ಧರ್ಮಸ್ಥಳ ಪ್ರಕರಣ : ನೇತ್ರಾವತಿ ನದಿ ಬಳಿಯ ಕಾಡಿನಲ್ಲಿ ತಲೆಬುರುಡೆ, ನೂರಾರು ಮೂಳೆಗಳು ಪತ್ತೆ

ಪ್ರಕರಣದ ದೂರುದಾರನು ತೋರಿಸಿದ್ದ 11ನೇ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಈ ಅವಶೇಷಗಳು ಪತ್ತೆಯಾಗಿವೆ. ಒಂದು ತಲೆಬುರುಡೆ, ಉದ್ದನೆಯ ಬೆನ್ನುಮೂಳೆ ಸೇರಿದಂತೆ ಹಲವು ಮೂಳೆಗಳು ದೊರೆತಿದೆ.;

Update: 2025-08-05 04:29 GMT

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ಶೋಧ ಕಾರ್ಯದ ಆರನೇ ದಿನವಾದ ಸೋಮವಾರ, ನೇತ್ರಾವತಿ ಸ್ನಾನಘಟ್ಟದ ಸಮೀಪದ ಕಾಡಿನಲ್ಲಿ ಮಾನವ ತಲೆಬುರುಡೆ ಮತ್ತು ಸುಮಾರು 100 ಮೂಳೆಗಳು ಪತ್ತೆಯಾಗಿವೆ.

ಪ್ರಕರಣದ ದೂರುದಾರನು ತೋರಿಸಿದ್ದ 11ನೇ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಈ ಅವಶೇಷಗಳು ಪತ್ತೆಯಾಗಿವೆ. ಒಂದು ತಲೆಬುರುಡೆ, ಉದ್ದನೆಯ ಬೆನ್ನುಮೂಳೆ ಸೇರಿದಂತೆ ಹಲವು ಮೂಳೆಗಳು ದೊರೆತಿದ್ದು, ಅದೇ ಸ್ಥಳದಲ್ಲಿ ಗಂಟು ಹಾಕಿದ ಸೀರೆಯೊಂದು ಸಿಕ್ಕಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ. ತಜ್ಞರ ತಂಡವು ಅವಶೇಷಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿದೆ. ಗುರುವಾರವಷ್ಟೇ, ದೂರುದಾರ ತೋರಿಸಿದ್ದ ಆರನೇ ಜಾಗದಲ್ಲಿ ಪುರುಷನ ಮೃತದೇಹದ ಅವಶೇಷಗಳು ಪತ್ತೆಯಾಗಿದ್ದವು. ಇದುವರೆಗೆ ಶೋಧ ನಡೆಸಿದ ಉಳಿದ ಒಂಬತ್ತು ಜಾಗಗಳಲ್ಲಿ ಯಾವುದೇ ಕುರುಹುಗಳು ಲಭ್ಯವಾಗಿರಲಿಲ್ಲ.

ಬೆಳಿಗ್ಗೆ 11:30ಕ್ಕೆ ಶೋಧ ಕಾರ್ಯ ಆರಂಭಿಸಿದ ಎಸ್ಐಟಿ ತಂಡ, ಊಟದ ವಿರಾಮವಿಲ್ಲದೆ ಸಂಜೆ 6:15ರವರೆಗೂ ಕಾರ್ಯಾಚರಣೆ ಮುಂದುವರಿಸಿತ್ತು. ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮತ್ತು ಎಸ್ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದರು.

ಹೊಸ ದೂರು ದಾಖಲು

ಈ ಮಧ್ಯೆ, ಆರ್ಟಿಐ ಕಾರ್ಯಕರ್ತ ಜಯಂತ್ ಟಿ. ಎಂಬುವವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹೊಸ ದೂರು ದಾಖಲಿಸಿದ್ದಾರೆ. ಸುಮಾರು 15 ವರ್ಷಗಳ ಹಿಂದೆ 13-15 ವರ್ಷದ ಬಾಲಕಿಯೊಬ್ಬಳು ಶಂಕಾಸ್ಪದವಾಗಿ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆ ನಡೆಸದೆ ಮತ್ತು ಎಫ್ಐಆರ್ ದಾಖಲಿಸದೆ ಆಕೆಯ ಶವವನ್ನು ಹೂಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ದೂರಿನ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

Tags:    

Similar News