Israel-Iran conflict Live | ಇರಾಕ್‌, ಕತಾರ್‌ನ ಅಮೆರಿಕನ್‌ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ

ಇಸ್ರೇಲ್ ಈ ಹಿಂದೆ ಇರಾನ್‌ನ ಮಿಲಿಟರಿ ಮತ್ತು ಪರಮಾಣು ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿತ್ತು. ಈ ಹೊಸ ಬೆಳವಣಿಗೆಯಿಂದಾಗಿ ಪರಿಸ್ಥಿತಿಯು ಹೆಚ್ಚು ಅಸ್ಥಿರವಾಗಿದ್ದು, ಉಭಯ ದೇಶಗಳ ನಡುವೆ ದಾಳಿ-ಪ್ರತಿದಾಳಿಗಳು ನಡೆಯುತ್ತಿವೆ.;

Update: 2025-06-23 07:03 GMT
ಸೋಮವಾರ ಜೋಲ್ಫಾಘರ್ ಕೇಂದ್ರ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇರಾನ್ ಸೇನಾ ಕಮಾಂಡರ್-ಇನ್-ಚೀಫ್ ಜನರಲ್ ಅಮೀರ್ ಹತಾಮಿ (ಮಧ್ಯ), ಅಡ್ಮಿರಲ್ ಮಹಮೂದ್ ಮೌಸಾವಿ ಮತ್ತು ಅಡ್ಮಿರಲ್ ಹಬಿಬೊಲ್ಲಾ ಸಯ್ಯರಿ ಭಾಗವಹಿಸಿದ್ದಾರೆ.

ತನ್ನ ಪರಮಾಣು ನೆಲೆಗಳ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿ ಮತ್ತು ತನ್ನ ಅಸ್ಥಿರ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗೆ ಪ್ರತೀಕಾರವಾಗಿ ಇರಾನ್ ಸೋಮವಾರ ತಡರಾತ್ರಿ ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಬಳಿಕ ಅಲ್ ಉದೈದ್ ವಾಯುನೆಲೆಯ ಮೇಲಿನ ದಾಳಿಯನ್ನು ಕತಾರ್ ಖಂಡಿಸಿದೆ.  ಆದರೆ ಇರಾನ್‌  ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ ಮತ್ತು ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಹೇಳಿದೆ. ತನ್ನ ವಾಯುಪ್ರದೇಶವು ಈಗ ಸುರಕ್ಷಿತವಾಗಿದೆ ಎಂದು ಅದು ಹೇಳಿದೆ. ದಾಳಿಯ ನಂತರ ಕತಾರ್‌ ರಾಜಧಾನಿ  ದೋಹಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ.

ಮಧ್ಯಪ್ರಾಚ್ಯದ ಅತಿದೊಡ್ಡ  ಅಮೆರಿಕನ್ ಮಿಲಿಟರಿ ನೆಲೆಯಾದ ಅಲ್ ಉದೈದ್ ವಾಯುನೆಲೆಗೆ ಕತಾರ್ ನೆಲೆಯಾಗಿದೆ. ಸುಮಾರು 8,000  ಅಮೆರಿಕನ್ ನಾಗರಿಕರು ಅಲ್ಲಿ ನೆಲೆಯಾಗಿದ್ದಾರೆ.‌ 

ಇರಾನ್‌ ಹೇಳಿಕೆ

ಕತಾರ್‌ನಲ್ಲಿನ ದಾಳಿಯು ಈ ವಾರಾಂತ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ತನ್ನ ಪರಮಾಣು ನೆಲೆಗಳ ಮೇಲೆ  ಸ್ಫೋಟಿಸಿದ ಬಾಂಬ್‌ಗಳ ಸಂಖ್ಯೆಗೆ ಸಮನಾಗಿದೆ ಎಂದು ಇರಾನ್ ಹೇಳಿದೆ. ಈ ದಾಳಿ ಜನವಸತಿ ಪ್ರದೇಶಗಳ ಹೊರಗಿನ ನೆಲೆಯನ್ನು ಗುರಿಯಾಗಿಸಿಕೊಂಡಿದೆ ಎಂದು ಇರಾನ್ ಹೇಳಿದೆ.

