Naxals Surrender Live | ನಕ್ಸಲ್‌ಮುಕ್ತ ಕರ್ನಾಟಕ: ಶರಣಾಗಿರುವ ನಕ್ಸಲರು ಮತ್ತೆ ಚಿಕ್ಕಮಗಳೂರಿಗೆ?
ನಕ್ಸಲ್‌ಮುಕ್ತ ಕರ್ನಾಟಕ ಘೋಷಣೆಯ ನಿಟ್ಟಿನಲ್ಲಿ ಬುಧವಾರ ಮಹತ್ವದ ಬೆಳವಣಿಗೆಯಲ್ಲಿ ಆರು ಮಂದಿ ನಕ್ಸಲರು ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾ ದಲ್ಲಿ ಶರಣಾಗಿದ್ದಾರೆ. ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ, ಜಯಣ್ಣ, ಜೀಶಾ, ಟಿ.ಎನ್. ವಸಂತ್ ಶರಣಾಗಿದ್ದಾರೆ. ಸಿಎಂ ಹಾಗೂ ಗೃಹ ಸಚಿವರ ಎದುರು ಶರಣಾಗಿರುವ ನಕ್ಸಲರನ್ನು ಮತ್ತೆ ಚಿಕ್ಕಮಗಳೂರಿಗೆ ಕರೆದೊಯ್ಯಲು ನಿರ್ಧರಿಸಲಾಗಿದೆ. ಶರಣಾದ ನಕ್ಸಲರಿಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಯಾವುದೇ ಪ್ರಕರಣಗಳಿಲ್ಲ. ಹಾಗಾಗಿ ಚಿಕ್ಕಮಗಳೂರಿಗೆ ಕರೆದೊಯ್ದು, ಕಾರಾಗೃಹಕ್ಕೆ ಬಿಡಲಿದ್ದಾರೆ ಎಂದು ತಿಳಿದು ಬಂದಿದೆ.
ಅಡುಗೋಡಿಯಲ್ಲಿರುವ ಆಂತರಿಕ ಭದ್ರತಾ ಕಚೇರಿಯಲ್ಲಿ ಶರಣಾದ ನಕ್ಸಲರನ್ನು ಪೊಲೀಸರು ವಿಚಾರಣೆ ನಡೆಸಿದರು. ಇದೇ ವೇಳೆ ನಕ್ಸಲರ ಕುಟುಂಬಸ್ಥರ ಭೇಟಿಗೆ ಅವಕಾಶ ಮಾಡಿಕೊಡಲಾಯಿತು.
ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆ ಮುಕ್ತಾಯವಾಗಿದೆ. ಹಾಗಾಗಿ ನಕ್ಸಲ್ ನಿಗ್ರಹ ಪಡೆಯ ಅಗತ್ಯತೆ ಇಲ್ಲ. ಎಎನ್‌ಎಫ್ ಸಂಸ್ಥೆಯನ್ನು ವಿಸರ್ಜಿಸುವ ಕುರಿತು ಶೀಘ್ರ ನಿರ್ಧರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶರಣಾಗಿರುವ ಆರು ಮಂದಿ ನಕ್ಸಲರನ್ನು ಆಂತರಿಕ ಭದ್ರತೆ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ.
ನಕ್ಸಲ್ ಹೋರಾಟಗಾರರನ್ನು ಮುಖ್ಯವಾಹಿನಿಗೆ ಕರೆ ತರಬೇಕು ಎಂಬುದು ಸರ್ಕಾರದ ಆಶಯವಾಗಿತ್ತು. ಅದರಂತೆ ಆರು ಜನ ಸದಸ್ಯರನ್ನು ಸರ್ಕಾರದ ಸುಪರ್ದಿಗೆ ವಹಿಸಿದ್ದೇವೆ. ಮುಂದಿನ ಹಂತದಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಂದುವರೆಸಬೇಕು ಎಂದು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಸದಸ್ಯ ಡಾ.ಬಂಜಗೆರೆ ಜಯಪ್ರಕಾಶ್ ಮನವಿ ಮಾಡಿದ್ದಾರೆ.
ಆರೂ ಮಂದಿ ನಕ್ಸಲರು ಶರಣಾಗತರಾಗಿದ್ದಾರೆ. ಈಗ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಘೋಷಿಸಿದರು.
ನಕ್ಸಲರಿಗೆ ಪುನರ್ವತಿ ಕಲ್ಪಿಸುವ ಸಂಬಂಧ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯಗಳ ಮನವಿ ಪತ್ರ ಸಲ್ಲಿಸಿತು. ನಕ್ಸಲ್ ಶರಣಾಗತಿ ಸಮಿತಿಯ ಹಕ್ಕೊತ್ತಾಯಗಳು ಇಂತಿವೆ.
ರಾಜ್ಯ ಸರ್ಕಾರದ ಆಹ್ವಾನದ ಮೇರೆಗೆ ಕಾನೂನುಬದ್ಧವಾಗಿ ಶರಣಾಗಿದ್ದೇವೆ. ಆಹ್ವಾನ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ನಕ್ಸಲ್ ನಾಯಕಿ ಲತಾ ಮುಂಡಗಾರು ತಿಳಿಸಿದರು.
ಆರು ಮಂದಿ ನಕ್ಸಲರ ಶರಣಾಗತಿ ಪ್ರಕ್ರಿಯೆ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು, ಆರೂ ಮಂದಿ ನಕ್ಸಲರಿಗೆ ಹೂವು ಹಾಗೂ ಭಾರತದ ಸಂವಿಧಾನದ ಕೃತಿ ನೀಡಿದರು.
ಶಿಷ್ಟಾಚಾರ ಬದಿಗಿಟ್ಟು ನಕ್ಸಲರನ್ನು ಕಚೇರಿ ಒಳಗೆ ಕರೆತರುವಂತೆ ಪೊಲೀಸರಿಗೆ ಸಿಎಂ ಸೂಚನೆ ನೀಡಿದರು. ಸಿಎಂ ಸೂಚನೆಯಂತೆ ಗೃಹ ಕಚೇರಿ ಒಳಗೆ ಪೊಲೀಸರು ನಕ್ಸಲರನ್ನು ಕರೆದೋಯ್ದರು.
ಶಿಷ್ಟಾಚಾರದಂತೆ ಸಿಎಂ ಸಿದ್ದರಾಮಯ್ಯ ಅವರು ನಕ್ಸಲರಿಂದ ಅಂತರ ಕಾಯ್ದುಕೊಂಡರು. ಸಿಎಂ ಅವರಿಂದ ಅನತಿ ದೂರದಲ್ಲೇ ನಕ್ಸಲರನ್ನು ನಿಲ್ಲಿಸಿ ಪೊಲೀಸರು ಶರಣಾಗತಿ ಪ್ರಕ್ರಿಯೆ ನಡೆಸಿದರು.