಜ. ಆದರೆ ತೆರಿಗೆಗೆ ಸಂಬಂಧಿಸಿದ ಆದಾಯವು ಸಂಗ್ರಹ ಮಾಡುವವನಿಗೆ ಸೇರಿದೆ ಎಂಬುದು ಇದರ ಅರ್ಥವಲ್ಲ. ಒಂದು ವೇಳೆ ರಾಜ್ಯಗಳಿಗೇ ಆದಾಯ ತೆರಿಗೆ ಸಂಗ್ರಹಿಸುವ ಅಧಿಕಾರವಿದ್ದರೆ ಏನಾಗುತ್ತದೆ ಎಂದು ಯೋಚಿಸಿ.
ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಅನೇಕ ಕಂಪನಿಗಳು ತಮ್ಮ ಪ್ರಧಾನ ಕಚೇರಿಗಳನ್ನು ಹೊಂದಿವೆ. ಆದರೆ ಅವು ದೇಶದ ಉದ್ದಗಲಕ್ಕೂ ವ್ಯಾಪಾರ ಮಾಡುತ್ತವೆ, ದೇಶದಾದ್ಯಂತ ಬಂಡವಾಳ ಸಂಗ್ರಹಿಸುತ್ತವೆ ಮತ್ತು ದೇಶದ ಎಲ್ಲಾ ಕಡೆಗಳಲ್ಲಿ ಜನರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುತ್ತವೆ. ಈ ಕಂಪನಿಗಳ ಲಾಭದ ಮೇಲಿನ ತೆರಿಗೆಯ ಹಕ್ಕು ಭಾರತದಾದ್ಯಂತದ ಜನರಿಗೆ ಇರುತ್ತದೆ, ಕಂಪನಿಯ ಪ್ರಧಾನ ಕಚೇರಿಯಿರುವ ರಾಜ್ಯಕ್ಕೆ ಮಾತ್ರ ಅಲ್ಲ. ಆದ್ದರಿಂದ, ಕೇಂದ್ರವು ತೆರಿಗೆಯನ್ನು ಸಂಗ್ರಹಿಸಿ ಎಲ್ಲಾ ರಾಜ್ಯಗಳೊಂದಿಗೆ ಹಂಚಿಕೊಳ್ಳುವುದು ಸಮಂಜಸವಾಗಿದೆ.
ಇದೇ ತರ್ಕವು ಕಸ್ಟಮ್ಸ್ ಸುಂಕಗಳ ವಿಷಯದಲ್ಲೂ ಅನ್ವಯವಾಗುತ್ತದೆ. ಕಸ್ಟಮ್ಸ್ ಸುಂಕಗಳ ಸಂಗ್ರಹದ ಜವಾಬ್ದಾರಿಯನ್ನು ರಾಜ್ಯಗಳಿಗೆ ಬಿಟ್ಟರೆ, ಬಂದರು ವ್ಯವಸ್ಥೆ ಇಲ್ಲದ ಯಾವುದೇ ರಾಜ್ಯವು ಕಸ್ಟಮ್ಸ್ ಸುಂಕ ಪಡೆಯಲು ಸಾಧ್ಯವಾಗುವುದಿಲ್ಲ, ಆ ರಾಜ್ಯದಲ್ಲಿ ಬಳಸಲು ಆಮದು ಮಾಡಿಕೊಂಡ ಸರಕುಗಳ ಮೇಲಿನ ಸುಂಕವೂ ಸಿಗುವುದಿಲ್ಲ. ಹೀಗಾಗಿ, ಕೇಂದ್ರವು ಕಸ್ಟಮ್ಸ್ ಸುಂಕವನ್ನು ಸಂಗ್ರಹಿಸಿ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು.