ಆ ಕೂಡಲೇ, ಇರಾನ್ ತನ್ನ ದೂರದರ್ಶನದಲ್ಲಿ ತಾನು ನಡೆಸಿದ ದಾಳಿ ಬಗ್ಗೆ ಹೇಳಿಕೊಂಡಿದೆ. ಟಿವಿ ಪರದೆಯ ಮೇಲಿನ ಶೀರ್ಷಿಕೆಯು "ಅಮೆರಿಕದ ಆಕ್ರಮಣ" ಕ್ಕೆ  "ಪ್ರಬಲ ಮತ್ತು ಯಶಸ್ವಿ ಪ್ರತಿಕ್ರಿಯೆ" ಎಂದು  ಹೇಳಿಕೊಳ್ಳಲಾಗಿದೆ.  ಪಶ್ಚಿಮ ಇರಾಕ್‌ನಲ್ಲಿರುವ ಯುಎಸ್ ಸೈನಿಕರನ್ನು ಇರಿಸಲಾಗಿರುವ ಐನ್ ಅಲ್-ಅಸ್ಸಾದ್ ನೆಲೆಯನ್ನೂ ಗುರಿಯಾಗಿರಿಸಿಕೊಳ್ಳಲಾಗಿದೆ ಎಂದು ಇರಾಕಿನ ಭದ್ರತಾ ಅಧಿಕಾರಿಯೊಬ್ಬರು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.

ಇರಾಕಿನ ಅಮೆರಿಕನ್‌ ನೆಲೆಗೆ ಹಾನಿಯಾಗಿದೆಯೇ ಅಥವಾ ಯಾವುದೇ ಗಾಯಗಳಾಗಿವೆಯೇ ಎಂಬುದು ತಕ್ಷಣ ಸ್ಪಷ್ಟವಾಗಿಲ್ಲ.  ಇರಾನ್‌ನ  ದಾಳಿಯು "ಕತಾರ್‌ನ ಸಾರ್ವಭೌಮತ್ವ, ಅದರ ವಾಯುಪ್ರದೇಶ ಮತ್ತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ" ಎಂದು ಕತಾರ್‌ನ ವಿದೇಶಾಂಗ ಸಚಿವಾಲಯ ಹೇಳಿದೆ.

ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಅಮೆರಿಕ ಭಾನುವಾರ ಬೆಳಿಗ್ಗೆ ಅನಿರೀಕ್ಷಿತ ದಾಳಿ ನಡೆಸಿದ ಒಂದು ದಿನದ ನಂತರ ಇರಾನ್ ಪ್ರತೀಕಾರ ತೀರಿಸಿಕೊಂಡಿದೆ.‌ 

ಅಮೆರಿಕ ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದೆ

ಕತಾರ್‌ನಲ್ಲಿ ನಡೆದ ಘಟನೆಯನ್ನು ಹೊರತುಪಡಿಸಿ, ಯಾವುದೇ ಯುಎಸ್ ಮಿಲಿಟರಿ ನೆಲೆಯಲ್ಲಿ ಇರಾನಿನ ಯಾವುದೇ ದಾಳಿಗಳು ಆಗಿಲ್ಲ ಎಂದು ಅಮೆರಿಕದ ಮಿಲಿಟರಿ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ವರದಿಯಾದ ಘಟನೆಯಿಂದ ಕತಾರ್‌ನಲ್ಲಿರುವ ಯುಎಸ್ ಅಲ್ ಉದೈದ್ ವಾಯುನೆಲೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ

ಅಮೆರಿಕನ್‌ ದಾಳಿ ನಡೆಸಿದ ತಂಡದ ಮುಖ್ಯಸ್ಥ ಡಾನ್ ಕೇನ್ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಪ್ರಸ್ತುತ ಶ್ವೇತಭವನದ ಪರಿಸ್ಥಿತಿ ಕೊಠಡಿಯಲ್ಲಿದ್ದು,  ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರೊಂದಿಗೆ ಡೊನಾಲ್ಡ್ ಟ್ರಂಪ್ ಕೂಡ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.

