ನಟ ವಿಜಯ್ ರ‍್ಯಾಲಿಯಲ್ಲಿ ಮಹಾ ದುರಂತ: ಕಾಲ್ತುಳಿತಕ್ಕೆ 42 ಮಂದಿ ಬಲಿ, ಹೆಚ್ಚುತ್ತಿದೆ ಸಾವಿನ ಸಂಖ್ಯೆ

ಕರೂರಿನಲ್ಲಿ ನಡೆದ ರ‍್ಯಾಲಿಯ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಕಾಲ್ತುಳಿತ ಸಂಭವಿಸಿದ ನಂತರ ವಿಜಯ್ ತಮ್ಮ ಭಾಷಣ ಮುಗಿಸಿ ಸ್ಥಳದಿಂದ ಹೊರಟು ಹೋದರು. ರಕ್ಷಣಾ ಕಾರ್ಯಾಚರಣೆಗಾಗಿ ಹೆಚ್ಚಿನ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿವೆ.

Update: 2025-09-27 15:38 GMT
Click the Play button to listen to article

ನಟ-ರಾಜಕಾರಣಿ ವಿಜಯ್ ಅವರ 'ತಮಿಳು ವೆಟ್ರಿ ಕಳಗಂ' (ಟಿವಿಕೆ) ಪಕ್ಷವು ಶನಿವಾರ ಕರೂರಿನಲ್ಲಿ ಆಯೋಜಿಸಿದ್ದ 'ವೆಳಿಚ್ಚಂ ವೆಳಿಯೇರು' ಪ್ರಚಾರ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.

ವಿಜಯ್ ಭಾಷಣ ಮಾಡುತ್ತಿದ್ದಂತೆಯೇ ಜನಸಂದಣಿ ನಿಯಂತ್ರಣ ಮೀರಿ ಮುಂದಕ್ಕೆ ನುಗ್ಗಿದ್ದರಿಂದ ಈ ಭೀಕರ ದುರಂತ ಸಂಭವಿಸಿದೆ. ಮೃತರ ಪೈಕಿ 16 ಮಹಿಳೆಯರು, 9 ಪುರುಷರು ಮತ್ತು 6 ಮಕ್ಕಳು ಸೇರಿದ್ದಾರೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಖಚಿತಪಡಿಸಿದ್ದಾರೆ. ಇದೀಗ ಇನ್ನೂ ಹಲವು ಮಂದಿ ಗಂಭೀರ ಗಾಯಗೊಂಡವರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 42ಕ್ಕೆ ಏರಿಕೆಯಾಗಿದೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.

ಕರೂರು-ಈರೋಡ್ ಹೆದ್ದಾರಿಯ ವೆಲುಸಾಮಿಪುರಂನಲ್ಲಿ ನಡೆದ ಈ ರ‍್ಯಾಲಿಗೆ ನಿರೀಕ್ಷೆಗೂ ಮೀರಿ ಜನಸಂದಣಿ ಸೇರಿತ್ತು. ಸುಮಾರು 30,000 ಜನರಿಗೆ ಅನುಮತಿ ಪಡೆಯಲಾಗಿದ್ದರೂ, 60,000ಕ್ಕೂ ಹೆಚ್ಚು ಜನರು ಸೇರಿದ್ದರು ಎಂದು ವರದಿಯಾಗಿದೆ. ಸಂಜೆ 7:45ರ ಸುಮಾರಿಗೆ, ವಿಜಯ್ ಅವರನ್ನು ಹತ್ತಿರದಿಂದ ನೋಡಲು ಅಭಿಮಾನಿಗಳು ವೇದಿಕೆಯ ಬ್ಯಾರಿಕೇಡ್‌ಗಳತ್ತ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ. ಉಸಿರುಗಟ್ಟಿಸುವ ನೂಕುನುಗ್ಗಲಿನಲ್ಲಿ ಹಲವರು ಪ್ರಜ್ಞೆ ತಪ್ಪಿ ಬಿದ್ದರೆ, ಅನೇಕರು ಕಾಲ್ತುಳಿತಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರು.

ವಿಜಯ್ ಅವರ ಭಾಷಣ ಆರಂಭವಾಗುತ್ತಿದ್ದಂತೆ ಜನರಲ್ಲಿ ಉನ್ಮಾದ ಹೆಚ್ಚಾಗಿ, ವೇದಿಕೆಯತ್ತ ಮುನ್ನುಗ್ಗಲು ಆರಂಭಿಸಿದರು. ಈ ವೇಳೆ ರಕ್ಷಣಾ ವ್ಯವಸ್ಥೆಗಳು ವಿಫಲವಾದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಕ್ಕಾಗಿ ಸ್ಥಳಕ್ಕೆ ಧಾವಿಸಿದ ಆಂಬ್ಯುಲೆನ್ಸ್‌ಗಳು ಕೂಡಾ ಜನಸಂದಣಿಯಲ್ಲಿ ಸಿಲುಕಿ ಸಂಕಷ್ಟ ಎದುರಿಸಬೇಕಾಯಿತು.

