Arun Somanna Case | ಜೀವ ಬೆದರಿಕೆ, ವಂಚನೆ: ಅರುಣ್ ಸೋಮಣ್ಣ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು
ಡಾ. ಬಿ ಎಸ್ ಅರುಣ್ ಸೇರಿದಂತೆ ಮೂವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಶನಿವಾರ (ಜೂ.15) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.;
Arun Somanna Case | ಕೇಂದ್ರ ರೈಲ್ವೇ ಖಾತೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣ(ಡಾ ಬಿ ಎಸ್ ಅರುಣ್) ವಿರುದ್ಧ ವಂಚನೆ, ಜೀವ ಬೆದರಿಕೆಗೆ ಸಂಬಂಧಪಟ್ಟಂತೆ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರುಣ್ ಸೋಮಣ್ಣ ಸೇರಿದಂತೆ ಮೂವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ತೃಪ್ತಿ ಹೆಗ್ಡೆ ಅವರು ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಡಾ. ಬಿ ಎಸ್ ಅರುಣ್, ಡಿ ಜೀವನ್ ಕುಮಾರ್ ಹಾಗೂ ಜಿ ಪ್ರಮೋದ್ ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 45ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೊಹಮ್ಮದ್ ಮೊಯಿನುದ್ದೀನ್ ಜಾಮೀನು ಮಂಜೂರು ಮಾಡಿದ್ದಾರೆ.
“ದೂರುದಾರೆ ತೃಪ್ತಿ ಹೆಗ್ಡೆ ಅವರು ನೀಡಿರುವ ದೂರಿಗೆ ಸಂಬಂಧಿಸಿದಂತೆ ಸಂಜಯ್ ನಗರ ಠಾಣೆಯ ಪೊಲೀಸರು ಮುಂದಿನ ಆದೇಶದವರೆಗೆ ಅರ್ಜಿದಾರರನ್ನು ಬಂಧಿಸಬಾರದು. ಅರ್ಜಿದಾರರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸಲಾಗಿದೆ” ಎಂದು ನ್ಯಾಯಾಲಯ ಆದೇಶ ಮಾಡಿದೆ.
ಪ್ರತಿವಾದಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಆದೇಶಿಸಲಾಗಿದೆ. ವಿಚಾರಣೆಯನ್ನು ಜೂ.22ಕ್ಕೆ ಮುಂದೂಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಎಚ್ ಎಸ್ ಚಂದ್ರಮೌಳಿ ಅವರು “ತೃಪ್ತಿ ಹೆಗ್ಡೆ ಅವರು ಜೂ.2ರಂದು ನೀಡಿರುವ ಸುಳ್ಳು ದೂರನ್ನು ಆಧರಿಸಿ ಪೊಲೀಸರು ಅರ್ಜಿದಾರರನ್ನು ಬಂಧಿಸಲು ಮುಂದಾಗಿದ್ದಾರೆ. 2019ರ ಏಪ್ರಿಲ್ 29ರ ಪಾಲುದಾರಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ದೂರುದಾರೆ ಮತ್ತು ಅರ್ಜಿದಾರರ ನಡುವೆ ವಿವಾದ ಆರಂಭವಾಗಿದೆ. ಅರುಣ್ ಅವರು ಕೇಂದ್ರ ಸಚಿವರ ಪುತ್ರನಾಗಿದ್ದು, ಜಾಮೀನುರಹಿತ ಅಪರಾಧಗಳ ಆರೋಪದ ಸಂಬಂಧ ಅವರನ್ನು ಬಂಧಿಸಲು ಆತುರ ತೋರುತಿದ್ದಾರೆ” ಎಂದು ವಾದಿಸಿದರು.
“ಪ್ರಕರಣದ ದಾಖಲೆಯನ್ನು ಪರಿಶೀಲಿಸಿದರೆ ಮೆಲ್ನೋಟಕ್ಕೆ ಅರುಣ್ ಅವರು ತೃಪ್ತಿ ಹೆಗ್ಡೆ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ. ವಿಚಾರಣಾಧೀನ ನ್ಯಾಯಾಲಯವು ತೃಪ್ತಿ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಅವರು ಸ್ವೀಕರಿಸದ ಹಿನ್ನೆಲೆಯಲ್ಲಿ ಜಾಮೀನುರಹಿತ ವಾರೆಂಟ್ ಹೊರಡಿಸಲಾಗಿತ್ತು. ಆನಂತರ ನ್ಯಾಯಾಲಯಕ್ಕೆ ಹಾಜರಾಗಿ ತೃಪ್ತಿ ಹೆಗ್ಡೆ ಅವರು ಜಾಮೀನುರಹಿತ ವಾರೆಂಟ್ ಹಿಂಪಡೆಯುವಂತೆ ಮಾಡಿಕೊಂಡಿದ್ದಾರೆ. ಮೇಲೆ ಹೇಳಿರುವಂತೆ ಕಂಪೆನಿ ಪಾಲುದಾರಿಕೆ ಮತ್ತು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅರುಣ್ ಹಾಗೂ ಇತರೆ ಅರ್ಜಿದಾರರು ಮತ್ತು ತೃಪ್ತಿ ಹೆಗ್ಡೆ ನಡುವೆ ಗಂಭೀರವಾದ ವಿವಾದ ಇದೆ. ವಾಸ್ತವಿಕ ಅಂಶಗಳನ್ನು ಪರಿಗಣಿಸಿ, ಅರ್ಜಿದಾರರ ವಿರುದ್ಧ ಅಪರಾಧಗಳು ಜಾಮೀನುರಹಿತವಾಗಿವೆ. ಐಪಿಸಿ ಸೆಕ್ಷನ್ 327 ಅಪರಾಧವು ಗರಿಷ್ಠ 10 ವರ್ಷ ಶಿಕ್ಷೆ ವಿಧಿಸುವ ಅಪರಾಧವಾಗಿರುವುದರಿಂದ ಅರ್ಜಿದಾರರ ಆತಂಕ ಸತ್ಯದಿಂದ ಕೂಡಿರುವುದರಿಂದ ನಿರೀಕ್ಷಣಾ ಜಾಮೀನು ನೀಡಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.