ಯುದ್ಧಭೀತಿ

ಇಸ್ರೇಲ್ ಮತ್ತು ಇರಾನ್ ನಡುವಿನ ತಿಕ್ಕಾಟ ತೀವ್ರಗೊಂಡಿದ್ದು, ಇಸ್ರೇಲ್ ಇರಾನ್‌ನ ಆರು ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ದಾಳಿಗಳು ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯನ್ನು ಹೆಚ್ಚಿಸಿವೆ.

ಇಸ್ರೇಲಿ ಸೇನೆಯು ತನ್ನ ಹೇಳಿಕೆಯಲ್ಲಿ, ಇರಾನ್‌ನ ಪಶ್ಚಿಮ, ಪೂರ್ವ ಮತ್ತು ಮಧ್ಯ ಭಾಗಗಳಲ್ಲಿರುವ ಕನಿಷ್ಠ ಆರು ವಿಮಾನ ನಿಲ್ದಾಣಗಳ ಮೇಲೆ ವಾಯುದಾಳಿಗಳನ್ನು ನಡೆಸಿದೆ ಎಂದು ತಿಳಿಸಿದೆ. ಟೆಹರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣ, ಮಶ್ಹಾದ್ ಮತ್ತು ಡೆಜ್ಫುಲ್‌ನಲ್ಲಿರುವ ವಿಮಾನ ನಿಲ್ದಾಣಗಳು ಗುರಿಯಾಗಿಸಿಕೊಂಡಿವೆ ಎಂದು ಇಸ್ರೇಲ್ ದೃಢಪಡಿಸಿದೆ. ಈ ದಾಳಿಗಳಲ್ಲಿ ಇರಾನ್‌ನ ವಾಯುಪಡೆಗೆ ಸೇರಿದ 15 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಾಶಪಡಿಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇವುಗಳಲ್ಲಿ F-14, F-5 ಮತ್ತು AH-1 ವಿಮಾನಗಳು ಸೇರಿವೆ. ರನ್‌ವೇಗಳು, ಭೂಗತ ಬಂಕರ್‌ಗಳು ಮತ್ತು ಇಂಧನ ತುಂಬಿಸುವ ವಿಮಾನವೂ ಸಹ ಹಾನಿಗೊಳಗಾಗಿವೆ ಎಂದು ಇಸ್ರೇಲ್ ಹೇಳಿದೆ. ಈ ದಾಳಿಗಳ ಮುಖ್ಯ ಉದ್ದೇಶ ಇರಾನಿನ ಯುದ್ಧವಿಮಾನಗಳ ಕಾರ್ಯಾಚರಣೆ ಸಾಮರ್ಥ್ಯವನ್ನು ಕುಗ್ಗಿಸುವುದು ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಪ್ರಾದೇಶಿಕ ಪರಿಣಾಮಗಳು ಮತ್ತು ಪ್ರತಿಕ್ರಿಯೆಗಳು

ಈ ದಾಳಿಗಳ ನಂತರ ಮಧ್ಯಪ್ರಾಚ್ಯದಾದ್ಯಂತ ಹಲವು ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದ್ದು, ವಿಮಾನಯಾನ ಚಟುವಟಿಕೆಗಳು ಗಂಭೀರವಾಗಿ ಅಸ್ತವ್ಯಸ್ತಗೊಂಡಿವೆ. ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದು, ಅನೇಕ ವಿಮಾನಗಳು ವಿಳಂಬವಾಗಿವೆ ಅಥವಾ ರದ್ದಾಗಿವೆ. ಇಸ್ರೇಲ್ ತನ್ನ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದ ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು "ಮುಂದಿನ ಸೂಚನೆ ತನಕ" ಮುಚ್ಚಿದೆ. ಇರಾನ್ ಕೂಡ ತನ್ನ ಮುಖ್ಯ ಖೊಮೇನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಿದೆ.

