ರಾಹುಲ್ ಹೇಳಿದ್ದು ಸರಿ; ಜಾತಿ ಸುಧಾರಣೆಯೇ ಕಾಂಗ್ರೆಸ್ ಪಾಲಿಗೆ ಉಳಿವಿನ ಹಾದಿ
ಜಾತಿ ವಿಚಾರದಲ್ಲಿ ನೆಹರೂ, ಇಂದಿರಾ ಮತ್ತು ರಾಜೀವ್ ಗಾಂಧಿಯ ಕಾಲದ ಮನೋಭಾವ ಹೊಂದಿರುವುದಾದರೆ, ನಿಧಾನವಾಗಿ ಎಡಪಕ್ಷಗಳಂತೆ ಪ್ರಸ್ತುತತೆಯನ್ನು ಕಳೆದುಕೊಳ್ಳಲಿದೆ.;
ರಾಹುಲ್ ಗಾಂಧಿ ಜಾತಿ ಜನಗಣತಿ ವಿಷಯ ಕೈಗೆತ್ತಿಕೊಂಡಾಗಿನಿಂದ ಮತ್ತು ಸಾಮಾಜಿಕ ನ್ಯಾಯದ ಮೇಲೆ ಕಾಂಗ್ರೆಸ್ ಮರುಸ್ಥಾಪಿಸಲು ಪ್ರಯತ್ನಿಸಿದಾಗಿನಿಂದ, ಪಕ್ಷದೊಳಗೆ ಕೋಲಾಹಲ ಉಂಟಾಗಿದೆ. ಅವರ ಕಾರ್ಯಸೂಚಿಯ ಬಗ್ಗೆ ಗಮನಾರ್ಹ ಆತಂಕ ವ್ಯಕ್ತವಾಗಿದೆ.
ಆನಂದ್ ಶರ್ಮಾ ಅವರಂತಹ ಕೆಲವು ಹಿರಿಯ ಕಾಂಗ್ರೆಸ್ ನಾಯಕರು 2024 ರ ಚುನಾವಣೆಗೆ ಮುಂಚಿತವಾಗಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು, ಜಾತಿ ಜನಗಣತಿ ಮತ್ತು ಮೀಸಲಾತಿಯ ಶೇಕಡಾ 50 ರ ಮಿತಿ ತೆಗೆದುಹಾಕುವ ರಾಹುಲ್ ಅವರ ಪ್ರಸ್ತಾಪಗಳನ್ನು ಆಕ್ಷೇಪಿಸಿದ್ದರು. ಆದರೆ ರಾಹುಲ್ ಅವರ ಚುನಾವಣಾ ಪ್ರಚಾರವು ಜಾತಿ ಜನಗಣತಿ ಮತ್ತು ಸಂವಿಧಾನದ ರಕ್ಷಣೆ ಮತ್ತು ಮೀಸಲಾತಿಯ ಮೇಲೆ ಕೇಂದ್ರೀಕೃತವಾಗಿತ್ತು.
ರಾಹುಲ್ ಕಾರ್ಯತಂತ್ರದ ಫಲ
ಈ ಕಾರ್ಯತಂತ್ರವು ಪಕ್ಷ ಮತ್ತು ಇಂಡಿಯಾ ಒಕ್ಕೂಟಕ್ಕೆ ಲಾಭವಾಯಿತು. ಬಿಜೆಪಿಯ ಸಂಖ್ಯೆಯನ್ನು 240ಕ್ಕೆ ಇಳಿಸಲು ಸಹಾಯ ಮಾಡಿತು. ಕಾಂಗ್ರೆಸ್ 101 ಸ್ಥಾನಗಳನ್ನು ಗಳಿಸಿ ರಾಹುಲ್ ಅವರನ್ನು ಪ್ರಬಲ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿತು.
ಸಂವಿಧಾನವನ್ನು ರಕ್ಷಿಸುವ ವಿಷಯದಲ್ಲಿ, ಪಕ್ಷದೊಳಗೆ ಹೊಂದಾಣಿಕೆ ಇದೆ. ಆದರೆ, ಪಕ್ಷದ ರಚನೆಯು ಜಾತಿ ಜನಗಣತಿ ಮತ್ತು ಮೀಸಲಾತಿಯ ಬಗ್ಗೆ ರಾಹುಲ್ ಅವರ ಸೈದ್ಧಾಂತಿಕ ನಿಲುವಿನೊಂದಿಗೆ ಹೊಂದಿಕೆಯಾಗುತ್ತಿಲ್ಲ.
ರಾಹುಲ್ ಗಾಂಧಿಯ ಸುಧಾರಣಾ ಅಜೆಂಡಾ ಸಮಾಜ ಮತ್ತು ಕಾಂಗ್ರೆಸ್ ಪಕ್ಷದೊಳಗೆ ಎರಡಗಲಿನ ಕತ್ತಿಯಂತೆ. ಭಾರತ ಸ್ವಾತಂತ್ರ್ಯದ ಪಡೆದ ಬಳಿಕ ಕಾಂಗ್ರೆಸ್ ಆಡಳಿತ ಪಕ್ಷವಾಗಿದ್ದರೂ, ಈ ಸುಧಾರಣೆಗಳು ಆ ವೇಳೆ ಅದರ ನಾಯಕರಿಗೆ ನಗಣ್ಯ ಎನಿಸಿತ್ತು.
