ತನ್ನ ಮನೆಯ ಅರಾಜಕತೆ ನಿಭಾಯಿಸಲಾಗದ ಬಾಂಗ್ಲಾ ಸೇನೆ ಉಕ್ರೇನ್ ಗಡಿಗೆ ಹೊರಟಿತೆ?

ಉಕ್ರೇನ್‌ಗೆ ಶಾಂತಿ ಪಾಲನೆಗಾಗಿ ಸೇನಾಪಡೆಯ ಒಂದು ಭಾಗವನ್ನು ಕಳುಹಿಸಿದರೆ ಮುಂದಿನ ಚುನಾವಣೆಯಲ್ಲಿ ಜನ ಇಸ್ಲಾಮಿಕ್ ಪಕ್ಷಗಳ ಪರ ಮತಚಲಾಯಿಸುತ್ತಾರೆ ಎಂಬುದು ಬಾಂಗ್ಲಾ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರ ಯೋಚನೆ.;

Update: 2025-09-15 10:30 GMT
ತನ್ನ ರಾಷ್ಟ್ರದಲ್ಲಿಯೇ ಶಾಂತಿಯನ್ನು ಮರಳಿ ತರಲು ಬೇಕಾದದಷ್ಟು ಸೈನಿಕರಿಲ್ಲದೇ ಒದ್ದಾಡುತ್ತಿರುವ ಬಾಂಗ್ಲಾದೇಶದ ಸೇನೆಯನ್ನು ರಷ್ಯಾ-ಉಕ್ರೇನ್ ಗಡಿಯಲ್ಲಿ ಶಾಂತಿ ಪಾಲನೆಗೆ ಕಳುಹಿಸುವುದು ಎಷ್ಟರಮಟ್ಟಿಗೆ ಯಥೋಚಿತ?

ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಭಾವ್ಯ ಬಫರ್ ವಲಯದಲ್ಲಿ ಶಾಂತಿಪಾಲಕರಾಗಿ ತಮ್ಮ ಸೈನಿಕರನ್ನು ನಿಯೋಜಿಸಲು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಔಪಚಾರಿಕವಾಗಿ ಆಸಕ್ತಿ ವ್ಯಕ್ತಪಡಿಸಿದೆ. ರಷ್ಯಾ, ಉಕ್ರೇನ್, ಮತ್ತು ಪಾಶ್ಚಾತ್ಯ ಶಕ್ತಿಗಳಾದ ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳನ್ನು ಒಳಗೊಂಡ ಬಹುಪಕ್ಷೀಯ ಒಪ್ಪಂದದ ಭಾಗವಾಗಿ ಬಫರ್ ವಲಯವನ್ನು ರಚಿಸುವ ಸಾಧ್ಯತೆ ಇದೆ. ಅಲ್ಲಿ ಶಾಂತಿಪಾಲನಾ ಉದ್ದೇಶಕ್ಕಾಗಿ ತನ್ನ ಸೇನೆಯನ್ನು ನಿಯೋಜಿಸಲು ಬಾಂಗ್ಲಾದೇಶ ಆಸಕ್ತಿ ವಹಿಸುತ್ತದೆ ಎಂದು ಮಧ್ಯಂತರ ಸರ್ಕಾರದ ವಿದೇಶಾಂಗ ಸಲಹೆಗಾರ ತೌಹಿದ್ ಹುಸೇನ್ ಹೇಳಿದ್ದಾರೆ.