ಘಟನಾ ಸ್ಥಳದಲ್ಲಿನ ಕರುಳು ಹಿಂಡುವ ದೃಶ್ಯ

ಕಾಲ್ತುಳಿತ ಸಂಭವಿಸುತ್ತಿದ್ದಂತೆ "ಪೊಲೀಸರೇ, ಸಹಾಯ ಮಾಡಿ!" ಎಂಬ ಆರ್ತನಾದ ಮುಗಿಲು ಮುಟ್ಟಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಿಜಯ್, ತಮ್ಮ ಭಾಷಣವನ್ನು ತಕ್ಷಣವೇ ನಿಲ್ಲಿಸಿ, ಪ್ರಜ್ಞೆ ತಪ್ಪಿ ಬೀಳುತ್ತಿದ್ದ ಅಭಿಮಾನಿಗಳಿಗೆ ತಮ್ಮ ಪ್ರಚಾರ ವಾಹನದಿಂದಲೇ ನೀರಿನ ಬಾಟಲಿಗಳನ್ನು ವಿತರಿಸಿದರು. ಜನಜಂಗುಳಿಯಲ್ಲಿ ಕಳೆದುಹೋದ ಮಗುವೊಂದನ್ನು ಪತ್ತೆಹಚ್ಚಲು ವಿಜಯ್ ಅವರು ಮೈಕ್‌ನಲ್ಲಿ ಕೂಗಿ ಹೇಳುತ್ತಿದ್ದ ದೃಶ್ಯಗಳು ಸಹ ವರದಿಯಾಗಿವೆ.

ಸರ್ಕಾರದ ಕ್ರಮಗಳು ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ

ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ಕರೂರಿನಿಂದ ಬರುತ್ತಿರುವ ವರದಿಗಳು ಕಳವಳಕಾರಿಯಾಗಿವೆ," ಎಂದು ಹೇಳಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ಉತ್ತಮ ಚಿಕಿತ್ಸೆ ಒದಗಿಸುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಮತ್ತು ಮಾಜಿ ಸಚಿವ ಸೆಂಥಿಲ್ ಬಾಲಾಜಿ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ತಿರುಚ್ಚಿ, ಸೇಲಂ ಮತ್ತು ದಿಂಡಿಗಲ್‌ನಿಂದ ಹೆಚ್ಚುವರಿ ವೈದ್ಯರ ತಂಡಗಳನ್ನು ಕರೂರಿಗೆ ರವಾನಿಸಲಾಗಿದೆ. ಮುಖ್ಯಮಂತ್ರಿ ಸ್ಟಾಲಿನ್ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸುವ ಸಾಧ್ಯತೆ ಇದೆ. ಜಿಲ್ಲಾಡಳಿತವು ಘಟನೆಯ ಕುರಿತು ಮ್ಯಾಜಿಸ್ಟ್ರೇಟ್ ಮಟ್ಟದ ವಿಚಾರಣೆಗೆ ಆದೇಶಿಸಿದೆ.

ಎಐಎಡಿಎಂಕೆ ಮತ್ತು ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳಿಗೆ ಮತ್ತು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ದುರಂತವು ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ರಾಜಕೀಯ ಸಭೆ-ಸಮಾರಂಭಗಳಲ್ಲಿನ ಜನಸಂದಣಿ ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.  

Live Updates
2025-09-27 18:15 GMT

ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ಮೆರವಣಿಗೆ ಸಂದರ್ಭದಲ್ಲಿ ಸಂಭವಿಸಿರುವ ದುರಂತದಲ್ಲಿ ಅನೇಕರು ಧಾರುಣ ಸಾವನ್ನಪ್ಪಿ, ಇನ್ನೂ ಅನೇಕರು ತೀವ್ರವಾಗಿ ಗಾಯಗೊಂಡಿರುವ ವಿಷಯ ತಿಳಿದು ತೀವ್ರ ಆಘಾತ ಉಂಟಾಯಿತು.

ಇದು ಅತ್ಯಂತ ದುಃಖಕರ ಘಟನೆ. ಮೃತರ ಕುಟುಂಬಗಳಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ಈ ಪ್ರಾಣ ನಷ್ಟವನ್ನು ಭರಿಸುವ ಶಕ್ತಿ ಅವರಿಗೆ ಸಿಗಲಿ ಹಾಗೂ ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.