ಅತ್ತ ಆರ್‌ಎಸ್‌ಎಸ್ ಮತ್ತು ಬಿಜೆಪಿ ಜಾತಿ ಕ್ರೋಡೀಕರಣದಲ್ಲಿ ತಲ್ಲೀನವಾಗಿರುವಾಗ, ಕಾಂಗ್ರೆಸ್ ಉಳಿವಿಗೆ ಕಾರ್ಯಸಾಧುವಾದ ಒಂದೇ ಮಾರ್ಗವೆಂದರೆ ಜಾತಿ ಸುಧಾರಣೆ ಎಂಬುದು ರಾಹುಲ್‌ಗೆ ಮನವರಿಕೆಯಾಗಿದೆ.
ಕಾರ್ಯಸೂಚಿಯ ಬಗ್ಗೆ ಅಸಮಾಧಾನ
ವಾಸ್ತವವಾಗಿ ಕಾಂಗ್ರೆಸ್ ಹೊರಗೆ ಒಳಗೆ ಇರುವ ದ್ವಿಜ ಜಾತಿಯ (ಮೇಲ್ವರ್ಗ- ಬ್ರಾಹ್ಮಣ, ಕ್ಷತ್ರಿಯ ಮತ್ತ ವೈಶ್ಯ) ನಾಯಕರು ಮತ್ತು ಬುದ್ಧಿಜೀವಿಗಳು ಜಾತಿಗಳ ಕುರಿತು ರಾಹುಲ್ ಹೊಂದಿರುವ ಕಾರ್ಯಸೂಚಿಯನ್ನು ಒಪ್ಪುತ್ತಿಲ್ಲ. ಕಾಂಗ್ರೆಸೇತರ ದ್ವಿಜ ಜಾತಿಯವರ ಆಶಯವೂ ಇನ್ನೊಂದು ರೀತಿಯದ್ದು. ನರೇಂದ್ರ ಮೋದಿಯನ್ನು ಅಗ್ರಸ್ಥಾನದಲ್ಲಿ ಕೂರಿಸಿದ್ದನ್ನೇ ಮುಂದಿಟ್ಟುಕೊಂಡು ಆರ್‌ಎಸ್‌ಎಸ್ ಮತ್ತು ಬಿಜೆಪಿ ಜಾತಿ ಗಣತಿಯ ಬೇಡಿಕೆಯಿಂದ ಪಾರು ಮಾಡಿಕೊಂಡಿದೆ ಎಂದು ಅಂದುಕೊಂಡಿದ್ದಾರೆ. ಅವರ ಪ್ರಕಾರ. ರಾಹುಲ್, ತಮ್ಮೆಲ್ಲರ ಆರಾಮ ವಲಯದಲ್ಲಿ ಬಿಕ್ಕಟ್ಟು ಸೃಷ್ಟಿಸಿದ್ದಾರೆ .
ಆರ್‌ಎಸ್‌ಎಸ್ -ಬಿಜೆಪಿ ಹಿಂದುತ್ವ ರಾಜಕಾರಣದೊಂದಿಗೆ ಮೈತ್ರಿ ಮಾಡಿಕೊಂಡಿರುವ ಗುಜರಾತ್ -ಮುಂಬೈ ಏಕಸ್ವಾಮ್ಯಯು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳದಂತೆ ನೋಡಿಕೊಳ್ಳುತ್ತದೆ ಎಂದು ಅವರೆಲ್ಲರೂ ಆಶಿಸಿದ್ದಾರೆ.
ದ್ವಿಜರಿಗೆ, ವಿಶೇಷವಾಗಿ ಉತ್ತರ ಭಾರತದಲ್ಲಿ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕಿಂತ ಜಾತಿ ಸಂಸ್ಕೃತಿ ಸಂರಕ್ಷಿಸುವುದು ಆದ್ಯ ವಿಚಾರವಾಗಿದೆ.
