Caste Census: ಜಾತಿ ಗಣತಿ: ವಿಶೇಷ ಸಚಿವ ಸಂಪುಟ ಸಭೆ ಅಂತ್ಯ ; ಮೇ 2 ಕ್ಕೆ ಇನ್ನೊಂದು ವಿಶೇಷ ಸಂಪುಟ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಬಿಸಿ (ಇತರೆ ಹಿಂದುಳಿದ ವರ್ಗಗಳ) ಮೀಸಲಾತಿಯನ್ನು ಶೇ.32ರಿಂದ ಶೇ.51ಕ್ಕೆ ಏರಿಕೆ ಮಾಡುವ ಇರಾದೆಯನ್ನೂ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವೂ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಬಹುದು.;
ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ (ಏಪ್ರಿಲ್ 17ರಂದು) ಮೂರು ತಾಸುಗಳ ಕಾಲ (4 pm to 7 pm) ನಡೆದು, ಬಿಸಿಯೇರಿದ ಚರ್ಚೆಗಳ ಬಳಿಕ ಅಂತ್ಯಗೊಂಡಿದೆ. ಆದರೆ, ಯಾವುದೇ ನಿರ್ಧಾರ ಕೈಗೊಳ್ಳದೆ ಸಭೆಯನ್ನು ಮುಂದೂಡಲಾಗಿದೆ.
ಜಾತಿಗಣತಿ ವರದಿಯ ದತ್ತಾಂಶಗಳ ಬಗ್ಗೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ವರದಿ ಕುರಿತು ಚರ್ಚೆ ತೀವ್ರ ಕುತೂಹಲ ಮೂಡಿಸಿತ್ತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಿವಿಧ ಸಮುದಾಯಗಳ ದತ್ತಾಂಶದ ಕುರಿತು ಸಚಿವರು ಅಭಿಪ್ರಾಯ ಮಂಡಿಸಿದರು. ಆದರೆ, ಎಲ್ಲ ಸಚಿವರು ಅಭಿಪ್ರಾಯ ಮಂಡನೆಗೆ ಸಮಯಾವಕಾಶ ಸಿಗದ ಹಿನ್ನೆಲೆಯಲ್ಲಿ ವಿಸ್ತೃತ ಚರ್ಚೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು.
ದಲಿತರು, ಹಿಂದುಳಿದವರು, ಮುಸ್ಲಿಮರು ಸೇರಿದಂತೆ ಎಲ್ಲ ಜಾತಿಗಳ ಜನಸಂಖ್ಯೆ, ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಗಿದೆ. ಸಭೆಯಲ್ಲಿ ವರದಿ ಕುರಿತು ಪರ ಹಾಗೂ ವಿರೋಧ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಹೈಕಮಾಂಡ್ ಗಮನಕ್ಕೆ ತಂದು ಆ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದ ಎಂದು ಮೂಲಗಳು ತಿಳಿಸಿವೆ.
ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಸಂಪುಟ ಸಭೆಯಲ್ಲಿ ಎಲ್ಲ ಸಮುದಾಯಗಳ ಸಾಧಕ-ಬಾಧಕ ಕುರಿತು ಚರ್ಚೆ ನಡೆಸಲಾಗಿದೆ. ವಿಸ್ತೃತ ಚರ್ಚೆ ಅಗತ್ಯವಾಗಿರುವುದರಿಂದ ಮುಂದಿನ ಸಂಪುಟ ಸಭೆಗೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ವರದಿಯ ಚರ್ಚೆ ಅಪೂರ್ಣವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯ ಮುಖ್ಯವಾಗಿರುತ್ತದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಸಭೆಯಲ್ಲಿ ಚರ್ಚೆ ಮುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ವರದಿಯ ಪ್ರತಿ ಎಲ್ಲಾ ಸಚಿವರಿಗೆ ಲಭ್ಯವಾಗಿತ್ತು. ಅದರ ಆಧಾರದಲ್ಲಿ ಸಂಪುಟ ಸಭೆಯಲ್ಲಿ ಚರ್ಚಿಸಲು ಎಲ್ಲಾ ಸಚಿವರು ವಿಶೇಷ ಸಚಿವ ಸಂಪುಟ ಸಭೆಗೆ ಆಗಮಿಸಿದ್ದರು. ಮುಖ್ಯಮಂತ್ರಿ ಆರಂಭಿಕ ಮಾತುಗಳ ಬಳಿಕ ಸಚಿವರು ಒಬ್ಬೊಬ್ಬರಾಗಿ ತಮ್ಮ ಅಭಿಪ್ರಾಯ ಮಂಡಿಸಿದರು.
