Caste Census: ಜಾತಿ ಗಣತಿ: ವಿಶೇಷ ಸಚಿವ ಸಂಪುಟ ಸಭೆ ಅಂತ್ಯ ; ಮೇ 2 ಕ್ಕೆ ಇನ್ನೊಂದು ವಿಶೇಷ ಸಂಪುಟ ಸಭೆ
ವರದಿ ಜಾರಿಗೆ ಸಿಎಂ ಆತುರಪಡುತ್ತಿಲ್ಲ; ಅಧ್ಯಯನಕ್ಕೆ ಸಮಯ ಕೇಳುವ ನಿರೀಕ್ಷೆ
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಕುರಿತಂತೆ ಇಂದು ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಜಾರಿಗೆ ಆತುರ ತೋರುವುದಿಲ್ಲ. ಬದಲಿಗೆ ವರದಿ ಅಧ್ಯಯನಕ್ಕೆ ಇನ್ನಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಮತ್ತೊಂದೆಡೆ ಜಾತಿಗಣತಿ ವರದಿ ಬಹಿರಂಗದ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ಸ್ವೀಕರಿಸಿ, ಅದರಿಂದ ಎದುರಾಗುವ ಪರಿಣಾಮಗಳನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ ಎಂಬ ಮುನ್ಸೂಚನೆಗಳು ಕಾಣುತ್ತಿವೆ ಎಂದು ಸಿಎಂ ಆಪ್ತರೊಬ್ಬರು ತಿಳಿಸಿದ್ದಾರೆ. ಇದರಿಂದ ಇಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆ ತೀವ್ರ ಕುತೂಹಲ ಮೂಡಿಸಿದೆ.
ಶಾಮನೂರು ಬೆದರಿಕೆಗೆ ಎಂ.ಬಿ. ಪಾಟೀಲ್ ಉತ್ತರ
ಶಾಮನೂರು ಸಿಎಂಗೆ ಎಚ್ಚರಿಕೆ ನೀಡಿದ ವಿಚಾರ
ಸಚಿವ ಎಂಬಿ.ಪಾಟೀಲ್ ಹೇಳಿಕೆ
ಆ ರೀತಿ ಯಾಕೆ ಹೇಳಿದ್ರು ಗೊತ್ತಿಲ್ಲ.
ಜಾತಿಗಣತಿಯನ್ನು ಒಪ್ಪಿಕೊಂಡರೆ ಹಾಗೂ ಲಿಂಗಾಯತರನ್ನು ಮತ್ತು ಒಕ್ಕಲಿಗರನ್ನು ಎದುರುಹಾಕಿಕೊಂಡರೆ ಸರ್ಕಾರ ಬಿದ್ದುಹೋಗುತ್ತದೆ ಎಂಬ ಲಿಂಗಾಯತ ಮುಖಂಡ ಹಾಗೂ ಲಿಂಗಾಯತ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಎಚ್ಚರಿಕೆ ಸಂಬಂಧ ಲಿಂಗಾಯತ ಮುಖಂಡರೇ ಆದ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.
"ಇವತ್ತು ಕ್ಯಾಬಿನೆಟ್ ಮೀಟಿಂಗ್ ಚರ್ಚೆ ಯಾಗುತ್ತೆ. ಸಚಿವರು ಸಮಾಜದಲ್ಲಿ ಇರುವ ತಪ್ಪುಕಲ್ಪನೆ ಬಗ್ಗೆ ಚರ್ಚೆ ಮಾಡುತ್ತೇವೆ. ನಂತರ ತೀರ್ಮಾನ ಕೈಗೊಳ್ಳುತ್ತೇವೆ," ಎಂದು ಹೇಳಿದ್ದಾರೆ.
ಜಾತಿಗಣತಿ ವಿರೋಧ ಮಾಡುವಂತದ್ದು ಏನು ಆಗಿಲ್ಲ; ಚೆಲುವರಾಯಸ್ವಾಮಿ
ಜಾತಿಗಣತಿ ವಿರೋಧ ಮಾಡುವಂತದ್ದು ಏನು ಆಗಿಲ್ಲ. ಒಕ್ಕಲಿಗ ಸಂಘ ಈ ಬಗ್ಗೆ ಯಾಕೆ ಪ್ರತಿಭಟನೆ ಮಾಡಬೇಕು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಗುರುವಾರ ಕ್ಯಾಬಿನೆಟ್ ಸಭೆ ನಡೆಯುತ್ತದೆ. ಈ ಬಗ್ಗೆ ಅಂಗೀಕಾರ ಮಾಡಿದ ಮೇಲಷ್ಟೇ ಹೋರಾಟ ಮಾಡಬೇಕು ಎಂದು ಅವರು ತಿಳಿಸಿದರು.
ಯಾವುದೇ ತೀರ್ಮಾನ ಆಗದೇ ಯಾಕೆ ಅವರು ವಿರೋಧ ಮಾಡುತ್ತಾರೆ?
ಜಾತಿಗಣತಿ ವರದಿಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಂದ ಬಂದಿರುವ ವಿರೋಧದ ಕುರಿತಂತೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, "ಜಾತಿಗಣತಿ ಬಗ್ಗೆ ಈಗಾಗಲೇ ಯಾವುದೇ ನಿರ್ಧಾರವಾಗಿಲ್ಲ. ಯಾವುದೇ ತೀರ್ಮಾನ ಆಗದೇ ಯಾಕೆ ಅವರು ವಿರೋಧ ಮಾಡುತ್ತಾರೆ. ತೀರ್ಮಾನ ಆದ ಮೇಲೆ ವಿರೋಧ ಮಾಡಬೇಕು ತಾನೆ? ಇವತ್ತು ನಮ್ಮ ಕ್ಯಾಬಿನೆಟ್ ಸಭೆ ಇದೆ. ಅದರಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ನೊಳಂಬ ಲಿಂಗಾಯತ ಸಮುದಾಯದಿಂದ ಸುದ್ದಿಗೋಷ್ಟಿ
ಜಾತಿಜನಗಣತಿ ವಿಚಾರವಾಗಿ ನೊಳಂಬ ಲಿಂಗಾಯತ ರಾಜ್ಯಾಧ್ಯಕ್ಷ ಬಿಕೆ ಚಂದ್ರಶೇಖರ್ ಅವರಿಂದ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸುದ್ದಿಗೋಷ್ಟಿ ನಡೆಯುತ್ತಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ವ್ಯಾಪಕವಾಗಿ ನೊಳಂಬ ಲಿಂಗಾಯತ ಸಮುದಾಯ ವಾಸವಿದೆ. ನಮ್ಮದು ರೈತಾಪಿ ಸಮುದಾಯ. ನಾವು 20.63 ಲಕ್ಷ ಜನಸಂಖ್ಯೆಯ ಸಮುದಾಯವಾದರೂ, ವರದಿಯಲ್ಲಿ ನಮ್ಮ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಬಿಕೆ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ಗಣದಿ ವರದಿ ಬೆನ್ನಲ್ಲೇ ವಿಪಕ್ಷಗಳ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಸತತವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. 2ಎ ಪ್ರವರ್ಗ ಮೀಸಲಾತಿಯಡಿ 101 ಜಾತಿಗಳ ಪೈಕಿ ಕೆಲವರಿಗಷ್ಟೇ ಅನುಕೂಲ ಆಗಿ, ಮಿಕ್ಕವರಿಗೆ ಅನ್ಯಾಯ ಆಗಿದೆ ಎಂದು ಗಂಭೀರ ಆರೋಪವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಮಾಡಿದ್ದಾರೆ.