ವರ್ಗ ಆಧಾರಿತ ಸಮಾಜದಲ್ಲಿ, ಸಂಪತ್ತು ಬರುತ್ತದೆ ಮತ್ತು ಹೋಗುತ್ತದೆ. ಒಮ್ಮೆ ಸಮಾಜದ ಮೇಲೆ ಜಾತಿ ನಿಯಂತ್ರಣ ಕಳೆದುಕೊಂಡರೆ ಅದು ಹಿಂತಿರುಗುವುದಿಲ್ಲ. ಇದು ಸಮಾಜದ ಉತ್ಪಾದಕ ಸಮುದಾಯಕ್ಕೆ ಸಾಮಾಜಿಕ-ಆಧ್ಯಾತ್ಮಿಕ ನಿಯಂತ್ರಣ ನೀಡುತ್ತದೆ. ಹೀಗಾಗಿ ಜಾತಿ ಜನಗಣತಿ ಮತ್ತು ಜಾತಿ ಜನಸಂಖ್ಯಾ ದತ್ತಾಂಶದ ಆಧಾರದ ಮೇಲೆ ಸಂಪನ್ಮೂಲಗಳ ಮರುಹಂಚಿಕೆ ಮಾಡುವ ರಾಹುಲ್ ಅವರ ಕಾರ್ಯಸೂಚಿಯನ್ನು ತಡೆಯಲು ಆರ್‌ಎಸ್‌ಎಸ್ -ಬಿಜೆಪಿ ಪ್ರಯತ್ನಿಸುತ್ತಿದೆ. ಬಟೆಂಗೆ ತೋ ಕಟೆಂಗೆ ಅಥವಾ ಏಕ್ ಹೈ ತೋ ಸೇಫ್ ಹೈ ಮುಂತಾದ ಘೋಷಣೆಗಳನ್ನು ಬಳಸುತ್ತಿವೆ.
ಒಬಿಸಿಗಳ ಒಮ್ಮತ
ಶೂದ್ರ ಮೇಲ್ಜಾತಿಗಳು ಒಬಿಸಿ / ಎಸ್ಸಿ / ಎಸ್ಟಿಗಳೊಂದಿಗೆ ಜಾತಿ ಜನಗಣತಿಯ ಕಲ್ಪನೆಯನ್ನು ಒಪ್ಪುವ ಸಾಧ್ಯತೆಗಳಿವೆ. ಮಂಡಲ್ ನಂತರದ ಯುಗದಲ್ಲಿ, ರಾಷ್ಟ್ರೀಯ ಅಧಿಕಾರಶಾಹಿ ಶಕ್ತಿ, ಮಾಧ್ಯಮ ಮತ್ತು ಬೌದ್ಧಿಕ ಕ್ಷೇತ್ರದಲ್ಲಿ ಅವರ ಪ್ರಾತಿನಿಧ್ಯ ಸುಧಾರಿಸಿಲ್ಲದ ಕಾರಣ ಅಂಥದ್ದೊಂದು ಮನಸ್ಸು ಮಾಡಬಹುದು.
ತಮಗೆ ದೊರೆತಿರುವ ಭೂ ಒಡೆತನವು, ದ್ವಿಜರಂತೆ ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಮತ್ತು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ರೀತಿಯ ಉನ್ನ ಸೇವೆಗಳಲ್ಲಿ ಉದ್ಯೋಗ ಪಡೆಯಲು ನೆರವಾಗಿಲ್ಲ ಎಂಬ ಅರಿವು ಶೂದ್ರರಿಗೆ ಅರ್ಥವಾಗಿದೆ. ಪ್ರಾದೇಶಿಕವಾಗಿ ಬಲವಾಗಿರುವ ಶೂದ್ರ ಮೇಲ್ಜಾತಿಗಳಿಗೂ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗುತ್ತಿಲ್ಲ.
ಜಾತಿ ಆಧಾರಿತ ಮೀಸಲಾತಿ ಎಂದಿಗೂ ಸಕಾರಾತ್ಮಕ ಹೆಜ್ಜೆಯಾಗಿ ಸ್ವೀಕರಿಸದ ಕಾಂಗ್ರೆಸ್‌ಗೆ - ವಿಶೇಷವಾಗಿ ಮೀಸಲಾತಿಯ ಪರವಾಗಿರದ ನೆಹರೂ ಕುಟುಂಬದಲ್ಲಿ, ಜಾತಿ ಗಣತಿ ಮತ್ತು ಮೀಸಲಾತಿಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಲು ನಾಯಕ ಹೊರ ಹೊಮ್ಮಿದ್ದಾನೆ.
ಪ್ರತಿ 100 ರೂ.ಗಳ ಆರ್ಥಿಕ ಹಂಚಿಕೆಯಲ್ಲಿ ಕೇವಲ 3 ರೂ.ಗಳು ದಲಿತರಿಗೆ, 4-5 ರೂ.ಗಳು ಒಬಿಸಿಗಳಿಗೆ ಮತ್ತು 2-3 ರೂ.ಗಳು ಆದಿವಾಸಿಗಳಿಗೆ ಹೋಗುತ್ತವೆ ಎಂದು ಅವರು ಈಗ ಎತ್ತಿ ತೋರಿಸುತ್ತಿದ್ದಾರೆ. ಏಕೆಂದರೆ ಹಂಚಿಕೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರಿಗಳಲ್ಲಿ ಶೇಕಡಾ 90 ರಷ್ಟು ಮೇಲ್ಜಾತಿಗಳಿಗೆ ಸೇರಿದವರು.