ವಿಶೇಷ ಸಂಪುಟ ಸಭೆಯಲ್ಲಿ ಎಲ್ಲ ಸಮುದಾಯಗಳ ಸಚಿವರ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಲಿಸಿದ್ದಾರೆ. ಬಳಿಕ ಯಾವುದೇ ನಿರ್ಧಾರಕ್ಕೆ ಬರದೆ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿಲುವು ಪ್ರಕಟಿಸುವ ನಿರ್ಧಾರ ಕ ಗೊಳ್ಳಲಾಗಿದೆ.
ಜಾತಿಗಣತಿ ಅಧ್ಯಯನಕ್ಕಾಗಿ ಸಂಪುಟ ಉಪಸಮಿತಿ ರಚಿಸುವುದು; ಮೂರು ಇಲ್ಲವೇ ಆರು ತಿಂಗಳ ಕಾಲ ಅವಧಿಯೋಳಗೆ ಸಂಪುಟ ಉಪಸಮಿತಿಯ ವರದಿ ಪಡೆಯುವುದು; ಅಂಕಿ ಅಂಶಗಳ ಅಧ್ಯಯನಕ್ಕಾಗಿ ತಜ್ಞರ ಸಮಿತಿ ರಚಿಸುವುದು; ಜಾತಿಗಣತಿ ಚರ್ಚೆಯ ಬಗ್ಗೆ ವಿಶೇಷ ಅಧಿವೇಶನ ಕರೆಯುವುದು; ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆಯುವುದು.. ಹೀಗೆ ಯಾವುದಾದರೂ ಒಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಬಳಿಕ ಸಾರ್ವಜನಿಕ ಚರ್ಚೆಯ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.
ಜಾತಿಗಣತಿ ಚರ್ಚೆಯ ಬಗ್ಗೆ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ. ಸಚಿವ ಸಂಪುಟದಲ್ಲಿ ಎಲ್ಲ ಸಮುದಾಯಗಳನ್ನು ಸಚಿವರು ಪ್ರತಿನಿಧಿಸುವುದಿಲ್ಲ. ವಿಧಾನ ಸಭೆ ವಿಶೇಷ ಅಧಿವೇಶನ ಕರೆದರೆ, ಅಲ್ಲಿ ಎಲ್ಲ ಶಾಸಕರ ಅಭಿಪ್ರಾಯಗಳನ್ನು ಆಲಿಸಿ, ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುವ ಅವಕಾಶ ಇದೆ ಎನ್ನಲಾಗಿದೆ.
ಕುತೂಹಲ
ಈ ವರದಿಯು ರಾಜ್ಯದ ಜಾತಿಗಳ ಸಂಖ್ಯಾಬಲ, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಒಳಗೊಂಡಿರುವ ಹೊರತಾಗಿಯೂ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳು ತಮ್ಮ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಆ ಸಮುಯಾಯಗಳಿಗೆ ಸೇರಿದ ಮಂತ್ರಿಗಳ ಮೇಲೆ ಒತ್ತಡ ತಂದಿದೆ. ಹೀಗಾಗಿ ಈ ಸಭೆಯ ಕುತೂಹಲ ಮೂಡಿಸಿದೆ.
ಸಮೀಕ್ಷೆಯ ವರದಿ ಜಾರಿಯಾದರೆ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ದೊಡ್ಡ ಬದಲಾವಣೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಬಿಸಿ (ಇತರೆ ಹಿಂದುಳಿದ ವರ್ಗಗಳ) ಮೀಸಲಾತಿಯನ್ನು ಶೇ.32ರಿಂದ ಶೇ.51ಕ್ಕೆ ಏರಿಕೆ ಮಾಡುವ ಇರಾದೆಯನ್ನೂ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವೂ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಬಹುದು.
ಏಪ್ರಿಲ್ 11ರಿಂದು ಜೋರು ಚರ್ಚೆ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಏಪ್ರಿಲ್ 11ರಂದು ಈ ಸಮೀಕ್ಷೆಯ ವರದಿಯನ್ನು ಸಂಪುಟಕ್ಕೆ ಸಲ್ಲಿಸಿತ್ತು. 2015ರಲ್ಲಿ ಎಚ್. ಕಾಂತರಾಜ್ ನೇತೃತ್ವದಲ್ಲಿ ನಡೆದ ಸಮೀಕ್ಷೆಯ ಆಧಾರದ ಮೇಲೆ ತಯಾರಾದ ಈ ವರದಿಯು ರಾಜ್ಯದ 1,821 ಜಾತಿಗಳನ್ನು ಗುರುತಿಸಿದ್ದು, ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತ ಸಮುದಾಯಗಳ ಸಂಖ್ಯಾಬಲವು ಸಾಂಪ್ರದಾಯಿಕ ನಿರೀಕ್ಷೆಗಳಿಗಿಂತ ಕಡಿಮೆ ಇದೆ ಎಂದು ತೋರಿಸಿದೆ. ಒಕ್ಕಲಿಗರ ಜನಸಂಖ್ಯೆಯನ್ನು ಶೇ.12.2 ಮತ್ತು ಲಿಂಗಾಯತರ ಜನಸಂಖ್ಯೆಯನ್ನು ಶೇ.13.6 ಎಂದು ಅಂದಾಜಿಸಿದೆ. ಇದು ಸಾಮಾನ್ಯ ಗ್ರಹಿಕೆಯ ಶೇ.17 ಮತ್ತು ಶೇ.15ಕ್ಕಿಂತ ಕಡಿಮೆ ಎನಿಸಿದೆ. ಹೀಗಾಗಿ ಎರಡೂ ಸಮುದಾಯಗಳ ನಾಯಕರು ಸಮೀಕ್ಷೆಗೆ ಒಕ್ಕೊರಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಇಂದು ನಡೆಯುವ ಸಂಪುಟ ಸಭೆಯಲ್ಲಿ ಅವರ ಬೇಡಿಕೆಗಳು ಚರ್ಚೆಗೆ ಬರಲಿವೆ.
ಸಮುದಾಯಗಳಿಂದ ವಿರೋಧ
ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ ಅವರು, ಒಕ್ಕಲಿಗರ ಜನಸಂಖ್ಯೆ ಸುಮಾರು ಒಂದು ಕೋಟಿಯಷ್ಟಿದೆ ಎಂದು ವಾದಿಸಿದ್ದಾರೆ, ವರದಿಯು ಇದಕ್ಕಿಂತ ಕಡಿಮೆ ಸಂಖ್ಯೆಯನ್ನು ತೋರಿಸಿದೆ. ಹೀಗಾಗಿ ವರದಿಯನ್ನು ಸ್ವೀಕರಿಸಿದರೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇದರ ಜೊತೆಗೆ, ಒಕ್ಕಲಿಗ ಸಮುದಾಯದ ಉಪ-ವರ್ಗವಾದ ಕುಂಚಿಟಿಗರನ್ನು ಪ್ರತ್ಯೇಕವಾಗಿ ಪಟ್ಟಿಮಾಡಿರುವುದು ವೊಕ್ಕಲಿಗ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಇದೇ ರೀತಿ, ಲಿಂಗಾಯತ ಮಹಾಸಭಾವು ವರದಿಯನ್ನು "ವೈಜ್ಞಾನಿಕವಲ್ಲ" ಎಂದು ಹೇಳಿದೆ. ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ (ಚನ್ನಗಿರಿ) ಬಸವರಾಜ ಶಿವಗಂಗ ಅವರು ಲಿಂಗಾಯತ ಸಮುದಾಯದ ಏಳು ಸಚಿವರ ವಿರುದ್ಧ ತಮ್ಮ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸದಿರುವ ಆರೋಪ ಮಾಡಿ, ಅವರೆಲ್ಲರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯ
ವರದಿಯು ಕಾಂಗ್ರೆಸ್‌ನ ಒಳಗಿನ ಭಿನ್ನಾಭಿಪ್ರಾಯಗಳನ್ನು ಜಾಹೀರು ಮಾಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಶಾಸಕರೊಂದಿಗೆ ಏಪ್ರಿಲ್ 15ರಂದು ರಾತ್ರಿ ಸಭೆ ನಡೆಸಿ, ಏಕಮತದಿಂದ ಸಂಪುಟದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುವ ತೀರ್ಮಾನ ಕೈಗೊಂಡಿದ್ದಾರೆ. ಸಭೆಯ ಬಳಿಕ ಅವರು, ಕಾಂಗ್ರೆಸ್ ಸರ್ಕಾರವು 12ನೇ ಶತಮಾನದ ಸಂತ ಬಸವಣ್ಣನವರ "ಸಮಾನ ಜೀವನ, ಸಮಾನ ಪಾಲು" ತತ್ವ ಅನುಸರಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ವರದಿಯನ್ನು "ದ್ವೇಷದ ಗಣತಿ" ಎಂದು ಕರೆದು, ಇದು ಸಮಾಜವನ್ನು ಒಡೆಯುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧಾರ್ಮಿಕ ಒಡಕಿನ ಗುರಿ ಎಂದು ಆರೋಪಿಸಿದ್ದಾರೆ.
ಸಿಎಂ ಭರವಸೆ ಏನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ವರದಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದು ಎಂದಿರೆ. "ಇದು ಜಾತಿ ಗಣತಿಯಲ್ಲ, ಸಾಮಾಜಿಕ-ಆರ್ಥಿಕ ಸಮೀಕ್ಷೆ," ಎಂದು ಅವರು ಕಲಬುರಗಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ ಅವರು, ಸಚಿವರು ವರದಿಯನ್ನು ಅಧ್ಯಯನ ಮಾಡಿ, ಸಲಹೆಗಳೊಂದಿಗೆ ಸಭೆಗೆ ಬರಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ
ಸಂಪುಟ ಸಭೆಯಲ್ಲಿ ಏನಾಗಬಹುದು?
ಇಂದು ನಡೆಯುವ ಸಭೆಯು ವರದಿಯ ಜಾರಿಯ ಭವಿಷ್ಯ ನಿರ್ಧರಿಸಲಿದೆ. ಮೂಲಗಳ ಪ್ರಕಾರ, ಸರ್ಕಾರವು ಸಂಪುಟ ಉಪಸಮಿತಿ ಅಥವಾ ತಜ್ಞರ ಸಮಿತಿ ರಚಿಸಿ ವರದಿಯನ್ನು ಮತ್ತಷ್ಟು ಪರಿಶೀಲಿಸುವ ಸಾಧ್ಯತೆಯಿದೆ. ವರದಿಯನ್ನು ಸಾರ್ವಜನಿಕಗೊಳಿಸಿ, ಜನರಿಂದ ಸಲಹೆಗಳನ್ನು ಕೋರಲು ಮತ್ತು ತಪ್ಪುಗಳಿದ್ದರೆ ಸರಿಪಡಿಸಲು ಚಿಂತನೆ ನಡೆಸಬಹುದು.
ಇಂದಿನ ಸಂಪುಟ ಸಭೆಯಲ್ಲಿ ಹಿಂದೂಳಿದ ವರ್ಗಗಳ ಸಮೀಕ್ಷೆ ಚರ್ಚೆಯಾಗಿದೆ ಹಾಗೂ ಜಾತಿಗಣತಿ ವರದಿಯ ಮೇಲೆ ಸುಧೀರ್ಘವಾಗಿ ಚರ್ಚೆ ಮಾಡಲಾಗಿದೆ. ಚರ್ಚೆಗೆ ಹೆಚ್ಚಿನ ಮಾಹಿತಿ, ತಾಂತ್ರಿಕ ವಿವರ ಚರ್ಚೆಗೆ ಅವಶ್ಯ. ಹಾಗಾಗಿ ವಿವರಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದ್ದಾರೆ.