ತೆರಿಗೆ ನಿರ್ಧಾರಗಳಲ್ಲಿ ರಾಜ್ಯದ ಮಾತು ಕೇಳಬೇಕು
ಹಾಗಾದರೆ ರಾಜ್ಯಗಳೊಂದಿಗೆ ಎಷ್ಟು ಹಂಚಿಕೊಳ್ಳಬೇಕು? ಪ್ರತಿ ಐದು ವರ್ಷಗಳಿಗೊಮ್ಮೆ ನೇಮಕಗೊಳ್ಳುವ ಹಣಕಾಸು ಆಯೋಗವು ಎಷ್ಟು ತೆರಿಗೆಯನ್ನು ಹಂಚಿಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತದೆ. ಪ್ರಸ್ತುತ, ಈ ಪಾಲು ಶೇ.41ರಷ್ಟಿದೆ. ಕೇಂದ್ರವು ಸಂಗ್ರಹಿಸುವ ತೆರಿಗೆಗಳಲ್ಲಿ ಐದನೇ ಎರಡಕ್ಕಿಂತ ಹೆಚ್ಚು ಭಾಗವನ್ನು ಸಾಮೂಹಿಕವಾಗಿ ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು. ರಾಜ್ಯಗಳ ಸಂಯೋಜಿತ ಪಾಲನ್ನು ರಾಜ್ಯಗಳ ನಡುವೆ ಹೇಗೆ ಹಂಚಿಕೆ ಮಾಡಬೇಕು ಎಂಬುದರ ಬಗ್ಗೆಯೂ ಹಣಕಾಸು ಆಯೋಗ ಮತ್ತೊಂದು ಶಿಫಾರಸು ಮಾಡುತ್ತದೆ.
ಆದಾಯ ತೆರಿಗೆಯಲ್ಲಿ ಶೇ.41ರಷ್ಟು ಭಾಗ ರಾಜ್ಯಗಳಿಗೆ ಹೋಗಬೇಕಾಗಿದ್ದರೆ, ಆದಾಯ ತೆರಿಗೆ ರಜೆಯ ಅವಧಿ ಮತ್ತು ಇತರ ತೆರಿಗೆ ವಿನಾಯಿತಿಗಳನ್ನು ಕೆಲವು ರೀತಿಯ ನಡವಳಿಕೆಗಳಿಗೆ ಪ್ರೋತ್ಸಾಹಕಗಳಾಗಿ ನಿರ್ಧರಿಸುವ ಸಂದರ್ಭದಲ್ಲಿ ರಾಜ್ಯಗಳು ತಮ್ಮ ಅಭಿಪ್ರಾಯವನ್ನು ಹೊಂದಿರಬೇಕಲ್ಲವೇ? ಈಗ, ಕೇಂದ್ರವು ಏಕಪಕ್ಷೀಯವಾಗಿ ಆದಾಯ ತೆರಿಗೆ ವಿನಾಯಿತಿಗಳನ್ನು ನಿರ್ಧರಿಸುತ್ತದೆ. ಇದು ಬದಲಾಗಬೇಕು. ಅಂತಾರಾಜ್ಯ ಮಂಡಳಿಯ ತೆರಿಗೆ ಉಪಸಮಿತಿಯು ಆದಾಯ ತೆರಿಗೆ ಮತ್ತು ಜಿಎಸ್ಟಿ ಎರಡರ ಬಗ್ಗೆಯೂ ನಿರ್ಧರಿಸಬೇಕು ಎನ್ನುವುದು ಯಥೋಚಿತ.
ಜಿ.ಎಸ್.ಟಿ ಮಂಡಳಿಯಲ್ಲಿ ಕೇಂದ್ರವು ಮೂರನೇ ಒಂದು ಭಾಗದಷ್ಟು ಮತದಾನದ ಅಧಿಕಾರವನ್ನು ನಿಯಂತ್ರಿಸುತ್ತದೆ, ಮೂರನೇ ಎರಡರಷ್ಟು ರಾಜ್ಯಗಳ ಸಂಯೋಜಿತ ಅಧಿಕಾರದಲ್ಲಿದೆ. ಆದರೂ, ಪ್ರಧಾನಿ ರಾಜ್ಯಗಳು ಅಥವಾ ಜಿ.ಎಸ್.ಟಿ ಮಂಡಳಿಯನ್ನು ಸಂಪರ್ಕಿಸದೆ ಸ್ವಾತಂತ್ರ್ಯ ದಿನಾಚರಣೆಯಂದು ಜಿ.ಎಸ್.ಟಿ ವಿನಾಯಿತಿಗಳನ್ನು ಏಕಪಕ್ಷೀಯವಾಗಿ ಘೋಷಿಸುತ್ತಾರೆ. ಈ ಧೋರಣೆ ಕೂಡ ಬದಲಾಗಬೇಕು. ಅಂತಾರಾಜ್ಯ ಮಂಡಳಿಯ ತೆರಿಗೆ ಉಪಸಮಿತಿಯು ಆದಾಯ ತೆರಿಗೆ ಮತ್ತು ಜಿ.ಎಸ್.ಟಿ ಎರಡರ ಬಗ್ಗೆಯೂ ನಿರ್ಧರಿಸಬೇಕು ಎನ್ನುವುದು ಸರಿಯಾದ ಮಾತು.