ಜಾತಿ ಆಧಾರಿತ ನಿಧಿ ಹಂಚಿಕೆಯ ಈ ಚರ್ಚೆಯನ್ನು ಮೇಲ್ವರ್ಗಕ್ಕೆ ಸೇರಿದ ಅಧಿಕಾರಿಗಳು ಸಮಸ್ಯಾತ್ಮಕವೆಂದು ನೋಡುತ್ತಾರೆ. ವ್ಯವಸ್ಥೆಯ ಒಳಗಿನವರಾದ ರಾಹುಲ್ ಗಾಯಗಳ ಆಳಗೊಳಿಸಿದ್ದಾರೆ.
ವಾಸ್ತವದ ತಿಳುವಳಿಕೆ
ಹೆಚ್ಚಿನ ಶೂದ್ರ ಮೇಲ್ಜಾತಿಗಳು ಮೀಸಲಾತಿ ಬಯಸುತ್ತವೆ. ಏಕೆಂದರೆ 10 ವರ್ಷಗಳಿಂದ ಸಂಸದ ಮತ್ತು ಆಡಳಿತ ಪಕ್ಷದ (ಯುಪಿಎ) ಆಂತರಿಕ ಸದಸ್ಯರಾಗಿರುವ ರಾಹುಲ್ ಈ ವಿಷಯಗಳನ್ನು ಎತ್ತಿದ್ದಾರೆ. ಕೇಂದ್ರ ಅಧಿಕಾರಶಾಹಿಯಲ್ಲಿ ಅವರು ಅಸ್ತಿತ್ವದಲ್ಲಿಲ್ಲದಿರುವುದು ಮತ್ತು ಶೂದ್ರ ನಾಯಕರ ನೇತೃತ್ವದ ಪ್ರಾದೇಶಿಕ ಪಕ್ಷದ ಸರ್ಕಾರಗಳಿಗೆ ಸೀಮಿತ ನಿಧಿ ಹಂಚಿಕೆಗಳು ಇದಕ್ಕೆ ಕಾರಣ. ಜಾತಿ ಆಧಾರಿತ ಸಾಂಸ್ಕೃತಿಕ ಕುತಂತ್ರದ ವಿರುದ್ಧದ ಸಮವನ್ನು ರಾಹುಲ್ ಸಾರಿದ್ದಾರೆ.
ಈ ಸಾಂಸ್ಕೃತಿಕ ಬದಲಾವಣೆಯನ್ನು ಸಂವಿಧಾನದ ಚೌಕಟ್ಟಿನೊಳಗೆ ತರಬಹುದು ಎಂದು ರಾಹುಲ್ ಅರ್ಥಮಾಡಿಕೊಂಡಂತೆ ತೋರುತ್ತದೆ. 50ರಷ್ಟು ಮಿತಿ ತೆಗೆದುಹಾಕುವ ಅವರ ಭರವಸೆಯು ರೆಡ್ಡಿಗಳು, ಮರಾಠರು ಮತ್ತು ಜಾಟರು ಸೇರಿದಂತೆ ಎಲ್ಲಾ ಶೂದ್ರರಿಗೆ ಭರವಸೆಯಾಗಿದೆ. ಏತನ್ಮಧ್ಯೆ, ನರೇಂದ್ರ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೇರಿಸುವ ರಾಹುಲ್ ಅವರ ಕಾರ್ಯತಂತ್ರವು ದಾರಿ ತಪ್ಪಿದೆ ಎಂದು ಕಾಂಗ್ರೆಸ್ ʼಮೇಲ್ವರ್ಗದ ನಾಯಕರು ಭಾವಿಸಿದ್ದಾರೆ. ನಾವು ಮಾತ್ರ ಪಕ್ಷವನ್ನು ಅಧಿಕಾರಕ್ಕೆ ತರಬಲ್ಲೆವು ಎಂಬುದು ಅವರ ತಿಳಿವಳಿಕೆ.
ಸಮಾಜವಾದ ಮತ್ತು ಜಾತಿ
1955ರ ʼಆವಡಿʼ ಕಾಂಗ್ರೆಸ್ ಅಧಿವೇಶನದ ನಂತರ ಜವಾಹರಲಾಲ್ ನೆಹರೂ ಎದುರಿಸಿದ ಪರಿಸ್ಥಿತಿಯನ್ನೇ ರಾಹುಲ್ ಈಗ ಎದುರಿಸುತ್ತಿದ್ದಾರೆ. ಆ ವೇಳೆ ನೆಹರೂ, ಸಾರ್ವಜನಿಕ- ಖಾಸಗಿ ಮಿಶ್ರ ಆರ್ಥಿಕ ಮಾದರಿಯೊಂದಿಗೆ ಪ್ರಜಾಪ್ರಭುತ್ವದಲ್ಲಿ ಸಮಾಜವಾದ ಅಳವಡಿಸಿಕೊಳ್ಳಲು ಯತ್ನಿಸಿದ್ದರು.
