ಮೇ 2ಕ್ಕೆ ಮತ್ತೊಂದು ವಿಶೇಷ ಸಚಿವ ಸಂಪುಟ ಸಭೆ: ಎಚ್.ಕೆ. ಪಾಟೀಲ
ಇಂದಿನ ಸಂಪುಟ ಸಭೆಯಲ್ಲಿ ಹಿಂದೂಳಿದ ವರ್ಗಗಳ ಸಮೀಕ್ಷೆ ಚರ್ಚೆಯಾಗಿದೆ ಹಾಗೂ ಜಾತಿಗಣತಿ ವರದಿಯ ಮೇಲೆ ಸುಧೀರ್ಘವಾಗಿ ಚರ್ಚೆ ಮಾಡಲಾಗಿದೆ. ಚರ್ಚೆಗೆ ಹೆಚ್ಚಿನ ಮಾಹಿತಿ, ತಾಂತ್ರಿಕ ವಿವರ ಚರ್ಚೆಗೆ ಅವಶ್ಯ. ಹಾಗಾಗಿ ವಿವರಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ತಿಳಿಸಿದ್ದಾರೆ.
ಇಂದು ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಸೌಹಾರ್ದವಾಗಿ ನಡೆದಿದ್ದರೂ, ಅಪೂರ್ಣವಾಗಿದೆ. ಯಾವ ಆಧಾರದಡಿ ವರದಿ ಸಂಗ್ರಹಿಸಲಾಗಿದೆ ಎಂಬ ಬಗ್ಗೆ ಪ್ರಶ್ನೆಗಳು ಬಂದಿದ್ದವು. ಹಾಗಾಗಿ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಬೇಕಿತ್ತು. ಆದರೆ, ಆ ಸಭೆಯನ್ನು ಚಾಮರಾಜನಗರ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಸಲು ನಿರ್ಧಾರವಾಗಿದ್ದು, ಅದರ ಅಜೆಂಡಾಗಳನ್ನು ಬದಲಿಸಲು ಸಾಧ್ಯವಿಲ್ಲ. ಹಾಗಾಗಿ ಮೇ 2ಕ್ಕೆ ಇನ್ನೊಂದು ವಿಶೇಷ ಸಚಿವ ಸಂಪುಟ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜಾತಿಗಣತಿಯಲ್ಲಿ ವಿವಿಧ ಸಮೂದಾಯಗಳ ಆರ್ಥಿಕ ಅಂಶಗಳ ಬಗ್ಗೆ ಅವಲೋಕಿಸಲಾಗಿದೆ. ಕೆಲವು ಸಚಿವರು ಮಾರ್ಗದರ್ಶನ ನೀಡಿದ್ದಾರೆ ಹಾಗೂ ಇನ್ನುಳಿದ ವಿವರಗಳನ್ನು ಅಧಿಕಾರಿಗಳು ಒದಗಿಸಲಿದ್ದಾರೆ. ಮುಂದಿನ ವಿಶೇಷ ಸಂಪುಟದಲ್ಲಿ ಆ ಬಗ್ಗೆ ಚರ್ಚಿಸಲಾಗುವುದು ಎಂದವರು ಹೇಳಿದ್ದಾರೆ.
ಜಾತಿಗಣತಿಯ ಅಂಕಿ ಅಂಶಗಳ ಬಗ್ಗೆ ಕೆಲವರಿಗೆ ತಪ್ಪು ಗ್ರಹಿಕೆಯಾಗಿದೆ. 91% ಜನರ ಸಮೀಕ್ಷೆ ಮಾಡಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.