ಇರಾನ್ ಈ ದಾಳಿಗಳಿಗೆ ತೀವ್ರ ಪ್ರತೀಕಾರ ತೀರಿಸುವುದಾಗಿ ಬೆದರಿಕೆ ಹಾಕಿದೆ. ಈಗಾಗಲೇ ಇಸ್ರೇಲ್ ಮೇಲೆ ನೂರಾರು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಉಡಾಯಿಸಿದೆ. ಇಸ್ರೇಲ್ ಕೂಡ ಇರಾನ್‌ನ ಕರ್ಮಾನ್‌ಷಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿದೆ ಎಂದು ಹೇಳಿಕೊಂಡಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣ ಮತ್ತು ಸಂಶೋಧನಾ ಸೌಲಭ್ಯಗಳನ್ನು ತಮ್ಮ ಇತ್ತೀಚಿನ ಕ್ಷಿಪಣಿ ದಾಳಿಗಳ ಮೂಲಕ ಗುರಿಯಾಗಿಸಿದ್ದೇವೆ ಎಂದು ಹೇಳಿದೆ. ಇಸ್ರೇಲಿ ದಾಳಿಗಳಲ್ಲಿ 950ಕ್ಕೂ ಹೆಚ್ಚು ಇರಾನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ವರದಿ ಮಾಡಿವೆ. ಇಸ್ರೇಲ್‌ನಲ್ಲಿ ಇರಾನ್‌ನ ದಾಳಿಗಳಿಂದ 24 ಜನರು ಮೃತಪಟ್ಟಿದ್ದಾರೆ.

ಅಂತರರಾಷ್ಟ್ರೀಯ ಪ್ರತಿಕ್ರಿಯೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಪರಮಾಣು ತಾಣಗಳ ಮೇಲೆ ಯು.ಎಸ್. ದಾಳಿಗಳು "ಭಾರೀ ಹಾನಿ" ಉಂಟುಮಾಡಿವೆ ಎಂದು ಹೇಳಿದ್ದಾರೆ. ಆದರೆ, ಹಾನಿಯ ಪ್ರಮಾಣದ ಬಗ್ಗೆ ನಿಖರ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ರಷ್ಯಾ ಈ ಸಂಘರ್ಷದಲ್ಲಿ ತಟಸ್ಥ ನಿಲುವು ತಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿಕೊಂಡಿದೆ. ಉತ್ತರ ಕೊರಿಯಾ ಯು.ಎಸ್. ದಾಳಿಯನ್ನು ಖಂಡಿಸಿದರೆ, ಉಕ್ರೇನ್ ಅದನ್ನು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯಲು ಸಮರ್ಥನೀಯ ಎಂದು ಹೇಳಿದೆ. ಜಪಾನ್ ಸೇರಿದಂತೆ ಕೆಲವು ದೇಶಗಳು ಸಂವಾದದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿವೆ.

ಈ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಯುದ್ಧಕ್ಕೆ ಕಾರಣವಾಗಬಹುದೆಂಬ ಆತಂಕವನ್ನು ಹೆಚ್ಚಿಸಿದೆ. ತೈಲ ಬೆಲೆಗಳು ಏರಿಕೆಯಾಗಿದ್ದು, ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಸಾಧ್ಯತೆಯ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. 

Live Updates
2025-06-23 07:13 GMT

ಅಮೆರಿಕದ ನಡೆ 'ಪಾಂಡೋರಾದ ಪೆಟ್ಟಿಗೆ' ತೆರೆದಿದೆ: ರಷ್ಯಾ ಗಂಭೀರ ಆರೋಪ

ಅಮೆರಿಕ ಇರಾನ್‌ನ ಮೂರು ಪರಮಾಣು ಸೌಲಭ್ಯಗಳ ಮೇಲೆ ನಡೆಸಿದ ವೈಮಾನಿಕ ದಾಳಿಗಳು "ಪಾಂಡೋರಾದ ಪೆಟ್ಟಿಗೆಯನ್ನು ತೆರೆದಿವೆ" ಎಂದು ರಷ್ಯಾದ ವಿಶ್ವಸಂಸ್ಥೆಯ ರಾಯಭಾರಿ ವಾಸಿಲಿ ನೆಬೆಂಜಿಯಾ ಗಂಭೀರ ಆರೋಪ ಮಾಡಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಈ ಕ್ರಮದಿಂದ "ಯಾವ ಹೊಸ ವಿಪತ್ತುಗಳು ಮತ್ತು ಕಷ್ಟಗಳು ಉದ್ಭವಿಸುತ್ತವೆಯೋ ಎಂಬುದು ಯಾರಿಗೂ ತಿಳಿದಿಲ್ಲ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

2025-06-23 07:11 GMT

ಇರಾನ್ ಮೇಲಿನ ಅಮೆರಿಕ ದಾಳಿ: ಮಧ್ಯಪ್ರಾಚ್ಯದಲ್ಲಿ 'ಅಪಾಯಕಾರಿ ತಿರುವು' ಎಂದು ಯುಎನ್ ಮುಖ್ಯಸ್ಥರ ಎಚ್ಚರಿಕೆ

ಅಮೆರಿಕವು ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ನಡೆಸಿದ ಬಾಂಬ್ ದಾಳಿಯು ಮಧ್ಯಪ್ರಾಚ್ಯದಲ್ಲಿ "ಅಪಾಯಕಾರಿ ತಿರುವು" ಪಡೆಯಲು ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಯುನೈಟೆಡ್ ನೇಷನ್ಸ್‌ನಲ್ಲಿ ನಡೆದ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಹೇಳಿದ್ದಾರೆ. ಪ್ರದೇಶದಲ್ಲಿ ಉದ್ವಿಗ್ನತೆ ಗಣನೀಯವಾಗಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಗುಟೆರೆಸ್ ಅವರ ಈ ಹೇಳಿಕೆ ಬಂದಿದೆ.

2025-06-23 07:08 GMT

ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ನಾಮನಿರ್ದೇಶನ: ಇರಾನ್ ದಾಳಿ ಬಳಿಕ ಪಾಕಿಸ್ತಾನದಲ್ಲಿ ಆಕ್ಷೇಪ

ಅಮೆರಿಕವು ಇರಾನ್‌ನ ಮೂರು ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದ ನಂತರ, ಪಾಕಿಸ್ತಾನದ ಹಲವಾರು ರಾಜಕಾರಣಿಗಳು ಮತ್ತು ಪ್ರಮುಖ ವ್ಯಕ್ತಿಗಳು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡಿದ ತಮ್ಮ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.

2025-06-23 07:07 GMT

ಇರಾನ್ ದಾಳಿ: ಜಾಗತಿಕ ಮಾರುಕಟ್ಟೆಗಳಲ್ಲಿ ತೈಲ ಏರಿಕೆ, ಷೇರು ಕುಸಿತ

ಅಮೆರಿಕವು ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ನಡೆಸಿದ ದಾಳಿಗಳ ನಂತರ ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇರಾನ್‌ನ ಮುಂದಿನ ಪ್ರತಿಕ್ರಿಯೆಗಾಗಿ ಹೂಡಿಕೆದಾರರು ಕಾದು ನೋಡುತ್ತಿರುವುದರಿಂದ, ಸದ್ಯಕ್ಕೆ ಮಾರುಕಟ್ಟೆಗಳಲ್ಲಿನ ಚಲನವಲಗಳು ನಿಯಮಿತವಾಗಿವೆ.

Tags:    

Similar News