ಮೊರಾರ್ಜಿ ದೇಸಾಯಿ ಮತ್ತು ಕಾಂಗ್ರೆಸ್‌ನ ಇತರ ಬಲಪಂಥೀಯ ನಾಯಕರ ವಿರೋಧದ ನಡುವೆಯೂ ಅವರು ಅದನ್ನು ಸಾಧಿಸಿದ್ದರು. ಶೂದ್ರ ನಾಯಕ ಮತ್ತು ಆಗಿನ ತಮಿಳುನಾಡಿನ ಮುಖ್ಯಮಂತ್ರಿ ಕಾಮರಾಜ್ ನಾಡಾರ್ ನೆಹರೂ ಅವರಿಗೆ ಬಲವಾದ ಬೆಂಬಲ ನೀಡಿದ್ದರು.
ನೆಹರು ಅಧಿಕಾರದಲ್ಲಿದ್ದ ಕಾರಣ, ಅವರಿಗೆ ಆಂತರಿಕ ಪ್ರತಿಬಂಧ ನಿವಾರಿಸಲು ಸಾಧ್ಯವಾಯಿತು. ಮಿಶ್ರ ಆರ್ಥಿಕ ಮಾದರಿಗೆ ಮುಂದಡಿ ಇಟ್ಟರು.
ಇಂದಿರಾ ಗಾಂಧಿಯವರ ನವ-ಸಮಾಜವಾದ
1971ರ ಚುನಾವಣೆಗೂ ಮುನ್ನ ಇಂದಿರಾ ಗಾಂಧಿಯವರು ತಮ್ಮ ನವ-ಸಮಾಜವಾದಿ ಧೋರಣೆಯಿಂದ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಯಿತು. ಜನಸಂಘದ 'ಇಂದಿರಾ ಹಟಾವೋ'ವನ್ನು ಎದುರಿಸಲು ಗರೀಬಿ ಹಟಾವೋ ಎಂಬ ಘೋಷಣೆ ಮಾಡಿದರು. ಭೂಸುಧಾರಣೆಗಳು ಮತ್ತು ಬ್ಯಾಂಕ್ ರಾಷ್ಟ್ರೀಕರಣವನ್ನು ಪ್ರಸ್ತಾಪಿಸಿದರು.
ಆರ್‌ಎಸ್‌ಎಸ್ ಮತ್ತು ಜನಸಂಘ, ಸಮಾಜವಾದಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತು ಮತ್ತು ಜಯಪ್ರಕಾಶ್ ನಾರಾಯಣ್ ಮತ್ತು ಹೊಸದಾಗಿ ರೂಪುಗೊಂಡ ಕಾಂಗ್ರೆಸ್ (ಸಂಘಟನೆ) ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿತು.
ಹಲವಾರು ಭೂಮಾಲೀಕರು, ರಾಜರುಗಳು ಮತ್ತು ಜಮೀನ್ದಾರರು ಇಂದಿರಾ ಪ್ರಸ್ತಾಪಿಸಿದ್ದ ನವ- ಸಮಾಜವಾದಿ ಕಾರ್ಯಸೂಚಿಯನ್ನು ವಿರೋಧಿಸಿದರು. ಹೊಸದಾಗಿ ರೂಪುಗೊಂಡ ಕಾಂಗ್ರೆಸ್ ಅನ್ನು ರೆಡ್ಡಿ ಕಾಂಗ್ರೆಸ್ ಎಂದೂ ಕರೆಯಲಾಗುತ್ತಿತ್ತು, ಏಕೆಂದರೆ ಅದರ ನೇತೃತ್ವವನ್ನು ಆಂಧ್ರಪ್ರದೇಶದ ಊಳಿಗಮಾನ್ಯ ದೊರೆ ಕೆ ಬ್ರಹ್ಮಾನಂದ ರೆಡ್ಡಿ ವಹಿಸಿದ್ದರು.
ಭೂಸುಧಾರಣೆಗಳು, ಬ್ಯಾಂಕ್ ರಾಷ್ಟ್ರೀಕರಣ ಮತ್ತು ಕಾಂಗ್ರೆಸ್‌ನೊಳಗಿನ ಪ್ರಿವಿ ಪರ್ಸ್ ಕಡಿತದ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಂಡ ಎಲ್ಲಾ ಭೂಮಾಲೀಕರು ಮತ್ತು ಜಮೀನ್ದಾರರು ರೆಡ್ಡಿ ಕಾಂಗ್ರೆಸ್ ಜತೆ ಸೇರಿಕೊಂಡರು.
ತುರ್ತು ಪರಿಸ್ಥಿತಿ ಹೇರಿಕೆ
ಚುನಾವಣೆಯ ನಂತರ, ಅದೇ ರಾಜರ ಪರ, ಜಮೀನ್ದಾರರ ಪರ ಮತ್ತು ಭೂಸುಧಾರಣಾ ವಿರೋಧಿ ಶಕ್ತಿಗಳು ಇಂದಿರಾ ಗಾಂಧಿ ವಿರುದ್ಧ ಬೃಹತ್ ಆಂದೋಲನಗಳನ್ನು ಸಂಘಟಿಸಿದವು. ಇದು ತುರ್ತು ಪರಿಸ್ಥಿತಿ ಹೇರಿಕೆಗೆ ಕಾರಣವಾಯಿತು. ತುರ್ತು ಪರಿಸ್ಥಿತಿಯ ಸಮಯದಲ್ಲಿ, ಇಂದಿರಾ ಗಾಂಧಿಯವರು ಸಂವಿಧಾನದ ಚೌಕಟ್ಟಿನೊಳಗೆ ವರ್ಗ ಅಸಮಾನತೆಯನ್ನು ಕಡಿಮೆ ಮಾಡುವ ಕಾರ್ಯಸೂಚಿಯನ್ನು ಜಾರಿಗೆ ತರಲು ಮುಂದಾದರು. .