ಡೇಟಾ ಕೇಂದ್ರಗಳಿಗೆ ಯಾಕೆ ಬೇಕು ಸಬ್ಸಿಡಿ?
ಡೇಟಾ ಕೇಂದ್ರಗಳನ್ನು ಸ್ಥಾಪಿಸಲು ತೆರಿಗೆ ರಜಾದಿನವನ್ನು ನೀಡುವ ಪ್ರಸ್ತಾವನೆಯಲ್ಲಿ ರಾಜ್ಯಗಳ ಹಕ್ಕುಗಳು ಮತ್ತು ಸಂಭಾವ್ಯ ಆದಾಯವನ್ನು ಕಸಿದುಕೊಳ್ಳುತ್ತಿರುವುದು ಮಾತ್ರ ಕೇಂದ್ರ ಮಾಡುತ್ತಿರುವ ತಪ್ಪಲ್ಲ.
ಭಾರತೀಯ ತಂತ್ರಜ್ಞಾನ ಸಂಸ್ಥೆಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಹಣಕಾಸಿನ ಪ್ರೋತ್ಸಾಹ ನೀಡುತ್ತಿರುವುದು ಹೇಗಿದೆ? ಹುಚ್ಚುತನ ಅಲ್ಲವೇ? ಈ ಘನತೆವೆತ್ತ ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಒಂದು ಸ್ಥಾನಕ್ಕೆ ಎಷ್ಟೊಂದು ಬೇಡಿಕೆ ಇದೆ ಎಂದರೆ ಯಾವ ಮಟ್ಟಿನ ಪ್ರೋತ್ಸಾಹಧನವು ಸಂಪೂರ್ಣ ಅನಾವಶ್ಯಕ ಎಂದೇ ಹೇಳಬೇಕು. ಡೇಟಾ ಕೇಂದ್ರಗಳನ್ನು ನಿರ್ಮಿಸುವ ವಿಷಯದಲ್ಲೂ ಇದೇ ಆಗಿದೆ. ಡೇಟಾ ಕೇಂದ್ರಗಳು ಈಗ ಬಿಸಿ ಬಿಸಿ ಹೂಡಿಕೆ ಅವಕಾಶ, ಮತ್ತು ಪ್ರಮುಖ ವ್ಯಾಪಾರ ಸಮೂಹಗಳು ತಮಗಾಗಿ ಅದರ ಒಂದು ಭಾಗವನ್ನು ದಕ್ಕಿಸಿಕೊಳ್ಳಲು ಪೈಪೋಟಿಗೆ ಬೀಳುತ್ತಿವೆ. ಸರ್ಕಾರವು ಈ ಕ್ಷೇತ್ರಕ್ಕೆ ಹೂಡಿಕೆಯನ್ನು ಸೆಳೆಯಲು ಯಾವುದೇ ಸರ್ಕಾರಿ ಪ್ರೋತ್ಸಾಹದ ಅಗತ್ಯವಿಲ್ಲ, ಸರ್ಕಾರವು ಕೆಲವು ನೆಚ್ಚಿನ ಕಾರ್ಪೊರೇಟ್ ಗ್ರಾಹಕರಿಗೆ ಸಬ್ಸಿಡಿ ನೀಡಲು ಬಯಸಿದರೆ, ಅದು ಬೇರೆ ವಿಷಯ.