2025-09-27 18:13 GMT

ತಮಿಳುನಾಡಿನ ಕರೂರಿನಲ್ಲಿ ತಮಿಳು ಚಿತ್ರ ನಟ ವಿಜಯ್ ನಡೆಸಿರುವ ರ‍್ಯಾ ಲಿಸಂದರ್ಭದಲ್ಲಿ ನಡೆದಿರುವ ಕಾಲ್ತುಳಿತ ಪ್ರಕರಣ ಆಘಾತ ತಂದಿದೆ. ಅನೇಕ ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಆತ್ಮಕ್ಕೆ ದೇವರು ಚಿರ ಶಾಂತಿ ನೀಡಲಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.


2025-09-27 18:10 GMT

ತಮಿಳುನಾಡಿನ ಕರೂರಿನಲ್ಲಿ ನಡೆದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ನನಗೆ ದುಃಖ ತಂದಿದೆ. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ದುಃಖದ ಸಮಯದಲ್ಲಿ ಕರ್ನಾಟಕವು ತಮಿಳುನಾಡಿನ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.


2025-09-27 18:05 GMT

ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ‍್ಯಾಲಿಯಲ್ಲಿ ನಡೆದ ದುರಂತ ತೀವ್ರ ದುಃಖ ತಂದಿದೆ. ಈ ಘಟನೆಯಲ್ಲಿ ಅನೇಕ ಅಮೂಲ್ಯ ಜೀವಗಳು ಬಲಿಯಾಗಿವೆ. ಅವರ ಪ್ರೀತಿಪಾತ್ರರಿಗೆ ನನ್ನ ಹೃದಯ ಮಿಡಿಯುತ್ತದೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲ ನೀಡಬೇಕು. ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳಲ್ಲಿ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು ಎಂದು ನಾನು ಕೋರುತ್ತೇನೆ ಎಂದು ಹೇಳಿದ್ದಾರೆ.


2025-09-27 18:00 GMT

ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು ದುರದೃಷ್ಟಕರ, ಈ ಘಟನೆ ತೀವ್ರ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

2025-09-27 17:55 GMT

ನನ್ನ ಹೃದಯ ಒಡೆದು ಹೋಗಿದೆ, ನಾನು ಅಸಹನೀಯ, ಭರಿಸಲಾಗದ ನೋವು ಮತ್ತು ದುಃಖದಲ್ಲಿದ್ದೇನೆ.

ಕರೂರಿನಲ್ಲಿ ಪ್ರಾಣ ಕಳೆದುಕೊಂಡ ನನ್ನ ಪ್ರೀತಿಯ ಸಹೋದರ, ಸಹೋದರಿಯರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳನ್ನು ಸಲ್ಲಿಸುತ್ತೇನೆ ಎಂದು ಟಿವಿಕೆ ಸಂಸ್ಥಾಪಕ ಹಾಗೂ ನಟ ವಿಜಯ್‌ ಕಂಬನಿ ಮಿಡಿದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.


2025-09-27 17:50 GMT

ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ. ಮುಖ್ಯಮಂತ್ರಿಯವರ ಸಾರ್ವಜನಿಕ ಪರಿಹಾರ ನಿಧಿಯಿಂದ ಈ ಆರ್ಥಿಕ ನೆರವನ್ನು ತಕ್ಷಣವೇ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ (ICU) ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 1 ಲಕ್ಷ ರೂಪಾಯಿ ನೆರವು ನೀಡುವುದಾಗಿಯೂ ಅವರು ತಿಳಿಸಿದ್ದಾರೆ. ಈ ಘಟನೆಯನ್ನು ಆಘಾತಕಾರಿ ಎಂದು ಬಣ್ಣಿಸಿರುವ ಸಿಎಂ ಸ್ಟಾಲಿನ್, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಮತ್ತು ಗಾಯಾಳುಗಳ ಆರೋಗ್ಯ ವಿಚಾರಿಸಲು ಖುದ್ದಾಗಿ ಕರೂರಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ದುರಂತದ ಕುರಿತು ಸಮಗ್ರ ತನಿಖೆ ನಡೆಸಲು, ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ಅವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ರಚಿಸಲಾಗಿದೆ. 

2025-09-27 17:43 GMT

"ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ನಡೆದ ಕಾಲ್ತುಳಿತದ ದುರದೃಷ್ಟಕರ ಘಟನೆಯಲ್ಲಿ ಸಂಭವಿಸಿದ ದುರಂತ ಸಾವುಗಳ ಬಗ್ಗೆ ತಿಳಿದು ದುಃಖವಾಗಿದೆ. ಮೃತರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 'ಎಕ್ಸ್' (X) ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.