ಉಕ್ರೇನ್ನಲ್ಲಿ ಯುರೋಪ್ ಸೈನಿಕರ ನಿಯೋಜನೆಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ, ಹಾಗೇನಾದರೂ ಆದರೆ ಭವಿಷ್ಯದಲ್ಲಿ ಉಕ್ರೇನ್ನಲ್ಲಿ ರಷ್ಯಾದ ಮಿಲಿಟರಿ ಆಕ್ರಮಣವನ್ನು ತಡೆಯಲು ನ್ಯಾಟೋದ ಮಿಲಿಟರಿಗೆ ಅವಕಾಶ ಕೊಟ್ಟಂತಾಗುತ್ತದೆ ಎಂಬುದು ಪುಟಿನ್ ಅವರ ಆತಂಕವಾಗಿದೆ. ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಅವರ ಜಾಗತಿಕ ಕಾರ್ಯಸೂಚಿಯಲ್ಲಿ ಇದು ಅಗ್ರಸ್ಥಾನದಲ್ಲಿದೆ, ಪ್ರಸ್ತಾವಿತ ಮಿಲಿಟರಿ ಉಪಸ್ಥಿತಿಯಿಂದ ದೂರ ಸರಿದು, ರಷ್ಯಾ ಮತ್ತು ಉಕ್ರೇನ್ ಎರಡೂ ಒಪ್ಪಿಕೊಳ್ಳಬಹುದಾದ, ಯುರೋಪಿಯನ್ ಅಲ್ಲದ ರಾಷ್ಟ್ರಗಳ ಸೈನಿಕರಿಂದ ನಿರ್ವಹಿಸಲ್ಪಡುವ ಬಫರ್ ವಲಯವನ್ನು ರಚಿಸುವತ್ತ ಗಮನ ಹರಿಸಿದ್ದಾರೆ.

ಬಾಂಗ್ಲಾದೇಶದ ಅಚ್ಚರಿಯ ನಿಲುವು

ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶವನ್ನು ಒಂದು ಆಯ್ಕೆಯಾಗಿ ಪರಿಗಣಿಸಬಹುದು. ಆದರೆ, ಬಾಂಗ್ಲಾದೇಶದ ಭವಿಷ್ಯವೇ ಅನಿಶ್ಚಿತವಾಗಿದೆ, ಅದರಲ್ಲೂ ವಿಶೇಷವಾಗಿ ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ತಹಬಂದಿಗೆ ಬರಬೇಕಾಗಿದೆ. ಆ ಕಾರಣದಿಂದಲೇ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರು ಸೈನ್ಯಕ್ಕೆ ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ಹಸ್ತಾಂತರಿಸುವಂತೆ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ, ಜಗತ್ತಿನ ಒಂದು ಪ್ರಮುಖ ಯುದ್ಧದ ತಾಣಕ್ಕೆ ತನ್ನ ಸೈನಿಕರನ್ನು ಕಳುಹಿಸಲು ಬಾಂಗ್ಲಾದೇಶ ತೋರಿಸುತ್ತಿರುವ ಉತ್ಸಾಹ ಯಾರಿಗಾದರೂ ಅಚ್ಚರಿ ಎನಿಸದೇ ಇರದು.

ಭಾರತವು ತನ್ನ ಗಡಿಗಳಲ್ಲಿ ಎದುರಿಸುತ್ತಿರುವ ನಿರಂತರ ಯುದ್ಧದ ಪರಿಸ್ಥಿತಿಯನ್ನು ಬಾಂಗ್ಲಾದೇಶ ಅದರ ಭಾರತ ಮತ್ತು ಮ್ಯಾನ್ಮಾರ್ ಗಡಿಯಲ್ಲಿ ಖಂಡಿತವಾಗಿಯೂ ಎದುರಿಸುತ್ತಿಲ್ಲ. ಈ ವರ್ಷದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಂತಹ ಮಿಲಿಟರಿ ಸಂಘರ್ಷವನ್ನಾಗಲಿ, ಅಥವಾ ನಾಲ್ಕು ವರ್ಷಗಳ ಹಿಂದೆ ಚೀನಾದೊಂದಿಗೆ ಗಲ್ವಾನ್ ಕಣಿವೆಯಲ್ಲಿ ಸಂಭವಿಸಿದ ಘರ್ಷಣೆಗಳಂತಹ ಮಿಲಿಟರಿ ಸಂಘರ್ಷವನ್ನು ಅದು ಕಂಡಿದ್ದಿಲ್ಲ.