ಅಪಾರ ಹೂಡಿಕೆ ಆದಾಯ ಮಾತ್ರ ಅತ್ಯಲ್ಪ
ದಿ ಎಕನಾಮಿಸ್ಟ್ ಪತ್ರಿಕೆಯು ಭೌಗೋಳಿಕ-ರಾಜಕೀಯ ಮತ್ತು ಆರ್ಥಿಕ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ವಿಶ್ಲೇಷಣೆ ನಡೆಸುವಾಗ ತನ್ನ ಸೈದ್ಧಾಂತಿಕ ಪಕ್ಷಪಾತಗಳನ್ನು ಹೊಂದಿರಬಹುದು. ಆದರೆ ವ್ಯಾಪಾರಕ್ಕೆ ಸಂಬಂಧಿಸಿ ಅದರ ವಾದವು ಸರಿಯಾಗಿರುತ್ತವೆ. ಅದರ ಇತ್ತೀಚಿನ ಒಂದು ಸಂಚಿಕೆಯಲ್ಲಿ ಕೃತಕ ಬುದ್ಧಿಮತ್ತೆ (AI) ಸುತ್ತ ಹುಟ್ಟಿಕೊಳ್ಳುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತದೆ. 2025-28ರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ನಿಗದಿಪಡಿಸಲಾದ 2.9 ಟ್ರಿಲಿಯನ್ ಡಾಲರ್ ಹೂಡಿಕೆಯನ್ನು ಮತ್ತು ವಿಶ್ವದ ದೈತ AI ಕಂಪನಿಗಳ ಒಟ್ಟು 50 ಬಿಲಿಯನ್ ಡಾಲರ್ ಆದಾಯವನ್ನು ಹೋಲಿಸಲು ಅದು ಮಾರ್ಗನ್ ಸ್ಟಾನ್ಲಿಯನ್ನು ಉಲ್ಲೇಖಿಸುತ್ತದೆ. ಅಲ್ಪ ಆದಾಯಕ್ಕಾಗಿ ದೊಡ್ಡ ಪ್ರಮಾಣದ ಹೂಡಿಕೆಯೇ? ಕಂಪನಿಗಳು AI ನಲ್ಲಿ ಮಾಡುತ್ತಿರುವ ಹೂಡಿಕೆಯ ಮೇಲಿನ ಪ್ರತಿಫಲವು ತೀರಾ ಕಡಿಮೆ ಇದೆ, ಈಗಿನ ಮಟ್ಟಿಗೆ ಅದು ಅತ್ಯಂತ ಕನಿಷ್ಠ.
ದಿ ಎಕನಾಮಿಸ್ಟ್ ಪತ್ರಿಕೆಯು AI ಉತ್ಕರ್ಷವನ್ನು ಈ ಶತಮಾನದ ಆರಂಭದ ಡಾಟ್ಕಾಮ್ ಉತ್ಕರ್ಷ ಮತ್ತು 19ನೇ ಶತಮಾನದಿಂದ ಆರಂಭವಾದ ನಾನಾ ರೈಲ್ವೆ, ವಿದ್ಯುತ್ ದೀಪ ಮತ್ತು ಇತರ ಉತ್ಕರ್ಷಗಳೊಂದಿಗೆ ಹೋಲಿಸುತ್ತದೆ. ಡಾಟ್ಕಾಮ್ ಉತ್ಕರ್ಷವೇನೋ ನಷ್ಟಗೊಂಡಿತು, ಆದರೆ ಅದು ಖಂಡಗಳನ್ನು ವ್ಯಾಪಿಸುವ ಮತ್ತು ಸಂಪರ್ಕಿಸುವ ದೊಡ್ಡ ದೊಡ್ಡ ಪ್ರಮಾಣದ ದಪ್ಪನೆಯ ಡೇಟಾ ಕೇಬಲ್ಗಳ ಜಾಲವನ್ನು ಬಿಟ್ಟುಹೋಯಿತು, ಅದು ನಂತರ ಉಪಯೋಗಕ್ಕೆ ಬಂದಿತು ಎನ್ನುವುದು ಬೇರೆಯೇ ಮಾತು. ಆದರೂ ಮೂಲ ಕೇಬಲ್ ಜಾಲಗಳನ್ನು ಖರೀದಿಸಿದ ಕಂಪನಿಗಳಿಗೆ ನಷ್ಟವಂತೂ ಆಯಿತು.
ಡೇಟಾ ಸ್ಥಳೀಕರಣದ ಪ್ರಯೋಜನಗಳು
ಭಾರತವು ಡೇಟಾ ಸ್ಥಳೀಕರಣದ ನೀತಿಯನ್ನು ಹೊಂದಿದೆ. ಭಾರತೀಯ ಡೇಟಾವನ್ನು ದೇಶದ ಹೊರಗೆ ಕಳುಹಿಸುವುದಕ್ಕೆ ನಿಷೇಧ ಹೇರುವುದು ತಪ್ಪಾಗಬಹುದು, ಆದರೆ ಎಲ್ಲಾ ಭಾರತೀಯ ಡೇಟಾವನ್ನು ಭಾರತದಲ್ಲಿ ಸಂಗ್ರಹಿಸಬೇಕು ಎಂದು ಬೇಡಿಕೆ ಇಡುವುದು ಅರ್ಥಪೂರ್ಣವಾಗಿದೆ. ಕಾನೂನು ಜಾರಿಗಾಗಿ ಮತ್ತು ಭಾರತದಲ್ಲಿ ಭಾರತೀಯ ಕಂಪನಿಗಳಿಂದ ಕೃತಕ ಬುದ್ಧಿಮತ್ತೆಯ ಸುಗಮ ತರಬೇತಿಗಾಗಿ ಭಾರತದಲ್ಲಿ ಮತ್ತು ಭಾರತೀಯರಿಂದ ಉತ್ಪತ್ತಿಯಾಗುವ ಡೇಟಾವನ್ನು ಪ್ರವೇಶಿಸುವ, ಪರಿಶೀಲಿಸುವ ಮತ್ತು ಬಳಸಿಕೊಳ್ಳುವ ಸಾರ್ವಭೌಮ ಅಧಿಕಾರ ಭಾರತದ ಜನರಿಗೆ ಇರಬೇಕು. ಆದಾಗ್ಯೂ, ಅಂತಹ ಡೇಟಾವನ್ನು ವಿದೇಶದಲ್ಲಿರುವ ಸರ್ವರ್-ಗಳಲ್ಲಿ ಕಾಣಿಸಿಕೊಂಡರೆ ಅದು ಸರಿ ಇರಬೇಕು.
ಭಾರತವು ಎಲ್ಲಾ ಭಾರತೀಯ ಡೇಟಾದ ವಿಶೇಷ ಸ್ಥಳೀಕರಣವನ್ನು ಒತ್ತಾಯಿಸಿದರೆ, ಪರಸ್ಪರ ವಿನಿಮಯಕ್ಕಾಗಿ ಬೇಡಿಕೆಗಳು ಉದ್ಭವಿಸುತ್ತವೆ ಮತ್ತು ಇದು ಭಾರತದ ಮಾಹಿತಿ ತಂತ್ರಜ್ಞಾನ (IT) ಮತ್ತು IT ಆಧಾರಿತ ಸೇವೆಗಳ ಕೈಗಾರಿಕೆಗಳಿಗೆ ಅಡ್ಡಿ ಉಂಟುಮಾಡುತ್ತದೆ. ಈ ಕೈಗಾರಿಕೆಗಳು ಸಾಕಷ್ಟು ವಿದೇಶಿ ಡೇಟಾವನ್ನು ಭಾರತಕ್ಕೆ ತಂದು ಇಲ್ಲಿ ಸಂಸ್ಕರಿಸುತ್ತವೆ. ಖಂಡಿತವಾಗಿಯೂ, ಅಮೆರಿಕಾದಲ್ಲಿರುವ ಸರ್ವರ್-ನಲ್ಲಿ ಡೇಟಾವನ್ನು ಸಂಗ್ರಹಿಸಿ ಬೆಂಗಳೂರಿನ ಕಚೇರಿಯಿಂದ ಆ ಡೇಟಾದ ಮೇಲೆ ಕೆಲಸ ಮಾಡುವುದು ಸಾಧ್ಯವಿದೆ, ಆದರೆ ಅನೇಕ ಸಂದರ್ಭಗಳಲ್ಲಿ, ಅಂತಹ ಡೇಟಾವನ್ನು ಭಾರತೀಯ ಡೇಟಾ ಕೇಂದ್ರಗಳಿಗೆ ತಂದ ನಂತರ ಕೆಲಸ ಮಾಡುವುದು ಸರಳವಾಗಿರುತ್ತದೆ.