ಇಂದು ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಸೌಹಾರ್ದವಾಗಿ ನಡೆದಿದ್ದರೂ, ಅಪೂರ್ಣವಾಗಿದೆ. ಯಾವ ಆಧಾರದಡಿ ವರದಿ ಸಂಗ್ರಹಿಸಲಾಗಿದೆ ಎಂಬ ಬಗ್ಗೆ ಪ್ರಶ್ನೆಗಳು ಬಂದಿದ್ದವು. ಹಾಗಾಗಿ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಬೇಕಿತ್ತು. ಆದರೆ, ಆ ಸಭೆಯನ್ನು ಚಾಮರಾಜನಗರ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಸಲು ನಿರ್ಧಾರವಾಗಿದ್ದು, ಅದರ ಅಜೆಂಡಾಗಳನ್ನು ಬದಲಿಸಲು ಸಾಧ್ಯವಿಲ್ಲ. ಹಾಗಾಗಿ ಮೇ 2ಕ್ಕೆ ಇನ್ನೊಂದು ವಿಶೇಷ ಸಚಿವ ಸಂಪುಟ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜಾತಿಗಣತಿಯಲ್ಲಿ ವಿವಿಧ ಸಮೂದಾಯಗಳ ಆರ್ಥಿಕ ಅಂಶಗಳ ಬಗ್ಗೆ ಅವಲೋಕಿಸಲಾಗಿದೆ. ಕೆಲವು ಸಚಿವರು ಮಾರ್ಗದರ್ಶನ ನೀಡಿದ್ದಾರೆ ಹಾಗೂ ಇನ್ನುಳಿದ ವಿವರಗಳನ್ನು ಅಧಿಕಾರಿಗಳು ಒದಗಿಸಲಿದ್ದಾರೆ. ಮುಂದಿನ ವಿಶೇಷ ಸಂಪುಟದಲ್ಲಿ ಆ ಬಗ್ಗೆ ಚರ್ಚಿಸಲಾಗುವುದು ಎಂದವರು ಹೇಳಿದ್ದಾರೆ.
ಜಾತಿಗಣತಿಯ ಅಂಕಿ ಅಂಶಗಳ ಬಗ್ಗೆ ಕೆಲವರಿಗೆ ತಪ್ಪು ಗ್ರಹಿಕೆಯಾಗಿದೆ. 91% ಜನರ ಸಮೀಕ್ಷೆ ಮಾಡಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.
ಜಾತಿ ಗಣತಿ ಕುರಿತು ಲಿಖಿತವಾಗಿ ಸಚಿವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದಾರೆ. ಆಕ್ಷೇಪಗಳು ಇದ್ದರೂ ಸಲ್ಲಿಸಿ ಎಂದು ಹೇಳಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಕಾನೂನು ಸಚಿವ ಎಚ್. ಕೆ ಪಾಟೀಲ್ ಅವರಿಂದ ಮಾಹಿತಿ ಪ್ರಕಟಗೊಳ್ಳುವ ಸಾಧ್ಯತೆ.
ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಸಮೀಕ್ಷೆ ಕುರಿತು ಚರ್ಚೆ ನಡೆಸಲು ನಿರ್ಧಾರ.
ಜಾತಿ ಗಣತಿ ಕುರಿತು ಕರೆದಿದ್ದ ವಿಶೇಷ ಕ್ಯಾಬಿನೆಟ್ನಲ್ಲಿ ಯಾವುದೇ ತೀರ್ಮಾನ ಪ್ರಕಟಗೊಂಡಿಲ್ಲ. ಎಲ್ಲ ಅಭಿಪ್ರಾಯಗಳನ್ನು ಸಂಗ್ರಹಿಸಿದ ಸಿಎಂ ಸಿದ್ದರಾಮಯ್ಯ., ಮುಂದಿನ ಕ್ಯಾಬಿನೆಟ್ನಲ್ಲಿ ಚರ್ಚಿಸಲು ನಿರ್ಧಾರ.
ಜಾತಿ ಗಣತಿ ಕುರಿತ ತೀರ್ಮಾನ ಮುಂದೂಡಿಕೆ. ಶೀಘ್ರದಲ್ಲೇ ಮತ್ತೊಂದು ಕ್ಯಾಬಿನೆಟ್ ಸಭೆ ಕರೆದು ತೀರ್ಮಾನಿಸಲು ಕರ್ನಾಟಕದ ಸರ್ಕಾರ ನಿರ್ಧಾರ.
ಜಾತಿ ಗಣತಿ ಸಂಬಂಧ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆ ಈಗ ಅಂತ್ಯಗೊಂಡಿದೆ. ವಿವಿಧ ಸಮೂದಾಯಗಳ ನಾಯಕರು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದ್ದು, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ಸಚಿವರು ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಬಳಿ ಹಂಚಿಕೊಂಡಿದ್ದಾರೆ. ತಮ್ಮ ಸಮುದಾಯಗಳ ಅಸಮಾಧಾನ ಹಾಗೂ ಸಂಶಯಗಳನ್ನು ನಿವಾರಿಸಬೇಕೆಂದೂ ಕೇಳಿಕೊಂಡಿದ್ದಾರೆ.
ಗಣತಿ ಅವೈಜ್ಞಾನಿಕವಾಗಿದೆ ಹಾಗೂ ತಮ್ಮ ತಮ್ಮ ಸಮುದಾಯಗಳ ಜನಸಂಖ್ಯೆಯನ್ನು ತಪ್ಪಾಗಿ ದಾಖಲಿಸಲಾಗಿದೆ ಎಂಬ ಅಭಿಪ್ರಾಯಗಳು ಒಕ್ಕಲಿಗ ಮತ್ತು ಲಿಂಗಾಯತ ಸಚಿವರಿಂದ ಕೇಳಿಬಂದಿದೆ. ಆದರೆ, ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಸಚಿವರು ಈ ಗಣತಿಯನ್ನು ಜಾರಿಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಜಾತಿ ಗಣತಿ ಜಾರಿ ವಿಚಾರವಾಗಿ ಸಂಪುಟ ಸಭೆಗೂ ಮುನ್ನ ಲಿಂಗಾಯತ ಸಮುದಾಯದ ಸಚಿವರು ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಲಿಂಗಾಯತ ಸಚಿವರು ಮಹತ್ವದ ನಿರ್ಣಯವನ್ನು ಕೈಗೊಂಡಿದ್ದಾರೆ. ಲಿಂಗಾಯತ ಸಮುದಾಯದ ಸಚಿವರು ನಡೆಸಿದ ಸಭೆಯಲ್ಲಿ ಜಾತಿ ಗಣತಿ ವರದಿ ತಿರಸ್ಕಾರ ಮಾಡಬೇಕೆಂದು ನಿರ್ಣಯ ಕೈಗೊಂಡಿದ್ದಾರೆ. ಒಂದು ವೇಳೆ ಜಾತಿಗಣತಿ ವರದಿ ತಿರಸ್ಕರಿಸಲಾಗದೆ ಇದ್ದರೆ ಸಾರ್ವಜನಿಕಗೊಳಿಸಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಲು ಸಚಿವರು ತೀರ್ಮಾನ ಕೈಗೊಂಡಿದ್ದಾರೆ.
ರಾಜ್ಯ ಸಚಿವ ಸಂಪುಟ ಸಭೆಗೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಒಕ್ಕಲಿಗ ಸಮುದಾಯದ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆದಿದೆ . ಮೊನ್ನೆ ನಡೆದ ಒಕ್ಕಲಿಗ ಶಾಸಕರ ಸಭೆಯಲ್ಲಿ ವ್ಯಕ್ತಗೊಂಡ ಅಭಿಪ್ರಾಯಗಳನ್ನು ಈ ಸಂದರ್ಭ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದು, ನಮ್ಮ ಸಮುದಾಯದಲ್ಲಿ ಈ ರೀತಿಯ ಅಭಿಪ್ರಾಯವಿದೆ. ಈ ಕುರಿತು ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.