ಇಂದಿರಾ, ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿದರು ಮತ್ತು ಮಾಧ್ಯಮಗಳ ಬಾಯಿ ಮುಚ್ಚಿಸಿದರು. ಇದು ತನ್ನದೇ ಆದ ಕರಾಳ ಮುಖವನ್ನು ಹೊಂದಿತ್ತು. ಆದರೆ 1971 ಮತ್ತು 1977 ರ ಚುನಾವಣೆಗಳ ನಡುವೆ ಅವರಿಗೆ ನಿಟ್ಟುಸಿರು ಬಿಡಲು ಅವಕಾಶ ಕೊಟ್ಟಿತು. ಆದರೆ 1977ರಲ್ಲಿ, ಅತಿರೇಕಗಳಿಂದಾಗಿ ಸೋತರು.
1977ರ ನಂತರದ ಇಂದಿರಾ
ಆ ಸೋಲಿನ ನಂತರ, ನೆಹರು ಹಾಕಿಕೊಟ್ಟ ಪ್ರಜಾಸತ್ತಾತ್ಮಕ ಸಮಾಜವಾದಿ ಮಾರ್ಗದ ಹಾದಿ ತಪ್ಪಿತು. ಸಾಮಾಜಿಕ-ರಾಜಕೀಯ ಬದಲಾವಣೆಯಲ್ಲಿ ಆಸಕ್ತಿಯಿಲ್ಲದ ನಾಯಕರು ಎದ್ದು ನಿಂತರು. ಅವರಲ್ಲಿ ಅನೇಕರು ವೈಯಕ್ತಿಕ ಅಧಿಕಾರ ಮತ್ತು ಸಂಪತ್ತಿನ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು.
ನೆಹರು-ಇಂದಿರಾ ಸಮಾಜವಾದಿ ಕಾರ್ಯಸೂಚಿಯು, ಜಾಗತಿಕವಾಗಿ ಕಮ್ಯುನಿಸ್ಟ್-ಸಮಾಜವಾದಿ ವಾತಾವರಣ ಮತ್ತು ಭಾರತೀಯ ಕಮ್ಯುನಿಸ್ಟರು ಸಂಘಟಿಸುತ್ತಿದ್ದ ವರ್ಗ ಹೋರಾಟಗಳಿಂದ ಪ್ರಭಾವಿತವಾಗಿತ್ತು. ನೆಹರೂ ಮತ್ತು ಇಂದಿರಾ ಗಾಂಧಿಯವರ ಸಮಾಜವಾದದ ಕಲ್ಪನೆಯೊಂದಿಗೆ ಈ ಅನುಸಂಧಾನ ನಡೆಯದೇ ಹೋಗಿದ್ದರೆ ಭಾರತದ ಪ್ರಜಾಪ್ರಭುತ್ವವು ಬಿಕ್ಕಟ್ಟಿನಲ್ಲಿರುತ್ತಿತ್ತು. ಆ ದಿನಗಳಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ಸುತ್ತಲಿನ ಪ್ರಜ್ಞೆ ಸೀಮಿತವಾಗಿತ್ತು.
ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಮಾತ್ರ ಪೀಠಿಕೆಯಲ್ಲಿ 'ಸಮಾಜವಾದ' ಮತ್ತು 'ಜಾತ್ಯತೀತ' ಎಂಬ ಪದಗಳನ್ನು ಸೇರಿಸಿದರು. ಅದೃಷ್ಟವಶಾತ್ ಈಗ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ವಿಶಾಲ ಕಲ್ಯಾಣ ಆಧಾರಿತ ಸಾಮಾಜಿಕ-ಆರ್ಥಿಕ ಚೌಕಟ್ಟಿನೊಳಗೆ ಈ ಎರಡು ಪರಿಕಲ್ಪನೆಗಳ ಸಿಂಧುತ್ವವನ್ನು ಎತ್ತಿಹಿಡಿದಿದೆ.