ಹೀಗೆ ಡೇಟಾ ಸ್ಥಳೀಕರಣಕ್ಕೆ ಉತ್ತೇಜನ ನೀಡಿದರೆ ಡೇಟಾ ಕೇಂದ್ರಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಿದಂತೆ ಆಗುತ್ತದೆ. ಆದ್ದರಿಂದ, ಡೇಟಾ ಸಂಗ್ರಹಣೆ ಮತ್ತು ಭಾರತದಲ್ಲಿ ನೆಲೆಗೊಂಡಿರುವ ಸರ್ವರ್ಗಳ ಅಟ್ಟಣಿಗೆಗಳಲ್ಲಿ ಉನ್ನತ-ಮಟ್ಟದ ಸಂಸ್ಕರಣಾ ಸಾಮರ್ಥ್ಯದಲ್ಲಿ ಲಾಭದಾಯಕ ಅವಕಾಶ ಲಭ್ಯವಾಗುತ್ತದೆ. ಆ ಕಾರಣಕ್ಕೆ ಉದ್ಯಮಗಳು ಡೇಟಾ ಕೇಂದ್ರಗಳನ್ನು ನಿರ್ಮಿಸಲಿ. ಖಾಸಗಿ ಬಂಡವಾಳ ಹೂಡಿಕೆಯಿಂದ ಈ ಕೆಲಸಕ್ಕೆ ಉತ್ತಮ ಬೆಂಬಲ ಸಿಗುತ್ತದೆ. ಡೇಟಾ ಕೇಂದ್ರಗಳನ್ನು ನಡೆಸಲು ಗುಣಮಟ್ಟದ ಮತ್ತು ಹೇರಳವಾದ ವಿದ್ಯುತ್ ಸರಬರಾಜು ಲಭ್ಯವಿದೆ ಎಂದು ಖಚಿತಪಡಿಸುವುದು ಸರ್ಕಾರದ ಕೆಲಸ. ಈ ವಲಯಕ್ಕೆ ಹೆಚ್ಚಿನ ಕಾರ್ಮಿಕರ ಅಗತ್ಯವಿಲ್ಲದಿದ್ದರೂ, ಡೇಟಾ ಕೇಂದ್ರಗಳಲ್ಲಿ ಕೆಲಸ ಮಾಡಲು ಅರ್ಹ ಸಿಬ್ಬಂದಿ ಲಭ್ಯವಿರುವಂತೆ ನೋಡಿಕೊಳ್ಳಬೇಕು.
ಕೇಂದ್ರದ ಅನುದಾನದ ವಿನಿಯೋಗ ಎಲ್ಲಿ?
ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಗಾಗಿ ಸರ್ಕಾರಿ ಅನುದಾನವು, ಚಿಪ್ ವಿನ್ಯಾಸದ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸುಧಾರಿತ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯ ಎಲ್ಲಾ ಘಟಕಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವ ಕಡೆಗೆ ವಿನಿಯೋಗವಾಗಬೇಕು. ಪ್ರೀ-ಸ್ಕೂಲ್ ಮಟ್ಟದಿಂದಲೇ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಜನಸಂಖ್ಯೆಯ ಸಾಮಾನ್ಯ ಸಾಮರ್ಥ್ಯವನ್ನಾಗಿ ಮಾಡಲು ಹಣದ ಅವಶ್ಯಕತೆಯಿದೆ. ಕೃತಕ ಬುದ್ಧಿಮತ್ತೆ ಮತ್ತು AI-ಚಾಲಿತ ಏಜೆಂಟ್ಗಳು ಸಾಂಪ್ರದಾಯಿಕ ಕೆಲಸದ ದೊಡ್ಡ ಭಾಗವನ್ನೇ ಸ್ವಾಧೀನಪಡಿಸಿಕೊಂಡಾಗ, ಜನರು ಕ್ಷಿಪ್ರಗತಿಯಲ್ಲಿ ಯೋಚಿಸುವ ಮತ್ತು ಕಲಿಯುವ ಸಾಮರ್ಥ್ಯವನ್ನು ಹೊಂದಿರಬೇಕು.
ಸರ್ಕಾರಕ್ಕೆ ಹಣ ಉಳಿತಾಯವಾದರೆ, ಸಹಾಯಧನದ ಅಗತ್ಯವೇ ಇಲ್ಲದ ವಸ್ತುಗಳಿಗೆ ಅದನ್ನು ವ್ಯರ್ಥ ಮಾಡಬಾರದು.