ಕಳೆದ ಆಗಸ್ಟ್ನಲ್ಲಿ ಶೇಖ್ ಹಸೀನಾ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ, ಬಾಂಗ್ಲಾದೇಶದಲ್ಲಿ ತಲೆದೋರಿರುವ ಅರಾಜಕತೆ ಯಾವುದೇ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳು ಅವ್ಯಾಹತವಾಗಿವೆ. ಧಾರ್ಮಿಕ ಅಲ್ಪಸಂಖ್ಯಾತರು, ಜಾತ್ಯತೀತ ವ್ಯಕ್ತಿಗಳು ಮತ್ತು ಗುಂಪುಗಳ ಮೇಲೆ ಹಾಗೂ ಈಗಿನ ಆಡಳಿತದ ಬಗ್ಗೆ ಟೀಕೆ ಮಾಡುವವರ ಮೇಲಿನ ಉದ್ದೇಶಿತ ಹಿಂಸಾಚಾರಗಳು ಎಗ್ಗು-ಸಿಗ್ಗಿಲ್ಲದೆ ನಡೆಯುತ್ತಿವೆ. ಈ ಆಡಳಿತವು ಮೂಲಭೂತವಾದಿ ಗುಂಪುಗಳ ಬಗ್ಗೆ ಹೊಂದಿರುವ ಮೃಧು ಧೋರಣೆ ರಹಸ್ಯವಾಗೇನೂ ಉಳಿದಿಲ್ಲ.

ಕಳೆದ ಆಗಸ್ಟ್ನಲ್ಲಿ ಮಧ್ಯಂತರ ಸರ್ಕಾರವನ್ನು ಒಗ್ಗೂಡಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ಜನರಲ್ ವಾಕರ್ ಉಜ್ ಜಮಾನ್, ಕಾನೂನು ಮತ್ತು ಸುವ್ಯವಸ್ಥೆಗೆ ಅಂಕುಶ ಹಾಕುವಲ್ಲಿ ಉಂಟಾಗಿರುವ ವೈಫಲ್ಯಕ್ಕೆ ತಾವೇ ಸೃಷ್ಟಿಸಿದ ಸರ್ಕಾರವನ್ನು ಹಲವು ಬಾರಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಲ್ಲಿ ಚುನಾಯಿತ ಸರ್ಕಾರ ಅಧಿಕಾರ ವಹಿಸಿಕೊಳ್ಳಬೇಕು ಮತ್ತು ಸೇನೆಯು ತನ್ನ ಶಿಬಿರಗಳಿಗೆ ಮರಳಲು ನಿರ್ದಿಷ್ಟ ಚುನಾವಣಾ ಮಾರ್ಗಸೂಚಿ ಘೋಷಿಸಬೇಕು ಎಂದು ಅವರು ಯೂನುಸ್ ಜೊತೆ ನಿರಂತರ ಕತ್ತಿ ವರಸೆಯಲ್ಲಿ ತೊಡಗಿದ್ದಾರೆ.

ಆದರೆ, ಯೂನುಸ್ ಅವರು ಇನ್ನೂ ಚುನಾವಣೆಯ ನಿಖರ ದಿನಾಂಕವನ್ನು ಘೋಷಿಸಿಲ್ಲ, ಮತ್ತು ಸೇನೆಯೂ ತನ್ನ ಮ್ಯಾಜಿಸ್ಟ್ರೇಟ್ ಅಧಿಕಾರಗಳೊಂದಿಗೆ ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯ ನಿರ್ವಹಿಸುವುದರಿಂದ ಇನ್ನೂ ದೂರ ಉಳಿದಿಲ್ಲ.

ಸೇನೆಯಲ್ಲಿ ಜನರೇ ಇಲ್ಲದ ಸ್ಥಿತಿ

ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿಯಾಗಿ ನಿಯಂತ್ರಿಸುವಲ್ಲಿ ಸೇನೆಯ ವೈಫಲ್ಯಕ್ಕೆ ಜನರಲ್ ವಾಕರ್ ಅವರು ಅದರ ಸೀಮಿತ ಸಂಖ್ಯೆಯನ್ನು ಹಲವು ಬಾರಿ ಕಾರಣವಾಗಿ ಹೇಳಿದ್ದಾರೆ. ಕಳೆದ ವರ್ಷ ಆಗಸ್ಟ್ನಲ್ಲಿ ನಡೆದ ಪ್ರತಿಭಟನೆಯ ವೇಳೆ ಗುಂಪಿನ ದುಂಡಾವರ್ತನೆಗೆ ಗುರಿಯಾದ ಪೊಲೀಸರು ಸಂಪೂರ್ಣವಾಗಿ ಧೈರ್ಯಗುಂದಿದ್ದಾರೆ. ಹಾಗಾಗಿ ಸೇನೆಯು ಅವರ ಸ್ಥಾನವನ್ನು ತುಂಬಬೇಕಾಯಿತು. ಆದರೆ, ಅದಕ್ಕೆ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಸೈನಿಕರಿಲ್ಲ ಮತ್ತು ಅವರಿಗೆ ನಿರ್ದಿಷ್ಟ ತರಬೇತಿಯ ಕೊರತೆಯಿದೆ. ಯಾವುದೇ ಸೇನೆಗೆ ವಿದೇಶಿ ಶತ್ರುಗಳ ವಿರುದ್ಧ ಹೋರಾಡಲು ಅಥವಾ ದೇಶೀಯ ದಂಗೆಗಳನ್ನು ನಿಭಾಯಿಸಲು ತರಬೇತಿ ನೀಡಲಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಅವರ ಕರ್ತವ್ಯವಲ್ಲ. ಅದು ಸ್ಪಷ್ಟವಾಗಿ ಪೊಲೀಸರ ಕೆಲಸ ಎಂಬುದು ಅವರ ವಾದವಾಗಿದೆ.

ದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃ ಸ್ಥಾಪಿಸಲು ಅಗತ್ಯವಿರುವಷ್ಟು ಸೈನಿಕರು ಬಾಂಗ್ಲಾದೇಶದ ಸೇನೆಯಲ್ಲಿ ಇಲ್ಲದಿದ್ದರೆ, ರಷ್ಯಾ-ಉಕ್ರೇನ್ ಗಡಿಗೆ ಕಳುಹಿಸಲು ಸಾಕಷ್ಟು ಸೈನಿಕರು ಎಲ್ಲಿಂದ ಸಿಗುತ್ತಾರೆ? ರಷ್ಯಾ-ಉಕ್ರೇನ್ ಗಡಿಯಲ್ಲಿ ಶಾಂತಿಪಾಲನೆ ನಿಜಕ್ಕೂ ಸವಾಲಿನ ಕೆಲಸ. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಬಾಂಗ್ಲಾದೇಶದ ಸೈನಿಕರು ಭಾಗಿಯಾಗುವ ಇತರ ಯಾವುದೇ ಸಂಘರ್ಷಕ್ಕಿಂತ ಇದು ಸುಲಭದ ಮಾತಲ್ಲ.

ಇಂತಹ ಕಾರ್ಯಾಚರಣೆಯಿಂದ ಸೈನಿಕರಿಗೆ ಸ್ಪಷ್ಟವಾಗಿ ಆರ್ಥಿಕ ಲಾಭಗಳಾಗುತ್ತವೆ. ಹಾಗಾಗಿ ಅದನ್ನು ಸೈನಿಕರು ಸ್ವಾಗತಿಸುತ್ತಾರೆ. ಆದರೆ ಯಾವುದೇ ಸೇನೆಯ ಆದ್ಯತೆಯು ಬೇರೆಡೆ ಹಣ ಗಳಿಸುವುದಕ್ಕಿಂತ ಹೆಚ್ಚಾಗಿ ರಾಷ್ಟ್ರದ ಸಂರಕ್ಷಣೆ. ಉಕ್ರೇನ್-ರಷ್ಯಾ ಗಡಿಯಲ್ಲಿ ಶಾಂತಿಪಾಲನೆ ಮಾಡುವುದು ಈಗ ಬಾಂಗ್ಲಾದೇಶ ಸೇನೆಗೆ ಆದ್ಯತೆಯ ಕೆಲಸವೆ? ದೇಶದೊಳಗಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸುವುದು ಮುಖ್ಯವಲ್ಲವೇ? ಯಾಕೆಂದರೆ, ಬಾಂಗ್ಲಾದಲ್ಲಿ ಸೇನೆ ಇಲ್ಲದೆ ಯಾವುದೇ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಾಧ್ಯವಿಲ್ಲ.

ಸೇನೆಯ ಕೈಕಟ್ಟಿ ಹಾಕುವ ಹುನ್ನಾರವೇ?

ಚುನಾವಣೆಯನ್ನು ಎದುರಿಸದೆ ತಮ್ಮ ಅಧಿಕಾರವನ್ನು ಮುಂದುವರಿಸುವುದು ನೊಬೆಲ್ ಪ್ರಶಸ್ತಿ ಪುರಸ್ಕೃತ ಯೂನುಸ್ ಅವರಿಗೆ ಕಷ್ಟ ಸಾಧ್ಯ. ಅವರಿಗಿರುವ ದೊಡ್ಡ ಬೆದರಿಕೆ ಎಂದರೆ ಸೇನೆ ಎಂದು ಯೂನುಸ್ ಆಡಳಿತದ ವಿಮರ್ಶಕರು ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿರುವ ಅವರ ಅಂತರರಾಷ್ಟ್ರೀಯ ಬೆಂಬಲಿಗರು ಹೇಳುತ್ತಾರೆ. ಹಾಗಾಗಿ ರಷ್ಯಾ-ಉಕ್ರೇನ್ ಗಡಿಗೆ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಕಳುಹಿಸುವ ಈ ಪ್ರಸ್ತಾವನೆಗೆ ಕಾರಣವಾಗಿರಬಹುದು. ಹೀಗೆ ಮಾಡುವುದರಿಂದ, ಸೇನೆಯ ಗಮನವು ಸಂಪೂರ್ಣವಾಗಿ ಬೇರೆಡೆಗೆ ತಿರುಗುತ್ತದೆ. ಚುನಾವಣೆಯಾಗಲಿ ಅಥವಾ ವಾಕರ್ ಅತೃಪ್ತಿಗೆ ಕಾರಣವಾಗಿರುವ ವಿವಾದಾತ್ಮಕ ರಾಖೈನ್ ಕಾರಿಡಾರ್ ವಿಷಯದಲ್ಲಾಗಲಿ - ಯೂನುಸ್ ಅವರನ್ನು ಒತ್ತಾಯಿಸುವುದನ್ನು ಸೇನೆಯ ನಾಯಕತ್ವ ನಿಲ್ಲಿಸುತ್ತದೆ.

ನೇರವಾಗಿ ಅಲ್ಲದೇ ಹೋದರೂ, ಮಿಲಿಟರಿ ಹಸ್ತಕ್ಷೇಪದ ಮೂಲಕ ಅಧ್ಯಕ್ಷರು ತುರ್ತು ಪರಿಸ್ಥಿತಿ ಘೋಷಣೆಯಿಂದ ಸೇನಾ ಅಧಿಕಾರ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಯೂನುಸ್ ಅವರಿಗೆ ಭಯವಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಸೇನೆಯಲ್ಲಿ ಸಾಕಷ್ಟು ಸೈನಿಕರು ಇಲ್ಲದೇ ಇದ್ದರೆ, ಯೂನುಸ್ ಬೆಂಬಲಿಸುವ ಪಕ್ಷಗಳು ತಮ್ಮದೇ ಸಶಸ್ತ್ರ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಮೂಲಕ ಭವಿಷ್ಯದ ಯಾವುದೇ ಚುನಾವಣೆಗಳನ್ನು ತಮ್ಮ ಪರವಾಗಿ ತಿರುಗಿಸಲು ಸಾಧ್ಯವಾಗುತ್ತದೆ. ಈ ತಿಂಗಳು ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿಯ ವಿದ್ಯಾರ್ಥಿ ವಿಭಾಗವಾದ ಇಸ್ಲಾಮಿಕ್ ಛಾತ್ರ ಶಿಬಿರವು ಢಾಕಾ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಭಾರಿ ಬಹುಮತ ಗಳಿಸಿದ್ದು, ಇದು ಭವಿಷ್ಯದ ವಿದ್ಯಮಾನಗಳಿಗೆ ಕನ್ನಡಿ ಹಿಡಿದಂತಿದೆ.

ಜಮಾತ್ ಇಸ್ಲಾಂಗಳೊಂದಿಗೆ ಪ್ರತಿದಿನ ರಹಸ್ಯ ಮಾತುಕತೆ ನಡೆಸುತ್ತಿರುವ ಮತ್ತು ಅವರ ರಾಜಕೀಯ ಆದ್ಯತೆಗಳ ಬಗ್ಗೆ ಯಾವುದೇ ಅನುಮಾನವಿಲ್ಲದ ಪಾಶ್ಚಿಮಾತ್ಯ ಶಕ್ತಿಗಳಿಗೆ, ಬಾಂಗ್ಲಾದೇಶದ ಸೇನೆಯ ಒಂದು ದೊಡ್ಡ ಭಾಗವನ್ನು ದೂರದ, ಸಂಕಷ್ಟದ ಸಂಘರ್ಷ ವಲಯದಲ್ಲಿ ಕಟ್ಟಿಹಾಕಿದರೆ ಅದರ ದೊಡ್ಡ ಯೋಜನೆಯೊಂದು ಪೂರೈಸಿದಂತೆ ಸರಿ. ಈ ಯೋಜನೆಯಿಂದ ಢಾಕಾದಲ್ಲಿ ಇಸ್ಲಾಮಿ ಆಡಳಿತವನ್ನು ಅಧಿಕಾರಕ್ಕೆ ತರುವುದು ಸುಲಭವಾಗುತ್ತದೆ ಮತ್ತು ಹಾಗೆ ಅಧಿಕಾರಕ್ಕೆ ಬಂದ ಆಡಳಿತವು ಅವರ ಆಯಕಟ್ಟಿನ ಮತ್ತು ಆರ್ಥಿಕ ಆದ್ಯತೆಗಳಾದ ರಾಖೈನ್ ಕಾರಿಡಾರ್ ಅಥವಾ ಅಮೆರಿಕದ ಎಕ್ಸೆಲರೇಟ್ ಎನರ್ಜಿ ಜೊತೆಗಿನ ದೊಡ್ಡ ಎಲ್ಎನ್ಜಿ ಒಪ್ಪಂದವನ್ನು ಈಡೇರಿಸಲು ರಹದಾರಿ ಒದಗಿಸಿದಂತಾಗುತ್ತದೆ.

ಇಂತಹ ಭವಿಷ್ಯವು ಖಂಡಿತವಾಗಿಯೂ ಭಾರತಕಕ್ಕೆ ಇಂಪಾಗಿ ಕೇಳಲು ಸಾಧ್ಯವಿಲ್ಲ. ಆದರೆ ಭಾರತ ಮಾಡಲು ಹೆಚ್ಚೇನೂ ಉಳಿದಿಲ್ಲ ಎಂದು ಕಾಣುತ್ತಿದೆ.

ಬಾಂಗ್ಲಾದೇಶದಲ್ಲಿ ಇಸ್ಲಾಮಿ ಮೂಲಭೂತವಾದವು ತೀವ್ರ ಏರುಗತ್ತಿಯಲ್ಲಿದೆ ಎಂಬುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು 'ಪೂರ್ವದಲ್ಲಿ ಭಾರತಕ್ಕೆ ತಕ್ಕ ಪಾಠ ಕಲಿಸುವುದಾಗಿ' ನೀಡಿರುವ ಬೆದರಿಕೆಯು ಕೇವಲ ಅರ್ಥಹೀನ ಹುಸಿ ಧಮಕಿ ಆಗಿಲ್ಲದೇ ಇರಬಹುದು. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಹೊಸದಾಗಿ ಹುಟ್ಟಿಕೊಂಡಿರುವ ಸ್ನೇಹವನ್ನು ಗಮನಿಸಿದರೆ, ಪಾಕಿಸ್ತಾನದಿಂದ ತರಬೇತಿ ಪಡೆದ ಬಾಂಗ್ಲಾದೇಶದ ಜಿಹಾದಿಗಳು ಗಡಿಯನ್ನು ದಾಟಿ ಬಾಗ್ದೋಗ್ರಾದಲ್ಲಿ (ಐಎಎಫ್ನ ಉನ್ನತ ಸ್ಕ್ವಾಡ್ರನ್ಗೆ ನೆಲೆಯಾಗಿದೆ) ಪಠಾಣ್ಕೋಟ್ ಮಾದರಿಯ ದಾಳಿಯನ್ನು ಅಥವಾ ಡಾರ್ಜಿಲಿಂಗ್ನಲ್ಲಿ ಪಹಲ್ಗಾಂ ಮಾದರಿಯ ದಾಳಿಯನ್ನು ನಡೆಸಬಹುದೆಂದು ಊಹಿಸುವುದು ಅತಿರೇಕ ಎಂದು ತಳ್ಳಿಹಾಕಲು ಸಾಧ್ಯವಿಲ್ಲ.

Tags:    

Similar News