ಶ್ರಮಜೀವಿ ಸರ್ವಾಧಿಕಾರ
ಆರೆಸ್ಸೆಸ್-ಜನಸಂಘ ವರ್ಣಧರ್ಮ ಸರ್ವಾಧಿಕಾರದ ಪರವಾಗಿತ್ತು. ಅತ್ತ ಕಮ್ಯುನಿಸ್ಟರು ಶ್ರಮಜೀವಿಗಳ ಸರ್ವಾಧಿಕಾರದ ಪರವಾಗಿದ್ದರು. ಇವೆರಡೂ ಮೂಲಭೂತವಾಗಿ ಸಂವಿಧಾನವನ್ನು ವಿರೋಧಿಸುತ್ತಿದ್ದವು. 1990ರ ದಶಕದ ಮಧ್ಯಭಾಗದವರೆಗೆ ಆರೆಸ್ಸೆಸ್- ಬಿಜೆಪಿ ಶಕ್ತಿಗಳು ತಮ್ಮ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಈ ಸಂವಿಧಾನದ ಚೌಕಟ್ಟಿನೊಳಗೆ ಸಾಧಿಸಬಹುದು ಎಂದು ನಂಬಿರಲಿಲ್ಲ.
1990 ರ ಮಂಡಲ್ ಯುಗದಿಂದ 2014 ರ ಚುನಾವಣೆಯವರೆಗೆ, ರಾಜಕೀಯ ಕ್ಷೇತ್ರದಲ್ಲಿ ಮೂಲಭೂತ ಬದಲಾವಣೆ ಘಟಿಸಿವೆ .
ಆರ್‌ಎಸ್‌ಎಸ್ -ಬಿಜೆಪಿ ಮೀಸಲಾತಿಯ ಬಗ್ಗೆ ತನ್ನ ನಿಲುವು ಬದಲಾಯಿಸಿತು. ಈ ಹೊಸ ಸೈದ್ಧಾಂತಿಕ ಚೌಕಟ್ಟಿನೊಳಗೆ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಸಿತು. ಅವರು ಕೆಳಮಟ್ಟದ ಒಬಿಸಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಚುನಾವಣೆಯಲ್ಲಿ ಗೆದ್ದರು.
ಜಾತಿ ವಿನಾಶ
ಸಾಮಾಜಿಕ-ಆರ್ಥಿಕ ಸಮಾನತೆಗೆ ಅನುತಿಸದ, ಜಾತಿ ಆಧಾರಿತ ಸಾಂಸ್ಕೃತಿಕ ಮತ್ತು ಆರ್ಥಿಕ ಅಸಮಾನತೆಗಳು, ನೆಹರೂ ಮತ್ತು ಇಂದಿರಾ ಹಾಗೂ ರಾಜೀವ್ ಗಾಂಧಿ ಯುಗದಲ್ಲಿ ಕಪ್ಪು ಚುಕ್ಕೆಯಾಗಿದ್ದವು.
ಸಂವಿಧಾನದ ಮೂಲಕ ಅಂಬೇಡ್ಕರ್ ಪ್ರತಿಪಾದಿಸಿದ್ದ ಜಾತಿ ನಿರ್ಮೂಲನೆಯ ಕಲ್ಪನೆಯನ್ನು ಆ ಬಳಿಕ ಯಾವುದೇ ರಾಜಕೀಯ ಶಕ್ತಿ ಬೆಂಬಲಿಸಲಿಲ್ಲ. ಉದಾರವಾದಿ, ಎಡ ಅಥವಾ ಬಲವೂ ಯತ್ನಿಸಲಿಲ್ಲ. ಆದರೆ ಮಂಡಲ್ ನಂತರ ಅಂಬೇಡ್ಕರ್ ಅವರನ್ನು ಉದ್ದೇಶಿಸಿ ಅರುಣ್ ಶೌರಿ "ಫಾಲ್ಸ್ ಗಾಡ್ʼ ಎಂದಿದ್ದರು. ಇದೀಗ ಮೋದಿಯವರ ಬಿಜೆಪಿಯ ಆರಾಧ್ಯ ದೈವವಾಗಿದ್ದಾರೆ!
ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರಂತೆಯೇ ಜಾತಿ ಕುರಿತು ರಾಹುಲ್ ಕಾಲದ ಕಾಂಗ್ರೆಸ್ ಅದೇ ಭಾವನೆ ಹೊಂದಿದರೆ ಕಮ್ಯುನಿಸ್ಟ್ ಪಕ್ಷಗಳಂತೆ ನಿಧಾನವಾಗಿ ರಾಷ್ಟ್ರೀಯ ರಂಗದಿಂದ ಆ ಪಕ್ಷ ಕಣ್ಮರೆಯಾಗುತ್ತದೆ.
ಈ ರಾಜಕೀಯ ವಾತಾವರಣದಲ್ಲಿ ಎಚ್ಚೆತ್ತುಕೊಂಡ ರಾಹುಲ್. ಜಾತಿ ವಿರೋಧಿ ಸೈದ್ಧಾಂತಿಕ ನಿಲುವನ್ನು ತೆಗೆದುಕೊಂಡಿದ್ದಾರೆ. 2024ರ ಚುನಾವಣೆಯಲ್ಲಿ ಇದರ ಫಲಿತಾಂಶಗಳು ಲಭಿಸಿವೆ. ಆದಾಗ್ಯೂ ಪಕ್ಷದ ಬಹುಪಾಲು ಜನರು ಅವರ ಸಿದ್ಧಾಂತದೊಂದಿಗೆ ಹೊಂದಿಕೆಯಾಗಿಲ್ಲ.