2025-09-27 17:40 GMT

ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತದ ಬಗ್ಗೆ ನಟ ಹಾಗೂ ಮಕ್ಕಳ್ ನೀದಿ ಮೈಯಂ (MNM) ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ತಮ್ಮ ಹೃದಯವನ್ನು ನಡುಗಿಸಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಎಕ್ಸ್ (X) ಖಾತೆಯಲ್ಲಿ ತಮಿಳಿನಲ್ಲಿ ಸಂತಾಪ ಸೂಚಿಸಿರುವ ರಾಜ್ಯಸಭಾ ಸದಸ್ಯ ಕಮಲ್ ಹಾಸನ್, "ನನ್ನ ಹೃದಯ ನಡುಗುತ್ತಿದೆ. ಕರೂರಿನಿಂದ ಬರುತ್ತಿರುವ ಸುದ್ದಿಗಳು ಆಘಾತಕಾರಿ. ಜನಸಂದಣಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ಮುಗ್ಧ ಜನರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ಪದಗಳು ಸಿಗುತ್ತಿಲ್ಲ," ಎಂದು ಬರೆದುಕೊಂಡಿದ್ದಾರೆ.

"ಜನಸಂದಣಿಯಿಂದ ಪಾರಾದವರಿಗೆ ಸೂಕ್ತ ಚಿಕಿತ್ಸೆ ಮತ್ತು ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ನಾನು ತಮಿಳುನಾಡು ಸರ್ಕಾರವನ್ನು ಒತ್ತಾಯಿಸುತ್ತೇನೆ," ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕಮಲ್ ಹಾಸನ್ ಅವರಲ್ಲದೆ, ಸೂಪರ್‌ಸ್ಟಾರ್ ರಜನಿಕಾಂತ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಈ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. 

2025-09-27 17:37 GMT

ನಟ ವಿಜಯ್ ಅವರ ರ‍್ಯಾಲಿಯಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದಂತೆ, ಇದು ಕಾಲ್ತುಳಿತವೇ ಅಲ್ಲ, ಬದಲಿಗೆ ಆಡಳಿತಾರೂಢ ಡಿಎಂಕೆ ಸರ್ಕಾರದ ವ್ಯವಸ್ಥಿತ ಷಡ್ಯಂತ್ರ ಎಂದು ಕೆಲವು 'ತಮಿಳು ವೆಟ್ರಿ ಕಳಗಂ' (ಟಿವಿಕೆ) ಬೆಂಬಲಿಗರು ಗಂಭೀರ ಆರೋಪ ಮಾಡಿದ್ದಾರೆ. ವಿಜಯ್ ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದ ಸರ್ಕಾರ, "ಅನಗತ್ಯ ಪ್ರಚಾರ" ಸೃಷ್ಟಿಸುತ್ತಿದೆ ಎಂದು ಅವರು ದೂರಿದ್ದಾರೆ.

ಕೆಲವು ವಿಡಿಯೋ ತುಣುಕುಗಳನ್ನು ಉಲ್ಲೇಖಿಸಿರುವ ಬೆಂಬಲಿಗರು, "ಕರೂರು ನಗರದಾದ್ಯಂತ ಖಾಲಿ ಆಂಬುಲೆನ್ಸ್‌ಗಳನ್ನು ಓಡಾಡಿಸುವ ಮೂಲಕ, ದೊಡ್ಡ ದುರಂತ ನಡೆದಿದೆ ಎಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ. ಯಾವುದೇ ಸಾವು ಸಂಭವಿಸಿಲ್ಲ ಮತ್ತು ಕಾಲ್ತುಳಿತವೂ ನಡೆದಿಲ್ಲ," ಎಂದು ಪ್ರತಿಪಾದಿಸಿದ್ದಾರೆ.

ಈ ಆರೋಪಗಳು ದುರಂತದ ಕುರಿತು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ರಾಜಕೀಯ ತಿರುವು ಪಡೆದುಕೊಂಡಿದೆ. ಒಂದೆಡೆ ಸರ್ಕಾರದ ಭದ್ರತಾ ವೈಫಲ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಟಿವಿಕೆ ಬೆಂಬಲಿಗರು ಇದನ್ನು ಸರ್ಕಾರದ ಷಡ್ಯಂತ್ರ ಎಂದು ಬಣ್ಣಿಸುತ್ತಿದ್ದಾರೆ. 

Tags:    

Similar News