ಧರ್ಮಸ್ಥಳ ಪ್ರಕರಣ: ಏಳನೇ ದಿನದ ಶೋಧ ಕಾರ್ಯ ಆರಂಭ, 11ನೇ ಸ್ಥಳದಲ್ಲಿ ಅಗೆತ

ಮಂಗಳವಾರ ಮಧ್ಯಾಹ್ನದವರೆಗೆ, 11ನೇ ಸ್ಥಳದಲ್ಲಿ ನಡೆಸಿದ ಅಗೆತದಲ್ಲಿ ಯಾವುದೇ ಮೃತದೇಹದ ಕುರುಹುಗಳು ಪತ್ತೆಯಾಗಿಲ್ಲ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.;

Update: 2025-08-05 09:36 GMT

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡವು (SIT) ಇಂದು, ಮಂಗಳವಾರ, ಸತತ ಏಳನೇ ದಿನವೂ ತನ್ನ ಶೋಧ ಕಾರ್ಯವನ್ನು ಮುಂದುವರಿಸಿದೆ.

ನೇತ್ರಾವತಿ ಸ್ನಾನ ಘಟ್ಟದ ಸಮೀಪದ ಹೆದ್ದಾರಿ ಪಕ್ಕದ ಕಾಡಿನಲ್ಲಿ ಇಂದು ಶೋಧ ಕಾರ್ಯ ಆರಂಭವಾಗಿದ್ದು, ಪ್ರಕರಣದ ಸಾಕ್ಷಿ-ದೂರುದಾರನು ಈ ಹಿಂದೆ ತೋರಿಸಿದ್ದ 13 ಜಾಗಗಳ ಪೈಕಿ 11ನೇ ಸ್ಥಳದಲ್ಲಿ ಅಗೆತ ನಡೆಸಲಾಗುತ್ತಿದೆ. ಈ ಸ್ಥಳವು ಹೆದ್ದಾರಿಯಿಂದ ಕೇವಲ 20 ಮೀಟರ್ ಅಂತರದಲ್ಲಿದೆ.

ಎಸ್ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ವಿಧಿವಿಜ್ಞಾನ ತಜ್ಞರು, ಸಾಕ್ಷಿ-ದೂರುದಾರ ಹಾಗೂ ಸುಮಾರು 20 ಕಾರ್ಮಿಕರು ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಳಕ್ಕೆ ಅಗೆಯುವ ಯಂತ್ರವನ್ನೂ ತರಲಾಗಿದೆ. ಶೋಧ ಕಾರ್ಯದ ದೃಶ್ಯಗಳು ಸಾರ್ವಜನಿಕರಿಗೆ ಕಾಣದಂತೆ ರಸ್ತೆಯ ಬದಿಯಲ್ಲಿ ಹಸಿರು ಪರದೆಯನ್ನು ಕಟ್ಟಲಾಗಿದೆ.

ಸೋಮವಾರವಷ್ಟೇ, ದೂರುದಾರ ತೋರಿಸಿದ್ದ 11ನೇ ಜಾಗದಿಂದ ಸುಮಾರು 100 ಮೀಟರ್ ದೂರದಲ್ಲಿ, ನೆಲದ ಮೇಲೆಯೇ ಮನುಷ್ಯನ ಅವಶೇಷಗಳು ಪತ್ತೆಯಾಗಿದ್ದವು. ಕಳೆದ ಗುರುವಾರ ಆರನೇ ಜಾಗದಲ್ಲಿ ಪುರುಷನ ಮೃತದೇಹ ಸಿಕ್ಕಿತ್ತು. ಆದರೆ, ಉಳಿದ ಒಂಬತ್ತು ಜಾಗಗಳಲ್ಲಿ ಯಾವುದೇ ಕುರುಹುಗಳು ಲಭ್ಯವಾಗಿರಲಿಲ್ಲ.

ಮಂಗಳವಾರ ಮಧ್ಯಾಹ್ನದವರೆಗೆ, 11ನೇ ಸ್ಥಳದಲ್ಲಿ ನಡೆಸಿದ ಅಗೆತದಲ್ಲಿ ಯಾವುದೇ ಮೃತದೇಹದ ಕುರುಹುಗಳು ಪತ್ತೆಯಾಗಿಲ್ಲ ಎಂದು ಎಸ್ಐಟಿ ಮೂಲಗಳು ತಿಳಿಸಿವೆ. 

Live Updates
2025-08-05 11:26 GMT

ಧರ್ಮಸ್ಥಳದ 11ನೇ ಪಾಯಿಂಟ್‌ನಲ್ಲಿ ಆರು ಅಡಿ ಆಳ ತೋಡಿದರೂ ಕಳೇಬರ ಪತ್ತೆಯಾಗದ ಕಾರಣ ಗುಂಡಿಯನ್ನು ಮುಚ್ಚಿದ್ದು, ಎಸ್‌ಐಟಿ ಅಧಿಕಾರಿಗಳು 12ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.

 

2025-08-05 09:37 GMT

ಪ್ರಕರಣ 39/2025: ಸಾಕ್ಷಿ, ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಂಡದೊಂದಿಗೆ ಅರಣ್ಯ ಪ್ರದೇಶದಲ್ಲಿ ತನಿಖೆ

ಈ ಪ್ರಕರಣದಲ್ಲಿ (ಸಂಖ್ಯೆ 39/2025) ಸಾಕ್ಷಿದಾರ ವ್ಯಕ್ತಿ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಮತ್ತು ಎಸ್ಐಟಿ ಎಸ್‌ಪಿಗಳಾದ ಜಿತೇಂದ್ರ ಕುಮಾರ್ ದಯಾಮ ಅವರು ಇತರ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರ ತಂಡದೊಂದಿಗೆ ಕಾಡಿನೊಳಗೆ ತನಿಖೆ ನಡೆಸಲು ತೆರಳಿದ್ದಾರೆ. ಈ ತಂಡವು ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಂಗತಿಗಳ ಕುರಿತು ಮಾಹಿತಿ ಸಂಗ್ರಹಿಸುವ ಮತ್ತು ವಿಶ್ಲೇಷಣೆ ನಡೆಸುವ ಉದ್ದೇಶ ಹೊಂದಿದೆ.

Similar News