ಮಂಡಲ್ ನಂತರದ ಭಾರತದಲ್ಲಿ ಒಬಿಸಿಗಳ ಸ್ಥಿತಿ
ಕಾಂಗ್ರೆಸ್‌ನ ಮೇಲ್ವರ್ಗದ ನಾಯಕರಿಗೆ ಅರ್ಥವಾಗದ ವಿಷಯ ರಾಹುಲ್ ಗೆ ಗೊತ್ತಾಗಿದೆ. ಇಂದು, ಒಬಿಸಿಗಳು ಅದೇ ʼಮಂಡಲ್ ಆಯೋಗದʼ ಪೂರ್ವ ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸುತ್ತಿಲ್ಲ. ಪರಿವರ್ತನಾತ್ಮಕ ವಿಧಾನದಲ್ಲಿ ಹೊಸ ಜಾತಿ ಅಸ್ಮಿತೆಯ ಪ್ರಜ್ಞೆ ಹುಟ್ಟಿದೆ .
ಆರ್‌ಎಸ್‌ಎಸ್ ನಾಯಕರು ವ್ಯಾಪಕ ತಳಮಟ್ಟದ ಜಾಲ ಹೊಂದಿರುವುದರಿಂದ ಅಸ್ಮಿತೆಯನ್ನು ಕಾಂಗ್ರೆಸ್‌ಗಿಂತ ಚೆನ್ನಾಗಿ ಅರ್ಥಮಾಡಿಕೊಂಡಿದೆ. ಆದರೆ ಕಾಂಗ್ರೆಸ್ ಯಾವುದೇ ತಳಮಟ್ಟದ ಸೈದ್ಧಾಂತಿಕ ಪ್ರತಿಕ್ರಿಯೆ ಕಾರ್ಯವಿಧಾನವನ್ನು ಹೊಂದಿಲ್ಲ, ಅಂತಹ ಒಳನೋಟಗಳನ್ನು ನೀಡಲು ಸೈದ್ಧಾಂತಿಕವಾಗಿ ಬದ್ಧವಾಗಿರುವ ಸಾಮೂಹಿಕ ಸಂಘಟನೆ ಅಲ್ಲಿಲ್ಲ
ಅಂಬೇಡ್ಕರ್ ಮತ್ತು ಕಾಂಗ್ರೆಸ್
ವರ್ಣ ವ್ಯವಸ್ಥೆಗೆ ಬದ್ಧವಾಗಿರುವ ಸನಾತನ ಧರ್ಮವನ್ನು ಉಳಿಸಿಕೊಳ್ಳಲು ಒಬಿಸಿ ಮತಗಳನ್ನು ಬಳಸುವುದು ಆರ್‌ಎಸ್‌ಎಸ್ ಉದ್ದೇಶ. ಅದು ಜಾತಿಯನ್ನು ನಿರ್ಮೂಲನೆ ಮಾಡಲು ಬಯಸುವುದಿಲ್ಲ. ಅದನ್ನು ಆಧುನೀಕರಿಸಲು ಮತ್ತು ಗಟ್ಟಿಗೊಳಿಸಲು ಬಯಸುತ್ತದೆ.
ರಾಹುಲ್ ಅವರ ಭಾಷಣದಲ್ಲಿ ಜಾತಿ ವಿರೋಧಿ, ಸಮಾನತಾವಾದಿ, ಪ್ರಜಾಸತ್ತಾತ್ಮಕ ಸಮಾಜವಾದಿ ವಿಷಯವಿದೆ. ಈ ಬದಲಾವಣೆ ಕಾರ್ಯರೂಪಕ್ಕೆ ಬರಬೇಕಾದರೆ, ಕಾಂಗ್ರೆಸ್‌ನ ಮೇಲ್ವರ್ಗದ ನಾಯಕತ್ವವು ಭವಿಷ್ಯದ ದೃಷ್ಟಿಕೋನದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗಬೇಕು.
ರಾಹುಲ್ ಅವರ ಜಾತಿ ವಿರೋಧಿ ಚುನಾವಣಾ ಯೋಜನೆ ಮತ್ತು ಸಜ್ಜುಗೊಳಿಸುವಿಕೆಯು ಖಂಡಿತವಾಗಿಯೂ ಅಂಬೇಡ್ಕರ್ ಅವರನ್ನು ಗಾಂಧಿ, ನೆಹರೂ ಮತ್ತು ಸರ್ದಾರ್ ಪಟೇಲ್ ಸಾಲಿಗೆ ಸೇರಿಸಬೇಕಾಗಿದೆ. . ಕಾಂಗ್ರೆಸ್‌ಗೆ ಮತ್ತೆ ಅಧಿಕಾರಕ್ಕೆ ಬರಲು ಬೇರೆ ದಾರಿಯೇ ಇಲ್ಲ.
(ದ ಫೆಡರಲ್ ಎಲ್ಲಾ ದೃಷ್ಟಿಕೋನಗಳು ಮತ್ತು ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ವಿಚಾರಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು ಮತ್ತು ದ ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ)