ನಟ ವಿಜಯ್ ರ‍್ಯಾಲಿಯಲ್ಲಿ ಮಹಾ ದುರಂತ: ಕಾಲ್ತುಳಿತಕ್ಕೆ 39 ಮಂದಿ ಬಲಿ, ಹೆಚ್ಚುತ್ತಿದೆ ಸಾವಿನ ಸಂಖ್ಯೆ
ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಪರಿಹಾರ ಘೋಷಣೆ
ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿ ತಮಿಳುನಾಡು ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆಯೋಗ ರಚಿಸಿ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ. ದುರಂತದ ಸ್ಥಳಕ್ಕೆ ಸಿಎಂ ಎಂ.ಕೆ.ಸ್ಟಾಲಿನ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಕರೂರು ದುರಂತ: ತಪ್ಪು ವಿಜಯ್ ಅವರದ್ದಲ್ಲ, ಸರ್ಕಾರದ ಹೊಣೆಗೇಡಿತನ: ಸ್ಥಳೀಯರ ಆಕ್ರೋಶ
ನಟ ವಿಜಯ್ ಅವರ ರ‍್ಯಾಲಿಯಲ್ಲಿ ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ತಮಿಳುನಾಡು ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ ಎಂದು ರ‍್ಯಾಲಿಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಮತ್ತು ಪ್ರತ್ಯಕ್ಷದರ್ಶಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಈ ದುರಂತಕ್ಕೆ ನಾವು ವಿಜಯ್ ಅವರನ್ನು ದೂಷಿಸುವುದಿಲ್ಲ. ಇದಕ್ಕೆ ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಕರೂರು ಶಾಸಕ ಸೆಂಥಿಲ್ ಬಾಲಾಜಿ ಅವರೇ ಹೊಣೆ," ಎಂದು ರ‍್ಯಾಲಿಯಲ್ಲಿದ್ದ ಮಹಿಳೆಯೊಬ್ಬರು 'ಪುದಿಯತಲೈಮುರೈ' ಟಿವಿ ಚಾನೆಲ್‌ಗೆ ಆಕ್ರೋಶದಿಂದ ಹೇಳಿದ್ದಾರೆ.
ದುರಂತದ ನಂತರ ಸ್ಥಳೀಯರು ಮತ್ತು ಸಂತ್ರಸ್ತರ ಕುಟುಂಬಗಳು ಸರ್ಕಾರದ ವಿರುದ್ಧ ನೇರವಾಗಿ ಆರೋಪಗಳನ್ನು ಮಾಡುತ್ತಿದ್ದು, ಅವರ ಮಾತುಗಳಲ್ಲಿನ ಪ್ರಮುಖ ಅಂಶಗಳು ಇಲ್ಲಿವೆ. "ಘಟನಾ ಸ್ಥಳದಲ್ಲಿ ಒಬ್ಬನೇ ಒಬ್ಬ ಪೊಲೀಸ್ ಕೂಡ ಇರಲಿಲ್ಲ. ಸರಿಯಾದ ಭದ್ರತೆ ಒದಗಿಸಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ನಮ್ಮ ಮಕ್ಕಳಿಗೆ ಸರ್ಕಾರ ಸುರಕ್ಷತೆ ನೀಡಲಿಲ್ಲ," ಎಂದು ಇನ್ನೊಬ್ಬ ಮಹಿಳೆ ಕಣ್ಣೀರು ಹಾಕಿದ್ದಾರೆ. "ರ‍್ಯಾಲಿ ನಡೆಯುತ್ತಿದ್ದಾಗ ವಿದ್ಯುತ್ ಕಡಿತಗೊಂಡಿತು. ಇದರಿಂದಾಗಿ ಮೈಕ್‌ಗಳು ಆಫ್ ಆಗಿ ವಿಜಯ್ ಅವರ ಮಾತು ಕೇಳಿಸುತ್ತಿರಲಿಲ್ಲ. ಅವರ ಮಾತನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲು ಜನರು ವೇದಿಕೆಯತ್ತ ನುಗ್ಗಲು ಪ್ರಯತ್ನಿಸಿದರು, ಇದು ಕಾಲ್ತುಳಿತಕ್ಕೆ ಕಾರಣವಾಯಿತು," ಎಂದು ರ‍್ಯಾಲಿಯಲ್ಲಿದ್ದ ಮಹಿಳೆಯೊಬ್ಬರು ವಿವರಿಸಿದ್ದಾರೆ.
"ಇದು ಕೇವಲ ರಾಜಕೀಯ ರ‍್ಯಾಲಿ ಆಗಿರಲಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಬಂದಿದ್ದರು. ಅವರಿಗೆ ಸುರಕ್ಷತೆ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ," ಎಂದು ಸ್ಥಳೀಯರು ಆರೋಪಿಸಿದ್ದಾರೆ. ಡಿಎಂಕೆ ವಕ್ತಾರರೊಬ್ಬರು, "ಜನರನ್ನು ಉದ್ದೇಶಪೂರ್ವಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲಾಗಿತ್ತು," ಎಂದು ಟಿವಿಕೆ ಪಕ್ಷದ ಮೇಲೆ ಆರೋಪಿಸಿದ್ದಾರೆ. ಈ ದುರಂತಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿದ್ದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಸುಮಾರು 30,000 ಜನರಿಗೆ ಅನುಮತಿ ಪಡೆದಿದ್ದರೂ, 60,000 ದಿಂದ ಒಂದು ಲಕ್ಷದವರೆಗೆ ಜನ ಸೇರಿದ್ದರು. ಇದು ಭದ್ರತಾ ವ್ಯವಸ್ಥೆಯ ಮೇಲೆ ತೀವ್ರ ಒತ್ತಡವನ್ನುಂಟುಮಾಡಿತು. ರ‍್ಯಾಲಿ ಆರಂಭವಾಗುವ 6 ಗಂಟೆಗಳ ಮೊದಲೇ ಜನರು ಸೇರಿದ್ದು, ವಿಜಯ್ ಅವರು ತಡವಾಗಿ ಬಂದಿದ್ದರಿಂದ ಜನರ ಸಂಯಮ ಮತ್ತಷ್ಟು ಕಡಿಮೆಯಾಗಿತ್ತು.
ಕಾಲ್ತುಳಿತ ದುರಂತದ ವರದಿ ಕೇಳಿದ ಕೇಂದ್ರ
ಕರೂರಿನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ತಮಿಳುನಾಡು ಸರ್ಕಾರದಿಂದ ವರದಿ ಕೇಳಿದೆ.
ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿದೆ.