Caste Census: ಜಾತಿ ಗಣತಿ: ವಿಶೇಷ ಸಚಿವ ಸಂಪುಟ ಸಭೆ ಅಂತ್ಯ ; ಮೇ 2 ಕ್ಕೆ ಇನ್ನೊಂದು ವಿಶೇಷ ಸಂಪುಟ ಸಭೆ
ಒಕ್ಕಲಿಗ ಸಚಿವರಿಂದಲೂ ಅಸಮಾಧಾನ
ಒಕ್ಕಲಿಗ ಸಮುದಾಯದ ಸಚಿವರೂ ತಮ್ಮ ಸಮುದಾಯದಿಂದ ಜಾತಿಗಣತಿ ವರದಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
"ಒಕ್ಕಲಿಗ ಸಂಘ ಹಾಗು ಸಮುದಾಯದಿಂದಲೂ ಅಸಮಾಧಾನ ಇದೆ; ವರದಿ ಜಾರಿಯಾದರೆ ಆಕ್ರೋಶ ಬುಗಿಲೇಳಲಿದೆ," ಎಂಬ ಅಭಿಪ್ರಾಯ ಮಂಡಿಸಿದ್ದಾರೆ ಎಂದು ಹೇಳಲಾಗಿದೆ.
ಲಿಂಗಾಯತ ಮುಖಂಡರಿಂದ ವರದಿ ಜಾರಿಗೆ ಆಕ್ಷೇಪ
ಸಚಿವ ಸಂಪುಟದ ಸಭೆಯಲ್ಲಿ ಸಚಿವರು ಅಭಿಪ್ರಾಯ ಮಂಡನೆಗೆ ಮುಂದಾಗಿದ್ದಾರೆ. ಒಕ್ಕಲಿಗ ಹಾಗೂ ಲಿಂಗಾಯತ ಸಚಿವರು ಜಾತಿಗಣತಿ ವರದಿಯನ್ನು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ.
ಲಿಂಗಾಯತ ಸಚಿವರಾದ ಎಂಬಿಪಾಟೀಲ್, ಈಶ್ವರ್ ಖಂಡ್ರೆ ಮೊದಲು ಅಭಿಪ್ರಾಯ ಮಂಡನೆ ಮಾಡಿದ್ದಾರೆ. " ವೀರಶೈವ ಲಿಂಗಾಯತ ಸಮುದಾಯ ಜನಸಂಖ್ಯೆ ಕಡಿಮೆ ತೋರಿಸಿದ್ದಾರೆ ಇದು ಜನಾಂಗದಲ್ಲಿ ಅಸಮಾಧಾನ ಇದೆ. ಸಾಕಷ್ಟು ಕಡೆ ಸಮೀಕ್ಷೆಗೇ ಹೋಗಿಲ್ಲ. ಹಾಗಾಗಿ ಈ ವರದಿಯ ಜಾರಿ ಮಾಡಬಾರದು," ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಸಚಿವರಿಗೆ ಅಭಿಪ್ರಾಯ ಮಂಡಿಸಲು ಸೂಚಿಸಿದ ಸಿಎಂ ಸಿದ್ದರಾಮಯ್ಯ
ಸಂಪುಟ ಸಭೆ ಆರಂಭದಲ್ಲೆ ಸಿಎಂ ಸಿದ್ದರಾಮಯ್ಯ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಮಾಜಿಕ ಹಾಗು ಶೈಕ್ಷಣಿಕ ವರದಿ ಮಂಡನೆ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸಚಿವರಿಗೆ ಸೂಚಿಸಿದ್ದಾರೆ.
ಈ ಸಮೀಕ್ಷಾ ವರದಿಯಿಂದ ಯಾವ ವರ್ಗಕ್ಕೂ ಅನ್ಯಾಯವಾಗಿಲ್ಲ, ಏನಾದರೂ ಅನ್ಯಾಯ ಆಗಿದ್ದರೆ ಸರಿಪಡಿಸೋಣ ಎಂದು ಹೇಳಿದ ಅವರು, "ರಾಹುಲ್ ಗಾಂಧಿ ಹಾಗು ಪಕ್ಷದ ಆಶಯದಂತೆ ಸಾಮಾಜಿಕ ಹಾಗು ಶೈಕ್ಷಣಿಕ ವರದಿ ಮಂಡಿಸಲಾಗಿದೆ. ಎಲ್ಲಾ ಸಚಿವರು ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಿ" ಎಂದು ಹೇಳಿದ್ದಾರೆ.
ಜಾತಿ ಗಣತಿ: ವಿಶೇಷ ಸಚಿವ ಸಂಪುಟ ಸಭೆ ಆರಂಭ
ಜಾತಿ ಗಣತಿ ಸಂಬಂಧ ವಿಶೇಷ ಸಚಿವ ಸಂಪುಟ ಸಭೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಮುಖ್ಯಮಂತ್ರಿ ಆರಂಭಿಕ ಮಾತುಗಳ ಬಳಿಕ ವಿವರವಾದ ಚರ್ಚೆ ಆರಂಭವಾಗಲಿದೆ. ಒಬ್ಬೊಬ್ಬ ಸಚಿವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ಸಂಪುಟ ಸಭೆ ಆರಂಭಕ್ಕೆ ಕ್ಷಣಗಣನೆ
ಸಚಿವ ಸಂಪುಟ ಸಭೆಗೆ ಒಬ್ಬೊಬ್ಬರಾಗಿ ಸಚಿವರು ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೆಲವೇ ಕ್ಷಣಗಳಲ್ಲಿ ಸಭೆಗೆ ಆಗಮಿಸಲಿದ್ದಾರೆ. ಈಗಾಗಲೇ ಸಮೀಕ್ಷೆ ವರದಿ ಪ್ರತಿ ಎಲ್ಲಾ ಸಚಿವರಿಗೆ ಲಭ್ಯವಾಗಿದ್ದರಿಂದ, ಎಲ್ಲರೂ ಆ ಬಗ್ಗೆ ಚರ್ಚಿಸಲು ಟಿಪ್ಪಣಿಗಳನ್ನು ಸಿದ್ಧಪಡಿಸಿ ಸಭೆಗೆ ಆಗಮಿಸಿದ್ದಾರೆ. ಸಭೆಯಲ್ಲಿ ಪ್ರಮುಖವಾಗಿ ಲಿಂಗಾಯತ, ಒಕ್ಕಲಿಗ ಸಚಿವರ ಅಭಿಪ್ರಾಯ ಏನೆಂಬುದೇ ಎಲ್ಲರ ಕುತೂಹಲ ಕೆರಳಿಸಿದೆ.
ವರದಿ ಅಧ್ಯಯನಕ್ಕೆ ಇನ್ನಷ್ಟು ಸಮಯ: ಮುಖ್ಯಮಂತ್ರಿ ಸಲಹೆಗಾರ ಬಸವರಾಜ ರಾಯರೆಡ್ಡಿ
ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಕುರಿತಂತೆ ಇಂದು (ಗುರುವಾರ) ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ವರದಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಆತುರಪಡುತ್ತಿಲ್ಲ. ಬದಲಿಗೆ ವರದಿ ಕುರಿತು ಅಧ್ಯಯನಕ್ಕೆ ಇನ್ನಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಜಾತಿಗಣತಿ ವರದಿ ಮಂಡನೆ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆದಿದ್ದ ಒಕ್ಕಲಿಗ ಸಮುದಾಯದ ಸಭೆಯಲ್ಲಿ ವರದಿಗೆ ವಿರೋಧ ವ್ಯಕ್ತವಾಗಿದೆ. ವೀರಶೈವ-ಲಿಂಗಾಯತರು ಹಾಗೂ ಬ್ರಾಹ್ಮಣರ ಬೆಂಬಲ ಪಡೆದು ರಾಜ್ಯಾದ್ಯಂತ ಆಂದೋಲನ ರೂಪಿಸುವುದಾಗಿ ಒಕ್ಕಲಿಗರ ಸಂಘ ಎಚ್ಚರಿಸಿದೆ. ಹೀಗಿರುವಾಗ ಸರ್ಕಾರಕ್ಕೆ ವರದಿಯ ಕೂಲಂಕಷ ಅಧ್ಯಯನ ನಡೆಸುವುದು ಅನಿವಾರ್ಯವಾಗಿದೆ. ಈ ವಿಚಾರದಲ್ಲಿ ವಿಸ್ತೃತ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ನಿರ್ಧಾರ ಸಿದ್ದರಾಮಯ್ಯ ಅವರ ಸಂಪುಟಕ್ಕೆ ಬಿಟ್ಟಿದ್ದು: ಮಲ್ಲಿಕಾರ್ಜುನ ಖರ್ಗೆ
ರಾಜ್ಯ ಸರ್ಕಾರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರು ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ತಾನು ಇನ್ನೂ ವರದಿಯನ್ನು ನೋಡಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು, ಪ್ರತಿಯೊಂದು ರಾಜ್ಯವು ತನ್ನದೇ ಆದ ಕೆಲಸವನ್ನು ಮಾಡುತ್ತದೆ. ಇದನ್ನು ಕೇಂದ್ರ ಸರ್ಕಾರ ಮಾಡಿಲ್ಲ. ರಾಜ್ಯ ಸರ್ಕಾರ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸುತ್ತದೆ. ನಾನು ವರದಿಯನ್ನು ನೋಡಿಲ್ಲ. ಈ ವಿಷಯವನ್ನು ರಾಜ್ಯ ಸರ್ಕಾರಕ್ಕೆ ಬಿಡಲಾಗಿದೆ ಎಂದು ಅವರು ತಿಳಿಸಿದರು.
ವರದಿಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಕೇಳಿದ ಪ್ರಶ್ನಗೆ ಉತ್ತರಿಸಿದ ಅವರು, ವಿರೋಧ ಇರಬಹುದು. ನಾನು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸಚಿವ ಸಂಪುಟದ ವಿಶೇಷ ಸಭೆ ಗುರುವಾರ ವಿವಾದಾತ್ಮಕ 'ಜಾತಿ ಜನಗಣತಿ'ಯ ಬಗ್ಗೆ ಚರ್ಚಿಸಲಿದೆ' ಎಂದು ಹೇಳಿದರು.
ವಿವಿಧ ಸಮುದಾಯಗಳು, ವಿಶೇಷವಾಗಿ ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತರು ಈ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು ʼಅವೈಜ್ಞಾನಿಕʼ ಎಂದು ಕರೆದಿರುವ ಅವರು ಈ ಹೊಸ ಸಮೀಕ್ಷೆಯನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಜಾತಿ ಗಣತಿ ಮಾಹಿತಿ ಸೋರಿಕೆ ಮಾಡಿದ ಕಾಣದ ಕೈ ಯಾವುದು? ಕುಮಾರಸ್ವಾಮಿ ಪ್ರಶ್ನೆ
ಜಾತಿ ಗಣತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೇರವಾಗಿ ಆರೋಪ ಮಾಡಿರುವ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಅನುಮಾನ ನಿಜವಾಯಿತು! ಎಂದು ಹೇಳಿಕೊಂಡಿದ್ದಾರೆ.
"ಮುಖ್ಯಮಂತ್ರಿ ಮಹೋದಯರ ಪ್ರಕಾರ ಅದು ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ! ಶ್ರೀ ಸಿದ್ದರಾಮಯ್ಯ ಈಗ ಉಲ್ಟಾ ಹೊಡೆದಿದ್ದಾರೆ! 'ಅದು ಜಾತಿ ಸಮೀಕ್ಷೆ ಅಲ್ಲ.. ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ' ಎಂದು ಹೊಸ ಪೀಪಿ ಊದುತ್ತಿದ್ದಾರೆ," ಎಂದು ಟೀಕಿಸಿದ್ದಾರೆ.
"ಹಾಗಾದರೆ ಹಾದಿ ಬೀದಿಯಲ್ಲಿ ತೇಲಾಡುತ್ತಿರುವ, ಬಿದ್ದೂಬಿದ್ದು ಹೊರಳಾಡುತ್ತಿರುವ ಅಂಕಿ ಸಂಖ್ಯೆಗಳು ಏನು? ಸೋರಿಕೆಯಾಗಿರುವ ದತ್ತಾಂಶ ಮತ್ತು ಸಿಎಂ ಅವರು ಹೇಳಿದ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ದತ್ತಾಂಶವು ಎರಡೂ ಒಂದೇನಾ? ಅಥವಾ ಅಲ್ಲವಾ? ವರದಿ ಬಹಿರಂಗಕ್ಕೆ ಮೊದಲೇ ವ್ಯವಸ್ಥಿತವಾಗಿ ಸೋರಿಕೆ ಮಾಡಿದ್ದು ಯಾರು? ಅದರ ಹಿಂದಿರುವ ಕಳ್ಳ ಕೈ ಯಾವುದು? ಬೀದಿಪಾಲಾದ ದತ್ತಾಂಶ ಇಟ್ಟುಕೊಂಡು ಏನು ಮಾಡುತ್ತೀರಿ?," ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಾಹೇಬರೇ.. ಸೋರಿಕೆ ಬಗ್ಗೆ ತಪ್ಪದೇ ತನಿಖೆ ಮಾಡಿಸಿ. ಅದು ಆಯೋಗದಿಂದ ಸೋರಿಕೆ ಆಯಿತಾ? ಅಥವಾ ಸಂಪುಟದಲ್ಲಿ ಸಚಿವರ ಕೈ (!?) ಸೇರಿದ ಮೇಲೆ ಸೋರಿಕೆ ಆಯಿತಾ? ಅಥವಾ ನಿಮ್ಮ ಗ್ಯಾಂಗ್ ಕೈ ಚಳಕವಾ? ತನಿಖೆ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೀರಾ? ನೀವೇ ಹೇಳಬೇಕು. ಸೋರಿಕೆಗೆ ನಿಮ್ಮ ಸರಕಾರವೇ ಹೊಣೆ, ಸಂಶಯವೇ ಇಲ್ಲ. ಯಾವುದೇ ಕಾರಣಕ್ಕೂ ಸೋರಿಕೆಯಾದ ಈ ವರದಿಯನ್ನು ಸಂಪುಟದಲ್ಲಿ ಮಂಡಿಸಲೇಬಾರದು. ಮಂಡಿಸಿ ಸಂಪುಟದ ಪಾವಿತ್ರ್ಯತೆ ಹಾಳು ಮಾಡಬಾರದು ಎಂದು ಕುಮಾರಸ್ವಾಮಿ ಖಡಕ್ ಆಗಿ ಹೇಳಿದ್ದಾರೆ.
"ನೆಮ್ಮದಿಯಾಗಿದ್ದ ರಾಜ್ಯಕ್ಕೆ ಬೆಂಕಿ ಹಾಕಿದ್ದೀರಿ, ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದ್ದೀರಿ. ನಿಮ್ಮ ದುರುದ್ದೇಶ, ದುಷ್ಟತನದ ಪರಾಕಾಷ್ಠೆ ಇದು. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಕೊಳ್ಳಿ ಇಟ್ಟ ಪಾಪ ಸುಮ್ಮನೆ ಬಿಡುವುದಿಲ್ಲ, ಎಂದು ಟೀಕಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ: ಸಂಜೆ ಕ್ಯಾಬಿನೆಟ್ ಸಭೆ ಇದೆ, ಅಲ್ಲಿ ಚರ್ಚೆ ಮಾಡುತ್ತೇವೆ, ಸಚಿವರು ಅಭಿಪ್ರಾಯ ಹೇಳ್ತಾರೆ ಎಂದವರು ಹೇಳಿದ್ದಾರೆ. "ಲಿಂಗಾಯತ ಸಚಿವರು ರಾಜೀನಾಮೆ ನೀಡಿ ಎಂಬ ಒತ್ತಾಯ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ಸಂಜೆ ಸಂಪುಟಸಭೆಯಲ್ಲಿ ಚರ್ಚೆ ಮಾಡುತ್ತೇವೆ,ʼ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವೆ ಶೋಭಾ ಪತ್ರ; ಜಾತಿ ಗಣತಿ ಹಿಂಪಡೆಯಲು ಆಗ್ರಹ
ಜಾತಿಗಣತಿ ವರದಿಯನ್ನು ಹಿಂಪಡೆಯಬೇಕೆಂದು ಕೇಂದ್ರ ಸಚಿವೆ ಹಾಗೂ ಒಕ್ಕಲಿಗ ನಾಯಕರಾದ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಪ್ರಸ್ತುತ ಜಾತಿ ಗಣತಿ ವರದಿಯನ್ನು ತಿರಸ್ಕರಿಸಬೇಕು, ಆಧಾರ್-ಸಂಯೋಜಿತ ಪರಿಶೀಲನೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಸಮ್ಮತಿಯೊಂದಿಗೆ ಹೊಸ, ವೈಜ್ಞಾನಿಕ ಮತ್ತು ನಿಷ್ಪಕ್ಷಪಾತ ಸಮೀಕ್ಷೆಯನ್ನು ನಡೆಸಬೇಕು. ರಾಜ್ಯ ಸರ್ಕಾರದ ಇರುವ ಡೇಟಾಬೇಸ್‌ಗಳಿಂದ ಡೇಟಾವನ್ನು ಪರಸ್ಪರ ಪರಿಶೀಲನೆಗೆ ಬಳಸಿ, ನಿಖರ, ನಿಷ್ಪಕ್ಷ ಮತ್ತು ಕರ್ನಾಟಕದ ನಿಜವಾದ ಸಾಮಾಜಿಕ ರಚನೆಯನ್ನು ಪ್ರತಿಬಿಂಬಿಸುವ ಡೇಟಾಸೆಟ್ ಖಾತ್ರಿಪಡಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ಕಾಂತರಾಜು ಆಯೋಗದ ಮೇಲ್ವಿಚಾರಣೆಯಲ್ಲಿ ತಯಾರಾದ ಈ ವರದಿಯು ಮೂಲಭೂತ ದೋಷಗಳನ್ನು ಹೊಂದಿದ್ದು, ರಾಜ್ಯದ ಜನಸಂಖ್ಯಾಶಾಸ್ತ್ರೀಯ ವಾಸ್ತವತೆಯನ್ನು ಪ್ರತಿಬಿಂಬಿಸುವಲ್ಲಿ ವಿಫಲವಾಗಿದೆ. ಈ ಸಮೀಕ್ಷೆಯನ್ನು ಕೇವಲ 50 ದಿನಗಳಲ್ಲಿ (ಏಪ್ರಿಲ್ 11, 2015 ರಿಂದ ಮೇ 30, 2015) 5.9 ಕೋಟಿ ಜನಸಂಖ್ಯೆಗೆ ನಡೆಸಲಾಗಿದೆ, ಇದು ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ಸಂಪೂರ್ಣತೆಯ ಬಗ್ಗೆ ಸಂದೇಹವನ್ನು ಹುಟ್ಟುಹಾಕುತ್ತದೆ ಎಂದವರು ವ್ಯಾಖ್ಯಾನಿಸಿದ್ದಾರೆ.